ನವದೆಹಲಿ, (www.bengaluruwire.com) : ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥದಲ್ಲಿ ಜ.26 ರಂದು ನಡೆಯಲಿರುವ 73ನೇ ಗಣರಾಜ್ಯೋತ್ಸವ ದಿನಾಚರಣೆಯಂದು (73rd Replublic Day) ಕರ್ನಾಟಕದ ಕರಕುಶಲತೆಯ ಶ್ರೀಮಂತ ಸಂಸ್ಕೃತಿಯ ಅನಾವರಣಗೊಳ್ಳಲಿದೆ.
ಇಂದು ಅಲ್ಲಿ ನಡೆದ ಪೂರ್ವಭ್ಯಾಸ ಕಾರ್ಯಕ್ರಮದಲ್ಲಿ “ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು” (Karnataka The Cradle Of Traditional Handicrafts) ಎಂಬ ಪರಿಕಲ್ಪನೆಯಡಿ ವಿಶ್ವ ಪ್ರಸಿದ್ಧ ಚೆನ್ನಪಟ್ಟಣದ ಗೊಂಬೆ, ಕಿನ್ನಾಳ ಗೊಂಬೆ, ಉಡುಪಿ ಸೀರೆ, ಇಳಕಲ್ ಸೀರೆ, ಮೈಸೂರಿನ ಗಾಂಜಿಫಾ ಕಲೆಯೂ ಸೇರಿದಂತೆ ರಾಜ್ಯದ 16 ಕರಕುಶಲ ವಸ್ತುಗಳ ಮಾದರಿ ಹೊಂದಿದ ಸ್ತಬ್ಧಚಿತ್ರ (Tableau) ಮೆರವಣಿಗೆಯಲ್ಲಿ ಸಾಗಿತು.
ದಕ್ಷಿಣ ಭಾರತದ 12 ರಾಜ್ಯಗಳ ಪೈಕಿ ಕರ್ನಾಟಕದ ಸ್ತಬ್ಧಚಿತ್ರವೊಂದೇ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯ್ಕೆಯಾಗಿದೆ. ಅಲ್ಲದೆ ಸತತ 13 ವರ್ಷಗಳಿಂದ ರಾಜ್ಯದ ಟ್ಯಾಬ್ಲೋಗಳು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ರಾಜ್ಯದ ಜನತೆ ಈ ಬಗ್ಗೆ ಹೆಮ್ಮೆ ಪಡುವ ವಿಷಯವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಕ್ಷಿಣ ರಾಜ್ಯಗಳಲ್ಲೇ ಕರ್ನಾಟಕದ ಟ್ಯಾಬ್ಲೊ ಪ್ರದರ್ಶನ ತೋರುತ್ತಿರುವುದಕ್ಕೆ ಇತ್ತೀಚೆಗಷ್ಟೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದರು.