ನವದೆಹಲಿ, (www.bengaluruwire.com) : ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ (Election Commission) ಪಂಚ ರಾಜ್ಯಗಳಲ್ಲಿ ಜ.31 ರ ತನಕ ಚುನಾವಣಾ (five election-bound states) ಮೆರವಣಿಗೆ ಹಾಗೂ ರೋಡ್ ಶೋಗಳನ್ನು ಬ್ಯಾನ್ ಮಾಡಿದೆ.
ಆದರೆ ಮೊದಲ ಹಾಗೂ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಆಭ್ಯರ್ಥಿಗಳಿಗೆ ಮಾತ್ರ 500 ಜನರಿಗೆ ಮೀರದಂತೆ ಸಾರ್ವನಿಕ ಸಭೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದೆ.
ಶನಿವಾರ ಮುಖ್ಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಗೋವಾ(Goa), ಪಂಜಾಬ್ (Punjab), ಮಣಿಪುರ(Manipur), ಉತ್ತರಾಖಂಡ (Uttarakhand) ಹಾಗೂ ಉತ್ತರಪ್ರದೇಶ (Uttar Pradesh) ರಾಜ್ಯಗಳ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ನಡೆಸಿದ ಸಭೆ ನಡೆಯಿತು. ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಫೆ.10 ಹಾಗೂ ಫೆ.14 ರಂದು ಎರಡು ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಪ್ರಸ್ತುತ ಇರುವ ಮಾರ್ಗಸೂಚಿಗಳಿಂದ ಚುನಾವಣಾ ಆಯೋಗ ಕೊಂಚ ವಿನಾಯಿತಿ ನೀಡಿದೆ.
ಉತ್ತರಪ್ರದೇಶ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು ಅಲ್ಲಿನ ಅಭ್ಯರ್ಥಿಗಳು ನಿಗಧಿತ ಬಹಿರಂಗ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬಹುದು. ಆ ಸಭೆಗಳಲ್ಲಿ ಗರಿಷ್ಠ 500 ಜನ ಅಥವಾ ಆ ಮೈದಾನದ ಶೇ.50 ರಷ್ಟು ಸಾಮರ್ಥ್ಯವನ್ನು ಬಳಸಿಕೊಂಡು ಜ.28 ರಿಂದ ಫೆ.8 ರವರೆಗೆ ಸಭೆ ನಡೆಸಲು ಅನುಮತಿ ನೀಡಲಿದೆ.
“ಜ.27ಕ್ಕೆ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ. ಜ.28 ರಿಂದ ಫೆ.8 (ಮೌನ ಅವಧಿ ಹೊರತುಪಡಿಸಿ)ರ ತನಕ ನಿಗಧಿತ ಸ್ಥಳದಲ್ಲಿ ರಾಜಕೀಯ ಪಕ್ಷಗಳು ಅಥವಾ ಸಂಬಂಧಿಸಿದ ಅಭ್ಯರ್ಥಿ ನಿಗಧಿತ ಸ್ಥಳದಲ್ಲಿ 500 ಜನರಿಗಿಂತ ಮೀರದಂತೆ ಸಾರ್ವಜನಿಕ ಸಭೆ ನಡೆಸಲು ಅಥವಾ ಬಹಿರಂಗ ಸಭೆ ನಡೆಸುವ ಮೈದಾನದ ಸಾಮರ್ಥ್ಯದ ಶೇ.50 ಭಾಗ ಅಥವಾ ಆಯಾ ರಾಜ್ಯಗಳ ನಿಗಧಿಪಡಿಸಿದ ಸಂಖ್ಯೆ ಮೀರದಂತೆ ಸಾರ್ವಜನಿಕ ಸಭೆ ನಡೆಸಬಹುದು” ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ರೀತಿ ಫೆ.14 ರಂದು ಎರಡನೇ ಹಂತದ ಮತದಾನ ನಡೆಯುವ ಉತ್ತರಾಖಂಡ, ಗೋವಾ, ಉತ್ತರ ಪ್ರದೇಶ ರಾಜ್ಯಗಳಲ್ಲೂ ಫೆ.1 ರಿಂದ 12ರ ತನಕ ಇದೇ ವಿನಾಯ್ತಿ ಇರಲಿದೆ.
ಕಳೆದ ವಾರವಷ್ಟೆ ಚುನಾವಣಾ ಆಯೋಗ ನಿಯಮಾವಳಿಗಳಲ್ಲಿ ಕೊಂಚ ವಿನಾಯ್ತಿ ನೀಡಿ ಒಳಾಂಗಣ ಸಭೆಯಲ್ಲಿ ಗರಿಷ್ಠ 300 ಜನರು ಅಥವಾ ಆ ಮೀಟಿಂಗ್ ಹಾಲ್ ನ ಸಾಮರ್ಥ್ಯದ ಶೇ.50 ಮೀರದಂತೆ ಅಥವಾ ಚುನಾವಣೆ ನಡೆಯುವ ಆಯಾ ರಾಜ್ಯಗಳ ನೈಸರ್ಗಿಕ ವಿಕೋಪ ಉಸ್ತುವಾರಿ ಪ್ರಾಧಿಕಾರದ ವಿವೇಚನೆಯಂತೆ ಇರಲಿದೆ ಎಂದು ಹೇಳಿತ್ತು.
ಇದೇ ರೀತಿ ಚುನಾವಣಾ ಆಯೋಗವು ಮನೆಯಿಂದ ಮನೆ ಚುನಾವಣಾ ಪ್ರಚಾರದಲ್ಲಿ ಅಂಗರಕ್ಷಕರನ್ನು ಹೊರತುಪಡಿಸಿ ಪಾಲ್ಗೊಳ್ಳುವ 5 ಜನರ ಮಿತಿಯನ್ನು 10ಕ್ಕೆ ಏರಿಸಿದೆ. “ಎಲೆಕ್ಷನ್ ಕಮಿಷನ್, ಪ್ರಚಾರಕ್ಕೆ ಬಳಕೆಯಾಗುವ ವಿಡಿಯೋ ವ್ಯಾನ್ ನಲ್ಲಿನ ದೃಶ್ಯಗಳನ್ನು ನೋಡಲು ನಿಗಧಿತ ಸ್ಥಳದಲ್ಲಿ 500 ಜನರು ಮೀರದಂತೆ ಅಥವಾ ಬಹಿರಂಗ ಸಭೆ ನಡೆಸುವ ಮೈದಾನದ ಸಾಮರ್ಥ್ಯದ ಶೇ.50 ಭಾಗ ಅಥವಾ ಆಯಾ ರಾಜ್ಯಗಳ ನಿಗಧಿಪಡಿಸಿದ ಸಂಖ್ಯೆ ಮೀರದಂತೆ ಚುನಾವಣಾ ಪ್ರಚಾರದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಈ ಚುನಾವಣಾ ಪ್ರಚಾರದಿಂದ ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೊಡಕಾಗದಂತೆ ಕ್ರಮ ಕೈಗೊಳ್ಳಬೇಕು” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
“ಮುಖ್ಯ ಚುನಾವಣಾಧಿಕಾರಿ ಸುಶಿಲ್ ಚಂದ್ರ (Chief Election Commissioner Sushil Chandra) ಹಾಗೂ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಹಾಗೂ ಅನೂಪ್ ಚಂದ್ರ ಪಾಂಡೆ, ಆಯಾ ರಾಜ್ಯಗಳ ಚುನಾವಣಾ ಆಯುಕ್ತರು, ಮತ್ತಿತರರು ಪಂಚರಾಜ್ಯಗಳಲ್ಲಿನ ಪ್ರಸಕ್ತ ಹಾಗೂ ಮುಂಬರುವ ಕೋವಿಡ್ ಸೋಂಕಿನ ಪರಿಸ್ಥಿತಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಲಸಿಕೆ ಪಡೆದ ಬಗ್ಗೆ ಸಮಗ್ರವಾಗಿ ಅವಲೋಕಿಸಿದ್ದಾರೆ. ಚುನಾವಣಾ ಪ್ರಚಾರ ಕುರಿತಂತೆ ಈಗಿರುವ ನಿಷೇಧದ ಅವಧಿ ಮುಗಿದ ಬಳಿಕ ಆಗಿನ ಪರಿಸ್ಥಿತಿ ವಿಶ್ಲೇಶಿಸಿ ಆಯೋಗ ನೂತನ ಮಾರ್ಗಸೂಚಿ ಹೊರಡಿಸಲಿದೆ” ಎಂದು ಹೇಳಲಾಗಿದೆ.