ಬೆಂಗಳೂರು, (www.bengaluruwire.com) : ಕೋವಿಡ್ ಸೋಂಕು ದಿನೇ ದಿನೇ ಏರಿಕೆಯಾಗಿರುವ ಹೊತ್ತಿನಲ್ಲೇ ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ ವಿಧಿಸಿರುವ ಹಿನ್ನಲೆಯಲ್ಲಿ ಈ ಬಾರಿ ಸಂಕ್ರಾಂತಿ ಖರೀದಿ ಭರಾಟೆಗೆ ತಣ್ಣೀರು ಎರೆಚಿದಂತಾಗಿದೆ. ಈ ಬಾರಿ ಸಂಕ್ರಾಂತಿ ಹಬ್ಬ ಜನವರಿ 14ರ ಬದಲಾಗಿ 15ನೇ ತಾರೀಖು ಶನಿವಾರ ಬಂದಿದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಕಾರಣ ಸಂಕ್ರಾಂತಿ ಹಬ್ಬದ ಸಂಭ್ರಮ ಅಡ್ಡಿಯಾಗಿದೆ.
ತಿಥಿಯ ಪ್ರಕಾರ ಉತ್ತರಾಯಣದ ಪುಣ್ಯಕಾಲ ಜ.15ರಂದು ಬಂದಿರುವ ಕಾರಣ ಸಂಕ್ರಾಂತಿ ಹಬ್ಬದ ಆಚರಣೆ ಅಂದೇ ಆಚರಿಸಲಾಗುತ್ತಿದೆ ಎಂದು ರಾಜ್ಯ ಮುಜರಾಯಿ ಇಲಾಖೆ ತಿಳಿಸಿದೆ . ಆದರೆ ಕೇರಳ ಶಬರಿಮಲೆ ದೇವಸ್ಥಾನದಲ್ಲಿ ಮಕರಜ್ಯೋತಿ ಗೋಚರ ಜ.14ರಂದು ಎಂದು ಶಬರಿಮಲೆ ದೇವಸ್ಥಾನದ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಸಂಕ್ರಾಂತಿ ಹಬ್ಬಕ್ಕಾಗಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಟನ್ ಗಟ್ಟಲೆ ಕಬ್ಬು, ಅವರೆಕಾಯಿ, ಕಡಲೆಕಾಯಿ, ಗೆಣಸು ಆಗಮಿಸಿದ್ದರೂ ಕರೋನಾ, ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ಜನರ ಖರೀದಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ತರಕಾರಿ, ಹೂವು- ಹಣ್ಣು, ಧವಸ ಧಾನ್ಯಗಳ ಬೆಲೆ ತೀವ್ರವಾಗಿ ಏರಿಕೆಯಾಗದಿದ್ದರೂ ಜನರು ಮಾರುಕಟ್ಟೆಗೆ ಆಗಮಿಸುತ್ತಿರುವ ಸಂದರ್ಭಗಳು ಕಡಿಮೆಯಾಗಿದೆ. ಕೆ.ಆರ್.ಮಾರ್ಕೇಟ್, ಮಲ್ಲೇಶ್ವರ, ಗಾಂಧಿಬಜಾರ್, ಯಶವಂತಪುರ, ಮಡಿವಾಳ, ಬಸವನಗುಡಿ, ವಿಜಯನಗರ, ಜಯನಗರ, ಕೆ.ಆರ್.ಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಸುಗ್ಗಿಗಾಗಿ ಅಗತ್ಯ ಹೂವು, ಹಣ್ಣು, ತರಕಾರಿ, ಕಬ್ಬು, ಬಾಳೆದಿಂಡು ಮತ್ತಿತರ ವಸ್ತುಗಳು ಈಗಾಗಲೇ ಆಗಮಿಸಿದ್ದು, ಹಬ್ಬದ ದಿನವಾದ ಜ.15ರಂದು ವೀಕೆಂಡ್ ಕರ್ಫ್ಯೂ ಕಾರಣಕ್ಕೆ ಬೆಂಗಳೂರಿನ ಜನತೆ ಇಂದು ಮತ್ತು ನಾಳೆಯೇ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಖರೀದಿಗೆ ತೆರಳುತ್ತಿದ್ದಾರೆ.
ಕೆ.ಆರ್.ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹೂವಿನ ಸಗಟು ದರ ಪ್ರತಿ ಕೆ.ಜಿ.ಗೆ ಈ ರೀತಿಯಿದೆ :
ಸೇವಂತಿಗೆ ಹೂವು | 300 ರೂ. |
ಮಲ್ಲಿಗೆ ಮೊಗ್ಗು | 1,200 ರೂ. |
ಕನಕಾಂಬರ | 800 ರೂ. |
ಸುಗಂಧರಾಜ | 60 ರೂ. |
ಕಾಕಡ | 500 ರೂ. |
ಗುಲಾಬಿ ಹೂವು | 100 ರೂ. |
ಹೂವಿನ ಸಗಟು ದರ ಇದಾಗಿದ್ದು, ಚಿಲ್ಲರೆದರವು 20 ರೂ. ನಿಂದ 50 ರೂ.ಗಳ ತನಕ ಹೆಚ್ಚಿಗೆ ಇರಲಿದೆ. ಕಳೆದ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.
“ಹೋದವರ್ಷ ಜನವರಿ 2021ರ ಸಂಕ್ರಾಂತಿ ಹಬ್ಬದಲ್ಲಿ ಕರೋನಾ ಸೋಂಕು ಕಡಿಮೆಯಾಗಿತ್ತು. ಹೀಗಾಗಿ ಹೂವಿನ ವ್ಯಾಪಾರ ಚೆನ್ನಾಗಿತ್ತು. ಆದರೆ ಈ ಬಾರಿ ಕರೋನಾ ಸೋಂಕಿನ ಹಿನ್ನಲೆಯಲ್ಲಿ ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಹಾಕಿರುವ ಕಾರಣ ಜನರು ಮಾರುಕಟ್ಟೆಯತ್ತ ಆಗಮಿಸುತ್ತಿಲ್ಲ. ಹಬ್ಬದ ರಷ್ ಶೇ.50ರಷ್ಟು ಕಡಿಮೆಯಾಗಿದೆ. ಪ್ರತಿದಿನ ಹೂವು ಕಟ್ಟಿ ಮಾರುವ ಗ್ರಾಹಕರಷ್ಟೇ ಮಾರುಕಟ್ಟೆಗೆ ಬಂದು ಹೂವು ಕೊಂಡೊಯ್ದು ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ವ್ಯಾಪಾರ ಡಲ್ ಆಗಿದೆ.”
– ಜಿ.ಎನ್.ದಿವಾಕರ್, ಅಧ್ಯಕ್ಷರು, ಬೆಂಗಳೂರು ಹೂವು ವ್ಯಾಪಾರಿಗಳ ಸಂಘ, ಕೆ.ಆರ್.ಮಾರ್ಕೇಟ್
ಇನ್ನು ವಿವಿಧ ರೀತಿಯ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಬೆಲೆ ಈ ಕೆಳಕಂಡಂತಿದೆ :
ಜೋಡಿ ಕಬ್ಬು | 150 ರಿಂದ 250 ರೂ. |
ಬಾಳೆ ಕಂಬ ಜೋಡಿಗೆ | 80 ರಿಂದ 100 ರೂ. |
ಬಾಳೆ ಎಲೆ ಒಂದಕ್ಕೆ | 2ರೂ. ನಿಂದ 10 ರೂ. |
ಬಾಳೆಹಣ್ಣು ಕೆ.ಜಿಗೆ | 60 ರೂ. |
ಸೇಬು | 120 ರೂ. ನಿಂದ 150 ರೂ. |
ಕಿತ್ತಳೆಹಣ್ಣು | 100 ರೂ. ನಿಂದ 120 ರೂ. |
ಟೊಮೊಟೋ | 30 – 40 ರೂ. |
ಬದನೆಕಾಯಿ | 40 – 60 ರೂ. |
ಅವರೆಕಾಯಿ | 70 – 80 ರೂ. |
ಕ್ಯಾರೇಟ್ | 50 – 80 ರೂ. |
ದೊಡ್ಡಮೆಣಸಿನಕಾಯಿ | 55- 80 ರೂ. |
ಹೂಕೋಸು | 25 – 50 ರೂ. |
ಹುರುಳಿಕಾಯಿ | 80 ರೂ. |
ಕೊತ್ತಂಬರಿ ಒಂದು ಕಟ್ಟು | 20 ರೂ. |
ಹಸಿಶುಂಠಿ ಕೆ.ಜಿ.ಗೆ | 10 – 12 ರೂ. |
ಹಸಿಮೆಣಸಿನಕಾಯಿ | 40 ರೂ. |
ಕುಂಬಳಕಾಯಿ | 30 – 60 ರೂ. |
ಸಂಕ್ರಾಂತಿ ಹಬ್ಬ ಅಂದರೆ ಕಬ್ಬು, ಅವರೆಕಾಯಿ, ಕಡಲೆಕಾಯಿ, ಗೆಣಸು ಹಾಗೂ ಎಳ್ಳು-ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ. ಆದರೆ ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಕಬ್ಬಿನ ಬೇಡಿಕೆ ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧಕ್ಕೆ ಅರ್ಧ ಕಡಿಮೆಯಾಗಿದೆ. ಈ ಬಾರಿ ಅಧಿಕ ಮಳೆಯಿಂದಾಗಿ ಕಬ್ಬಿನ ಇಳುವರಿ ಚೆನ್ನಾಗಿಯಾದರೂ, ಕಡಲೆಕಾಯಿ, ಅವರೆಕಾಯಿ ಬೆಳೆಗೆ ಹಾನಿ ಉಂಟಾಗಿದೆ. ಆದ್ದರಿಂದ ಉತ್ತಮ ಇಳುವರಿಯಿಲ್ಲ ಎಂದು ರೈತ ಸಂಘಟನೆಗಳು ಹೇಳುತ್ತಿವೆ.
“ಕರೋನಾ ಸೋಂಕಿನಿಂದಾಗಿ ರೈತರಿಗೆ ಉತ್ತಮ ಕಬ್ಬು ಬೆಳೆ ಬಂದರೂ, ಕಳೆದ ವರ್ಷಕ್ಕಿಂತ ಈ ವರ್ಷ ಕಬ್ಬಿಗೆ ಬೇಡಿಕೆ ಶೇಕಡ 50ರಷ್ಟು ಕಡಿಮೆಯಾಗಿದೆ. ಬೆಂಗಳೂರಿಗೆ ಸಾಮಾನ್ಯವಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತಿತರ ಕಡೆಗಳಿಂದ ಹಬ್ಬಕ್ಕಾಗಿ ಕಬ್ಬು ಪೂರೈಕೆಯಾಗುತ್ತದೆ. ಆದರೆ ಈಗ ಜನರಿಗೆ ಕರೋನಾ ಹಿನ್ನಲೆಯಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿ ಮಾಡಬೇಕಾ? ಅಥವಾ ಬೇಡವಾ? ಎಂಬ ಗೊಂದಲದಲ್ಲಿದ್ದಾರೆ. ಒಟ್ಟಾರೆ ಸಂಕ್ರಾಂತಿ ಹಬ್ಬದ ಕಳೆಯೇ ಇಲ್ಲದಂತಾಗಿದೆ. “
– ಕುರಬೂರು ಶಾಂತಕುಮಾರ್, ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ
ಸಂಕ್ರಾಂತಿ ಹಬ್ಬಕ್ಕೆ ಹಾಪ್ ಕಾಮ್ಸ್ ಸಂಕ್ರಾಂತಿ ಮೇಳ :
ಸಂಕ್ರಾಂತಿ ಹಬ್ಬದಲ್ಲಿ ಬೆಂಗಳೂರಿನ ಹಾಪ್ ಕಾಮ್ಸ್ ನಲ್ಲಿ ರೈತರು ಬೆಳದ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಸಂಕ್ರಾಂತಿ ಮೇಳ ಆಯೋಜಿಸಲಾಗುತ್ತಿತ್ತು. ಕೋವಿಡ್ ಸೋಂಕು ತೀವ್ರವಾಗಿ ಹೆಚ್ಚಾಗಿರುವ ಕಾರಣದಿಂದ ಹಾಪ್ ಕಾಮ್ಸ್ ಮೇಳವನ್ನು ರದ್ದು ಮಾಡಿ, ಸಂಕ್ರಾಂತಿ ಹಬ್ಬಕ್ಕೆ ಜನರು ಬಳಸುವ ಉತ್ಪನ್ನಗಳನ್ನೇ ವಿಶೇಷ ದರಕ್ಕೆ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮಾರಲು ಅಗತ್ಯ ವ್ಯವಸ್ಥೆ ಕಲ್ಪಿಸಿದೆ.
ಹಾಪ್ ಕಾಮ್ಸ್ ನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಲ್ಲಿನ ಮಳಿಗೆಗಳಲ್ಲಿ ಮಾರಲಾಗುತ್ತಿರುವ ಉತ್ಪನ್ನಗಳು ಮತ್ತು ಬೆಲೆ ವಿವರ ಕೆ.ಜಿಗೆ ಈ ಮುಂದಿನಂತಿದೆ : ಅವರೆಬೇಳೆ (ಬಿಡಿಸಿದ್ದು) 270ರೂ., ಒಣಕೊಬ್ಬರಿ 250 ರೂ., ಎಳ್ಳು-ಬೆಲ್ಲ ಮತ್ತಿತರ ಮಿಶ್ರಣ – 190 ರೂ., ಕಡಲೆಕಾಯಿ 99 ರೂ., ಗೆಣಸು 40 ರೂ., ಅವರೆಕಾಯಿ 70 ರೂ., ಕಬ್ಬು 40 (ಒಂದಕ್ಕೆ) ರೂ., ಏಲಕ್ಕಿಬಾಳೆ 44ರೂ., ಪಚ್ಚಬಾಳೆ 22 ರೂ. ಎಂದು ನಿಗಧಿಪಡಿಸಿದೆ.
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ ದವಸ ಧಾನ್ಯಗಳ ಬೆಲೆ ವಿವರ :
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ದವಸ ಧಾನ್ಯಗಳ ಹೋಲ್ ಸೇಲ್ ಬೆಲೆ ಪ್ರತಿ ಕೆ.ಜಿಗೆ ಈ ಮುಂದಿನಂತಿದೆ : ತೊಗರಿಬೇಳೆ 85 ರೂ. ನಿಂದ 100 ರೂಪಾಯಿ, ಕಡ್ಲೆಬೇಳೆ 65- 75, ಹೆಸರುಬೇಳೆ 90- 95, ಉದ್ದಿನಬೇಳೆ 90- 120 ರೂ., ಹೆಸರುಕಾಳು 85- 90 ರೂ., ಕಡ್ಲೆಕಾಳು 64 ರೂ., ಕಾಬೂಲ್ ಕಡಲೆ 100 ರೂ., ಹುರಿಗಡಲೆ 75- 80ರೂ., ಕಡ್ಲೆಕಾಯಿ ಬೀಜ 115- 130 ರೂ., ಸಕ್ಕರೆ 36- 38 ರೂ. ಹಾಗೂ ಬೆಲ್ಲ 40 ರೂ. ನಷ್ಟಿದೆ.
“ಕಳೆದ ಎರಡು ವರ್ಷಗಳಿಂದ ಧವಸ ಧಾನ್ಯಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಕಳೆದ ಎರಡು ತಿಂಗಳನಿಂದ ಮದುವೆ, ಮುಂಜಿ ಮತ್ತಿತರ ಶುಭಕಾರ್ಯಗಳಿಂದಾಗಿ ಕ್ಯಾಟರಿಂಗ್ ಕ್ಷೇತ್ರ ಚೇತರಿಸಿಕೊಂಡಿತ್ತು. ಅದೇ ರೀತಿ ಹೋಟೆಲ್ ಗಳಲ್ಲೂ ವ್ಯಾಪಾರ ಸುಧಾರಿಸುತ್ತಾ ಬಂದಿತ್ತು. ಇದೀಗ ಸರ್ಕಾರ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ವಿಧಿಸಿದ್ದರಿಂದಾಗಿ ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರ ಕಡಿಮೆಯಾಗಿದೆ. ಮೊದಲ ಎರಡು ಕರೋನಾ ಅಲೆಯಿಂದ ಶೇ.20ರಷ್ಟು ವ್ಯಾಪಾರಸ್ಥರು ತಮ್ಮ ವ್ಯಾಪಾರ ಬಂದ್ ಮಾಡಿದ್ದಾರೆ. ಮೂರನೇ ಅಲೆಯಿಂದ ವ್ಯಾಪಾರದ ಮೇಲೆ ಮತ್ತೆ ತೊಂದರೆಯಾಗದಿದ್ದರೆ ಅಷ್ಟೆ ಸಾಕು.”
– ರಮೇಶ್ ಚಂದ್ರ ಲಹೋಟಿ, ಅಧ್ಯಕ್ಷರು, ಯಶವಂತಪುರ ಎಪಿಎಂಸಿ ಒಕ್ಕೂಟ
ಒಟ್ಟಾರೆ ಈ ಬಾರಿಯ ಸಂಕ್ರಾಂತಿ ಹಬ್ಬದ ಸಡಗರಕ್ಕೆ ಕರೋನಾ ಸೋಂಕು ವಕ್ಕರಿಸಿ ಜನರ ಸಂಭ್ರಮಕ್ಕೆ ಹಾಗೂ ಹಬ್ಬದ ವಸ್ತುಗಳ ಖರೀದಿಯ ಉತ್ಸಾಹಕ್ಕೆ ಕೊಡಲಿಪೆಟ್ಟು ಕೊಟ್ಟಿದೆ. ಸಾಧ್ಯವಾದಷ್ಟು ಜನರು ಬೆಂಗಳೂರಿನ ದೊಡ್ಡ ಮಾರುಕಟ್ಟೆಗಳಿಗೆ ಹೆಚ್ಚಾಗಿ ಖರೀದಿಗೆ ಬರುವುದಕ್ಕಿಂತ ಮನೆ ಸುತ್ತಮುತ್ತಲಿನ ಅಂಗಡಿ, ಬೀದಿ ವ್ಯಾಪಾರಿಗಳ ಬಳಿಯೇ ಹೂವು, ಹಣ್ಣು, ಹಬ್ಬದ ಸಾಮಗ್ರಿಗಳನ್ನು ಖರೀದಿಸಲು ಒಲವು ತೋರಿಸಿದ್ದಾರೆ. ಹಬ್ಬದ ದಿನವಾದ ಜ.15ರಂದು ವೀಕೆಂಡ್ ಕರ್ಫ್ಯೂ ಕೂಡ ಸಡಗರದಿಂದ ತಮ್ಮ ಬಂದು ಬಾಂಧವರು, ಸ್ನೇಹಿತರ ಮನೆಗಳಿಗೆ ತೆರಳಿ ಹಬ್ಬ ಆಚರಿಸಲು ತೊಡಕಾಗಿದೆ.