ಬೆಂಗಳೂರು, (www.bengaluruwire.com) : ಯಲಹಂಕ ಫುಟ್ ಪಾತ್ ನಲ್ಲಿ ಬಿಬಿಎಂಪಿಯು 3 ಕೋಟಿ ರೂ. ವೆಚ್ಚದಲ್ಲಿ ನಿರುಪಯುಕ್ತ ವಾಹನಗಳ ಬಿಡಿ ಭಾಗಗಳಿಂದ ಕುದುರೆ, ಗ್ಲೊಬ್, ಆಟೋ, ಫಿಯಟ್ ಕಾರು ಸೇರಿದಂತೆ ವಿವಿಧ ಅಳತೆಯ 13 ಕಲಾಕೃತಿಗಳ ವಿಶೇಷ ಸಣ್ಣಸಣ್ಣ ಪಾರ್ಕ್ ಗಳನ್ನು ನಿರ್ಮಿಸಿದೆ.
ಹಗಲಲ್ಲಿ ಕಾಣುವ ಲೋಹದ ಕಲಾಕೃತಿಗಳು ರಾತ್ರಿ ವೇಳೆ ದೀಪಾಲಂಕಾರದಿಂದ ದಾರಿಹೋಕರ ಕಣ್ಮನ ಸೆಳೆಯುತ್ತಿವೆ. ಮೂರು ಕೋಟಿ ವೆಚ್ಚದಲ್ಲಿ ಮೂಡಿದ ವಿವಿಧ ಕಲಾಕೃತಿಗಳನ್ನು ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಎಸ್.ಆರ್.ವಿಶ್ವನಾಥ್ ಶನಿವಾರ ಲೋಕಾರ್ಪಣೆ ಮಾಡಿದರು.
ತದನಂತರ ಮಾತನಾಡಿದ ಅವರು, ಪುಟ್ ಪಾತ್ ನ ಬದಿಯಲ್ಲಿ ಸುಸಜ್ಜಿತವಾಗಿ ಜೋಡಿಸಲಾಗಿರುವ ಲೋಹದ ಕಲಾಕೃತಿಗಳು ರಾತ್ರಿ ವೇಳೆ ದಿಪಾಲಂಕಾರದಿಂದ ಕಂಗಳಿಸುತ್ತಿವೆ. ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಯಲಹಂಕ ನಗರವನ್ನ ಮತ್ತಷ್ಟು ವರ್ಣರಂಜಿತವಾಗಿಸಲು ಮತ್ತಷ್ಟು ಕ್ರಮ ಕೈಗೊಳ್ಳಲು ಸರ್ಕಾರ ಬದ್ದ ಎಂದು ಎಸ್.ಆರ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ಥಿಕ ಸಂಪನ್ಮೂಲದಿಂದ ಮೊದಲೇ ನಲಗುತ್ತಿರುವ ಬಿಬಿಎಂಪಿಗೆ ನಿರುಪಯುಕ್ತ ವಾಹನ ಬಿಡಿಭಾಗಗಳ ಕಲಾಕೃತಿಗಳಿಗೆ ಬಿಬಿಎಂಪಿ 3 ಕೋಟಿ ರೂ. ವೆಚ್ಚ ಮಾಡಿರುವುದು ಎಷ್ಟರಮಟ್ಟಿಗೆ ಸರಿ? ಇದು ದುಂದುವೆಚ್ಚವಲ್ಲದೆ ಮತ್ತಿನ್ನೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.