ನವದೆಹಲಿ, (www.bengaluruwire.com) : ಮೋಟಾರು ಪ್ರಯಾಣಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಬಹು ಪ್ರಮುಖ ವಿಷಯವೊಂದನ್ನು ತಿಳಿಸಿದ್ದಾರೆ.
ವಾಹನದಲ್ಲಿ 8 ಪ್ರಯಾಣಿಕರವರೆಗೆ ಹೊತ್ತೊಯ್ಯುವ ವಾಹನಗಳಲ್ಲಿ ಪ್ಯಾಸೆಂಜರ್ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಖಡ್ಡಾಯವಾಗಿ ಕನಿಷ್ಠ 6 ಏರ್ ಬ್ಯಾಗ್ಸ್ (Airbags) ಗಳನ್ನು ಅಳವಡಿಸುವ ಸಾಮಾನ್ಯ ಶಾಸನಬದ್ಧ ನಿಯಮಾವಳಿ ಕರಡು ಅಧಿಸೂಚನೆ (Draft GSR Notification) ಗೆ ಒಪ್ಪಿಗೆ ನೀಡಿದ್ದಾಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹೆದ್ದಾರಿ ಸಚಿವಾಲಯ ಈಗಾಗಲೇ 2019ರ ಜುಲೈ 1 ರಂದು ಪ್ರತಿ ಮೋಟಾರು ವಾಹನದಲ್ಲೂ ಚಾಲಕ ಕೂರುವ ಭಾಗದಲ್ಲಿ ಏರ್ ಬ್ಯಾಗ್ ಅಳವಡಿಸುವುದನ್ನು ಈ ಹಿಂದೆ ಖಡ್ಡಾಯಗೊಳಿಸಿತ್ತು. ಇದೇ ರೀತಿ ಈ ವರ್ಷ ಜ.01 ರಿಂದ ಡ್ರೈವರ್ ಪಕ್ಕ ಮುಂದೆ ಮೋಟಾರು ವಾಹನದಲ್ಲಿ ಕೂರುವ ಸಹ ಪ್ರಯಾಣಿಕರ ಆಸನದ ಮುಂಭಾಗ ಏರ್ ಬ್ಯಾಗ್ ಅಳವಡಿಸುವಂತೆ ನಿಯಮ ರೂಪಿಸಿತ್ತು.
ಮೋಟಾರು ವಾಹನದಲ್ಲಿ ಮುಂಭಾಗ ಹಾಗೂ ಪಾರ್ಶ್ವ ಭಾಗದಲ್ಲಿ ಡಿಕ್ಕಿ(collisions)ಯಾದಾಗ ವಾಹನದ ಹಿಂದೆ ಮತ್ತು ಮುಂದೆ ಕುಳಿತ ಪ್ರಯಾಣಿಕರಿಗೆ ಆಗುವ ಹಾನಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನು ಮುಂದೆ 4 ಹೆಚ್ಚುವರಿ ಏರ್ ಬ್ಯಾಗ್ಸ್ ಗಳನ್ನು ಎಂ1 ವರ್ಗದ ವಾಹನ (M1 vehicle category)ಗಳಲ್ಲಿ ಅಳವಡಿಸುವುದನ್ನು ಖಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ದೇಶಾದ್ಯಂತ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮೋಟಾರು ವಾಹನದಲ್ಲಿ ತೆರಳುವವರ ಜೀವರಕ್ಷಣೆಗಾಗಿ ಯಾವುದೇ ಮಾದರಿಯ ಅಥವಾ ಬೆಲೆಯ ಕಾರು ಹಾಗೂ ಮತ್ತಿತರ ಗಾಡಿಗಳಲ್ಲಿ ಏರ್ ಬ್ಯಾಗ್ ಅಳವಡಿಸುವುದನ್ನು ಖಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
ಒಂದೊಂದು ಏರ್ ಬ್ಯಾಗ್ ಗಳ ಅಳವಡಿಕೆಗೆ 35 ರಿಂದ 40 ಸಾವಿರ ರೂ. ಆಗುತ್ತದೆ. ಸಾಮಾನ್ಯ ಕಾರು ಅಥವಾ ಇನ್ನಿತರ ಮೋಟಾರು ವಾಹನಗಳಲ್ಲಿ ಡ್ರೈವರ್ ಸೀಟು ಅಲ್ಲದೆ ಒಟ್ಟಾರೆ 6 ಏರ್ ಬ್ಯಾಗುಗಳನ್ನು ಹಾಕಿದರೆ ವಾಹನ ದರ ಮತ್ತಷ್ಟು ದುಬಾರಿಯಾಗಲಿದೆ. ಕೋವಿಡ್ ಸಾಂಕ್ರಾಮಿಕದಿಂದ ಬಾಡಿಗೆ ವಾಹನ ಓಡಿಸುವವರು ಹಾಗೂ ಸಾಮಾನ್ಯ ಜನರಿಗೆ ಮತ್ತೆ ಬರೆ ಹಾಕಿದಂತಾಗುತ್ತದೆ ಎಂದು ಹೇಳುತ್ತಾರೆ ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ.
2019 ಇಸವಿಯಲ್ಲಿ ದೇಶಾದ್ಯಂತ 4,37,396 ರಸ್ತೆ ಅಪಘಾತಗಳಾಗಿವೆ. ವಾಹನದಲ್ಲಿ ಪ್ರಯಾಣಿಸುವವರ ಪ್ರಾಣರಕ್ಷಣೆಯಲ್ಲಿ ಏರ್ ಬ್ಯಾಗ್ ಪಾತ್ರ ಪ್ರಮುಖವಾಗಿರುವುದನ್ನು ತಳ್ಳಿಹಾಕುವಂತಿಲ್ಲ.