ಬೆಂಗಳೂರು, (www.bengaluruwire.com) : ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ತಮ್ಮ ಹುದ್ದೆಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ.
ನಗರದ ಲೋಕಾಯುಕ್ತ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಾವು ಹುದ್ದೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದರು. ಅಲ್ಲದೇ ಲೋಕಾಯುಕ್ತ ಸಂಸ್ಥೆ ಬಲಹೀನ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಪಾರದರ್ಶಕವಾಗಿ ಇರಬೇಕು ಅಂದರೆ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ಸಿಗಬೇಕು. ಅಲ್ಲದೆ ಜನರ ಹಿತದೃಷ್ಟಿಯಿಂದ ಭ್ರಷ್ಟಾಚಾರ ನಿಗ್ರಹ ದಳ (ACB) ರದ್ದು ಆಗಬೇಕು ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.
ಸರ್ಕಾರದ ಅಧೀನದಲ್ಲಿ ಎಸಿಬಿ ಇದ್ದರೆ ಪಾರದರ್ಶಕ ತನಿಖೆ ನಿರೀಕ್ಷೆ ಸಾಧ್ಯವಿಲ್ಲ. ಲೋಕಾಯುಕ್ತರ ಅಧೀನದಲ್ಲಿ ಇದ್ದರೆ ಪರಿಣಾಮಕಾರಿ ಕೆಲಸ ಆಗಲಿದೆ. ಈ ಸಂಸ್ಥೆಗೆ ಬರುವಾಗ ಸ್ವಲ್ಪ ಅಧಿಕಾರ ಕಿತ್ತುಕೊಂಡಿದ್ದಾರೆ ಅಂತ ಗೊತ್ತಿತ್ತು. ಲೋಕಾಯುಕ್ತ ಸಂಸ್ಥೆಯ ಅಧಿಕಾರ ಕುಂಠಿತಗೊಂಡಿದೆ. ಹೆಚ್ಚಿನ ಅಧಿಕಾರ ಇದ್ದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕಾರ ಅವಧಿಯಲ್ಲಿ ತಾವು ಕೆಲಸ ನಿರ್ವಹಿಸಿದ ರೀತಿ, ಪ್ರಕರಣಗಳ ವಿಲೇವಾರಿ ಬಗ್ಗೆ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ, ನಾನು ಅಧಿಕಾರಕ್ಕೆ ಬಂದಾಗ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಇತ್ತು. ಅದರೆ ಹಲವಾರು ಕಾರಣಗಳಿಂದ ರಿಟ್ ಅರ್ಜಿ ತೀರ್ಮಾನ ಅಗಲಿಲ್ಲ. ಆ ರಿಟ್ ಅರ್ಜಿ ಬೇಗ ತೀರ್ಮಾನ ಅಗದಿದ್ದದ್ದು ನನಗೆ ಬೇಸರ ತಂದಿದೆ. ಫೆಬ್ರವರಿ ಮೂರಕ್ಕೆ ಇದರ ವಿಚಾರಣೆ ಇದೆ ಎಂದರು.
ಲೋಕಾಯುಕ್ತದಲ್ಲಿ 8,035 ದೂರು, 2,430 ಪ್ರಕರಣ ವಿಚಾರಣೆ ಬಾಕಿ :
ನಾನು ಅಧಿಕಾರವಹಿಸಿಕೊಂಡ ನಂತರ ಒಟ್ಟು 7,680 ದೂರು ಇದ್ದವು. ಆ ಪೈಕಿ 3,242 ಪ್ರಕರಣಗಳು 15 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬಾಕಿ ಇದ್ದವು.
2,677 ಪ್ರಕರಣಗಳ ಇತ್ಯರ್ಥಪಡಿಸಲಾಗಿದೆ. 2,122 ಪ್ರಕರಣಗಳ 12(3) ರನ್ವಯ ಹಾಗೂ 587 ಪ್ರಕರಣಗಳ ಲೋಕಾಯುಕ್ತ ಕಾಯ್ದೆ ಕಲಂ 12(1) ರನ್ವಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿ 8,035 ದೂರು ಮತ್ತು 2,430 ವಿಚಾರಣೆ ಪ್ರಕರಣಗಳು ಬಾಕಿ ಇರುತ್ತದೆ. ನನ್ನ ಮೇಲೆ ಹಲ್ಲೆಯಾದಾಗ 45 ದಿನ ವಿಶೇಷ ರಜೆ ಪಡೆದಿದ್ದೆ. ಉಳಿದಂತೆ 5 ವರ್ಷಗಳ ಸಾಂದರ್ಭಿಕ ರಜೆ ಹೊರತುಪಡಿಸಿ ಕೇವಲ 7 ದಿನ ಮಾತ್ರ ರಜೆ ಹಾಕಿದ್ದೇನೆ. 2014 ರಲ್ಲಿ ಖರೀದಿಸಿದ ಅಂದರೆ ಸುಮಾರು 7 ವರ್ಷಗಳ ಕಾಲ ಬಳಸಿದ ಹಳೆ ಕಾರನ್ನೇ ಉಪಯೋಗಿಸುತ್ತಿದ್ದೇನೆ.
ರಾಜ್ಯಪಾಲರಿಗೆ ತಮ್ಮ ಆಸ್ತಿ ಘೋಷಣೆ ಮಾಡುವ ಇರಾದೆಯಿತ್ತು :
ಲೋಕಾಯುಕ್ತರು ಆಸ್ತಿ ಘೋಷಣೆ ಮಾಡಬೇಕೆಂದು ಕಾನೂನು ಇಲ್ಲ. ಆದರೂ ನಾನು ರಾಜ್ಯಪಾಲರಿಗೆ ಆಸ್ತಿ ಘೋಷಣೆ ಬಗ್ಗೆ ಮಾಹಿತಿ ನೀಡಬೇಕೆಂದು ಯೋಚನೆ ಮಾಡಿದ್ದೆ.
ಆದರೆ ಲೋಕಾಯುಕ್ತರ ನೇಮಕವನ್ನು ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕರು, ಸ್ಪೀಕರ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸೇರಿ ಮಾಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಲೋಕಾಯಕ್ತರನ್ನು ಸಾರ್ವಜನಿಕವಾಗಿ ಪರಿಶೀಲನೆ ಮಾಡುವುದು ಸರಿ ಅಲ್ಲ ಅಂತ ಕಾನೂನು ಮಾಡಿಲ್ಲ. ಹೀಗಾಗಿ ಇದನ್ನು ನಾನು ಮುರಿಯಬಾರದು ಅಂತ ಸುಮ್ಮನಾದೆ.
ನನಗೆ ಹೆಚ್ಚಿನ ಆದಾಯ ಇಲ್ಲದೆ ಇರುವ ಸಮಯದಲ್ಲಿ ನನ್ನ ಸಹೋದರನ ಮನೆಗೆ ಬಂದು ವಕಾಲತ್ತು ಶುರು ಮಾಡಿದ್ದೆ. ನಾನು ಇನ್ ಕಮ್ ಟ್ಯಾಕ್ಸ್ ರಿಟರ್ನ್ ಮಾಡುತ್ತಿದ್ದೇನೆ.
ಲೋಕಾಯುಕ್ತರನ್ನ ನೇಮಿಸುವುದು ಸಂವಿಧಾನಿಕ ಸಂಸ್ಥೆ. ಲೋಕಾಯುಕ್ತರನ್ನು ಪರಿಶೀಲನೆಗೆ ಒಳಪಡಿಸುವುದು ಸರಿಯಲ್ಲ ಎಂದಿದೆ. ಲೋಕಾಯುಕ್ತರ ಅಸೆಟ್ಸ್ ಸಾರ್ವಜನಿಕರಿಗೆ ಸಿಗುವಂತಾದರೆ ಆ ಸಂಸ್ಥೆಯ ಗೌರವ ಕಳೆದಂತಾಗುತ್ತೆ ಅಂತ ಇದೆ. ಸಾರ್ವಜನಿಕರು ಲೋಕಾಯುಕ್ತ ಮೇಲೆ, ನಿವೃತ್ತ ನ್ಯಾಯಾಧೀಶರ ಮೇಲೆ ನಂಬಿಕೆ ಇಡಲೇಬೇಕು.
ಚಾಕು ಇರಿತ ಪ್ರಕರಣ ಪ್ರಸ್ತಾಪ :
ತಮ್ಮ ಮೇಲೆ ಚಾಕು ಇರಿತವಾದಾಗ ದೇವರು ನನ್ನನ್ನು ರಕ್ಷಿಸಿದ್ದಾನೆ. ವ್ಯಕ್ತಿಯ ಮೇಲೆ ದೇವರ ದಯೆ ಇದ್ದರೆ ಏನು ಆಗೊಲ್ಲ ಅನ್ನೊದು ನನ್ನ ನಂಬಿಕೆ. ಆ ವ್ಯಕ್ತಿ ಆಕ್ರೋಶದಿಂದ ಈ ಕೃತ್ಯ ನಡೆಸಿದ್ದ.
ಪೊಲೀಸ್ ತನಿಖೆ ನಡೆಸಿದ ಪ್ರಕಾರ, ಕೃತ್ಯ ಎಸಗಿದ ವ್ಯಕ್ತಿ ಲೋಕಾಯುಕ್ತರು ಇಲ್ಲದ ಹಾಗೆ ಮಾಡಿ. ಲೋಕಾಯುಕ್ತರನ್ನು ಖಾಲಿ ಮಾಡಬೇಕು ಅನ್ನೋ ಉದ್ದೇಶ ಹೊಂದಿದ್ದನಂತೆ. ಲೋಕಾಯುಕ್ತರಿಲ್ಲ ಅಂದ್ರೆ ಸಮಸ್ಯೆ ಸಾರ್ವಜನಿಕರ ಮೇಲಾಗುತ್ತದೆ. ಲೋಕಾಯುಕ್ತ ಹುದ್ದೆ ನನಗೆ ಇಷ್ಟೊಂದು ಸೂಕ್ಷ್ಮತೆ ಹೊಂದಿರುವಂತದ್ದು ಎಂದು ಗೊತ್ತಿರಲಿಲ್ಲ. ಹಿಂದಿನ ಲೊಕಾಯುಕ್ತರು ಬಂದು ತಿಳಿಸಿದಾಗಲೇ ಗೊತ್ತಾಗಿದ್ದು ಇದು ಸೆನ್ಸಿಟೀವ್ ಪೋಸ್ಟ್ ಅಂತ.
ಎಸಿಬಿ ಸಂಸ್ಥೆ ಮೇಲೂ ಕ್ರಮ ಕೈಗೊಳ್ಳಬಹುದು :
ಕಾನೂನಿನ ತಳಹದಿಯಲ್ಲಿ ಲೋಕಾಯುಕ್ತ ಸಂಸ್ಥೆ ಮಾಡುವುದು ಎರಡು ಕೆಲಸ. ಒಂದು ಜನರಿಗೆ ಆದ ಸಂಕಷ್ಟ ದೂರ ಮಾಡಿ ಪರಿಹಾರ ಒದಗಿಸುವುದು. ಇನ್ನೊಂದು ದುರಾಡಳಿತವನ್ನ ಮಟ್ಟ ಹಾಕುವುದು. ಲೋಕಾಯುಕ್ತದಲ್ಲಿ 23 ಎಸ್ ಪಿಗಳು, ಡಿವೈಎಸ್ಪಿಗಳು ಇದ್ದಾರೆ. ಲೋಕಾಯುಕ್ತ ಸೆಕ್ಷನ್ 53 ಅಡಿಯಲ್ಲಿ ಇರುವ ಅಧಿಕಾರ ಬಳಸಿಕೊಂಡು ನಾನು ಪ್ರಕರಣವನ್ನು ಎಸಿಬಿಗೆ ಕೊಡಬಹುದು.
ಅವರು ತನಿಖೆ ಮಾಡದಿದ್ದರೆ, ಲೋಕಾಯುಕ್ತರಾದವರು ಎಸಿಬಿ ಮೇಲೂ ಕ್ರಮ ಕೈಗೊಳ್ಳಬಹುದು. ಲೋಕಾಯುಕ್ತದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ 23 ಪ್ರಕರಣಗಳನ್ನು ರವಾನೆ ಮಾಡಲಾಗಿದೆ. ಅದರಲ್ಲಿ 10 ಕೇಸ್ ಗಳು ವಜಾ ಆಗಿದೆ.
ಬಾಕಿ ಉಳಿದ ಕೇಸ್ ಗಳು ಪೊಲೀಸರ ತನಿಖೆಗೆ ಸೂಚನೆ ನೀಡಲಾಗಿದೆ. ಸರ್ಕಾರದಿಂದ ಅನುಮತಿ ಬರಬೇಕಾಗಿದೆ. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ವಿಚಾರದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಾರೆ. ಇನ್ಸ್‌ಪೆಕ್ಟರ್, ಡಿವೈಎಸ್ ಪಿ, ಎಡಿಜಿಪಿ ಹಂತದಲ್ಲಿ ತನಿಖೆ ನಡೆಸಲಾಗುತ್ತದೆ.
ಎಲ್ಲಾ ಜನಪ್ರತಿನಿಧಿಗಳು ತಮ್ಮ ಆಸ್ತಿಗಳ ಮಾಹಿತಿ ಕೊಡಬೇಕು ಅಂತ ಮಾಡಿದ್ದೇವೆ. ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು, ಶಾಸಕರ ತನಕ ಕೊಡಬೇಕು ಅಂತ ಮಾಡಿದ್ದೇವೆ.