ಬೆಂಗಳೂರು, (www.bengaluruwire.com) : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ನಿಮ್ಮ ಏರಿಯಾದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ (Transformer) ಹಾಳಾದರೆ ಕೇವಲ 24 ಗಂಟೆಯೊಳಗೆ ಅಂತಹ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸುತ್ತೆ. 8 ಜಿಲ್ಲೆಗಳ ವ್ಯಾಪ್ತಿಯಲ್ಲಿ 2021ರ ಸೆಪ್ಟೆಂಬರ್ ನಿಂದ ಡಿಸೆಂಬರ್ ತನಕದ 100 ದಿನದ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಹಾಳಾದ 8,865 ಟ್ರಾನ್ಸ್ ಫಾರ್ಮರ್ ಗಳ ಪೈಕಿ 8,641 ಪರಿವರ್ತಕಗಳನ್ನು 24 ಗಂಟೆಯಲ್ಲಿ ಬದಲಾಯಿಸಿದೆ.
2021ರ ನವೆಂಬರ್ ತನಕ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಒಟ್ಟು 4,46,662 ಟ್ರಾನ್ಸ್ ಫಾರ್ಮರ್ ಗಳನ್ನು ಹೊಂದಿತ್ತು. ಆ ಪೈಕಿ ಬೆಂಗಳೂರು ಒಂದರಲ್ಲೇ 69,063 ಪರವರ್ತಕಗಳು ಕಾರ್ಯನಿರ್ವಹಿಸುತ್ತಿದೆ. ಈ ಮೇಲ್ಕಂಡ 100 ದಿನಗಳ ಅವಧಿಯಲ್ಲಿ ಸರಾಸರಿ ಇರುವ ಟ್ರಾನ್ಸ್ ಫಾರ್ಮರ್ ಗಳ ಪೈಕಿ ಶೇ.1.98ರಷ್ಟು ವಿದ್ಯುತ್ ಪರಿವರ್ತಕಗಳನ್ನು ಹಾಳಾಗಿದೆ. ಆ ಮೂಲಕ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.
ನಗರ ಪ್ರದೇಶದಲ್ಲಿ ಟ್ರಾನ್ಸ್ ಫಾರ್ಮರ್ ಗಳು ವಿಫಲವಾದರೆ 24 ಗಂಟೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಟ್ರಾನ್ಸ್ ಫಾರ್ಮರ್ ಹಾಳಾದರೆ 72 ಗಂಟೆಗಳಲ್ಲಿ ಬದಲಾಯಿಸಬೇಕು ಎಂದು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಪ್ರಾಧಿಕಾರದ ನಿಯಮವಿದೆ.
ಬೆಸ್ಕಾಂ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಾವಣೆಗೆ ಇರೋ ವ್ಯವಸ್ಥೆಯೇನು?
ಬೆಸ್ಕಾಂ ವ್ಯಾಪ್ತಿಯಲ್ಲಿ 49 ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಗಳಿವೆ. ಹಾಗೂ 25 ವಿಭಾಗೀಯ ಉಗ್ರಾಣಗಳಿವೆ. ಹಾಳಾದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳನ್ನು ಸರಿಪಡಿಸಿ, ಕಾರ್ಯನಿರ್ವಹಿಸುವ ಟ್ರಾನ್ಸ್ ಫಾರ್ಮರ್ ಗಳನ್ನು ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಅಥವಾ ಉಗ್ರಾಣಗಳಿಂದ ವಿದ್ಯುತ್ ಪರಿವರ್ತಕಗಳು ವಿಫಲವಾದ ಸ್ಥಳಕ್ಕೆ 8 ಜಿಲ್ಲೆಗಳ ತಾಲ್ಲೂಕು ಮಟ್ಟದಲ್ಲಿ 46 ಟ್ರಾನ್ಸ್ ಫಾರ್ಮರ್ ದುರಸ್ತಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳು ಹಾಳಾದ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಿ 24 ಗಂಟೆಯೊಳಗೆ ಕೆಲಸ ಮಾಡಲು ಸಶಕ್ತವಾಗಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸುತ್ತವೆ. ಇದಕ್ಕಾಗಿ ಸಾಗಿಸಲು 113 ವಾಹನಗಳನ್ನು ಬಳಸಲಾಗುತ್ತಿದೆ.
ವಿಫಲವಾದ ಟ್ರಾನ್ಸ್ ಫಾರ್ಮರ್ ಗಳ ವಿವರವನ್ನು ಬೆಸ್ಕಾಂ ಅಧಿಕಾರಿಗಳು ಡಿಟಿಎಲ್ ಎಂಎಸ್ ತಂತ್ರಾಶ (DTLMS SOFTWARE) ಮೂಲಕ ಪಡೆದುಕೊಂಡು, ಪರಿವರ್ತಕಗಳನ್ನು ಬದಲಾಯಿಸಿರುವ ಬಗ್ಗೆ ದೂರು ನೀಡಿದ ಗ್ರಾಹಕರು ಅಥವಾ ರೈತರಿಂದ ಖಚಿತಪಡಿಸಿಕೊಳ್ಳುತ್ತದೆ.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರು ಸರಬರಾಜು ಸ್ಥಾವರಗಳಿಗೆ, ರೈತರ ನೀರಾವರಿ ಪಂಪ್ ಸೆಟ್ ಹಾಗೂ ವಿವಿಧ ಪ್ರಾಕಾರದ ಗ್ರಾಹಕರಿಗೆ ಗುಣಮಟ್ಟದ ಪೂರೈಸಲು ಬೆಸ್ಕಾಂ 24 ಗಂಟೆಯೊಳಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಾಯಿಸುವ ಯೋಜನೆಯನ್ನು ಕೆಲವು ವರ್ಷಗಳ ಹಿಂದೆ ಜಾರಿಗೆ ತಂದಿತ್ತು. ಅದರಂತೆ ಸೆಪ್ಟೆಂಬರ್ ನಿಂದ ಡಿಸೆಂಬರ್ 28ವರೆಗೆ ಬೆಸ್ಕಾಂ ಹಾಳಾದ ಟ್ರಾನ್ಸ್ ಫಾರ್ಮರ್ ಗಳನ್ನು ತ್ವರಿತವಾಗಿ ಬದಲಾಯಿಸುತ್ತಿದೆ. 24 ಗಂಟೆಗೂ ಮೀರಿ ಕೇವಲ 204 ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಏನಂತಾರೆ?
ರಾಜೇಂದ್ರ ಚೋಳನ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು
“ಕೆಇಆರ್ ಸಿ ನಿಯಮಾವಳಿ ಅನ್ವಯ ಬೆಸ್ಕಾಂ ವ್ಯಾಪ್ತಿಯಲ್ಲಿನ ನಗರ ಪ್ರದೇಶದಲ್ಲಿ 24 ಗಂಟೆಯೊಳಗೆ ಹಾಗೂ ಗ್ರಾಮೀಣ ಭಾಗದಲ್ಲಿ 72 ಗಂಟೆಯೊಳಗೆ ಟ್ರಾನ್ಸ್ ಫಾರ್ಮರ್ ಗಳು ವಿಫಲವಾದರೆ, ಅದನ್ನು ಸರಿಪಡಿಸಿ ವಿದ್ಯುತ್ ಪೂರೈಕೆಯಲ್ಲಿನ ಅಡಚಣೆ ಸರಿಪಡಿಸಲಾಗುತ್ತಿದೆ. ಟ್ರಾನ್ಸ್ ಫಾರ್ಮರ್ ಬದಲಾವಣೆ ವೇಗವು ರಾಜ್ಯದಲ್ಲಿನ ಇತರ ವಿದ್ಯುತ್ ಸರಬರಾಜು ಕಂಪನಿಗಳಿಗಿಂತ ಬೆಸ್ಕಾಂ ಮುಂದೆಯಿದೆ. ಈ ಬೇಸಿಗೆ ಕಾಲದಲ್ಲಿ ನೀರಿಗಾಗಿ ರೈತರು ಪಂಪ್ ಸೆಟ್ ಬಳಕೆ ಹೆಚ್ಚು ಮಾಡುವುದರಿಂದ ಟ್ರಾನ್ಸ್ ಫಾರ್ಮರ್ ಹಾಳಾಗುವ ಸಂದರ್ಭ ಹೆಚ್ಚಿರುತ್ತದೆ. ಹೀಗಾಗಿ ಗುಣಮಟ್ಟ ವಿದ್ಯುತ್ ಪೂರೈಕೆಗಾಗಿ ತಾಲೂಕು ಮಟ್ಟದ ಬೆಸ್ಕಾಂ ದುರಸ್ತಿ ಕೇಂದ್ರಗಳಲ್ಲಿ ಒಂದೂವರೆ ಪಟ್ಟಿನಷ್ಟು ರಿಪೇರಿ ಮಾಡಿಟ್ಟಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಕಾಯ್ದಿಟ್ಟುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ.”
ರಾಜೇಂದ್ರ ಚೋಳನ್, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ
ವಿದ್ಯುತ್ ಟ್ರಾನ್ಸ್ ಫಾರ್ಮರ್ ವಿಫಲತೆ ಗ್ರಾಮೀಣ ಭಾಗದಲ್ಲಿ ಹೆಚ್ಚು :
ಬೆಸ್ಕಾಂ ವ್ಯಾಪ್ತಿಯಲ್ಲಿ 2018-19ರಿಂದ 2021ರ ಅಕ್ಟೋಬರ್ ತನಕ ವಿದ್ಯುತ್ ಪರಿವರ್ತಕಗಳ ಸಂಖ್ಯೆ, ವಿಫಲವಾದವುಗಳ ಅಂಕಿ- ಸಂಖ್ಯೆ ಹಾಗೂ ಒಟ್ಟಾರೆ ಟ್ರಾನ್ಸ್ ಫಾರ್ಮರ್ ಗಳಲ್ಲಿ ವಿಫಲಗೊಂಡವುಗಳ ಶೇಕಡ ಮಾಹಿತಿ ಈ ಕೆಳಕಂಡಂತಿದೆ :
ಆರ್ಥಿಕ ವರ್ಷ | ಚಾಲ್ತಿಯಲ್ಲಿರುವ | ವಿಫಲ | ಶೇ.% ವಿಫಲ |
2018-19 | 3,47,579 | 24197 | 6.96 |
2019-20 | 3,81,103 | 30751 | 8.07 |
2020-21 | 4,25,897 | 32034 | 7.52 |
2021-22 (ಅಕ್ಟೋಬರ್ 2021ರ ತನಕ ) | 4,43,885 | 18806 | 4.24 |
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ವಾರ್ಷಿಕ ಸರಾಸರಿ 28 ಸಾವಿರ ಟ್ರಾನ್ಸ್ ಫಾರ್ಮರ್ ಗಳು ಹಾಳಾಗುತ್ತದೆ. ಈ ಟ್ರಾನ್ ಫಾರ್ಮರ್ ಗಳ ದುರಸ್ತಿಗಾಗಿ ಬೆಸ್ಕಾಂ ವಾರ್ಷಿಕವಾಗಿ 77.52 ಕೋಟಿ ರೂ. ಹಣವನ್ನು ಖರ್ಚು ಮಾಡುತ್ತದೆ. ಪ್ರತಿವರ್ಷ ಸರಾಸರಿ 38,500 ಟ್ರಾನ್ಸ್ ಫಾರ್ಮರ್ ಗಳನ್ನು ಹೊಸದಾಗಿ ಸೇರ್ಪಡೆಗೊಳಿಸುತ್ತದೆ. ವಿದ್ಯುತ್ ಕಂಬದಿಂದ ಅನಧಿಕೃತ ವಿದ್ಯುತ್ ಸಂಪರ್ಕ, ಓವರ್ ಲೋಡಿಂಗ್, ವಿದ್ಯುತ್ ಪರಿವರ್ತಕಗಳ ಉತ್ಪದನಾ ಸಂದರ್ಭದಲ್ಲಿನ ದೋಷದಿಂದಾಗಿ ಟ್ರಾನ್ಸ್ ಫಾರ್ಮರ್ ಗಳು ಹಾಳಾಗುತ್ತಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಶೇ.93ರಷ್ಟು ಟ್ರಾನ್ಸ್ ಫಾರ್ಮರ್ ಗಳು ವಿಫಲವಾಗುತ್ತಿದೆ.
ಇತ್ತೀಚೆಗೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ಬೆಂಗಳೂರಿನ ಕವಿಕಾ ಸಂಸ್ಥೆಗೆ ವಿಫಲವಾದ ಟ್ರಾನ್ಸ್ ಫಾರ್ಮರ್ ಗಳ ದುರಸ್ತಿಪಡಿಸುವ ಹೊಣೆ ನೀಡಲಾಗಿದೆ. ಅಕ್ಟೋಬರ್ 2021ರ ತನಕ 2,310 ಹೊಸ ಟ್ರಾನ್ಸ್ ಫಾರ್ಮರ್ ಹಾಗೂ 1,015 ದುರಸ್ತಿಯಾದವು ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಹಾಗೂ ಬೆಸ್ಕಾಂ ಉಗ್ರಾಣದಲ್ಲಿದ್ದವು ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ಟ್ರಾನ್ಸ್ ಫಾರ್ಮರ್ ವಿಫಲತೆ ಇನ್ನಿತರೆ ವಿದ್ಯುತ್ ಸಂಬಂಧಿ ಸಮಸ್ಯೆಗೆ ಹೀಗೆ ಮಾಡಿ :
ಟ್ರಾನ್ಸ್ ಫಾರ್ಮರ್ ಹಾಳಾದರೆ ಗ್ರಾಹಕರು ಬೆಸ್ಕಾಂನ ಸಹಾಯವಾಣಿ 1912 ಅಥವಾ ಅಂತರ್ಜಾಲ ತಾಣವಾದ ಬೆಸ್ಕಾಂ ಪಿಜಿಆರ್ ಎಸ್ ಅಪ್ಲಿಕೇಶನ್ https://bescompgrs.com/index_controller ನಲ್ಲಿ ಗ್ರಾಹಕರು ದೂರು ಸಲ್ಲಿಸಿದರೆ ಬೆಸ್ಕಾಂ ಅಧಿಕಾರಿಗಳು ಶೀಘ್ರವಾಗಿ ಅವುಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳುತ್ತಾರೆ. ದೂರು ದಾಖಲಿಸಿದ ಗ್ರಾಹಕರ ಮೊಬೈಲ್ ಸಂಖ್ಯೆ ಈ ಬಗ್ಗೆ ಸ್ವೀಕೃತಿ ಎಸ್ಎಂಎಸ್ ಬರಲಿದೆ. ಕೇವಲ ಟ್ರಾನ್ಸ್ ಫಾರ್ಮರ್ ವಿಷಯವೊಂದೇ ಅಲ್ಲ ಎಲ್ಲಾ ರೀತಿಯ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಬಗ್ಗೆ ಬೆಸ್ಕಾಂ ಈ ಮೇಲಿನ ಪಿಜಿಆರ್ ಎಸ್ ಅಪ್ಲಿಕೇಶನ್ ಮೂಲಕ ಗ್ರಾಹಕರು ದೂರು ಸಲ್ಲಿಸಬಹುದು.