ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಆರಂಭಿಸಿದ್ದು, ಏಪ್ರಿಲ್- ಮೇನಲ್ಲಿ ಚುನಾವಣೆ ನಡೆಸುವ ಸಂಬಂಧ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ನೇತೃತ್ವದಲ್ಲಿ ಮಂಗಳವಾರದಿಂದ ಮೂರು ದಿನಗಳ ಸರಣಿ ಸಭೆ ಆರಂಭಿಸಿದೆ. ಇದರ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಇವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಸದಾನಂದಗೌಡರ ಸೇರಿದಂತೆ ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಮುಂಬರುವ ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯು ಮೂರು ದಿನಗಳ ಸರಣಿ ಸಭೆಯನ್ನು ಆಯೋಜಿಸಿದೆ. ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ಜಿಲ್ಲೆಗಳಿದ್ದು, ಮೂರು ದಿನ ಮೂರು ಜಿಲ್ಲೆಗಳ ಪದಾಧಿಕಾರಿಗಳು, ಮಾಜಿ ಕಾರ್ಪೊರೇಟರ್ ಗಳು, ವಿವಿಧ ಮಂಡಲಗಳ ಅಧ್ಯಕ್ಷರು, ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯನ್ನು ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆಸಲಾಗುತ್ತದೆ. ಅದರಂತೆ ಮಂಗಳವಾರ ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ಬಿಬಿಎಂಪಿಗೆ ಹಿಂದಿನ 198 ವಾರ್ಡ್ ಗಳ ಬದಲಾಗಿ 243 ವಾರ್ಡ್ ಗಳನ್ನು ಹೆಚ್ಚಿಸಿ ವಾರ್ಡ್ ಪುನರ್ ವಿಂಗಡಣೆ ಮಾಡುವಂತೆ ರಾಜ್ಯ ಸರ್ಕಾರ ಪಾಲಿಕೆ ಮುಖ್ಯ ಆಯುಕ್ತರ ನೇತೃತ್ವದಲ್ಲಿ ನೇಮಿಸಿದ್ದ ಪುನರ್ ವಿಂಗಡಣಾ ಆಯೋಗದ ಅವಧಿ ಇದೇ ಜನವರಿ 28ರಂದು ಪೂರ್ಣಗೊಳ್ಳಲಿದ್ದು ಅದರೊಳಗೆ ರಾಜ್ಯ ಸರ್ಕಾರಕ್ಕೆ ಪುನರ್ ವಿಂಗಡಣೆಯ ವರದಿಯನ್ನು ನೀಡಲಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಮುಂಬರುವ ಪಾಲಿಕೆ ಚುನಾವಣೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ನಡೆಸಲು, ವಾರ್ಡ್ ಪುನರ್ ವಿಂಗಡಣೆ ಬಗ್ಗೆ ಬೆಂಗಳೂರಿನ ಬಿಜೆಪಿ ಪದಾಧಿಕಾರಿಗಳ ಅಭಿಪ್ರಾಯವನ್ನು ಪಡೆಯಲು ಈ ಮಹತ್ವದ ಸಭೆಯನ್ನು ಆಯೋಜಿಸಿದೆ ಎಂದು ಮೂಲಗಳು ತಿಳಿಸಿದೆ.
ಈಗಾಗಲೇ ಬೆಂಗಳೂರಿನ ಬಿಜೆಪಿ ಶಾಸಕರ ಬಳಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ವಾರ್ಡ್ ಗಳು ಸೇರ್ಪಡೆಯಾಗಬೇಕು, ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕೆ ಮತ ತಂದುಕೊಡುವ, ತಮಗೆ ಅನುಕೂಲವಾಗುವ ಪ್ರದೇಶಗಳನ್ನು ಗುರ್ತಿಸಿ, ಅವುಗಳ ಗಡಿ ಗುರುತು ಮತ್ತಿತರ ವಿಚಾರಗಳ ಬಗ್ಗೆ ಮೊದಲ ಹಂತದಲ್ಲಿ ತಮ್ಮ ಅಭಿಪ್ರಾಯವನ್ನು ಬಿಜೆಪಿ ಮುಖಂಡರ ಬಳಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಬೆನ್ನ ಹಿಂದೆಯೇ ಬೆಂಗಳೂರಿನ ಬಿಜೆಪಿ ಪದಾಧಿಕಾರಿಗಳು ನೀಡುವ ಸಲಹೆ, ಅಭಿಪ್ರಾಯಗಳನ್ನು ಪರಿಗಣಿಸಿ ವಾರ್ಡ್ ಪುನರ್ ವಿಂಗಡಣೆಯಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆಯನ್ನು ಸೂಚಿಸಿ ತದನಂತರ ಅವುಗಳನ್ನು ಪುನರ್ ವಿಂಗಡಣೆ ವರದಿಯಲ್ಲಿ ಸೇರಿಸುವ ದೃಷ್ಟಿಯಿಂದ ಈ ಸರಣಿ ಸಭೆಯನ್ನು ಆಯೋಜಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವಿಕೆ, ಬೀದಿ ದೀಪ, ಸಮರ್ಪಕ ಕುಡಿಯವ ನೀರು ಪೂರೈಕೆ ಯೋಜನೆ ಪೂರ್ಣಗೊಳಿಸುವುದು, ಕಾಲುವೆ ಹೂಳೆತ್ತುವಿಕೆ, ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿ ಮತದಾರರ ವೋಲೈಸುವ ಕೆಲಸ ಮಾಡಬೇಕು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾಯಿತು.
ಬುಧವಾರ ಬೆಂಗಳೂರು ಕೇಂದ್ರ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಸಭೆ ಕರೆಯಲಾಗಿದ್ದು, ಸಂಸದ ಪಿ.ಸಿ.ಮೋಹನ್ ಹಾಗೂ ಸುಮಾರು 135 ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾಗದೇ ಚುನಾವಣೆಯಿಲ್ಲ :
ರಾಜ್ಯ ಸರ್ಕಾರ ಈಗಿರುವ 198 ವಾರ್ಡ್ ಗಳ ಜಾಗದಲ್ಲಿ 243 ವಾರ್ಡ್ ಗಳನ್ನು ಹೆಚ್ಚಳ ಮಾಡಿ ವಾರ್ಡ್ ಪುನರ್ ವಿಂಗಡಣೆ ಮಾಡಿದರೂ ಆ ರೀತಿ ಬಿಬಿಎಂಪಿ ಚುನಾವಣೆ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಆಗದು. ತಾಂತ್ರಿಕ ಕಾರಣಗಳಿಂದ ಅಂದರೆ ಪಾಲಿಕೆ ಚುನಾವಣೆ ವಿಚಾರ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಅಲ್ಲಿ ಪ್ರಕರಣ ಇತ್ಯರ್ಥವಾಗದೇ ಚುನಾವಣೆ ನಡೆಸಲಾಗದು.
ಈ ಹಿಂದೆ ಸೂಕ್ತ ಅವಧಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನಲ್ಲಿ ಕಾಂಗ್ರೆಸ್ ಪಕ್ಷದ ಎಂ.ಶಿವರಾಜು, ಅಬ್ದುಲ್ ವಾಜೀದ್ ಮತ್ತಿತರು ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗವನ್ನು ಪ್ರತಿವಾದಿಯನ್ನಾಗಿಸಿ ಪ್ರಕರಣ ದಾಖಲಿಸಿದ್ದರು. ಆ ಸಂದರ್ಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ದ್ವಿಸದಸ್ಯ ಪೀಠ 198 ವಾರ್ಡ್ ಗಳಿಗೆ 22 ಸೆಪ್ಟೆಂಬರ್ 2020ರಲ್ಲಿ ಪುನರ್ ವಿಂಗಡಣೆ ಅಧಿಸೂಚನೆಯಂತೆ ಮೀಸಲಾತಿ ಪ್ರಕಟಿಸುವಂತೆ ತಿಳಿಸಿತ್ತು. ಅಲ್ಲದೆ ರಾಜ್ಯ ಚುನಾವಣಾ ಆಯೋಗಕ್ಕೆ 198 ವಾರ್ಡ್ ಗಳಿಗೆ ಸೀಮಿತವಾಗಿರುವಂತೆ ಚುನಾವಣೆ ನಡೆಸುವಂತೆ ಆದೇಶಿಸಿತ್ತು. ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದ ರಾಜ್ಯ ಸರ್ಕಾರ, 198 ವಾರ್ಡ್ ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ತಂದಿತ್ತು. ಆ ಬಳಿಕ ಕೋವಿಡ್ ಮತ್ತಿತರ ಕಾರಣಗಳಿಂದಾಗಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಕುರಿತಂತೆ ಇನ್ನೂ ಅಂತಿಮ ತೀರ್ಪು ಹೊರಬಂದಿಲ್ಲ.
243 ವಾರ್ಡ್ ಗಳಿಗೆ ಎಲೆಕ್ಷನ್ ನಡೆಸುವ ಬಗ್ಗೆ ಅಫಿಡೆವಿಟ್ ಸಲ್ಲಿಕೆ ಸಾಧ್ಯತೆ :
ಈ ಮಧ್ಯೆ ರಾಜ್ಯ ಸರ್ಕಾರ ಬಿಬಿಎಂಪಿಯ ವಾರ್ಡ್ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಳ ಮಾಡಿ ವಿಧಾನಮಂಡಲದ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿದ್ದ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು. ಆನಂತರ 29 ಜನವರಿ 2021ರಂದು ಪಾಲಿಕೆಯ 243 ವಾರ್ಡ್ ಪುನರ್ ವಿಂಗಡಣೆಗೆ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಇಬ್ಬರು ಸದಸ್ಯರು, ಒಬ್ಬರು ಸದಸ್ಯ ಕಾರ್ಯದರ್ಶಿ ಒಳಗೊಂಡ ಆಯೋಗವನ್ನು ರಚಿಸಿ, ಆಯೋಗದ ಅವಧಿಯನ್ನು 6 ತಿಂಗಳಿಗೆ ನಿಗಧಿಪಡಿಸಿತ್ತು. ಕೋವಿಡ್ ಮತ್ತಿತರ ಕಾರಣಕ್ಕೆ ವಾರ್ಡ್ ಪುನರ್ ವಿಂಗಡಣೆ ಮಾಡಲಾಗದ ಕಾರಣ 28-07-2021ರಿಂದ ಜಾರಿಗೆ ಬರುವಂತೆ ಪುನಃ ಆಯೋಗದ ಅವಧಿಯನ್ನು 6 ತಿಂಗಳು ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಈ ಆಯೋಗದ ಅವಧಿ ಜನವರಿ 28ಕ್ಕೆ ಮುಕ್ತಾಯಗೊಳ್ಳಲಿದೆ. ಅಷ್ಟರ ಒಳಗೆ ಆಯೋಗವು ತನ್ನ ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕಿದೆ.
ಇನ್ನೊಂದೆಡೆ ರಾಜ್ಯ ಸರ್ಕಾರ 243 ವಾರ್ಡ್ ಗಳ ರಚನೆ ಸಂಬಂಧ ಮಸೂದೆ ಅಂಗೀಕಾರವಾಗಿದ್ದು, ವಾರ್ಡ್ ಪುನರ್ ವಿಂಗಡಣೆ ಅಂತಿಮ ಹಂತದಲ್ಲಿದ್ದು, ಅವುಗಳನ್ನು ಅಂತಿಮಗೊಳಿಸಿ, 243 ವಾರ್ಡ್ ಗಳಿಗೆ ಏಪ್ರಿಲ್- ಮೇ ತಿಂಗಳಲ್ಲಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ನಲ್ಲಿ ಅಫಿಡೆವಿಟ್ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿಗೆ ಚುನಾವಣೆ ನಡೆಸುವುದು ಬಿಜೆಪಿಗೆ ಅನಿವಾರ್ಯ :
ಒಟ್ಟಿನಲ್ಲಿ ಈಗಾಗಲೇ 15 ತಿಂಗಳಾದರೂ ಪಾಲಿಕೆಗೆ ನಿಗಧಿತ ಅವಧಿಯಲ್ಲಿ ಚುನಾವಣೆಯಾಗದೆ ಜನಪ್ರತಿನಿಧಿಗಳಲ್ಲದೇ ಅಧಿಕಾರಿಗಳ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಬಿಬಿಎಂಪಿಯಲ್ಲಿ ದರ್ಬಾರ್ ನಡೆಸಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ನಾಯಕರು ಆದಷ್ಟು ಶೀಘ್ರವಾಗಿ ಬಿಬಿಎಂಪಿಗೆ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಲಿದೆ.
243 ವಾರ್ಡ್ ಪುನರ್ ವಿಂಗಡಣೆ ಏನಾಗಬಹುದು ?
ಈ ಹಿಂದೆ ಪಾಲಿಕೆ ವಾರ್ಡ್ ಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯ ಸುತ್ತಲಿನ 1 ಕಿ.ಮೀ ನಷ್ಟು ಪ್ರದೇಶ ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ 2021ರ ಜನಗಣತಿ ಪ್ರಾರಂಭಿಸುವ ಹಿನ್ನಲೆಯಲ್ಲಿ ಈ ಹಿಂದೆ ಆಡಳಿತಾತ್ಮಕ ಪ್ರದೇಶದ ವ್ಯಾಪ್ತಿ ಬದಲಾವಣೆ ಮಾಡುವುದಕ್ಕೆ 31 ಡಿಸೆಂಬರ್ 2021 ಗಡುವು ನೀಡಿತ್ತು. ಆನಂತರ ಆಡಳಿತಾತ್ಮಕ ಪ್ರದೇಶದ ವ್ಯಾಪ್ತಿ ಬದಲಾಯಿಸಲು ಅವಕಾಶ ನೀಡಿರಲಿಲ್ಲ. ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಕೇಂದ್ರ ಗೃಹ ಇಲಾಖೆಗೆ ಈ ಗಡುವನ್ನು ವಿಸ್ತರಿಸುವಂತೆ ಕೇಳಿರುವ ಹಿನ್ನಲೆಯಲ್ಲಿ ಇದೀಗ ಜುಲೈ 2022ರ ತನಕ ಆಡಳಿತಾತ್ಮಕ ವ್ಯಾಪ್ತಿ ಬದಲಾವಣೆ ಮಾಡಲು ಅವಕಾಶ ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ಬಿಬಿಎಂಪಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರೆ ಆಶ್ಚರ್ಯವಿಲ್ಲ.
- ಒಂದೊಮ್ಮೆ ಪಾಲಿಕೆಯ ಪ್ರದೇಶ ವಿಸ್ತರಣೆಯಾದರೆ 2007ರಲ್ಲಿ 110 ಹಳ್ಳಿಗಳನ್ನು ಸೇರಿಸಿಕೊಂಡು ಆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಈತನಕ ಸಾವಿರಾರು ಕೋಟಿ ರೂ. ಕರ್ಚು ಮಾಡಿದರೂ ಆ ಪ್ರದೇಶಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ಹೀಗಿರುವಾಗ ಹೆಚ್ಚುವರಿ 1 ಕಿ.ಮೀ ವ್ಯಾಪ್ತಿ ಸೇರ್ಪಡೆಯಾದರೆ ಬಿಬಿಎಂಪಿ ಆರ್ಥಿಕತೆಯ ಮೇಲೆ ಮತ್ತಷ್ಟು ಹೊರೆ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.
- ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ಮಹದೇವಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಯಶವಂತಪುರ, ಯಲಹಂಕ ಮತ್ತಿತರ ಹಳೆ ಪಟ್ಟಣ ಪುರಸಭೆಯನ್ನು ಹೊಂದಿದ್ದ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್ ಸಂಖ್ಯೆ ಹೆಚ್ಚಳವಾಗಬಹುದು.
- ಬೆಂಗಳೂರು ಹಳೇ ಪ್ರದೇಶದಲ್ಲಿ ವಾರ್ಡ್ ಸಂಖ್ಯೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇದ್ದಷ್ಟೇ ಇರುತ್ತದೆಂದು ನಿರೀಕ್ಷಿಸಲಾಗಿದೆ.
- 2011ರ ಜನಗಣತಿಯಂತೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ 5 ರಿಂದ 6 ವಾರ್ಡ್ ಗಳು ಹಾಗೂ ಪ್ರತಿ ವಾರ್ಡ್ ಜನಸಂಖ್ಯೆ 35 ರಿಂದ 40 ಸಾವಿರ ವ್ಯಾಪ್ತಿಯಲ್ಲಿರುವ ಸಾಧ್ಯತೆಯಿದೆ.
ಬಿಬಿಎಂಪಿ 2020 ಕಾಯ್ದೆಯಂತೆ ವಾರ್ಡ್ ಗಡಿ ಗುರ್ತಿಸುವಿಕೆ ಹೀಗಿರಬೇಕು :
ಬಿಬಿಎಂಪಿ ಕಾಯ್ದೆ 2020ರ ಮೂರನೇ ಅಧ್ಯಾಯದ 7ನೇ ಕಂಡಿಕೆಯಂತೆ “ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್ ಜನಸಂಖ್ಯೆಯು ನಗರದೆಲ್ಲಡೆ ಸಮಾನವಾಗಿರುವ ರೀತಿಯಲ್ಲಿ ವಾರ್ಡ್ ವಿಂಗಡಣೆ ಮಾಡುವಂತೆ ತಿಳಿಸಿದೆ. ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿಯೇ ವಾರ್ಡ್ ಗಳನ್ನು ವಿಭಾಗಿಸುವಂತೆ ಹಾಗೂ ಯಾವುದೇ ವಾರ್ಡ್ ಗಳು ಇತರ ಚುನಾವಣಾ ಕ್ಷೇತ್ರಗಳಿಗೆ ವಿಸ್ತರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.”
“ಚುನಾವಣೆಯ ಉದ್ದೇಶಕ್ಕಾಗಿ ಪಾಲಿಕೆಯ ವಾರ್ಡ್ ಗಳನ್ನು 225ಕ್ಕಿಂತ ಕಡಿಮೆಯಿಲ್ಲದಂತೆ ಹಾಗೂ 250 ವಾರ್ಡ್ ಗಳಿಗೆ ಹೆಚ್ಚಿಗೆ ಇರದಂತೆ ವಿಭಾಗ ಮಾಡಲಾಗಿದೆಯೇ ಎಂಬುದನ್ನು ಪ್ರತಿಯೊಂದು ವಾರ್ಡ್ ವ್ಯಾಪ್ತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿಸಿದ ಸ್ಥಾನಗಳ ಸಂಖ್ಯೆಯು , ಪಾಲಿಕೆಯಲ್ಲಿ ನೇರ ಚುನಾವಣೆಯ ಮೂಲಕ ತುಂಬಬೇಕಾದ ಸ್ಥಾನಗಳ ಒಟ್ಟು ಸಂಖ್ಯೆಯಲ್ಲಿ ನಗರದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಎಸ್ ಸಿ ಮತ್ತು ಎಸ್ ಟಿ ಪಂಗಡಗಳ ಜನಸಂಖ್ಯೆ ಇರುವ ಪ್ರಮಾಣಕ್ಕೆ ಅನುಸಾರವಾಗಿ ಸಾಧ್ಯವಾದಷ್ಟು ಮಟ್ಟಿಗೆ ನಿಗಧಿಪಡಿಸಲಾಗಿದೆ ಎಂಬುದನ್ನು ನಿರ್ಧರಿಸತಕ್ಕದ್ದು. ” ಎಂದು ತಿಳಿಸಲಾಗಿದೆ.
ಎಸ್ ಸಿ ಮತ್ತು ಎಸ್ ಟಿ, ಹಿಂದುಳಿದ ವರ್ಗದವರಿಗೆ ಮೀಸಲಿರಿಸಿದ ಒಟ್ಟು ಸ್ಥಾನಗಳ ಸಂಖ್ಯೆಯು ಪಾಲಿಕೆಯಲ್ಲಿನ ಒಟ್ಟು ಸ್ಥಾನಗಳ ಸಂಖ್ಯೆ ಮೂರನೇ ಒಂದರಷ್ಟನ್ನು ಮೀರದಂತೆ ನಿರ್ಧರಿಸತಕ್ಕದ್ದು, ಶೇ.50ರಷ್ಟು ಮಹಿಳಾ ಮೀಸಲಾತಿ ಸೀಟು ಮಹಿಳೆಯರಿಗೆ ನೀಡಬೇಕೆಂದು ಹೇಳಿದೆ.
ವಾರ್ಡ್ ಗಳ ಗಡಿ ಗುರುತಿಸುವಿಕೆ ಕೇವಲ ಸಾರ್ವತ್ರಿಕ ಚುನಾವಣೆ ಉದ್ದೇಶಕ್ಕಾಗಿ ಮಾಡಬೇಕೇ ಹೊರತು, ಮೀಸಲಾತಿ ಉದ್ದೇಶಕ್ಕಾಗಿ ವಾರ್ಡ್ ಗಡಿ ಗುರ್ತಿಸುವಿಕೆ ಅಥವಾ ವಾರ್ಡ್ ಗಳ ಬದಲಾವಣೆ ಮಾಡುವಂತಿಲ್ಲ ಹಾಗೂ ಅಂತಹ ವಾರ್ಡ್ ಗಳ ಗಡಿ ಗುರ್ತಿಸುವಿಕೆ ಅಥವಾ ವಾರ್ಡ್ ಗಳ ಬದಲಾವಣೆಯು ಅಸ್ತಿತ್ವದಲ್ಲಿರುವ ಪಾಲಿಕೆಗೆ ಯಾವುದೇ ಪರಿಣಾಮ ಉಂಟುಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.