ಸಾಲಿಗ್ರಾಮ, (ಉಡುಪಿ ಜಿಲ್ಲೆ) (www.bengaluruwire.com) : ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಬ್ರಹ್ಮರಥೋತ್ಸವ ಭಾನುವಾರ (ಜ.16) ದಂದು ಶಾಸ್ತ್ರೋಕ್ತವಾಗಿ ನಡೆಯಲಿದೆ. . ವಾರಾಂತ್ಯದ ಕರ್ಫ್ಯೂ ಹಾಗೂ ಕೋವಿಡ್ ಸೋಂಕು ಹಿನ್ನಲೆಯಲ್ಲಿ ಭಕ್ತಾದಿಗಳಿಗೆ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ನಾಳೆ ನಡೆಯಲಿರುವ ಬ್ರಹ್ಮರಥೋತ್ಸವದ ರಥಾರೋಹಣ- ಅವರೋಹಣ ಕ್ಕೆ ಸಂಬಂಧಿಸಿದ ಎಲ್ಲ ಧಾರ್ಮಿಕ ವಿಧಿಗಳನ್ನು ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ನಿಗಧಿತ ಅರ್ಚಕರು, ತಂತ್ರಿ ಗಳು, ಉಪಾಧಿವಂತರು ಮತ್ತು ಸೀಮಿತ ಸಿಬ್ಬಂದಿಯ ಸಹಭಾಗಿತ್ವದಲ್ಲಿ ಪರಂಪರಾನುಗತ ಕಟ್ಟು ಕಟ್ಟಳೆಯ ಪ್ರಕಾರವಾಗಿ ಕೋವಿಡ್ ನಿಯಮಗಳನ್ನ ಪಾಲಿಸುವುದರೊಂದಿಗೆ ನೆರವೇರಿಸಲಾಗುವುದು ಎಂದು ದೇವಸ್ಥಾನ ಸಮಿತಿಯವರು ಹೇಳಿದ್ದಾರೆ.
“ಕೋವಿಡ್ ಸೋಂಕಿನ ಕಾರಣಕ್ಕೆ 2021ರಲ್ಲಿ ಸಾರ್ವಜನಿಕರಿಗೆ ರಥೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ. ಈ ಬಾರಿ ಸಾಲಿಗ್ರಾಮದ ಬ್ರಹ್ಮರಥೋತ್ಸವನ್ನು ಸೀಮಿತ ಸಂಖ್ಯೆ ಪ್ರತಿನಿಧಿಗಳನ್ನು ಬಳಸಿಕೊಂಡು ನಡೆಸಲಿದ್ದೇವೆ. ಸರ್ಕಾರ ವಿಧಿಸಿದ ಕೋವಿಡ್ ನಿಯಮಾವಳಿ ಹಾಗೂ ವಾರಾಂತ್ಯ ಕರ್ಫ್ಯೂ ಇರುವ ಕಾರಣಕ್ಕೆ ಸಾರ್ವಜನಿಕರು ಈ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಲ್ಲ. ಸಾಲಿಗ್ರಾಮ ವಾರ್ಷಿಕ ಹಬ್ಬದಲ್ಲಿ 14 ಗ್ರಾಮಗಳ ಪರಂಪರಾನುಗತ ಕಟ್ಟು ಕಟ್ಟಳೆ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಕಾರ್ಯಕ್ರಮ ನಡೆಯಲಿದೆ.”
– ಡಾ.ಕೆ.ಸೀತಾರಾಮ ಕಾರಂತ, ಅಧ್ಯಕ್ಷರು, ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ
ಸಾಲಿಗ್ರಾಮ ರಥೋತ್ಸವ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ವಿವರ :
ಜ.13ರಿಂದಲೇ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ- ಹವನಾದಿಗಳು ನಡೆಯುತ್ತಿದೆ. ಜ.13ರಂದು ಸಂಜೆ 7.30ಕ್ಕೆ ಮಹೂರ್ತ ಬಲಿ, ಕಿರಿರಂಗಪೂಜೆ ನಡೆದರೆ, ಜ.14ರಂದು ಮಕರ ಸಂಕ್ರಮಣ ದಿನದಂದು ನರಸಿಂಹಹೋಮ, ಗಣಹೋಮ ಹಾಗೂ ಮಧ್ಯಾಹ್ನ 12.30ಕ್ಕೆ ರಜತ ರಥೋತ್ಸವ, ರಾತ್ರಿ 7.30ಕ್ಕೆ ಧ್ವಜಾರೋಹಣ, ಕಿರಿರಂಗ ಪೂಜೆ ಸಂಪನ್ನವಾಯಿತು.
ಇನ್ನು ಜ.15ರ ಶನಿವಾರ ವೇದಪಾರಾಯಣ, ಸುತ್ತುಸೇವೆ, ಕಟ್ಟೆ ಓಲಗ, ಹಿರೇರಂಗಪೂಜೆ, ಪುಷ್ಪರಥೋತ್ಸವ ನಡೆಯಲಿದೆ. ಜ.16ರಂದು ಬೆಳಗ್ಗೆ 10.15ಕ್ಕೆ ಶ್ರೀ ಬ್ರಹ್ಮರಥೋತ್ಸವ, ಸಂಜೆ 6 ಗಂಟೆಗೆ ರಥೋವರೋಹಣ, ಓಲಗಮಂಟಪ ಸೇವೆ, ಶಯನೋತ್ಸವ ಕಾರ್ಯಕ್ರಮಗಳು ಪೂರ್ವ ನಿಗಧಿಯಂತೆ ಜರುಗಲಿವೆ. ಜ.17ರ ಸೋಮವಾರ ಬೆಳಗ್ಗೆ 8ಕ್ಕೆ ಪ್ರಬೋಧೋತ್ಸವ, ಸಂಜೆ 5.30ಕ್ಕೆ ಓಕಳಿಸೇವೆ, ಅವಭೃಥಸ್ನಾನ (ಕೋಟ ಹಂದೆ ಶ್ರೀ ಮಹಾವಿಷ್ಣು ದೇವಸ್ಥಾನ), ಕಟ್ಟೆ ಓಲಗ, ಧ್ವಜಾವರೋಹಣ ಕೈಂಕರ್ಯಗಳು ನಡೆಯಲಿದೆ. ಜ.18ರ ಮಂಗಳವಾರ ಸಂಪ್ರೋಕ್ಷಣೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯು ತಿಳಿಸಿದೆ.
ಬ್ರಹ್ಮರಥೋತ್ಸವ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ಈ ಮುಂದಿನ ಲಿಂಕ್ ಅನ್ನು ಕ್ಲಿಕ್ ಮಾಡಿ ವೀಕ್ಷಿಸಬಹುದಾಗಿದೆ : Youtube Channel (ಜ.16ರ ಬೆಳಗ್ಗೆ 7ರಿಂದ ನೇರಪ್ರಸಾರ)
ಶ್ರೀ ಗುರುನರಸಿಂಹ ದೇವಸ್ಥಾನದ ವಿಶಿಷ್ಠತೆ :
ಪ್ರಸಿದ್ಧ ನರಸಿಂಹ ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮದ ಶ್ರೀ ಗುರುನರಸಿಂಹ ಕ್ಷೇತ್ರವು ಒಂದಾಗಿದೆ. ಯೋಗಾನಂದ ಶ್ರೀ ಗುರುನರಸಿಂಹನೆಂದು ಕರೆಯಲ್ಪಡುತ್ತಿರುವ ಇಲ್ಲಿನ ಶ್ರೀ ದೇವರ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿದ್ದು, ಆದಿಯಲ್ಲಿ ಶ್ರಿ ಮಹಾಗಣಪತಿಯಂತ್ರ ಸ್ಥಾಪಿಸಿ ಅದರ ಮೇಲೆ ಕಮಲಪತ್ರದ ಮೇಲೆ ಶ್ರೀ ಗುರುನರಸಿಂಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀದೇವರ ವಿಗ್ರಹವು ಅರ್ಧಯೋಗ ಪಟ್ಟಾನ್ವಿತವಾಗಿದ್ದು ಇದನ್ನು ಯೋಗನರಸಿಂಹನೆಂದು ಲಕ್ಷಿತ್ರ್ಮಯು ಹೃದಯ ಭಾಗದಲ್ಲಿ ಅಂತರ್ಗತವಾಗಿರುವುದರಿಂದ ಶ್ರೀಲಕ್ಷಿತ್ರ್ಮೕ ನರಸಿಂಹನೆಂದು ಕರೆಯುತ್ತಾರೆ. ಸ್ವಯಂ ವ್ಯಕ್ತವಾದ ಮಹಾವಿಷ್ಣುವಿನ ಅಷ್ಠ ಕ್ಷೇತ್ರಗಳಲ್ಲಿ ಇದು ಒಂದು. ಶ್ರೀದೇವರ ವಿಗ್ರಹವು ಎಂಟನೇ ಶತಮಾನಕ್ಕೆ ಸೇರಿದ್ದು ಎಂದು ಗುರುತಿಸಲಾಗಿದೆ. ಲಭ್ಯವಿರುವ ಸ್ಕಂದ ಪುರಾಣ, ಪದ್ಮಪುರಾಣದ ಲೋಕಾಧಿತ್ಯ ಅಧ್ಯಾಯದಲ್ಲಿ ಈ ದೇವಸ್ಥಾನದ ಕುರಿತು ಸವಿಸ್ತಾರವಾದ ಮಾಹಿತಿ ಇದೆ.
ಸಾಲಿಗ್ರಾಮದಲ್ಲಿನ ಈ ದೇವಸ್ಥಾನ ರಚನೆಯೇ ವಿಭಿನ್ನ :
ಈ ದೇವಸ್ಥಾನವು ಚರ್ತುರಶ್ವ ಸಿಂಹ ಆಯದಲ್ಲಿದೆ. ಪ್ರಧಾನ ದೇವರು ನರಸಿಂಹ, ದಕ್ಷಿಣ ಪೌಳಿಯ ಪಶ್ಚಿಮ ಮೂಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಿಗ್ರಹ, ಉತ್ತರ ಪೌಳಿಯ ಪಶ್ಚಿಮ ಮೂಲೆಯಲ್ಲಿ ಗಣಪತಿ ವಿಗ್ರಹವಿದೆ. ಶ್ರೀ ಗುರುನರಸಿಂಹನಿಗೆ ಎದುರಾಗಿ ರಥಬೀದಿ ಪಶ್ಚಿಮ ತುದಿಯಲ್ಲಿ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಹೊರಭಾಗದ ನೈರುತ್ಯ ದಿಕ್ಕಿನಲ್ಲಿ ಶಂಖ ತೀರ್ಥ ಸರೋವರ. ದಡದಲ್ಲಿ ನಾಗದೇವರನ್ನು ಸ್ಥಾಪಿಸಲಾಗಿದೆ. ಶ್ರೀ ಯೋಗಾನಂದ ನರಸಿಂಹಮೂರ್ತಿಯು ಪಶ್ಚಿಮಾಭಿಮುಖವಾಗಿದ್ದು ದ್ವಿಭುಜವಾಗಿದೆ. ಬಲಗೈಯಲ್ಲಿ ಚಕ್ರವೂ, ಎಡಗೈಯಲ್ಲಿ ಶಂಖವೂ ಧರಿಸಲ್ಪಟ್ಟದ್ದರಿಂದ ದೇವಳದ ಎಡಬಲಗಳಲ್ಲಿ ಶಂಖ ತೀರ್ಥ ಮತ್ತು ಚಕ್ರತೀರ್ಥ ಸರೋವರಗಳಿವೆ.
ಉಗ್ರ ನರಸಿಂಹನ ವಿಗ್ರಹದ ದಿಕ್ಕು ಬದಲಿಸಿದ್ದೇಕೆ ?
ಹಿಂದೆ ಉಗ್ರ ನರಸಿಂಹನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಲಾಗಿತ್ತು. ಆಗ ನರಸಿಂಹನ ಉಗ್ರದೃಷ್ಟಿಯಿಂದ ಪೂರ್ವದಿಕ್ಕಿನ ಗದ್ದೆಗಳಲ್ಲಿ ಬೆಳೆದ ಕೃಷಿ ಭಸ್ಮವಾಗುತ್ತಿತ್ತು. ಇದರಿಂದ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿ ಅಂದರೆ ಅರಬ್ಬಿ ಸಮುದ್ರದ ಕಡೆ ಮುಖ ಮಾಡಿ ಸ್ಥಾಪಿಸಲಾಯಿತು. ಪಶ್ಚಿಮ ದಿಕ್ಕಿನಲ್ಲಿನ ಕೃಷಿಯ ಹಾನಿ ತಪ್ಪಿಸಲು ಬ್ರಹ್ಮಾವರದ ಕುಕ್ಕುಡೆಗುಂಡಿಯಲ್ಲಿದ್ದ ಆಂಜನೇಯನ ವಿಗ್ರಹವನ್ನು ತಂದು ನರಸಿಂಹ ವಿಗ್ರಹದ ನೇರವಾಗಿ ಎದುರಿನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದರು ಎನ್ನುವ ಇತಿಹ್ಯವಿದೆ. ಅಂದಿನಿಂದ ನರಸಿಂಹನ ಉರಿಯನ್ನು ಸಹಿಸಲು ಸಾಧ್ಯವಾಗುವಂತೆ ಈ ಆಂಜನೇಯನ ವಿಗ್ರಹಕ್ಕೆ ಚಂದ್ರ (ಸಿಂಧೂರ) ಬೆಣ್ಣೆಯನ್ನು ಲೇಪಿಸಲಾಗುತ್ತಿದೆ. ಹಾಗೂ ಅಂದು ಸ್ಥಾಪಿಸಿದ ನಂದಾದೀಪಗಳಲ್ಲಿ ನಿರಂತರವಾಗಿ ದೀಪವು ಉರಿಯುತ್ತಿದ್ದು ದೂರ ಪ್ರಯಾಣ ಬೆಳೆಸುವರು ಸುಖ ಪ್ರಯಾಣಕ್ಕಾಗಿ ಮತ್ತು ಭಕ್ತಾದಿಗಳು ಎಣ್ಣೆಯನ್ನು ನಂದಾದೀಪಕ್ಕೆ ಹರಕೆ ರೂಪದಲ್ಲಿ ಹಾಕಿ ಪ್ರಾರ್ಥಿಸುವ ಸಂಪ್ರದಾಯ ಇಟ್ಟುಕೊಂಡಿರುತ್ತಾರೆ. ಭಕ್ತರು ಇಷ್ಟಾರ್ಥ ಪ್ರಾಪ್ತಿಗಾಗಿ ಪೂರ್ಣಾಲಾಂಕರ, ರಂಗಪೂಜೆ, ಸುಂದರಕಾಂಡ ಪಾರಾಯಣ ಸೇವೆಯನ್ನು ಸಲ್ಲಿಸುತ್ತಾರೆ.
ಶ್ರೀ ಗುರುನರಸಿಂಹ ದೇವಸ್ಥಾನದ ಸ್ಥಳ ಪುರಾಣ ಹೀಗಿದೆ ಓದಿ :
ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಸ್ಥಳ ಪುರಾಣವಿದೆ. ಪದ್ಮಪುರಾಣದ ಪುಷ್ಕರ ಕಾಂಡ ಅಧ್ಯಾಯದಲ್ಲಿ ಈ ದೇವಸ್ಥಾನದ ಬಗ್ಗೆ ಉಲ್ಲೇಖವಿದೆ. ಶ್ರೀ ಗುರುನರಸಿಂಹ ಮಹಾತ್ಮೆಯನ್ನು ಪುಂಗವ ಮುನಿಗಳ ಒತ್ತಾಯದ ಮೇರೆಗೆ ಸುತ ಪುರಾಣಿಕರು ವಿವರಿಸುತ್ತಾರೆ.
ಪರಶುರಾಮರಾಮರ ಮನವಿಯ ಮೇರೆಗೆ ಸಮುದ್ರರಾಜ ಉತ್ತರ ದಿಕ್ಕಿನ ಗೋಕರ್ಣದಿಂದ ದಕ್ಷಿಣದ ಕನ್ಯಾಕುಮಾರಿವರೆಗಿನ ಸ್ಥಳವನ್ನು ನೀಡುತ್ತಾರೆ. ಹಾಗಾಗಿ ಈ ಸ್ಥಳವನ್ನೆಲ್ಲಾ ಪರಶುಮಾತ್ರ ಕ್ಷೇತ್ರವೆಂದೇ ಕರೆಯಲಾಗುತ್ತದೆ. ಸಾಲಿಗ್ರಾಮದ ಈ ಶ್ರೀ ಕ್ಷೇತ್ರ ಸುತ್ತಮುತ್ತ ಹಲವು ತೀರ್ಥ ಕ್ಷೇತ್ರ ಹಾಗೂ ತೀರ್ಥ ಸರೋವರಗಳಿವೆ. ಸೀತಾನದಿ ಹಾಗೂ ಕುಂಭಾಷಿ ಕ್ಷೇತ್ರದಲ್ಲಿ ಈ ಹಿಂದೆ ಹಲವು ಋಷಿಮುನಿಗಳು ಇಲ್ಲಿನ ಸರೋವರಗಳಲ್ಲಿ ಮಿಂದು ತಪಸ್ಸು ಮಾಡುತ್ತಿದ್ದರು. ಇಂತಹ ಕ್ಷೇತ್ರಕ್ಕೆ ನಾರದ ಮಹರ್ಷಿಗಳು ಭೇಟಿ ನೀಡುತ್ತಿದ್ದರು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಹೀಗಿರುವಾಗ ಒಮ್ಮೆ ಅನಿರೀಕ್ಷಿತ ಘಟನೆ ನಡೆಯಿತು. ಭೂಮಿ ನಡುಗಿ, ತೀವ್ರ ಶಬ್ದ ಉಂಟಾಯಿತು. ಇದರಿಂದಾಗಿ ಪ್ರಾಣಿಗಳು ದಿಕ್ಕಾಪಾಲಾಗಿ ಓಡುತ್ತಿದ್ದರೆ, ಪಕ್ಷಿಗಳು ಆಕಾಶದಲ್ಲಿ ವೃತ್ತಾಕಾರವಾಗಿ ಸುತ್ತುತ್ತಿದ್ದವು. ಜೊತೆಗೆ ಅತಿಯಾದ ಗಾಳಿ ಬೀಸುತ್ತಿತ್ತು. ಇದನ್ನು ಕಂಡ ಋಷಿಮುನಿಗಳು ನಾರದರ ಬಳಿ ಬಂದು ತಮಗೆ ರಕ್ಷಣೆ ಒದಗಿಸುವಂತೆ ಕೋರಿದರು. ಆಗ ಆ ಮುನಿಗಳಿಗೆ ಅಶರೀರ ದಿವ್ಯವಾಣಿಯೊಂದು ಕೇಳಿಬಂತು. ಆ ವಾಣಿಯು ನರಸಿಂಹ ವಿಚಾರದ ಬಗ್ಗೆ ಭೋದಿಸಿತು.
ಅಶರೀರವಾಣಿಯಲ್ಲಿ ಸಾಲಿಗ್ರಾಮ ನರಸಿಂಹನ ಬಗ್ಗೆ ಸೂಚಿಯಿತ್ತ ದಿವ್ಯವಾಣಿ :
ಆ ದಿವ್ಯವಾಣಿಯು ಒಂದು ಕೈಯಲ್ಲಿ ಶಂಖ ಮತ್ತೊಂದು ಕೈಯಲ್ಲಿ ಚಕ್ರ ಹಿಡಿದು ಯೋಗಾನಂದ ಮುದ್ರೆಯಲ್ಲಿ ಕೂತಿರುವ ನರಸಿಂಹ ವಿಗ್ರಹವು ಶಂಖ ಮತ್ತು ಚಕ್ರ ತೀರ್ಥ ಸರೋವರದ ಮಧ್ಯದಲ್ಲಿನ ಅಶ್ವತ್ಥ ಮರದ ಬಳಿಯಿದೆ. ಈ ವಿಗ್ರಹವನ್ನು ಬ್ರಹ್ಮದೇವ ಹಾಗೂ ಶಿವ ಕೂಡ ಪೂಜಿಸುತ್ತಿದ್ದುದಾಗಿ ಆ ಋಷಿಮುನಿಗಳಿಗೆ ತಿಳಿಸಿತು. ಈ ವಿಗ್ರಹವನ್ನು ನಾರದಮುನಿಗಳು ಸ್ಥಾಪಿಸುವಂತೆ ದಿವ್ಯವಾಣಿಯು ಹೇಳಿತು. ಇದಕ್ಕೆ ನಾರದ ಮಹರ್ಷಿಗಳು ಒಪ್ಪಿದರು. ಇದೇ ವಿಷಯವು ನಾರದರಿಗೆ ಅವರು ಧ್ಯಾನಸ್ಥರಾದಾಗಲೂ ತಿಳಿದುಬಂದಿತ್ತು. ಆನಂತರ ಈ ವಿಗ್ರಹವನ್ನು ಪತ್ತೆ ಹಚ್ಚಿ ಭಕ್ತಿಯಿಂದ ಶ್ರೀದೇವರನ್ನು ಪೂಜಿಸಿದರು. ಬಳಿಕ ನಾರದರು ಶಂಖ ಮತ್ತು ಚಕ್ರ ತೀರ್ಥದ ಮಧ್ಯೆ ಶ್ರೀ ಗುರುನರಸಿಂಹನನ್ನು ಪ್ರತಿಷ್ಠಾಪಿಸಿದರು. ಬಳಿಕ ನಾರದ ಮಹರ್ಷಿಗಳ ಪ್ರಾರ್ಥನೆ ಮೇರೆಗೆ ಪ್ರತ್ಯಕ್ಷರಾದ ನರಸಿಂಹ ದೇವರು ಶಾಶ್ವತವಾಗಿ ಈ ಸ್ಥಳದಲ್ಲಿ ನೆಲೆಸುವುದಾಗಿ ಹೇಳಿದರು.
ಶಂಖ- ಚಕ್ರ ತೀರ್ಥದಲ್ಲಿ ಮಿಂದರೆ ಸಮೃದ್ಧಿ ಪ್ರಾಪ್ತಿ :
ಈ ವಿಗ್ರಹವಿದ್ದ ಸ್ಥಳವು ಕೂಟ ಕ್ಷೇತ್ರದಲ್ಲಿದೆ. ಇಲ್ಲಿನ ನರಸಿಂಹನು ಸಾಲಿಗ್ರಾಮ ಶಿಲೆಯಲ್ಲಿರುವ ಕಾರಣಕ್ಕೆ ಈ ಸ್ಥಳಕ್ಕೆ ಸಾಲಿಗ್ರಾಮ ಎಂಬ ಹೆಸರು ಬಂತು. ಭಕ್ತರು ಸಾಲಿಗ್ರಾಮ ವಿಗ್ರಹದ ಪೂಜೆ ಮಾಡುತ್ತಾ ತಮ್ಮ ಇಷ್ಠಾರ್ಥಗಳನ್ನು ನೆರವೇರಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಚಕ್ರ ತೀರ್ಥದಲ್ಲಿ ಮಿಂದರೆ ಎಲ್ಲಾ ರೀತಿಯ ರೋಗ ಪರಿಹಾರ ಹಾಗೂ ಶತ್ರುಭಯ ನಿವಾರಣೆಯಾಗುವುದೆಂಬ ಪ್ರತೀತಿಯಿದೆ. ಅದೇ ರೀತಿ ಶಂಖ ತೀರ್ಥದಲ್ಲಿ ಸ್ನಾನ ಮಾಡಿದರೆ ಎಲ್ಲಾ ರೀತಿಯ ಪಾಪಗಳು ನಾಶವಾಗುತ್ತದೆಂಬ ನಂಬಿಕೆಯಿದೆ. ಎರಡು ತೀರ್ಥದಲ್ಲಿ ಸ್ನಾನ ಮಾಡಿ ಶ್ರೀ ಗುರುನರಸಿಂಹನನ್ನು ಭಕ್ತಿಯಿಂದ ಪೂಜೆ ಮಾಡಿದರೆ ಅವರು ಸಮೃದ್ಧಿಯಿಂದ ಬಾಳಿ ಬದುಕುತ್ತಾರೆ ಎಂದು ತಿಳಿಸಲಾಗಿದೆ.
ಸ್ಕಂದ ಪುರಾಣದ ಸಹ್ಯಾದ್ರಿ ಕಾಂಡ ಅಧ್ಯಾಯದಲ್ಲಿ, ಗೋಧಾವರಿ ನದಿಪಾತ್ರದಲ್ಲಿನ ಅಹಿಛಾತ್ರದಲ್ಲಿನ ರಾಜ ಲೋಕಾದಿತ್ಯ ತಮ್ಮ ಆಳ್ವಿಕೆಯಲ್ಲಿ ಎಲ್ಲರಿಗೂ ಏಳ್ಗೆ, ಸಮೃದ್ಧಿಗಾಗಿ ಸಾಲಿಗ್ರಾಮಕ್ಕೆ ತೆರಳಿ ಮಹಾಯಜ್ಞ ನಡೆಸುವಂತೆ ಭಟ್ಟಾಚಾರ್ಯ ಹಾಗೂ ಇತರ ಬ್ರಾಹ್ಮಣ ಕುಟುಂಬಗಳಿಗೆ ಆದೇಶಿಸುತ್ತಾನೆ. ರಾಜ ಲೋಕಾದಿತ್ಯನ ಸೂಚನೆಯಂತೆ ಭಟ್ಟಾಚಾರ್ಯನ ನೇತೃತ್ವದಲ್ಲಿ ಬ್ರಾಹ್ಮಣರು ಅತಿರಥದಂತಹ ಮಹಾಯಜ್ಞಗಳನ್ನು ನಡೆಸಲು ನಿರ್ಧರಿಸುತ್ತಾರೆ. ಈ ಈ ಯಜ್ಞ ಆರಂಭಕ್ಕೂ ಮುನ್ನ ಯಾವುದೇ ವಿಘ್ನಗಳು ಬಾರದಂತೆ ತಡೆಯಲು ಗಣಪತಿ ದೇವರನ್ನು ಪ್ರಾರ್ಥಿಸಿ ಆತನ ಆಶೀರ್ವಾದ ಪಡೆಯುತ್ತಾರೆ. ಬಳಿಕ ಯಜ್ಞಯಾಗಾದಿಗಳನ್ನು ಈ ಕ್ಷೇತ್ರದಲ್ಲಿ ನೆರವೇರಿಸುತ್ತಾರೆ.
ಶತ್ರುಗಳಿಲ್ಲದ ಪುಣ್ಯ ಸ್ಥಳ ಸಾಲಿಗ್ರಾಮ :
ಭಟ್ಟಾಚಾರ್ಯರು ಶ್ರೀ ಕ್ಷೇತ್ರಕ್ಕೆ ಬಂದಾಗಲೇ ಆನೆ ಮತ್ತು ಸಿಂಹಗಳು ಯಾವುದೇ ಕಾದಾಟವಿಲ್ಲದೆ ಒಟ್ಟಿಗೆ ಬಾಳಿ ಬದುಕುತ್ತಿದ್ದಿದ್ದನ್ನು ಗಮನಿಸಿದ್ದರು. ಅವರ ಧ್ಯಾನದಲ್ಲೇ ಈ ವಿಚಾರವು ಗೋಚರವಾಗಿತ್ತು. ಹೀಗಾಗಿ ಈ ಸ್ಥಳವನ್ನು “ಶತ್ರುತ್ವ ವಿಲ್ಲದ ಸ್ಥಳ” ಎಂದು ಕರೆದರು. ಹೀಗಾಗಿ ಇಂದಿಗೂ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಗಣೇಶ ಹಾಗೂ ನರಸಿಂಹ ವಿಗ್ರವಿರುವುದನ್ನು ಕಾಣಬಹುದು. ಶ್ರೀ ನರಸಿಂಹ ಮೂರ್ತಿಯು ಪಶ್ಚಿಮಾಭಿಮುಖವಾಗಿದ್ದು, ವಿಗ್ರಹದ ಬಲಗೈಯಲ್ಲಿ ಚಕ್ರ ಹಾಗೂ ಎಡಗೈನಲ್ಲಿ ಶಂಖವಿದೆ.
ತನ್ನ ಸಾಮ್ರಾಜ್ಯದ ಏಳ್ಗೆಗಾಗಿ ಯಜ್ಞ ಯಾಗಾದಿಗಳನ್ನು ಭಟ್ಟಾಚಾರ್ಯರ ಸಂಗಡ ನೆರವೇರಿಸಿದ ಬ್ರಾಹ್ಮಣ ಕುಟುಂಬಕ್ಕೆ ಇಲ್ಲಿನ 14 ಗ್ರಾಮಗಳನ್ನು ನೀಡಿ, ಅವರನ್ನು ಇಲ್ಲೇ ಉಳಿದು ಯಜ್ಞ ಯಾಗಾದಿಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಆಜ್ಞಾಪಿಸುತ್ತಾರೆ. ಅದರಂತೆ ಭಟ್ಟಾಚಾರ್ಯರು ತಾವು ಬಂದ ಅಹಿಛಾತ್ರ ಸ್ಥಳಕ್ಕೆ ವಾಪಸ್ ಆಗುವಾಗ ಮಹಾರಾಜರ ಆಜ್ಞೆಯನ್ನು ಪಾಲಿಸುವಂತೆ ಸೂಚನೆ ನೀಡುತ್ತಾರೆ, ಅಲ್ಲದೆ ನರಸಿಂಹ ದೇವರನ್ನು ಇನ್ನು ಮುಂದೆ ಗುರುವಾಗಿ ಹಾಗೂ ದೇವರು ಈ ಎರಡೂ ವಿಧದಲ್ಲಿ ಪೂಜಿಸುವಂತೆ ಹೇಳುತ್ತಾರೆ. ಅಂದಿನಿಂದ ಈತನಕ ಕೂಟ ಬ್ರಾಹ್ಮಣರು ಶ್ರೀ ನರಸಿಂಹನನ್ನು ಗುರು ಹಾಗೂ ದೇವರು ಎಂದು ಶ್ರಾದ್ಧಾ ಭಕ್ತಿಯಿಂದ ನಂಬಿ ಪೂಜಿಸಿಕೊಂಡು ಬರುತ್ತಿದ್ದಾರೆ.