ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕರೋನಾ ರಣಕೇಕೆ ಮತ್ತೆ ಜೋರಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2020ರ ಫೆಬ್ರವರಿ ಮೊದಲನೆ ಅಲೆಯಿಂದ 2021ರ ಅಕ್ಟೋಬರ್ ಎರಡನೇ ಅಲೆಯವರೆಗೆ ಪಾಲಿಕೆಯು ನೂರು ಕೋಟಿಯಲ್ಲ, ಇನ್ನೂರು ಕೋಟಿಯಲ್ಲ ಬರೋಬ್ಬರಿ 880 ಕೋಟಿ ರೂ. ಹಣವನ್ನು ವ್ಯಯಿಸಿದ್ದು, ಮೇಲ್ನೋಟಕ್ಕೆ ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೋವಿಡ್ ಸೋಂಕು ಅದಾಗಿ ಅದು ಕಡಿಮೆಯಾಗಿದ್ದು ಬಿಟ್ಟರೆ, ಪರಿಣಾಮಕಾರಿಯಾಗಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಬಿಬಿಎಂಪಿ ಸರ್ಕಸ್ ಮಾಡಿದ್ರೂ ಸರಿಯಾದ ದಿಕ್ಕಿನಲ್ಲಿ ಆ ಪ್ರಯತ್ನ ಆಗಿರಲಿಲ್ಲ ಎಂದು ಸಾರ್ವಜನಿಕರು, ಸಂಘ ಸಂಸ್ಥೆಗಳು ಆರೋಪಿಸಿದ್ದವು. ಕೋವಿಡ್ ಸಾವು- ನೋವಿನ ಅಂಕಿ- ಅಂಶವನ್ನು ಗಮನಿಸಿದಾಗ ತಿಳಿದು ಬರುತ್ತದೆ. ಕಳೆದ ವರ್ಷ ಅಕ್ಟೋಬರ್ 31ರಂದು ಬಿಬಿಎಂಪಿ ಬಿಡುಗಡೆ ಮಾಡಿದ ಬುಲಿಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 16,282 ಸಾವುಗಳು ಸಂಭವಿಸಿದ್ದವು. ಆ ದಿನದವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 12,51,967 ಲಕ್ಷ ಜನರು ಕೋವಿಡ್ ಸೋಂಕಿನಿಂದ ಬಳಲಿದ್ದರು. 12.29 ಲಕ್ಷ ಜನರು ಕೋವಿಡ್ ಬಂದು ಗುಣಮುಖರಾಗಿದ್ದರು. 2020ನೇ ಇಸವಿ ಇದೇ ಅವಧಿಯಲ್ಲಿ ಕೋವಿಡ್ ನಿಂದ ಸಾವಿಗೀಡಾದವರ ಪ್ರಮಾಣ 3,875 ಆಗಿತ್ತು. ಅಂದರೆ ಬಿಬಿಎಂಪಿಯು ಕೋವಿಡ್ ನಿಯಂತ್ರಣಕ್ಕೆ ಕೋಟ್ಯಾಂತರ ರೂಪಾಯಿ ಕರ್ಚು ಮಾಡುತ್ತಿದ್ದರೂ, ಕರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಒಂದೇ ವರ್ಷದಲ್ಲಿ 12,407ಕ್ಕೆ ಏರಿಕೆಯಾಗಿತ್ತು.
ಕೋವಿಡ್ ಖರ್ಚು ವೆಚ್ಚದಲ್ಲಿ ಬಿಬಿಎಂಪಿಯ ಪೋರ್ಟಲ್ ಮೂಲಕ ಸರ್ಕಾರಿ ಕೋಟಾದಲ್ಲಿ ಬೆಡ್ ಬುಕಿಂಗ್ ಮಾಡಿ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೋವಿಡ್ ಸೋಂಕಿತರ ಕರ್ಚು ವೆಚ್ಚವನ್ನು ಸರ್ಕಾರವೇ ಭರಸಿತು. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಆಂಟಿಜೆನ್ ಟೆಸ್ಟ್, ಆರ್ ಟಿಪಿಸಿ ಆರ್ ಟೆಸ್ಟ್, ಕೋವಿಡ್ ಸೋಂಕಿತರ ಪತ್ತೆ ಕಾರ್ಯ, ಸಿಬ್ಬಂದಿ ಮತ್ತು ವೈದ್ಯರ ಸಂಬಳ, ಸೀಲ್ ಡೌನ್, ಹೋಟೆಲ್ ಕ್ವಾರಂಟೈನ್, ಕೋವಿಡ್ ಕೇರ್ ಸೆಂಟರ್, ಉಚಿತ ಆಹಾರ ಪೊಟ್ಟಣದ ವಿತರಣೆ ಹೀಗೆ ವಿವಿಧ ಕಾರಣಗಳಿಗಾಗಿ ಬಿಬಿಎಂಪಿಯು 21 ತಿಂಗಳಿನಲ್ಲಿ ಬರೋಬ್ಬರಿ 880 ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡಿದೆ. ಆದ್ರೆ ಆ ಪೈಕಿ 59.30 ಕೋಟಿ ರೂ. ಹಣದ ಲೆಕ್ಕ ವ್ಯತ್ಯಾಸ ಬರುತ್ತಿದೆ.
ಕೋವಿಡ್ ಸೋಂಕು ಬೆಂಗಳೂರನ್ನು ಮೊದಲನೇ ಅಲೆ ಹಾಗೂ ಎರಡನೇ ಅಲೆಯ ವೇಳೆ ಇನ್ನಿಲ್ಲದಂತೆ ಬಾಧಿಸಿ ನಗರದ ಜನತೆಯನ್ನು ಹೈರಾಣಾಗಿಸಿತ್ತು. ಹಾಗಾಗಿ ಕೊರೋನಾ ಸೋಂಕನ್ನು ಕಟ್ಟಿ ಹಾಕಲು ಪ್ರಾಕೃತಿಕ ವಿಕೋಪವೆಂಬ ಕಾರಣಕ್ಕೆ, ಸರ್ಕಾರವು ಈ ವಿಷಯದಲ್ಲಿ ಕರ್ಚು ಮಾಡುವ ಹಣಕ್ಕಾಗಿ 4G ಹಾಗೂ 4H ವಿನಾಯಿತಿಯನ್ನು ನೀಡಿತು. ವೈದ್ಯಕೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರವು ಯಾವುದೇ ವೈದ್ಯಕೀಯ ಸಲಕರಣೆ ಖರೀದಿ, ಖಾಸಗಿಯವರಿಂದ ಸೇವೆ ಪಡೆದು ಅದಕ್ಕೆ ಹಣಪಾವತಿ ಮೊದಲಾದ ಕೆಲಸಗಳಿಗೆ ಟೆಂಡರ್ ಕರೆಯುವುದರಿಂದ ವಿನಾಯಿತಿ ನೀಡುವುದೇ 4H ಆಗಿದೆ.
ಹಾಗಾಗಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಆರೋಗ್ಯ ಇಲಾಖೆಯು ಇನ್ನಿಲ್ಲದಂತೆ ಹಣ ಖರ್ಚು ಮಾಡಿದರೂ ಪರಿಣಾಮಕಾರಿಯಾಗಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದನ್ನು ಎಳೆ ಎಳೆಯಾಗಿ ಮುಂದಿನ ಭಾಗದಲ್ಲಿ ತಿಳಿಸುತ್ತೇವೆ. ಮೊದಲಿಗೆ ಬಿಬಿಎಂಪಿ 2020ರ ಫೆಬ್ರವರಿ ಮೊದಲನೇ ಅಲೆಯಿಂದ 2021ರ ಅಕ್ಟೋಬರ್ ಎರಡನೇ ಅಲೆಯವರೆಗಿನ 21 ತಿಂಗಳಲ್ಲಿ ಯಾವ ಯಾವ ವಿಭಾಗದಲ್ಲಿ ಎಷ್ಟೆಷ್ಟು ಹಣ ಖರ್ಚು ಮಾಡಿತ್ತು ಎಂಬುದನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಕೋವಿಡ್ ನಿಯಂತ್ರಣ ಖರ್ಚು ವೆಚ್ಚದ ಮಾಹಿತಿ ಈ ಕೆಳಕಂಡಂತಿದೆ :
ಬಿಬಿಎಂಪಿ 8 ವಲಯಗಳಿಗೆ ಕೋವಿಡ್ ನಿಯಂತ್ರಣಕ್ಕಾಗಿ (ಕೋವಿಡ್ ಕರ್ಚು-ವೆಚ್ಚ, ಸೀಲ್ ಡೌನ್, ಹೋಟೆಲ್ ಕ್ವಾರಂಟೈನ್, ಕಂಟೈನ್ ಮೆಂಟ್ ವಲಯ, ಸೋಂಕಿತರ ಪತ್ತೆ ಮತ್ತಿತರ ವಿಷಯ) | 346,65,24,425 ರೂ. (346.65 ಕೋಟಿ ರೂ.) |
ಲ್ಯಾಬ್ ಮತ್ತು ಆರ್ ಟಿಪಿಸಿಆರ್ | 219,01,58,0001 ರೂ. (219.01 ಕೋಟಿ ರೂ.) |
ಬಾಡಿಗೆ ವಾಹನ ಬಳಕೆ (ಆಂಬುಲೆನ್ಸ್, ಕಾರು, ಟಿಟಿ ಇತರೆ ಖರ್ಚು) | 125,90,35,780 ರೂ. (125.90 ಕೋಟಿ ರೂ.) |
ಕೋವಿಡ್ ಸೋಂಕು ತಡೆಗೆ ಅಗತ್ಯ ಔಷಧೋಪಕರಣ ಹಾಗೂ ವಿವಿಧ ವಸ್ತುಗಳ ಖರೀದಿ | 52,28,36,116 ರೂ. (52.28 ಕೋಟಿ ರೂ.) |
ಉಚಿತ ಆಹಾರ ಪೊಟ್ಟಣಗಳ ವಿತರಣೆ | 47,50,85,749 ರೂ. (47.50 ಕೋಟಿ ರೂ.) |
ವೈದ್ಯರು, ನರ್ಸ್ ಮತ್ತಿತರ ವೇತನ | 10,14,94,952 ರೂ. (10.14 ಕೋಟಿ ರೂ.) |
ಮಾನವ ಸಂಪನ್ಮೂಲ ವೇತನ (ಕಂಪ್ಯೂಟರ್ ಆಪರೇಟರ್, ಕೋವಿಡ್ ಕಾರ್ಯಕರ್ತರು ಇತರೆ.) | 5,33,81,864 ರೂ. (5.33 ಕೋಟಿ ರೂ.) |
ಕೋವಿಡ್ ಇತರೆ ಖರ್ಚು | 2,84,00,000 ರೂ. (2.84 ಕೋಟಿ ರೂ.) |
ಕ್ವಾರಂಟೈನ್ | 1,84,81,700 ರೂ. (1.84 ಕೋಟಿ ರೂ) |
ಕೋವಿಡ್ ನಿಂದ ಮೃತಪಟ್ಟವರ ದಹನ ಮತ್ತಿತರ ಖರ್ಚು | 88,00,000 ರೂ. (88 ಲಕ್ಷ ರೂ.) |
ಒಟ್ಟಾರೆ | 821,22,47,837 ರೂ. (821.22 ಕೋಟಿ ರೂ.) |
ಬಿಬಿಎಂಪಿಯು 21 ತಿಂಗಳ ಅವಧಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕರ್ಚು ಮಾಡಿದ 880 ಕೋಟಿ ರೂಪಾಯಿ ಹಣದಲ್ಲಿ ಮೇಜರ್ ಶೇರ್ ಪಾಲಿಕೆಯ 8 ವಲಯಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಅಂದರೆ, ಹೋಟೆಲ್ ಕ್ವಾರಂಟೈನ್, ಕಂಟೈನ್ ಮೆಂಟ್ ವಲಯ ಸೀಲ್ಡೌನ್, ಸೋಂಕಿತರ ಪತ್ತೆ ಮತ್ತಿತರ ವಿಷಯಗಳಿಗಾಗಿ ಬರೋಬ್ಬರಿ 346.65 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿತ್ತು. ಈ ಕುರಿತಂತೆ ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ 8 ವಲಯಗಳಲ್ಲಿ ಹಣ ಖರ್ಚು ಮಾಡಿದ ಲೆಕ್ಕವನ್ನು ಸೂಕ್ತವಾಗಿ ಇಡಲಾಗಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿಬರುತ್ತಿದೆ.
ಇನ್ನು ಕೋವಿಡ್ ನಿಯಂತ್ರಣಕ್ಕಾಗಿ ಪಾಲಿಕೆ ಮಾಡಿರುವ ಖರ್ಚಿನಲ್ಲಿ ಎರಡನೇ ಅತಿಹೆಚ್ಚು ಖರ್ಚು ಮಾಡಿರುವುದು ಕರೋನಾ ಪರೀಕ್ಷೆಗಾಗಿ ಅಂದರೆ, ಶಂಕಿತ ಕರೋನಾ ಸೋಂಕಿತರ ಗಂಟಲು ಮತ್ತು ಮೂಗಿನಿಂದ ದ್ರವ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ನಲ್ಲಿ ಪರೀಕ್ಷೆ ನಡೆಸುವುದು, ರ್ಯಾಟ್ ಮತ್ತು ಆರ್ ಟಿಪಿಸಿಆರ್ ಪರೀಕ್ಷೆಗಾಗಿ 219 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದೆ. ಕೋವಿಡ್ ಪರೀಕ್ಷೆಗಾಗಿ ಕೋವಿನ್ ಪೋರ್ಟಲ್ ನಲ್ಲಿ ವ್ಯಕ್ತಿಗಳ ಹೆಸರು ದಾಖಲಾಗಿರುವ ಕಾರಣ ಆ ವ್ಯಕ್ತಿಗೆ ನಡೆಸಿದ ಪರೀಕ್ಷೆಯ ವಿವರಗಳು ಕೋವಿನ್ ಪೋರ್ಟಲ್ ದಾಖಲಾಗಿರುವ ಕಾರಣ ಈ ವಿಭಾಗದಲ್ಲಿ ಹಣಕಾಸಿನ ಅವ್ಯವಹಾರಗಳಿಗೆ ಅಷ್ಟಾಗಿ ಅವಕಾಶವಿರುವುದಿಲ್ಲ.
ಟ್ರಾನ್ಸ್ ಪೋರ್ಟ್ ಬೋಗಸ್ ಬಿಲ್? :
ಕೋವಿಡ್ ಮೊದಲನೆ ಅಲೆ ಹಾಗೂ ಎರಡನೇ ಅಲೆಯಲ್ಲಿ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಪಾಲಿಕೆಯು ರೋಗಿಗಳ ಸಾಗಾಟಕ್ಕೆ ಆಂಬುಲೆನ್ಲ್, ಸಿಬ್ಬಂದಿಗಳ ಓಡಾಟ, ಕೋವಿಡ್ ಕಾರ್ಯಕರ್ತರು ಕ್ವಾರಂಟೈನ್ ನಲ್ಲಿದ್ದವರಿಗೆ ಔಷಧಿ ನೀಡಿಕೆ, ಕೋವಿಡ್ ಸೋಂಕಿತರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರ ಪತ್ತೆ ಮೊದಲಾದ ಕಾರಣಕ್ಕೆ 125.90 ಕೋಟಿ ರೂಪಾಯಿಯಷ್ಟು ಹಣವನ್ನು ಖರ್ಚು ಮಾಡಿದೆ. ಆದರೆ ಬಿಬಿಎಂಪಿಗೆ ಕೆಲವೊಂದು ಟ್ರಾವೆಲ್ ಕಂಪನಿಯವರು ಆಂಬುಲೆನ್ಸ್, ಟ್ರಾವೆಲ್ಸ್ ವಾಹನ ಓಡದಿದ್ದರೂ ಬೋಗಸ್ ಬಿಲ್ ಮಾಡಿ ಹಣ ಪಡೆದಿದ್ದಾರೆ ಎಂಬ ಬಗ್ಗೆಯೂ ವ್ಯಾಪಕ ದೂರುಗಳಿವೆ.
ಫುಡ್ ಕಿಟ್ ವಿತರಣೆಯಲ್ಲೂ ಅವ್ಯವಹಾರ?
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಔಷಧೋಪಕರಣ ಹಾಗೂ ತಾಂತ್ರಿಕ ಸಲಕರಣೆ ಖರೀದಿಗಾಗಿ ಈ ಅವಧಿಯಲ್ಲಿ 52.28 ಕೋಟಿ ರೂಪಾಯಿ ಹಣ ಖರ್ಚು ಮಾಡಿರುವುದಾಗಿ ಅಧಿಕೃತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ. ಇನ್ನು ಕೋವಿಡ್ ಲಾಕ್ ಡೌನ್, ಸೆಮಿ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ಬಡಜನತೆಗಾಗಿ ಪಾಲಿಕೆ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು. ಆದರೆ ಅರ್ಹ ಫಲಾನುಭವಿಗಳಿಗೆ ಈ ಫುಡ್ ಕಿಟ್ ಲಭಿಸದೆ, ಬೆಂಗಳೂರಿನ ಕೆಲ ಶಾಸಕರ ಹಿಂಬಾಲಕರು, ಬೆಂಬಲಿಗರು ಫುಡ್ ಕಿಟ್ ಬಳಸಿಕೊಂಡರು. ಇದರಲ್ಲಿ ವ್ಯಾಪಕ ಅವ್ಯವಹಾರ ಆಗಿದೆ ಎಂದು ಜನಪ್ರತಿನಿಧಿಗಳೇ ಸ್ವತ: ಆರೋಪ – ಪ್ರತ್ಯಾರೋಪ ಮಾಡಿದ್ದರು. ಕಾರ್ಮಿಕ ಇಲಾಖೆಯಿಂದಲೂ ವಲಸೆ ಕಾರ್ಮಿಕರಿಗೆ ಆಹಾರದ ಪೊಟ್ಟಣ ವಿತರಿಸಲಾಗುತ್ತಿತ್ತು. ಆದರೆ ಬಿಬಿಎಂಪಿಯಿಂದಲೂ ಆಹಾರ ವಿತರಿಸದಿದ್ದರೂ ಕೆಲ ಪ್ರಕರಣಗಳಲ್ಲಿ ನಕಲಿ ಬಿಲ್ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಫೆಬ್ರವರಿ 2020 ರಿಂದ ಅಕ್ಟೋಬರ್ 2021ರ ಇಪ್ಪತ್ತೊಂದು ತಿಂಗಳಲ್ಲಿ ಫುಡ್ ಕಿಟ್ ವಿತರಣೆಗಾಗಿ ಬಿಬಿಎಂಪಿಯು 47.50 ಕೋಟಿ ರೂಪಾಯಿ ಹಣವನ್ನು ಕರ್ಚು ಮಾಡಿದೆ.
“ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯು ಅನಗತ್ಯ ವೆಚ್ಚ ಮಾಡಿ ಹಣ ಪೋಲು ಮಾಡುತ್ತಿದೆ ಎಂದು ತಾವು ಮತ್ತು ಕಾಂಗ್ರೆಸ್ ಪಕ್ಷವು ಪದೇ ಪದೇ ಹೇಳುತ್ತಾ ದಾಖಲೆ ಸಮೇತ ಪ್ರದರ್ಶಿಸಿ ಹೇಳುತ್ತಾ ಬಂದಿದ್ದೆವು. ಇದೀಗ ಬಿಬಿಎಂಪಿ ಒಂದರಲ್ಲೇ ಕೋವಿಡ್ ನಿಯಂತ್ರಣಕ್ಕಾಗಿ 880 ಕೋಟಿ ರೂಪಾಯಿಯಷ್ಟು ಹಣ ಖರ್ಚು ಮಾಡಿರುವುದನ್ನು ನಂಬಲು ಆಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಬಿಬಿಎಂಪಿಯು ನೀಡಿದ ಆಹಾರ ಪೊಟ್ಟಣವು ನೈಜ ಫಲಾನುಭವಿಗಳಿಗೆ ಸಿಗದ ಬಗ್ಗೆ ಕಾಂಗ್ರೆಸ್ ಪಕ್ಷ ಧ್ವನಿ ಎತ್ತಿತ್ತು. ಇದೀಗ ಕೋವಿಡ್ ನಿಯಂತ್ರಣ ಹೆಸರಿನಲ್ಲಿ ಜೋನ್ ಗಳಲ್ಲೂ ಸೂಕ್ತ ರೀತಿ ಲೆಕ್ಕಗಳನ್ನು ಇಡದೆ ಹಣ ಪೋಲು ಮಾಡಿರುವುದು ಗಮನಕ್ಕೆ ಬಂದಿದೆ. ಇದೆಲ್ಲವನ್ನು ನೋಡಿದ್ರೆ ನೂರಾರು ಕೋಟಿ ರೂಪಾಯಿ ಹಣದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ.”
– ರಾಮಲಿಂಗಾರೆಡ್ಡಿ, ಮಾಜಿ ಶಾಸಕರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರು
ಇದೇ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಬೆಂಗಳೂರು ವೈರ್ ಮಾತನಾಡಿಸಿದಾಗ ಅವರು ಹೀಗೆ ಪ್ರತಿಕ್ರೆಯ ನೀಡಿದ್ದಾರೆ :
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
“ಬಿಬಿಎಂಪಿ ಕೋವಿಡ್ ನಿಯಂತ್ರಣಕ್ಕಾಗಿ ಮಾಡಿರುವ ಹಣದ ಬಗ್ಗೆ ಸಂಪೂರ್ಣವಾಗಿ ಪ್ರತಿಯೊಂದಕ್ಕು ಲೆಕ್ಕ ಇಟ್ಟಿದೆ. ಅನಗತ್ಯವಾಗಿ ಹಣ ಖರ್ಚು ಮಾಡಿಲ್ಲ. ಕೋವಿಡ್ ಸೋಂಕಿನಂತಹ ತುರ್ತು ಪರಿಸ್ಥಿತಿಯಲ್ಲಿ ಪಾಲಿಕೆಯು ತನ್ನ ಸಾಮರ್ಥ್ಯವನ್ನು ಮೀರಿ ಜನರ ಆರೋಗ್ಯ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಂಡಿದೆ. ಪಾಲಿಕೆಯು ಬೆಂಗಳೂರಿನ 1.30 ಕೋಟಿ ಜನರ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದೆ. ಒಂದೊಮ್ಮೆ ಪಾಲಿಕೆಯ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಖರ್ಚು- ವೆಚ್ಚದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದರೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುತ್ತೇವೆ. “
– ಗೌರವ್ ಗುಪ್ತಾ, ಬಿಬಿಎಂಪಿ ಮುಖ್ಯ ಆಯುಕ್ತರು