ಬೆಂಗಳೂರು, (www.bengaluruwire.com) : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವಾಕಾಂಕ್ಷೆ ಯೋಜನೆಯಾದ ಮಾನವ ಸಹಿತ ಗಗನಯಾನ (Human Space Programme – Gaganyan) ಕಾರ್ಯಕ್ರಮದಲ್ಲಿ ಬುಧವಾರ ಇಸ್ರೊ ಪಾಲಿಗೆ ಮಹತ್ವದ ದಿನ.
ಮಾನವ ಸಹಿತ ಗಗನಯಾನ ಯೋಜನೆಗೆ ಪ್ರಮುಖ ಅಡಿಗಲ್ಲಾದ ಕ್ರಯೋಜಿನಿಕ್ ಎಂಜಿನ್ (Cryogenic Engine), ಅರ್ಹತಾ ಪರೀಕ್ಷೆಯಲ್ಲಿ ಬುಧವಾರ ಯಶಸ್ಸು ಸಾಧಿಸಿದೆ. ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೊ ಪ್ರೊಪಲ್ಶನ್ ಕಾಂಪ್ಲೆಕ್ಸ್ (IPRC) ನಲ್ಲಿ ಸುಮಾರು 720 ಸೆಕೆಂಡ್ (12 ನಿಮಿಷ) ಗಳ ಕಾಲ ನಡೆದ ಎಂಜಿನ್ ಸಾಮರ್ಥ್ಯ ಪರೀಕ್ಷೆಯಲ್ಲಿ ಕ್ರಯೋಜಿನಿಕ್ ಎಂಜಿನ್, ಪರೀಕ್ಷೆಗೆ ನಿಗಧಿಪಡಿಸಿದ ಮಾನದಂಡಗಳನ್ನು ಪೂರೈಸಿದೆ ಎಂದು ಇಸ್ರೊ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಮಾನವ ಸಹಿತ ಗಗನಯಾನ ಯೋಜನೆಯಲ್ಲಿ ಜ.12 ರಂದು ನಡೆದ ಧೀರ್ಘಕಾಲೀನ ಪರೀಕ್ಷೆಯು ಪ್ರಮುಖವಾಗಿದ್ದು, ಗಗನಯಾನ ಯೋಜನೆಯಲ್ಲಿ ಕ್ರಯೋಜನಿಕ್ ಎಂಜಿನ್ ಬಳಕೆ ಮೇಲಿನ ಅವಲಂಬನೆ ಹಾಗೂ ಎಂಜಿನ್ ದೃಢತೆ ಬಗ್ಗೆ ಖಚಿತಪಡಿಸಿದೆ. ಕ್ರಯೋಜಿನಿಕ್ ಎಂಜಿನ್ ಇದೊಂದೇ ಪರೀಕ್ಷೆಯಲ್ಲದೆ ಇನ್ನು 4 ಪರೀಕ್ಷೆಗೆ ಒಳಪಡಲಿದ್ದು, ಒಟ್ಟಾರೆ 1810 (30 ನಿಮಿಷ) ಸೆಕೆಂಡ್ ತೀವ್ರ ರೀತಿಯ ಪರೀಕ್ಷೆಗೆ ಒಳಪಡಲಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಗಗನಯಾನ ಕಾರ್ಯಕ್ರಮದ ಎಂಜಿನ್ ಅರ್ಹತಾ ಪರೀಕ್ಷೆಯಲ್ಲಿ, ಮತ್ತೊಂದು ಎಂಜಿನ್ ಅನ್ನು ಸಹ ಎರಡು ಅಲ್ಪಕಾಲೀನ ಹಾಗೂ ಒಂದು ದೀರ್ಘಕಾಲೀನ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ವಿನ್ಯಾಸ ಹಂತ ದಾಟಿ ಪರೀಕ್ಷಾ ಹಂತ ಪ್ರಾರಂಭ :
ಇತ್ತೀಚೆಗಷ್ಟೆ ದೇಶದ ಜನರಿಗೆ ಹೊಸ ವರ್ಷದ ಶುಭಕೋರಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಕರೋನಾ ಸಂಕಷ್ಠ ಮಧ್ಯೆ ದೇಶದ ಬಾಹ್ಯಕಾಶ ರಂಗದಲ್ಲಿನ ಕಾರ್ಯಚಟುವಟಿಕೆಗಳ ಮೇಲಾದ ಪರಿಣಾಮಗಳು ಹಾಗೂ ಅದನ್ನು ಇಸ್ರೊ ಎದುರಿಸಿದ ರೀತಿಯನ್ನು ತಿಳಿಸಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಮಾನವ ಸಹಿತ ಗಗನಯಾನ ಯೋಜನೆಯಲ್ಲಿ ವಿನ್ಯಾಸ ಕಾರ್ಯಗಳು ಪೂರ್ಣಗೊಂಡಿದ್ದು, ವಿವಿಧ ರೀತಿಯ ಪರೀಕ್ಷಾ ಹಂತಕ್ಕೆ ಬಂದಿದ್ದಾಗಿ ಹೇಳಿದ್ದರು.
L110 ವಿಕಾಸ ಎಂಜಿನ್, ಕ್ರಯೋಜನಿಕ್ ಎಂಜಿನ್, ಗಗನಯಾನಿಗಳ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಮೋಟರ್ ಮತ್ತಿತರ ಯಂತ್ರಗಳ ಪರೀಕ್ಷೆ ನಡೆಯುತ್ತಿದೆ. ಎಸ್200 ಮೋಟಾರು ಕಾರ್ಯಕ್ಷತೆಯ ಪರೀಕ್ಷೆ ನಡೆಯಲಿದೆ ಎಂದು ಶಿವನ್ ತಿಳಿಸಿದ್ದರು. ಗಗನಯಾನದ ಬಳಿಕ ವ್ಯೋಮನೌಕೆ ವಾಪಸ್ ಭೂಮಿಗೆ ಆಗಮಿಸುವಾಗ ಬಾಹ್ಯಾಕಾಶಯಾನಿಗಳಿರುವ ಘಟಕ ಪ್ಯಾರಚೂಟ್ ನಿಂದ ಇಳಸುವ ಪರೀಕ್ಷೆ ಕಾರ್ಯ ಆರಂಭವಾಗಿದೆ.
75ನೇ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಮಾನವರಹಿತ ಗಗನಯಾನ :
ಗಗನಯಾನ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಗನಯಾತ್ರಿಗಳಿಗೆ ವಿದೇಶದಲ್ಲಿ ತರಬೇತಿ ಪೂರ್ಣವಾಗಿದೆ. ದೇಶೀಯವಾಗಿ ಈ ಕಾರ್ಯಕ್ರಮಕ್ಕೆಂದೇ ಸಮಗ್ರವಾಗಿ ತರಬೇತಿ ಯೋಜನೆ ಸಿದ್ಧಪಡಿಸಲಾಗಿದೆ. ನಿಗಧಿತ ಕಾರ್ಯ ನಿರ್ವಹಿಸಲು ಅಗತ್ಯವಾದ ತರಬೇತಿ ನೀಡುವ ಕಾರ್ಯ ಆರಂಭವಾಗಿದೆ. ದೇಶದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಪ್ರಾಯೋಗಿಕವಾಗಿ ಮಾನವ ರಹಿತ ಗಗನಯಾನ ಹಾರಿಬಿಡಲು ಸೂಚನೆಯಿದೆ. ಈ ನಿಟ್ಟಿನಲ್ಲಿ ನಿಗಧಿತ ಅವಧಿಯಲ್ಲಿ ಯೋಜನೆ ಕಾರ್ಯಗತಗೊಳಿಸಲು ಗಗನಯಾನ ಯೋಜನೆಯಲ್ಲಿ ಪಾಲ್ಗೊಂಡ ವಿವಿಧ ಸಂಸ್ಥೆಗಳು ಪ್ರಯತ್ನ ಮುಂದುವರೆಸಿವೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ತಮ್ಮ ಹೊಸವರ್ಷದ ಸಂದೇಶದಲ್ಲಿ ತಿಳಿಸಿದ್ದರು.