ಚೆನ್ನೈ, ಜ.27 (www.bengaluruwire.com) : ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪುದುಚೆರಿ ಹಾಗೂ ಕೇರಳದ ದಕ್ಷಿಣ ರಾಜ್ಯಗಳ ರೈತ ಮುಖಂಡರುಗಳು ಇಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳ ಬಗ್ಗೆ ಗಮನಸೆಳೆದರು.
ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧ ಖಾತ್ರಿ ಗೊಳಿಸಲು ಕಾನೂನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ಅರಿಶಿನ ಬೆಳೆಗೆ ಶೇಕಡಾ 5ರಷ್ಟು ಸರಕು ಸೇವಾ ತೆರಿಗೆ (GST) ವಿಧಿಸಿರುವುದನ್ನು ರದ್ದುಪಡಿಸಬೇಕು. ಅರಿಶಿನ ಬೆಳೆಗೆ 15,000 ರೂ ಕನಿಷ್ಠ ಬೆಂಬಲ ಬೆಲೆ ನಿಗಧಿ ಮಾಡಿ ಸರ್ಕಾರ, ಖರೀದಿ ಕೇಂದ್ರಗಳ ಮೂಲಕ ಖರೀದಿಸುವ ವ್ಯವಸ್ಥೆಯಾಗಬೇಕು.
ಕಬ್ಬು ಕಾರ್ಖಾನೆಗಳು ರೈತರು ಬೆಳೆದ ಬೆಳೆಗೆ ನೀಡುವ ಕನಿಷ್ಠದರವಾದ ಎಫ್ ಆರ್ ಪಿ (FRP Price)ಯನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಅಥವಾ ಆ ವರ್ಷದ ಇಳುವರಿ ಆಧರಿಸಿ ಎಫ್ ಆರ್ ಪಿ ದರ ರೈತರಿಗೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ದಕ್ಷಿಣ ರಾಜ್ಯಗಳ ರೈತ ಮುಖಂಡರ ನಿಯೋಗ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಒತ್ತಾಯಿಸಿತು.
“ಅರಿಶಿನ ಬೆಳೆಯುವ ರಾಜ್ಯಗಳ ರೈತ ಮುಖಂಡರು ಆ ಬೆಳೆಗೆ ಜಿಎಸ್ ಟಿ ವಿಧಿಸಿರುವುದನ್ನು ರದ್ದುಪಡಿಸುವುದು ಸೇರಿದಂತೆ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಂದ್ರ ಸರ್ಕಾರವನ್ನು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಡ ಹೇರುವಂತೆ ಮೊದಲಿಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ರೈತ ಮುಖಂಡರೆಲ್ಲ ಭೇಟಿ ಮಾಡಿದ್ದೇವೆ. ಮುಂದಿನವಾರ ತೆಲಂಗಾಣ, ಬಳಿಕ ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳನ್ನು ಈ ರೈತರ ನಿಯೋಗ ಭೇಟಿ ಮಾಡಲಿದೆ.”
- ಕುರುಬೂರು ಶಾಂತಕುಮಾರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅರಿಶಿನ ಬೆಳೆಗಾರರ ಸಂಘ
ಕೇಂದ್ರ ಸರ್ಕಾರ ಖರೀದಿಸುವ ಕನಿಷ್ಠ ಬೆಂಬಲ ಬೆಲೆ ಖರೀದಿ ಅನುದಾನ ಎಲ್ಲಾ ರಾಜ್ಯಗಳಿಗೂ ಸಮನಾಗಿ ಹಂಚಿಕೆ ಮಾಡಿ ಖರೀದಿಸುವಂತೆ ಆಗಬೇಕು. ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗಳು, ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು ಐವತ್ತು ವರ್ಷಗಳ ಹಿಂದೆ ರಚಿತವಾಗಿರುವ ವನ್ಯಜೀವಿ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮುಖ್ಯಮಂತ್ರಿ ಸ್ಟಾಲಿನ್ ರವರಲ್ಲಿ ನಿಯೋಗದಲ್ಲಿದ್ದ ರೈತರು ಮನವಿ ಮಾಡಿದರು. ರೈತರ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಭರವಸೆ ನೀಡಿದರು.
ರೈತ ಮುಖಂಡರ ನಿಯೋಗದಲ್ಲಿ ಅರಿಶಿನ ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ತಮಿಳುನಾಡಿನ ದೈವಸಿಗಾಮಣಿ, ರಾಷ್ಟ್ರೀಯ ಉಪಾಧ್ಯಕ್ಷ ತೆಲಂಗಾಣದ ನರಸಿಂಹ ನಾಯ್ಡು, ಕೇರಳ ರಾಜ್ಯದ ಪಿ.ಟಿ ಜಾನ್, ತಮಿಳುನಾಡಿನ ರಾಮಗೌಂಡರ್, ಇಳಂಗೋವನ್ ವೆಲಾಂಗಣಿ, ಎಳಿಲ್ಲನ್ ಕಾಂಚಿಪುರಂ, ಬಾಬು ಕೊಯಮತ್ತೂರು, ಮಾಣಿಕ್ಯಂ ಹುಣಸೂರು, ವಿಮಾಲ್ ಕುಮಾರ, ಮುಂತಾದವರಿದ್ದರು.
ಇವು ದೇಶದಲ್ಲೇ ಅತಿಹೆಚ್ಚು ಅರಿಶಿನ ಬೆಳೆಯುವ ರಾಜ್ಯಗಳು :
ದೇಶದಲ್ಲೇ ಅತಿಹೆಚ್ಚು ಅರಿಶಿನ ಬೆಳೆ ಬೆಳೆಯುವ ರಾಜ್ಯಗಳಲ್ಲಿ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಉಳಿದಂತೆ ಪೂರ್ವ ರಾಜ್ಯಗಳಾದ ಒರಿಸ್ಸಾ, ಪಶ್ಚಿಮಬಂಗಾಳ ಹಾಗೂ ಪಶ್ಚಿಮದ ರಾಜ್ಯವಾದ ಮಹಾರಾಷ್ಟ್ರ ಪ್ರಮುಖವಾದವುಗಳು. ವಿಶ್ವದಲ್ಲಿ ಉತ್ಪಾದನೆಯಾಗುವ ಅರಿಶಿನದ ಶೇ.80ರಷ್ಟು ಭಾಗ ಭಾರತದಲ್ಲಿ ಬೆಳೆಯಲಾಗುತ್ತದೆ. ವಿಶ್ವದಲ್ಲಾಗುವ ಶೇ.60ರಷ್ಟು ಅರಿಶಿನದ ರಫ್ತು ಭಾರತದಿಂದಾಗುತ್ತದೆ. ದೇಶಾದ್ಯಂತ 2018-19ನೇ ಇಸವಿಯಿಂದ 2020-21ನೇ ಸಾಲಿನ ವರೆಗೆ ದೇಶದ ಅರಿಶಿನ ಮಾರುಕಟ್ಟೆ ಬೆಳೆಯುವ ಪ್ರದೇಶ 2,61,922 ಹೆಕ್ಟೇರ್ ನಿಂದ 2,94,542 ಹೆಕ್ಟೇರ್ ಪ್ರದೇಶಕ್ಕೆ ಶೇ.12.5ರಷ್ಟು ಏರಿಕೆಯಾಗಿತ್ತು. 2019-20ರಲ್ಲಿ ಭಾರತವು 1,216.4 ಕೋಟಿ ರೂ. ಮೌಲ್ಯದ 1.36 ಲಕ್ಷ ಟನ್ ಅರಿಶಿನವನ್ನು ರಫ್ತು ಮಾಡಿತ್ತು ಎಂದು ಡೌನ್ ಟು ಅರ್ಥ್ ವೆಬ್ ಸೈಟ್ ಇಂಡಿಯಾ ಸ್ಟಾಟ್ ಮಾಹಿತಿಯನ್ನು ಉಲ್ಲೇಖಿಸಿ ಈ ವರದಿ ಮಾಡಿದೆ.