ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಈ ಹಿಂದೆ ಜಾರಿಗೊಳಿಸಿದ್ದ ವೀಕೆಂಡ್ ಕರ್ಪ್ಯೂವನ್ನು (Weekend Curfew ) ಹಿಂಪಡೆದಿದೆ.
ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 12 ಜನ ತಜ್ಞರ ತಂಡ ಜೊತೆ ಸಭೆ ನಡೆಸಿದ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಅದನ್ನು ಇಂದು ರದ್ದುಗೊಳಿಸಲಾಗುತ್ತಿದೆ. ಅದಕ್ಕೆ ತಜ್ಞರ ಅಭಿಪ್ರಾಯ ಆಧಾರವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದಲ್ಲಿ 2 ಗಂಟೆಗೂ ಹೆಚ್ಚು ಕಾಲ ಕೋವಿಡ್ ನಿಯಂತ್ರಣ ಸಭೆಯನ್ನು ನಡೆಸಲಾಯಿತು. ಎಲ್ಲಾ ತಜ್ಞರ ಅಭಿಪ್ರಾಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಆರೋಗ್ಯ, ಗೃಹ ಸಚಿವರು ಸೇರಿದಂತೆ ವಿವಿಧ ಸಚಿವರೂ ತಮ್ಮ ಸಲಹೆ, ಸೂಚನೆ ನೀಡಿದರು. ಇದೆಲ್ಲದರ ಆಧಾರದ ಮೇಲೆ ವೀಕೆಂಡ್ ಕರ್ಫ್ಯೂ ರದ್ದುಪಡಿಸಲಾಗಿದೆ.
ಒಂದು ವೇಳೆ ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಜಾಸ್ತಿಯಾದರೆ ಮತ್ತೆ ಕರ್ಫ್ಯೂ ಮುಂದುವರೆಸಲಾಗುತ್ತದೆ. ಈಗ ಆಸ್ಪತ್ರೆಗೆ ಸೇರುವ ರೋಗಿಗಳ ಸಂಖ್ಯೆಯ ಆಧಾರದ ಮೇಲೆ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂಬುದಾಗಿ ಕಂದಾಯ ಸಚಿವರು ತಿಳಿಸಿದರು.
ಶುಕ್ರವಾರವಾದ ಇಂದು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ.5ರಷ್ಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾದರೆ ವೀಕೆಂಡ್ ಕರ್ಪ್ಯೂ ಮಾಡಲಾಗುತ್ತದೆ. ರಾಜ್ಯದ ನಾಗರೀಕರಲ್ಲಿ ಕೊರೋನಾ ನಿಯಂತ್ರಣ (Corona Control ) ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮನವಿ ಮಾಡುತ್ತಿರುವುದಾಗಿ ಹೇಳಿದರು.
ವೀಕೆಂಡ್ ಕರ್ಪ್ಯೂ ರದ್ದು ಮಾಡುವಂತೆ ಹಲವು ಸಂಘಸಂಸ್ಥೆ, ವಿವಿಧ ಕ್ಷೇತ್ರಗಳ ಜನರು ಮನವಿ ಮಾಡಿದ್ದರು. ನೈಟ್ ಕರ್ಪ್ಯೂ ಎಂದಿನಂತೆ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಮುಂದುವರೆಯಲಿದೆ. ಹೋಟೆಲ್, ಸಿನಿಮಾ, ಸಾರ್ವಜನಿಕ ಸ್ಥಳಗಳಲ್ಲಿ ಶೇ.50-50 ನಿಯಮ ಮುಂದುವರೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ವಿವರಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಬೆಂಗಳೂರು ನಗರವನ್ನು ಹೊರತುಪಡಿಸಿ, ಬೇರೆ ಎಲ್ಲಾ ಕಡೆಗಳಲ್ಲಿ ಶಾಲಾ ಕಾಲೇಜು ಇರಲಿದೆ. ಕೋವಿಡ್ ಪಾಸಿಟಿವಿಟಿ ದರ ಆಧರಿಸಿ ಶಾಲೆಗಳನ್ನು ಬಂದ್ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಏರುಗತಿಯಲ್ಲಿರುವ ಕಾರಣದಿಂದಾಗಿ ಶಾಲೆಗಳಿಗೆ ರಜೆ ಮುಂದುವರೆಯಲಿದೆ. ಮುಂದಿನ ವಾರ ಮತ್ತೆ ಸಭೆ ಸೇರಿ ಜನವರಿ 31ರ ನಂತರ ಶಾಲೆಗಳನ್ನು ತೆರೆಯಬೇಕಾ ಬೇಡವೆ? ಎಂಬ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.