ನವದೆಹಲಿ/ಬೆಂಗಳೂರು, (www.bengaluruwire.com) : ಕೋವಿಡ್ ಮಹಾಮಾರಿ ಅಟ್ಟಹಾಸದ ನಡುವೆಯೇ 73ನೇ ಗಣರಾಜ್ಯೋತ್ಸವ (Repulbic Day) ಸಂಭ್ರಮಾಚರಣೆ ದೇಶಾದ್ಯಂತ ಸಂಭ್ರಮ ಸಡಗರಗಳಿಂದ ನಡೆಯುತ್ತಿದೆ. ಈ ಬಾರೀ ರಾಜ್ ಪಥ್ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಶೇ.70ರಷ್ಟು ಕಡಿತಗೊಳಿಸಲಾಗಿದ್ದು, ದೇಶದ ಸ್ವಾತಂತ್ರ್ಯೋತ್ಸವದ 75 ವರ್ಷಗಳ ಸಂದ ಅಂಗವಾಗಿ ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದ ಥೀಮ್ “ಭಾರತ@75” ಎಂಬುದಾಗಿದೆ.
ಸಾಮಾನ್ಯವಾಗಿ ಗಣರಾಜ್ಯೋತ್ಸವದ ಪಥಸಂಚಲನ ಬೆಳಗ್ಗೆ 10ಕ್ಕೆ ಆರಂಭವಾಗಬೇಕಾಗಿತ್ತು. ಆದರೆ ದೆಹಲಿಯಲ್ಲಿ ತೀವ್ರವಾಗಿ ಹೆಚ್ಚಾದ ಚಳಿ ಹಾಗೂ ಮಂಜಿನ ಕಾರಣದಿಂದ ರಕ್ಷಣಾ ಇಲಾಖೆಯು 10.30ಕ್ಕೆ ಪಥಸಂಚಲನ ಆರಂಭಕ್ಕೆ ನಿರ್ಧರಿಸಿದ್ದು, ಅದರಂತೆ ಪ್ರಧಾನಿ ನರೇಂದ್ರ ಮೋದಿಯವರು ಮೊದಲಿಗೆ ಇಂಡಿಯಾ ಗೇಟ್ ಬಳಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಬಳಿಕ ರಾಷ್ಟ್ರಪತಿ ರಮಾನಾಥ್ ಕೋವಿಂದ್ ರಾಜ್ ಪಥ್ ನಲ್ಲಿ ವಿವಿಧ ಸೇನಾ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಕೋವಿಡ್ ಹಿನ್ನಲೆಯಲ್ಲಿ ಈ ವರ್ಷ ಗಣರಾಜ್ಯೋತ್ಸವದ ಆಚರಣೆ ಸಮಯ ಕಡಿತಗೊಂಡಿದ್ದು, ಪರೇಡ್ ನಲ್ಲಿ ಹೆಚ್ಚಿನ ತಂಡಗಳು ಪಾಲ್ಗೊಳ್ಳಲು ಅವಕಾಶ ನೀಡಿಲ್ಲ. ಅಲ್ಲದೆ ಸಾಮಾನ್ಯ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪ್ರದರ್ಶನಕ್ಕಿಂತ ಕಡಿಮೆ ಸಾಂಸ್ಕೃತಿಕ ಪ್ರದರ್ಶನಗಳು ಇರಲಿವೆ. ದೆಹಲಿಯ ರಾಜಪಥದಲ್ಲಿ ದೆಹಲಿ ಮಿಲಿಟರಿ ಶಕ್ತಿ ಸಾಮರ್ಥ್ಯ, ದೇಶದ ವೈವಿಧ್ಯತೆಯನ್ನು ಬಿಂಬಿಸುವ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಈ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ಬಾರಿ ದಕ್ಷಿಣ ಭಾರತದ 12 ರಾಜ್ಯಗಳ ಪೈಕಿ ಕರ್ನಾಟಕವೊಂದೇ ಸ್ತಬ್ಧಚಿತ್ರಗಳ ಮೆರವಣಿಗೆಗೆ ಆಯ್ಕೆಯಾಗಿದ್ದು, ರಾಜ್ಯದ ಕರಕುಶಲ ಸಂಸ್ಕೃತಿಯ ವೈಭವವನ್ನು ಸಾರುವ ಟ್ಯಾಬ್ಲೋ ಪ್ರದರ್ಶನಗೊಂಡಿತು.
ಗಣರಾಜ್ಯೋತ್ಸವದ ಪಥಸಂಚಲನ ರಾಷ್ಟ್ರಪತಿ ಭವನದಿಂದ ಆರಂಭಗೊಂಡು ಇಂಡಿಯಾ ಗೇಟ್ ವರೆಗೆ ನಡೆಯಲಿದೆ. ಸೇನಾ ತುಕಡಿಗಳು ಪರೇಡ್ ನಲ್ಲಿ ಭಾಗವಹಿಸುತ್ತಿವೆ. ಪಥಸಂಚಲನ ಸಾಗುವ ವಿಜಯ್ ಚೌಕ್ ನಿಂದ ರಾಜಪಥ, ಅಮರ್ ಜವಾನ್ ಜ್ಯೋತಿ, ಇಂಡಿಯಾ ಗೇಟ್ ಪ್ರಿನ್ಸೆಸ್ ಪ್ಯಾಲೇಸ್, ತಿಲಕ್ ಮಾರ್ಗ್ ದಾರಿಯ ಮೂಲಕ ಇಂಡಿಯಾ ಗೇಟ್ ತನಕ ಸಾಗಲಿದೆ. ಈ ಹಿನ್ನಲೆಯಲ್ಲಿ ಭದ್ರತೆಯ ಕಾರಣಕ್ಕಾಗಿ ರಾಜ್ ಪಥ್ ಸುತ್ತಮುತ್ತಲಿನ ರಸ್ತೆಗಳನ್ನು ಮುಚ್ಚಲಾಗಿತ್ತು.
ಕೋವಿಡ್ ಸೋಂಕು ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಈ ಬಾರಿ ಗಣರಾಜ್ಯೋತ್ಸವ ಆಚರಣೆಗೆ ವಿದೇಶಿ ಗಣ್ಯರನ್ನು ಆಹ್ವಾನಿಸಿಲ್ಲ. ಆದರೆ ಭಾರತ ಸರ್ಕಾರವು ಮಧ್ಯ ಏಷ್ಯಾ ರಾಷ್ಟ್ರಗಳ ಐದು ದೇಶಗಳ ಮುಖ್ಯಸ್ಥರನ್ನು ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿತ್ತು. ಆದರೆ ಕೋವಿಡ್ ಸೋಂಕು ಹೆಚ್ಚಾದ ಬಳಿಕ ಈ ಆಹ್ವಾನವನ್ನು ರದ್ದುಗೊಳಿಸಿತ್ತು. ಕಳೆದ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅಂದಾಜು 25 ಸಾವಿರ ಜನರು ಪಾಲ್ಗೊಂಡಿದ್ದರು. ಆದರೆ ಈ ಬಾರಿ ಕೇವಲ 8 ಸಾವಿರ ಜನರಿಗಷ್ಟೆ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಲು ನಿರ್ದಿಷ್ಟ ಸಂಖ್ಯೆಯ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೋವಿಡ್19 ನಿಯಮಾವಳಿಗಳ ಹಿನ್ನಲೆಯಲ್ಲಿ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಕೆಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ, ಕೇಂದ್ರ ಸರ್ಕಾರದ 9 ಇಲಾಖೆಗಳ 21 ಟ್ಯಾಬ್ಲೋಗಳ ಪೈಕಿ 12 ಸ್ತಬ್ಧಚಿತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ವಾಯುಪಡೆಯ ತೇಜಸ್ ಹಗುರ ಯುದ್ಧ ವಿಮಾನ (LCA Tejas), ನೌಕಾಪಡೆಯ ಜಲಂತರ್ಗಾಮಿ ನೌಕೆಗಳು, ನವೀನ ತಂತ್ರಜ್ಞಾನದ ಎಲೆಕ್ಟ್ರಾನಿಕ್ ಸಮರ ವ್ಯವಸ್ಥೆ, ಆಧುನಿಕ ಶಸ್ತ್ರಾಸ್ತ್ರಗಳನ್ನು ಡಿಆರ್ ಡಿಒ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪ್ರದರ್ಶಿಸಿದವು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ 73ನೇ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿ ಟ್ವೀಟ್ ಮಾಡಿದರು.
ಕರ್ನಾಟಕದಲ್ಲಿ ಗಣರಾಜ್ಯೋತ್ಸವ ಆಚರಣೆ :
ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಥಾವರ್ ಚಂದ್ ಗೆಹ್ಲೋಟ್ ಗಣರಾಜ್ಯೋತ್ಸವ ಭಾಷಣ ಮಾಡುತ್ತಾ, ಕರ್ನಾಟಕದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೆ ಕರೋನಾಗೆ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯರು ಹಾಗೂ ನರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ರಾಜ್ಯದ ಜನತೆ ಕೋವಿಡ್ ವಿರುದ್ಧ ಯಶಸ್ವಿಯಾಗಿ ಹೋರಾಡಲು, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವಿಕೆ ಹಾಗೂ ಆಗಾಗ ಸ್ಯಾನಿಟೈಸರ್ ಮೂಲಕ ಕೈತೊಳೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಸೇನೆ ಹಾಗೂ ಪೊಲೀಸ್ ತುಕುಡಿಗಳಿಂದ ಗೌರವ ವಂದನೆ ಸ್ವೀಕರಿಸಿ, ಪಥಸಂಚಲನ ವೀಕ್ಷಿಸಿದರು.
ಗಣರಾಜ್ಯೋತ್ಸವ ಸಮಾರಂಭದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜನರ ಬಳಿಗೆ ಸರ್ಕಾರದ ವಿವಿಧ ಸೇವೆಗಳನ್ನು ತಲುಪಿಸುವ ಗ್ರಾಮ ಒನ್ ಕ್ರಾಂತಿಕಾರಿ ಯೋಜನೆಗೆ ಗಣರಾಜ್ಯೋತ್ಸವ ದಿನವಾದ ಇಂದು 12 ಜೆಲ್ಲೆಗಳಲ್ಲಿ ಚಾಲನೆ ನೀಡಲಾಗಿದೆ. ಇದರಿಂದಾಗಿ ಮೂರು ಸಾವಿರ ಗ್ರಾಮಗಳಲ್ಲಿ ಗ್ರಾಮ ಒನ್ ಯೋಜನೆ ಪ್ರಾರಂಭವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಎಲ್ಲಾ ಜೆಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸುತ್ತೆವೆ. ಜನರ ಬಳಿಗೆ ಸರ್ಕಾರದ ಸೇವೆಗಳು ತಲುಪಬೇಕು ಎಂಬ ನೀತಿಯ ಆಧಾರದ ಮೇಲೆ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಗೋವಿಂದ ಕಾರಜೋಳ, ಸಚಿವರು, ಶಾಸಕರು, ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್, ನಗರ ಪೋಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು.
ಬಿಬಿಎಂಪಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಆಚರಣೆ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 191ನೇ ಸ್ಮರಣೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಗೊಳ್ಳಿ ರಾಯಣ್ಣನವರ ದೇಶಭಕ್ತಿಯನ್ನು ಕೊಂಡಾಡಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ಕೋವಿಡ್ ಪಾಸಿಟಿವ್ :
ಕೋವಿಡ್ ಪಾಸಿಟಿವ್ ಹಿನ್ನಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದ ಕಾರಣ ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ನಡೆದ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮ ಸೇರಿದಂತೆ ಮತ್ತಿತರ ಅಧಿಕೃತ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿದ್ದರು. ಇತ್ತೀಚೆಗೆ ತಮ್ಮ ಸಂಪರ್ಕಕ್ಕೆಬಂದವರು ಎಚ್ಚರಿಕೆ ವಹಿಸುವಂತೆಯೂ ಹಾಗೂ ಅಗತ್ಯವಿದ್ದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡುವಂತೆ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.