ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರು (Captial City Bangalore) ಈಗ ಕೋವಿಡ್ ಮೂರನೇ ಅಲೆಯ ಸೆಳೆತಕ್ಕೆ ಸಿಲುಕಿದೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಮೊದಲ ಮತ್ತು ಎರಡನೇ ಸಂದರ್ಭದಲ್ಲಿ ಪ್ರತಿ ತಿಂಗಳು ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಮಾಡಿದ ಖರ್ಚು ವೆಚ್ಚಗಳ ವಿಸ್ತ್ರತ ವಿವರವನ್ನು ನಿಮ್ಮ ಮುಂದಿಡಲಿದೆ. ತೆರಿಗೆದಾರರ ಹಣವನ್ನು ಪಾಲಿಕೆ ಕರ್ಚು ಮಾಡಿರುವುದರ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ನಾಗರೀಕರ ಹಕ್ಕು ಕೂಡ ಆಗಿದೆ. ಎರಡನೇ ಅಲೆಯಲ್ಲಿ ಸಾವು ನೋವು ಹೆಚ್ಚಾದ ಸಂದರ್ಭದಲ್ಲಿ ಪಾಲಿಕೆಯು ಹಣ ಕರ್ಚು ಮಾಡಿದರೂ ಹೇಗೆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಯ್ತು ಎಂಬುದನ್ನು ಎಳೆ ಎಳೆಯಾಗಿ ಈ ತನಿಖಾ ವರದಿಯಲ್ಲಿ ಬಿಚ್ಚಿಡಲಿದೆ.
ಪಾಲಿಕೆಯು 880 ಕೋಟಿ ರೂಪಾಯಿ ಖರ್ಚು ಮಾಡಿದ್ದರೂ ಕೋವಿಡ್ ಸೋಂಕನ್ನು ಯಶಸ್ವಿಯಾಗಿ ಕಟ್ಟಿಹಾಕುವಲ್ಲಿ ವಿಫಲವಾಯ್ತು. ಆಗ ಯಾವ ಯಾವ ವಿಭಾಗದಲ್ಲಿ ಎಷ್ಟೆಷ್ಟು ಹಣವನ್ನು ಪಾಲಿಕೆ ಖರ್ಚು ಮಾಡಿತ್ತು ಎಂಬುದನ್ನು “ಬೆಂಗಳೂರು ವೈರ್” BW Investigation-1 | COVID GOALMAL ಮೊದಲ ಭಾಗದಲ್ಲಿ ನಿಮ್ಮ ಮುಂದಿಟ್ಟಿತ್ತು. ಅಲ್ಲದೆ ಯಾವ ಹಂತದಲ್ಲಿ ಕೋಟಿಗಟ್ಟಲೆ ಹಣದ ಅವ್ಯವಹಾರ ಆಗಿರಬಹುದೆಂಬ ಬಗ್ಗೆ ಆ ತನಿಖಾ ವರದಿಯಲ್ಲಿ ತಿಳಿಸಿತ್ತು.
ಈಗ ಮೊದಲಿಗೆ 2020ರ ಫೆಬ್ರವರಿ ಮೊದಲನೆ ಅಲೆಯಿಂದ 2020ರ ಅಕ್ಟೋಬರ್ 2021ರ ಎರಡನೇ ಅಲೆಯವರೆಗೆ ಪಾಲಿಕೆಯು ಪ್ರತಿ ತಿಂಗಳು ಖರ್ಚು ಮಾಡಿದ ಹಣದ ವಿವರ ಈ ಕೆಳಕಂಡಂತಿದೆ :
ಕ್ರ.ಸಂ. | ತಿಂಗಳು ಮತ್ತು ವರ್ಷ | ಖರ್ಚಾದ ಮೊತ್ತ ಕೋಟಿ ರೂ. ಗಳಲ್ಲಿ | ಕ್ರ.ಸಂ. | ತಿಂಗಳು ಮತ್ತು ವರ್ಷ | ಖರ್ಚಾದ ಮೊತ್ತ ಕೋಟಿ ರೂ. ಗಳಲ್ಲಿ |
1) | ಫೆಬ್ರವರಿ/ಮಾರ್ಚ್ 2020 | 90,00,000 (ಲಕ್ಷ ರೂ.) | 11) | ಜನವರಿ 2021 | 10,94,06,535 |
2) | ಏಪ್ರಿಲ್ 2020 | 16,66,74,876 | 12) | ಫೆಬ್ರವರಿ 2021 | 59,30,55,975 |
3) | ಮೇ 2020 | 12,71,19,216 | 13) | ಮಾರ್ಚ್ 2021 | 86,19,87,898 |
4) | ಜೂನ್ 2020 | 18,50,73,918 | 14) | ಏಪ್ರಿಲ್ 2021 | 161,98,48,474 |
5) | ಜುಲೈ 2020 | 25,47,16,723 | 15) | ಮೇ 2021 | 107,79,56,264 |
6) | ಆಗಸ್ಟ್ 2020 | 11,91,87,957 | 16) | ಜೂನ್ 2021 | 73,78,12,735 |
7) | ಸೆಪ್ಟೆಂಬರ್ 2020 | 4,55,46,518 | 17) | ಜುಲೈ 2021 | 59,95,30,466 |
8) | ಅಕ್ಟೋಬರ್ 2020 | 47,41,81,730 | 18) | ಆಗಸ್ಟ್ 2021 | 56,54,99,303 |
9) | ನವೆಂಬರ್ 2020 | 40,59,00,606 | 19) | ಸೆಪ್ಟೆಂಬರ್ 2021 | 36,67,14,111 |
10) | ಡಿಸೆಂಬರ್ 2020 | 8,79,10,102 | 20) | ಅಕ್ಟೋಬರ್ 2021 | 39.81,68,053 |
ಒಟ್ಟು ಮೊತ್ತ ಕೋಟಿ ರೂ. | 880,52,91,460 |
2020ರ ಫೆಬ್ರವರಿಯಿಂದ, 28 ಅಕ್ಟೋಬರ್ 2021ರರೆಗೆ ಬಿಬಿಎಂಪಿಯು ಕೋಟಿ ಕೋಟಿ ಲೆಕ್ಕದಲ್ಲಿ ಕರೋನಾ ನಿಯಂತ್ರಣದ ಹೆಸರಿನಲ್ಲಿ ಹಣ ಖರ್ಚು ಮಾಡಿದೆ. ಮಾರ್ಚ್ 2021ರಿಂದ ಜೂನ್ 2021ರ ಅವಧಿಯಲ್ಲಿ ಕರೋನಾ ಸೋಂಕು ಎರಡನೇ ಅಲೆಯ ಉತ್ತುಂಗದಲ್ಲಿತ್ತು. ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಪ್ರತಿ ತಿಂಗಳು ತಲಾ 70 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ ಎಂಬುದು ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ.
ದಿನ- ತಿಂಗಳು- ವರ್ಷ | ಕೋವಿಡ್ ಪಾಸಿಟಿವ್ ಪ್ರಕರಣ | ಗುಣಮುಖರಾದವರು | ಕೋವಿಡ್ ಸಾವಿನ ಸಂಖ್ಯೆ | ಸಕ್ರಿಯ ಪ್ರಕರಣಗಳು |
31 ಮಾರ್ಚ್ 2021 | 28,980 | 13,323 | 136 | 19,613 |
30 ಏಪ್ರಿಲ್ 2021 | 3,21,913 | 80,712 | 1,756 | 2,59,058 |
31 ಮೇ 2021 | 4,06,489 | 5,12,533 | 6,971 | 1,46,043 |
30 ಜೂನ್ 2021 | 50,330 | 1,50,395 | 2,280 | 43,698 |
ಒಟ್ಟು | 8,07,712 | 7,56,963 | 11,143 |
ಮಾರ್ಚ್ ನಲ್ಲಿ ಏನಾಗಿತ್ತು?
ಮಾರ್ಚ್ ತಿಂಗಳಿನಲ್ಲಿ ಒಟ್ಟಾರೆ 28,980 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು, ಆ ಪೈಕಿ 13,323 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು. ಆದರೆ ಈ ತಿಂಗಳಿನಲ್ಲಿ 136 ಜನರು ಕೋವಿಡ್ ನಿಂದ ಮೃತಪಟ್ಟಿದ್ದರು. ಮಾರ್ಚ್ 31ಕ್ಕೆ ಬೆಂಗಳೂರಿನಲ್ಲಿ 19,613 ಕೋವಿಡ್ ಸಕ್ರಿಯ ಪ್ರಕರಣಗಳು ವರದಿಯಾಗಿತ್ತು. ಈ ತಿಂಗಳಲ್ಲಿ ಪಾಲಿಕೆಯು ಕೋವಿಡ್ ನಿಯಂತ್ರಣಕ್ಕಾಗಿ 86.19 ಕೋಟಿ ರೂ. ಹಣವನ್ನು ವೆಚ್ಚ ಮಾಡಿತ್ತು. ಈ ತಿಂಗಳಿನಲ್ಲಿ ಕೋವಿಡ್ ಸೋಂಕು ನಿಯಂತ್ರಣ, ಕೋವಿಡ್ ಪರೀಕ್ಷೆ ಮತ್ತಿತರ ಕೆಲಸಗಳಿಗಾಗಿ ಪಾಲಿಕೆಯ 8 ವಲಯಗಳಿಗೆ 7 ಕೋಟಿ ರೂ. ಹಣವನ್ನು ನೀಡಲಾಗಿತ್ತು.
ಆಂಬ್ಯುಲೆನ್ಸ್ ಸೇವೆ ನೀಡಿದ ಕಾವೇರಿ ಆಂಬ್ಯುಲೆನ್ಸ್ ಸರ್ವೀಸ್ ಎಂಬ ಸಂಸ್ಥೆಯೊಂದಕ್ಕೆ ಬರೋಬ್ಬರಿ 5,48,71,886 (5.48 ಕೋಟಿ ರೂ.) ರೂ. ಹಣವನ್ನು ಬಿಬಿಎಂಪಿ ಪಾವತಿ ಮಾಡಿತ್ತು. ಆ ತಿಂಗಳಿನಲ್ಲಿ ಒಟ್ಟಾರೆ ಸಾರಿಗೆ ವೆಚ್ಚಕ್ಕಾಗಿಯೇ 14,54,98,989 (14.54 ಕೋಟಿ ರೂ.) ಹಣವನ್ನು ಬಿಬಿಎಂಪಿ ಖರ್ಚು ಮಾಡಿತ್ತು.
ಏಪ್ರಿಲ್ ನಲ್ಲಿ ಪರಿಸ್ಥಿತಿ ವಿಕೋಪದತ್ತ ತಿರುಗಿತ್ತು :
ಏಪ್ರಿಲ್ ತಿಂಗಳಿನಲ್ಲಿ 3,21,913 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಆ ಪೈಕಿ ಕೇವಲ 80,712 ಜನರು ಮಾತ್ರ ಸೋಂಕಿನಿಂದ ಗುಣಮುಖರಾಗಿದ್ದರು. ಇನ್ನು 2,59,058 ಕೋವಿಡ್ ಪೀಡಿತರು ಗುಣಮುಖರಾಗಿರಲಿಲ್ಲ. ಈ ಅವಧಿಯಲ್ಲಿ ಒಟ್ಟು 1,756 ಜನ ಸಾವನ್ನಪ್ಪಿದ್ದರು ಎಂದು ಬಿಬಿಎಂಪಿಯು ಅಧಿಕೃತ ಕೋವಿಡ್ ಬುಲಿಟೆನ್ ನಲ್ಲಿ ತಿಳಿಸಿದೆ. ಈ ಒಂದು ತಿಂಗಳಿನಲ್ಲಿ
ಪಾಲಿಕೆಯು ಕೋವಿಡ್ ನಿಯಂತ್ರಣಕ್ಕಾಗಿ ಕೋವಿಡ್ ಆರಂಭದಿಂದ 15 ತಿಂಗಳ ಅವಧಿಯಲ್ಲೇ ಅತಿಹೆಚ್ಚು ಅಂದರೆ 161.98 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿತ್ತು. ಈ ತಿಂಗಳಿನಲ್ಲಿ ಪ್ರಮುಖವಾಗಿ ವೆಚ್ಚವಾಗಿರುವುದರ ಬಗ್ಗೆ ನೋಡೋದಾದರೆ, ಬಿಬಿಎಂಪಿ 8 ವಲಯಗಳಲ್ಲಿನ ವೈದ್ಯರ ವೇತನಕ್ಕಾಗಿ 8.05 ಕೋಟಿ ರೂ., ಇದೇ 8 ವಲಯಗಳಲ್ಲಿ ವಿವಿಧ ಹೋಟೆಲ್ ಗಳಲ್ಲಿ ಕೋವಿಡ್ ಸೋಂಕಿತರ ಕ್ವಾರಂಟೈನ್ (Hotel Quarantine) ಬಿಲ್ ಗಾಗಿ 13.53 ಕೋಟಿ ರೂ. ಹಣವನ್ನು ಪಾವತಿಸಲಾಗಿದೆ.
ವಿದ್ಯುತ್ ಚಿತಾಗಾರದ ಅಭಿವೃದ್ಧಿಗಾಗಿ ಈ ಅವಧಿಯಲ್ಲಿ 40 ಲಕ್ಷ ರೂ.ಗಳನ್ನು ನೀಡಲಾಗಿದೆ. ಪ್ರಕೃತಿ ವಿಕೋಪ ನಿಧಿಯಡಿ ಎಲ್ಲಾ 8 ಜೋನ್ ಗಳಿಗೆ ಬಿಬಿಎಂಪಿ ಕೇಂದ್ರ ಕಚೇರಿಯಿಂದ 86.41 ಕೋಟಿ ರೂ.ಗಳನ್ನು ನೀಡಿತ್ತು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲು 66.16 ಲಕ್ಷ ರೂ.ಗಳನ್ನು, ನಗರದಲ್ಲಿರುವ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 2.82 ಕೋಟಿ ರೂ. ಹಣವನ್ನು ಖರ್ಚು ಮಾಡಲಾಗಿತ್ತು.
ಡೆಲ್ಟಾ ಸೋಂಕಿನಿಂದ ಮೇ ನಲ್ಲಿ ಪರಿಸ್ಥಿತಿ ಉದ್ವಿಗ್ನ :
ಎರಡನೇ ಅಲೆಯಲ್ಲಿ ಕರೋನಾ ರೂಪಾಂತರಿ ಸೋಂಕಾದ ಡೆಲ್ಟಾ (Delta Variant) ರಣಕೇಕೆ ಮಾರ್ಚ್ ನಲ್ಲಿ ಸ್ವಲ್ಪವಾಗಿದ್ದರೂ, ಏಪ್ರಿಲ್ ನಲ್ಲಿ ಸಾಕಷ್ಟು ಏರಿಕೆಯಾಗಿ, ಮೇ ತಿಂಗಳಿನಲ್ಲಿ ಪೀಕ್ ಹಂತಕ್ಕೆ ಬಂದಿತ್ತು. ಡೆಲ್ಟಾ ಸೋಂಕಿನಿಂದ ಬೆಂಗಳೂರಿನ ಹಲವು ಸೋಂಕಿತರ ಶ್ವಾಸಕೋಶಕ್ಕೆ ಹಾನಿಯಾಗಿ ಏಪ್ರಿಲ್ ಮಧ್ಯಭಾಗದಿಂದ ಮೇ ತಿಂಗಳಿನಲ್ಲಿ ಆಕ್ಸಿಜನ್ (Oxygen) ಅವಶ್ಯಕತೆ ಅತಿಹೆಚ್ಚು ಕಂಡು ಬಂದಿತ್ತು. ಮೇ ತಿಂಗಳಿನಲ್ಲಿ 4,06,489 (4.06 ಲಕ್ಷ) ಜನರು ಕೋವಿಡ್ ಪೀಡಿತರಾಗಿದ್ದರು. 5,12,533 (5.12 ಲಕ್ಷ) ಜನರು ಕರೋನಾ ಸೋಂಕಿನಿಂದ ಗುಣಮುಖರಾಗಿದ್ದರು.
ಈ ತಿಂಗಳಿನಲ್ಲಿ ಬಿಬಿಎಂಪಿಯು ಕರೋನಾ ನಿಯಂತ್ರಿಸಲು 107.79 ಕೋಟಿ ರೂ.ಗಳನ್ನು ಖರ್ಚು ಮಾಡಿದ್ರೂ 6,971 ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟರು. ಇದು ಬೆಂಗಳೂರಿನಲ್ಲಿ ಕರೋನಾ ಬಂದಾಗಿನಿಂದ ಈತನಕ ತಿಂಗಳೊಂದರಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟದ ಪ್ರಕರಣದಲ್ಲೇ ಅತಿಹೆಚ್ಚಾಗಿದೆ. ಅಲ್ಲದೆ ಮೇ ತಿಂಗಳ ಅಂತ್ಯದ ವೇಳೆಗೆ 1,46,043 ಕೋವಿಡ್ ಸಕ್ರಿಯ ಪ್ರಕರಣಗಳಿದ್ದವು.
ಮೇ ತಿಂಗಳಿನಲ್ಲಿ ಬಿಬಿಎಂಪಿ ಕೋವಿಡ್ ಖರ್ಚಿನ ಹೈಲೆಟ್ಸ್ :
ಬೆಂಗಳೂರಿನಲ್ಲಿರುವ 8 ಬಿಬಿಎಂಪಿ ವಲಯಗಳಲ್ಲಿ ಒಟ್ಟು 13 ಎಲೆಕ್ಟ್ರಿಕ್ ಚಿತಾಗಾರಗಳಿದ್ದು (Electric Crematorium), ಅವುಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಿಬಿಎಂಪಿಯು ಏಪ್ರಿಲ್ ನಲ್ಲಿ 40 ಲಕ್ಷ ರೂ.ಗಳನ್ನು ನೀಡಿತ್ತು. ಆದರೆ ಸಾವಿನ ಸಂಖ್ಯೆ ಒಂದೇ ಸಮನೆ ಏರಿಕೆಯಾದ್ದರಿಂದ ಚಿತಾಗಾರಗಳ ಮೇಲಿನ ಒತ್ತಡವೂ ಹೆಚ್ಚಾಗಿತ್ತು. ಹೀಗಾಗಿ ಮತ್ತೆ 48 ಲಕ್ಷ ರೂ. ಹಣವನ್ನು ವಿದ್ಯುತ್ ಚಿತಾಗಾರಗಳ ನಿರ್ವಹಣೆ, ಸಿಬ್ಬಂದಿ ವೇತನ ಮತ್ತಿತರ ಕಾರಣಕ್ಕೆ ಹಣ ಬಿಡುಗಡೆ ಮಾಡಿತ್ತು.
ಏಪ್ರಿಲ್ – ಮೇ ತಿಂಗಳಿನಲ್ಲಿ ಸಂಭವಿಸಿದ ಮರಣ ಮೃದಂಗದಿಂದಾಗಿ ಬೆಂಗಳೂರಿನ ಪ್ರತಿ ವಿದ್ಯುತ್ ಚಿತಾಗಾರದ ಮುಂದೆಯೂ ಕೋವಿಡ್ ನಿಂದ ಮೃತಪಟ್ಟವರನ್ನು (Covid Death) ಹೊತ್ತು ತಂದ ಆಂಬುಲೆನ್ಸ್ (Ambulance), ಶವ ಸಾಗಿಸುವ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಎಂತಹವರ ಹೃದಯವನ್ನು ಒಂದರೆಕ್ಷಣ ಕಾಡದೇ ಇರುತ್ತಿರಲಿಲ್ಲ. ಒಂದೆಡೆ ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಗಾಗಿ ಜನರು ಪರಿತಪಿಸುತ್ತಿದ್ದರೆ, ಮತ್ತೊಂದೆಡೆ ಮೃತಪಟ್ಟ ತಮ್ಮವರ ಅಂತ್ಯಸಂಸ್ಕಾರ ಮಾಡಲು ಪರದಾಡುವ ಪರಿಸ್ಥಿತಿಯ ಬಗ್ಗೆ ಸಾರ್ವಜನಿಕರು, ಆಡಳಿತ ನಡೆಸುವವರ ವಿರುದ್ಧ ಹಿಡಿಶಾಪ ಹಾಕಿದ್ದನ್ನು ಮರೆಯುವಂತಿಲ್ಲ.
ಹೋಮ್ ಗಾರ್ಡ್ಸ್ ಸಿಬ್ಬಂದಿ ವೇತನಕ್ಕಾಗಿ 3.09 ಕೋಟಿ ರೂ., ಕೋವಿಡ್ ಆರೈಕೆ ಕೇಂದ್ರದ 95 ವೈದ್ಯರ ವೇತನಕ್ಕಾಗಿ 89.57 ಲಕ್ಷ ರೂ., ಕೋವಿಡ್ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಿಡಲು 11.02 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಇನ್ನು ಕೋವಿಡ್ ಸಂದರ್ಭದಲ್ಲಿ ಕ್ಯಾಬ್ ಸೇವೆ ಒದಗಿಸಿದ ಟ್ರಾವಲ್ಸ್ ವರ್ಲ್ಡ್ ಎಂಬ ಟ್ರಾವಲ್ಸ್ ಸಂಸ್ಥೆಗೆ ಆ ತಿಂಗಳಿನಲ್ಲಿ ಒಟ್ಟಾರೆ 2.20 ಕೋಟಿ ರೂ. ಹಣವನ್ನು ಬಿಬಿಎಂಪಿ ಆರೋಗ್ಯ ಇಲಾಖೆ ಆ ಟ್ರಾವೆಲ್ಸ್ ಕಂಪನಿಗೆ ನೀಡಿತ್ತು. ಇದೆಲ್ಲಾ ಕೇವಲ ಮುಖ್ಯಾಂಶಗಳಷ್ಟೆ.
ಇದನ್ನೂ ಓದಿ : BW INVESTIGATION -1 | COVID GOALMAL |ಕೋವಿಡ್ ನಿಯಂತ್ರಣಕ್ಕೆ ಬಿಬಿಎಂಪಿ ಖರ್ಚು ಮಾಡಿದ 880 ಕೋಟಿ ರೂ. ಹಣದಲ್ಲಿ ಅಕ್ರಮದ ಘಾಟು…..!
ಜೂನ್ ನಲ್ಲಿ ಕೋವಿಡ್ ಸಾರಿಗೆ ವ್ಯವಸ್ಥೆಗಾಗಿಯೇ 27.32 ಕೋಟಿ ರೂ. ವೆಚ್ಚ :
ಮೇ ತಿಂಗಳಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 4.06 ಲಕ್ಷ ಇದ್ದಿದ್ದು, 2021ರ ಜೂನ್ ತಿಂಗಳಲ್ಲಿ 50,330ಕ್ಕೆ ಇಳಿಯಿತು. ಕೋವಿಡ್ ಸೋಂಕಿನಿಂದ 1,50,395 ಜನರು ಗುಣಮುಖರಾದರು. ಆದರೂ ಜೂನ್ ತಿಂಗಳಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಒಟ್ಟಾರೆ 73.78 ಕೋಟಿ ರೂ. ಹಣವನ್ನು ಖರ್ಚು ಮಾಡಿದರು. ಕೋವಿಡ್ ಸೋಂಕಿತರು, ಪ್ರಾಥಮಿಕ ಸಂಪರ್ಕಿತರ ಪತ್ತೆ, ಔಷಧಿ ನೀಡಿಕೆ, ವೈದ್ಯರು, ನರ್ಸ್, ಕೋವಿಡ್ ಕಾರ್ಯಕರ್ತರ ಓಡಾಟಕ್ಕಾಗಿ ಪಾಲಿಕೆಯು 11.56 ಕೋಟಿ ರೂ. ಹಣವನ್ನು ವಿವಿಧ ಟ್ರಾವೆಲ್ಸ್ ಸಂಸ್ಥೆಗಳಿಗೆ ಪಾವತಿ ಮಾಡಿದೆ. ಅಲ್ಲದೆ ಕೋವಿಡ್ ಸೋಂಕಿತರನ್ನು ಅವರಿದ್ದ ಸ್ಥಳದಿಂದ ಆಸ್ಪತ್ರೆಗೆ ದಾಖಲಿಸುವ ಮತ್ತಿತರ ಕಾರ್ಯಕ್ಕಾಗಿ ಆಂಬುಲೆನ್ಸ್ ಸೇವೆ ಪೂರೈಸಿದ ಸಂಸ್ಥೆಗಳಿಗೆ 15.75 ಕೋಟಿ ರೂ. ಹಣವನ್ನು ಪಾಲಿಕೆ ಹಣಕಾಸು ಅಧಿಕಾರಿಗಳು ಪಾವತಿ ಮಾಡಿದ್ದಾರೆ. ಇನ್ನು 5 ವಲಯಗಳಲ್ಲಿ ಪಾಲಿಕೆ ವಾರ್ಡ್ ಗಳಲ್ಲಿ ಕಂಟೈನ್ ಮೆಂಟ್ ಜೋನ್ ಗಳಲ್ಲಿ ಬ್ಯಾರಿಕೇಡ್, ಸೀಲ್ ಡೌನ್ ಮತ್ತಿತರ ಕಾರ್ಯಕ್ಕಾಗಿ 2.84 ಕೋಟಿ ರೂ.ಗಳನ್ನು ನೀಡಲಾಗಿತ್ತು.
ಸಿಎಂ ಅಧಿಕೃತ ನಿವಾಸ ಕಾವೇರಿ ಸ್ಯಾನಿಟೈಸೇಷನ್ ಗೆ 53.93 ಲಕ್ಷ ರೂ. ವ್ಯಯ :
ಇನ್ನು ಜುಲೈ ತಿಂಗಳಿನಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಾ ಬಂದಿತ್ತು. ಈ ತಿಂಗಳಿನಲ್ಲಿ ಒಟ್ಟಾರೆ 59.95 ಕೋಟಿ ರೂ. ಹಣವನ್ನು ಪಾಲಿಕೆ ಖರ್ಚು ಮಾಡಿತ್ತು. ಇದರಲ್ಲಿ ಗಮನ ಸೆಳೆಯುವ ಅಂಶ ಏನಪ್ಪಾ ಅಂದರೆ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ (Chief Minister House Cauvery) ಪ್ರತಿದಿನ ಸ್ಯಾನಿಟೈಸ್ ಮಾಡಿದಕ್ಕಾಗಿ ರಿಚ್ಮಂಡ್ ಹೆಲ್ತ್ ಎಂಬ ಸಂಸ್ಥೆಗೆ ಪಾಲಿಕೆ ಆರೋಗ್ಯ ವಿಭಾಗವು 53,93,574 (53.93 ಲಕ್ಷ ರೂ.) ರೂ. ಹಣವನ್ನು 16 ಬಿಲ್ ಗಳಲ್ಲಿ ಪಾವತಿ ಮಾಡಿತ್ತು.
ನಾಲ್ಕು ತಿಂಗಳಲ್ಲಿ ಕರೋನಾ ನಿಯಂತ್ರಣಕ್ಕೆ 430 ಕೋಟಿ ರೂ. ವೆಚ್ಚ :
ಕರೋನಾ ಎರಡನೇ ಅಲೆ ಡೆಲ್ಟಾ ರೂಪಾಂತರಿಯ ಹಾವಳಿ ಮಾರ್ಚ್ ನಿಂದ ಜೂನ್ ತನಕವೂ ತನ್ನ ದಾಳಿಯನ್ನು ನಿರಂತರವಾಗಿ ನಡೆಸಿತ್ತು. ಹೀಗಾಗಿ ಈ ನಾಲ್ಕು ತಿಂಗಳಿನಲ್ಲಿಯೇ 8,07,712 ಜನರು ಕೋವಿಡ್ ಪೀಡಿರಾದರೆ, 7,56,963 ಮಂದಿ ಕೋವಿಡ್ ನಿಂದ ಗುಣಮುಖರಾದರೆ, 11,143 ಜನರು ಕೋವಿಡ್ ನಿಂದ ಮೃತಪಟ್ಟರು. ಇದು ಬಿಬಿಎಂಪಿ ನೀಡಿದ ಸಾವಿನ ಲೆಕ್ಕ.
ಆದರೆ ಬೆಂಗಳೂರಿನಲ್ಲಿ ಮಾರ್ಚ್ ನಿಂದ ಜೂನ್ ಅವಧಿಯಲ್ಲಿ ಪಾಲಿಕೆ ನೀಡಿದ ಅಂಕಿ ಅಂಶಕ್ಕಿಂತ ಎರಡು ಮೂರು ಪಟ್ಟು ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದರು. ಪಾಲಿಕೆಯು ತನ್ನ ಮುಖ ಉಳಿಸಿಕೊಳ್ಳಲು ಹುಸಿ ಲೆಕ್ಕ, ಅಂಕಿ- ಅಂಶವನ್ನು ನೀಡಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಈ ನಾಲ್ಕು ತಿಂಗಳಿನಲ್ಲಿ ಪಾಲಿಕೆಯು 429,76,05,371 (429.76 ಕೋಟಿ ರೂ.) ಹಣ ಖರ್ಚು ಮಾಡಿದೆ. ಇದರಿಂದ ಒಂದಂತೂ ಸ್ಪಷ್ಟ ಪಾಲಿಕೆ ನೀರಿನಂತೆ ಹಣ ಖರ್ಚು ಮಾಡಿದರೂ ಕೋವಿಡ್ ನಿಯಂತ್ರಣದಲ್ಲಿ ಎಡವಿತ್ತು.
ಕೋವಿಡ್ ಖರ್ಚು-ವೆಚ್ಚಗಳ ಬಗ್ಗೆ ಸಮಗ್ರ ಲೆಕ್ಕಪರಿಶೋಧನೆ ಹಾಗೂ ತನಿಖೆ ನಡೆದರೆ ಉತ್ತಮ :
ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಬಿಬಿಎಂಪಿಯು 21 ತಿಂಗಳಲ್ಲಿ 880 ಕೋಟಿ ರೂಪಾಯಿ ಹಣವನ್ನು ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಖರ್ಚು ಮಾಡಿದೆ. ಪಾಲಿಕೆ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ (BBMP Chief Commissioner Gourav Gupta), ಕೋವಿಡ್ ಖರ್ಚಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯಲ್ಲೂ ಪಕ್ಕಾ ಲೆಕ್ಕ ಇಡಲಾಗಿದೆ ಎಂದು ಹೇಳುತ್ತಿದ್ದಾರೆ. ಟೆಂಡರ್ ಇಲ್ಲದೆ ಸಾಕಷ್ಟು ಖರೀದಿ, ಸೇವೆಯನ್ನು ಪಾಲಿಕೆ ಪಡೆದಿರುವ ಹಿನ್ನಲೆಯಲ್ಲಿ ಕೋವಿಡ್ ಖರ್ಚು ವೆಚ್ಚಗಳ ಬಗ್ಗೆ ರಾಜ್ಯ ಸರ್ಕಾರದಿಂದ ಲೆಕ್ಕಪರಿಶೋಧನೆ (Audit) ನಡೆಸಿ ಸೂಕ್ತ ಕ್ರಮ ಕೈಗೊಂಡರೆ ಈ ಕೋವಿಡ್ ಖರ್ಚು ವೆಚ್ಚದಲ್ಲಿ ನಡೆದಿರಬಹುದಾದ ಅವ್ಯವಹಾರ, ಅಕ್ರಮಗಳು ಬಯಲಿಗೆ ಬರಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
“ಸರ್ಕಾರ ಮತ್ತು ಬಿಬಿಎಂಪಿಗೆ ಕೋವಿಡ್ ಸೋಂಕು ಒಂದು ವರವಾದರೆ, ಜನರಿಗೆ ಶಾಪವಾಗಿ ಪರಿಣಮಿಸಿದೆ. ಈಗ ಕರೋನಾ ಮೂರನೇ ಅಲೆ ತಡವಾಗಿ ಬಂದಿದ್ದಕ್ಕೆ ಬಹುಶ: ಇವರಿಗೆಲ್ಲ ಬೇಸರವಾಗಿರಬಹುದು. ಕೋವಿಡ್ ಹೆಸರಿನಲ್ಲಿ ಹಣ ಮಾಡೋಕೆ ಇವರಿಗೊಂದು ಅನುಕೂಲ ಪರಿಸ್ಥಿತಿ ಸಿಕ್ಕಿತ್ತೇ ವಿನಃ ಜನರಿಗೆ ಅನುಕೂಲ ಮಾಡಿಕೊಡುವ ಮನಸ್ಥಿತಿ ಇವರಿಗೆ ಇಲ್ಲ. ಬಿಬಿಎಂಪಿಯಲ್ಲಿ ಕೋವಿಡ್ ಖರ್ಚು ವೆಚ್ಚ ಮಾಡೋದಿಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಇದನ್ನೆಲ್ಲಾ ಗಮನಿಸಿದರೆ ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೋವಿಡ್ ನಿಯಂತ್ರಣ ಹೆಸರಿನಲ್ಲಿ ಆಡಳಿತ ನಡೆಸುವವರು ಅವೈಜ್ಞಾನಿಕ ಕ್ರಮ ಕೈಗೊಳ್ಳುತ್ತಿದ್ದಾರೆ. ಬಿಬಿಎಂಪಿಯಲ್ಲಿನ ಕೋವಿಡ್ ಖರ್ಚು ವೆಚ್ಚದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ.”
– ಯು.ಬಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರು
“ಕರೋನಾ ಸಾಂಕ್ರಾಮಿಕ ರೋಗ ಹೆಸರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ದುಡ್ಡು ಮಾಡುವ ಹಂತಕ್ಕೆ ಬಂದಿರೋದು ದುರಂತವೇ ಸರಿ. ಕರೋನಾ ಸೋಂಕು ನಿಯಂತ್ರಣದ ಹೆಸರಿನಲ್ಲಿ ನೂರಾರು ಕೋಟಿ ರೂ. ಖರ್ಚು ಮಾಡಿದ್ದು ಕೇವಲ ಪೇಪರ್ ನಲ್ಲಿ ಮಾತ್ರನಾ? ವಾಸ್ತವದಲ್ಲಿ ಅಷ್ಟು ಹಣ ಖರ್ಚು ಮಾಡಿದ್ದರೆ, ಬೆಂಗಳೂರಿನಲ್ಲಿ ಕರೋನಾ ಸೋಂಕು ಆ ಸಂದರ್ಭದಲ್ಲಿ ಅಷ್ಟೊಂದು ಜಾಸ್ತಿಯಾಗಿದ್ದು ಯಾಕೆ? ಹೇಗೆ? ಸಾವಿರಾರು ಸಂಖ್ಯೆಯಲ್ಲಿ ಅಮಾಯರು ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸಿಗದೆ ಅನ್ಯಾಯವಾಗಿ ಸಾವನ್ನಪ್ಪಿದರು. ಇದಕ್ಕೆ ಯಾರು ಹೊಣೆ? ಕರೋನಾ ಸೋಂಕೆಂಬ ಮೆಡಿಕಲ್ ಮಾಫಿಯಾ ಜೊತೆ ಬಿಬಿಎಂಪಿಯವರು ಕೈಜೋಡಿಸಿರುವುದು ಇದರಿಂದ ವೇದ್ಯವಾಗುತ್ತಿದೆ”
– ಟಿ.ಜೆ.ಅಬ್ರಹಾಮ್, ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು