“ನನಗೆ ಬೇಕಾಗಿರುವುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಹುದು.”
ಸ್ವಾಮಿ ವಿವೇಕಾನಂದರ ವಿದ್ಯುತ್ ಹಾಗೆಯೇ ವಿದ್ವತ್ ನುಡಿಗಳನ್ನು ಕೇಳಿದವರ ಹೃದಯ ಮತ್ತು ಮನಸ್ಸಿನಲ್ಲಿ ಉತ್ಸಾಹ ಪುಟಿದೇಳುತ್ತದೆ. ಅವರು ಬದುಕಿದ್ದು 39 ವರ್ಷವಾದರೂ ಅವರ ತೂಕದ ಮಾತುಗಳು, ಹಿಂದೂ ಧರ್ಮಕ್ಕೆ ನೀಡಿದ ಹೊಸ ಭಾಷ್ಯ ಸರ್ವಕಾಲಕ್ಕೂ ಅನ್ವಯವಾಗುವಂತಿದೆ.
ದೇಶವು ಜನವರಿ 12 ರ ಅವರ ಜನ್ಮದಿನವನ್ನು ಯುವದಿನವನ್ನಾಗಿ ಆಚರಿಸುತ್ತಿದೆ. ತಮ್ಮ ಬದುಕು, ಬರಹ, ಪ್ರಖಾಂಡ ಮಾತುಗಳ ಮೂಲಕ ಇಡೀ ಜಗತ್ತಿನ ಜಗತ್ತಿಗೇ ಸಿಡಿಲನುಡಿಯ ಅಮೃತವನ್ನು ನೀಡಿದ ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸುವ ದಿನವಾಗಿದೆ.
19ನೇ ಶತಮಾನದ ಶ್ರೇಷ್ಠ ಸಂತರಾದ ಶ್ರೀ ರಾಮಕೃಷ್ಣ ಪರಮಹಂಸರ ಪ್ರಧಾನ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರು ಬದುಕಿದ್ದ ಅಲ್ಪ ಅವಧಿಯಲ್ಲೇ ತಮ್ಮ ಧ್ಯಾನ, ಆಧ್ಯಾತ್ಮ, ವೈಚಾರಿಕತೆ, ಮಾನವತೆ ಬಗೆಗಿನ ನಿಲುವು, ಹಿಂದೂ ಧರ್ಮದ ಸಾರವನ್ನು ತಮ್ಮದೇ ಧಾಟಿಯ ವೀರವಾಣಿಯಲ್ಲಿ ಪ್ರವಚನದ ಮೂಲಕ ವಿಶ್ವದ ಕೋಟ್ಯಾಂತರ ಜನರನ್ನು ಸೆಳೆದು ಅವರೆಲ್ಲ ಆಧ್ಯಾತ್ಮ ಮತ್ತು ಮನುಕುಲದ ಸೇವೆಗೆ ಟೊಂಕ ಕಟ್ಟಿ ನಿಲ್ಲುವಂತೆ ಹುರಿದುಂಬಿಸುವ ಪ್ರೇರಕ ಶಕ್ತಿಯಾಗಿದ್ದರು.
ಸ್ವಾಮಿ ವಿವೇಕಾನಂದರು ಉತ್ತರ ಕೋಲ್ಕತಾದ ಶ್ರೀಮಂತ ಕುಟುಂಬದಲ್ಲಿ 12 ಜನವರಿ 1863ರಲ್ಲಿ ಜನಿಸಿದರು. ಅವರ ಹಿಂದಿನ ಹೆಸರು ನರೇಂದ್ರನಾಥ. ತಂದೆ ವಿಶ್ವನಾಥ ದತ್ತ ಹಾಗೂ ತಾಯಿಯ ಹೆಸರು ಭುವನೇಶ್ವರಿ ಸುಪುತ್ರನಾಗಿ ಜನಿಸಿದ ನರೇಂದ್ರರು ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರು ಪಡೆದರು.
“ಸಮಾಧಿ” ಪದ ಕಲ್ಪಿಸಿದ ಅಪೂರ್ವ ಭೇಟಿ :
ಕೋಲ್ಕತಾದ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ವಶಾಸ್ತ್ರ ಅಧ್ಯನ ಮಾಡಿದರು. ಆ ಸಂದರ್ಭದಲ್ಲಿ ನರೇಂದ್ರರಿಗೆ ಶ್ರೀ ರಾಮಕೃಷ್ಣರ ಮೊದಲ ಪರಿಚಯವನ್ನು ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಾಯಿತು. ಹೆಸ್ಟಿಯವರು, ವಿಲಿಯಮ್ ವುಡ್ಸ್ ವರ್ತ್ ಅವರ ‘ದ ಎಕ್ಸ್ ಕರ್ಶನ್’ ಎಂಬ ಕವಿತೆಯಲ್ಲಿನ “ಸಮಾಧಿ” ಪದವನ್ನು ವಿವರಿಸುವಾಗ ಸಮಾಧಿ ಪದದ ನೈಜ ಅರ್ಥ ತಿಳಿಯಲು ದಕ್ಷಿಣೇಶ್ವರದಲ್ಲಿನ ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿಯಾಗುವಂತೆ ತರಗತಿಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು. ಇವರ ಸಲಹೆ ಮೇರೆಗೆ ನರೇಂದ್ರೂ ಸೇರಿದಂತೆ ಹಲವು ವಿದ್ಯಾರ್ಥಿಗಳು ಪರಮಹಂಸರನ್ನು ಕಾಣಲು ಉತ್ಸುಕರಾಗಿದ್ದರು.
1881 ಇಸವಿಯಲ್ಲಿ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು. ಆನಂತರ ವಿವೇಕಾನಂದರು ಹಿಡಿದ ಹಾದಿ ಆಧ್ಯಾತ್ಮಿಕತೆಯ ಹಾದಿ. ವಸಾಹತುಶಾಹಿ ಅವಧಿಯ ಭಾರತದಲ್ಲಿ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಶನ್ ಸ್ಥಾಪಿಸಿದ ವಿವೇಕಾನಂದರು ದೇಶದ ಜನರಲ್ಲಿ ರಾಷ್ಟ್ರೀಯತೆಯ ಕಿಚ್ಚನ್ನು ಜಾಗೃತಗೊಳಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಶನ್ ತತ್ವಶಾಸ್ತ್ರ ಹಾಗೂ ವೇದಾಂತ ಸಂಬಂಧಿತ ವಿಷಯಗಳನ್ನು ಬೋಧಿಸುವ ಪ್ರಮುಖ ಕೇಂದ್ರಗಳಾದವು.
ಹಿಂದೂ ಧರ್ಮದಲ್ಲಿದ್ದ ಅನಿಷ್ಠ ಪದ್ಧತಿಗಳಾದ ಮಡಿ, ಮೈಲಿಗೆ, ಜಾತಿಯತೆ ಹಾಗೂ ಕಂದಾಚಾರಗಳ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸುತ್ತಲೇ ಹಿಂದೂಧರ್ಮದ ಅಂತಃಸತ್ವ, ಅದರ ಸಾರವನ್ನು ಇಡೀ ಜಗತ್ತಿಗೇ ತಮ್ಮದೇ ಆದ ಆಳವಾದ ವಿಚಾರಧಾರೆಯ ಮೂಲಕ ಪಸರಿಸಿದರು.
‘ಪೂರ್ವ ದೇಶದ ವಿಚಿತ್ರ ಧರ್ಮ’ :
ಚಿಕಾಗೋದಲ್ಲಿ 1893 ರಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ತಮ್ಮ ಭಾಷಣದ ಆರಂಭದಲ್ಲಿ “ಅಮೆರಿಕದ ಸಹೋದರ, ಸಹೋದರಿಯರೇ” ಎಂಬ ಸಂಬೋಧನೆ ಅಲ್ಲಿ ನೆರೆದಿದ್ದವರೆಲ್ಲರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಪಾಶ್ಚಿಮಾತ್ಯರು ಭಾರತದ ಬಗ್ಗೆ ಇದ್ದ ಅಭಿಪ್ರಾಯವನ್ನೇ ಬದಲಿಸಿ, ಹಿಂದೂಧರ್ಮದಲ್ಲಿದ್ದ ಅಮೂಲ್ಯ ಅಂಶಗಳನ್ನು ತಮ್ಮ ಪ್ರಖರ ಮಾತುಗಳ ಮೂಲಕ ತಿಳಿಹೇಳಿದರು. ಇದು ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಷಿಸಿತು.
ಈ ಸಮ್ಮೇಳನಕ್ಕಿಂತ ಮುಂಚೆ ‘ಪೂರ್ವ ದೇಶದ ವಿಚಿತ್ರ ಧರ್ಮ’ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಸಂಪ್ರದಾಯಗಳು, ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಅಭೂತಪೂರ್ವ ಭಾಷಣದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಗುರುತಿಸಲ್ಪಟ್ಟಿತು.
ಹಿಂದೂಧರ್ಮದ ಪುನರುತ್ಥಾನ :
ಹಿಂದೂಧರ್ಮದ ಪುನರುತ್ಥಾನಕ್ಕೆ ಹೊಸ ಭಾಷ್ಯ ಬರೆದ ಸ್ವಾಮಿ ವಿವೇಕಾನಂದರು ಜ್ಞಾನಯೋಗ, ಭಕ್ತಿ ಯೋಗ, ಕರ್ಮಯೋಗ ಹಾಗೂ ರಾಜಯೋಗ ಎಂಬ ಗ್ರಂಥಗಳನ್ನು ರಚಿಸಿದರು. ತತ್ವಶಾಸ್ತ್ರ ಹಾಗೂ ವೇದಾಂತ ಕುರಿತ ಅವರ ವಿಚಾರಧಾರೆಗಳು, ಆಲೋಚನೆಗಳು ಆ ವೀರಸನ್ಯಾಸಿಯ ಪ್ರವಚನಗಳಲ್ಲಿ, ಸ್ನೇಹಿತರು, ಶಿಷ್ಯರಿಗೆ ಬರೆದ ಪತ್ರಗಳಲ್ಲಿ, ಅವರು ಬರೆದ ಕವನಗಳಲ್ಲಿ, ಹಾಡುಗಳಲ್ಲಿ ಹಾಸು ಹೊಕ್ಕಾಗಿ ಕಂಡುಬರುತ್ತಿತ್ತು.
ಬೇಲೂರು ಮಠ
‘ಶಕ್ತಿಯೆಲ್ಲ ನಿಮ್ಮೊಳಗೇ ಇದೆ’ :
“ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವರು ಬದುಕಿಯೂ ಸತ್ತಂತೆ” ಎಂಬ ದಿವ್ಯ ನುಡಿಯನ್ನು ನುಡಿದ ವೀರಸನ್ಯಾಸಿ, “ಶಕ್ತಿಯೆಲ್ಲ ನಿಮ್ಮೊಳಗೇ ಇದೆ ; ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ” ಎಂದು ಹೇಳುತ್ತಲೇ ಕೋಟ್ಯಾಂತರ ಯುವ ಮನಸ್ಸುಗಳಲ್ಲಿ ಶಾಶ್ವತ ಸ್ಥಾನ ಪಡೆದ ಸ್ವಾಮಿ ವಿವೇಕಾನಂದರು 4ನೇ ಜುಲೈ 1902 ರಂದು ಬೇಲೂರು ಮಠದಲ್ಲಿ ಧ್ಯಾನಾಸಕ್ತರಾಗಿದ್ದಾಗಲೇ ಇಹಲೋಕದ ಪಯಣ ಮುಗಿಸಿದರು. ದೈಹಿಕವಾಗಿ ಸ್ವಾಮಿ ವಿವೇಕಾನಂದರು ಅಗಲಿದರೂ, ಅವರ ವಿಚಾರಧಾರೆ, ಕಿಡಿನುಡಿಗಳು, ಸ್ಪೂರ್ತಿದಾಯಕ ಮಾತುಗಳು ನೂರಾರು ವರ್ಷಗಳು ಕಳೆದರೂ ಗತಿಸಲಾರವು.