ನವದೆಹಲಿ, (www.bengaluruwire.com) : ಒಡಿಶಾದ ಬಾಲಸೋರ್‌ನ ಕರಾವಳಿಯಲ್ಲಿರುವ ಸಮಗ್ರ ಪರೀಕ್ಷಾ ವಲಯ (ITR)ದಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ (BrahMos Missile) ಯ ಹೊಸ ಆವೃತ್ತಿಯನ್ನು ಬುಧವಾರ ಬೆಳಗ್ಗೆ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತಿಳಿಸಿದೆ.
ರಷ್ಯಾದ ಸಹಭಾಗಿತ್ವದಲ್ಲಿ ಡಿಆರ್ಡಿಒ ಸಿದ್ಧಪಡಿಸಿರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭೂಮಿಯಿಂದ ಅಲ್ಲದೆ ಸಮುದ್ರದಿಂದಲೂ ಉಡಾಯಿಸಬಹುದಾಗಿದೆ. ರಷ್ಯಾದ P-800 ಕ್ಷಿಪಣಿ ಮಾದರಿಯಲ್ಲಿಯೇ ಬ್ರಹ್ಮೋಸ್ ಅನ್ನು ತಯಾರಿಸಲಾಗಿದೆ.
ಬ್ರಹ್ಮೋಸ್ ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ಬತ್ತಳಿಕೆಯಲ್ಲಿನ ಪ್ರಮುಖ ಶಸ್ತ್ರಾಸ್ತ್ರವಾಗಿದೆ. ಈಗಾಗಲೇ ಭೂಸೇನೆಯಲ್ಲಿ ಬ್ರಹ್ಮೋಸ್ ಮಿಸೈಲ್ ಬಳಕೆಯಾಗುತ್ತಿದೆ.
‘ಈ ಮಿಸೈಲ್ ಅತ್ಯಾಧುನಿಕ ತಾಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ. ಮಿಸೈಲ್ ಸಾಮರ್ಥ್ಯದ ಪರೀಕ್ಷೆಗಳ ದತ್ತಾಂಶಗಳ ಪರೀಕ್ಷಾ ಕಾರ್ಯ ನಡೆಯುತ್ತಿದೆ’ ಎಂದು ಡಿಆರ್ ಡಿಒ ಮೂಲಗಳು ತಿಳಿಸಿದೆ.
ಇದಕ್ಕೂ ಮೊದಲು ಜ.11 ರಂದು ದೇಶದ ನೌಕಾಪಡೆಯ ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧನೌಕೆಯಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.
ಡಿಆರ್ ಡಿಒ ನೇತೃತ್ವದಲ್ಲಿ ನಡೆದಿರುವ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.