ಬೆಂಗಳೂರು, (www.bengaluruwire.com) : ಕಾಂಗ್ರೆಸ್ ಪಕ್ಷ ಯಾವುದೇ ನೀರಾವರಿ ವಿಚಾರದಲ್ಲಿ ಬದ್ಧತೆಯಿಂದ ಕೆಲಸ ಮಾಡಿಲ್ಲ. ತಾನು ಅಧಿಕಾರದಲ್ಲಿದ್ದಾಗ ಮೇಕೆದಾಟು ವಿಚಾರದಲ್ಲಿ ಕೆಲಸ ಮಾಡದ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಹಾಗಾಗಿ ಮೇಕೆದಾಟು ಯೋಜನೆ ಬಗ್ಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆ ಮೂಲಕ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಬೆಂಗಳೂರಿನಲ್ಲಿ ಭಾನುವಾರ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಪಕ್ಷ ಉತ್ತರ ಕರ್ನಾಟಕದ ಕೃಷ್ಣಾ ನದಿ ವಿಚಾರದಲ್ಲಿ ಪಾದಯಾತ್ರೆ ಮಾಡಿದ್ದರು. ಆಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಧಿಕಾರದಲ್ಲಿದ್ದಾಗ ಪ್ರತಿವರ್ಷ 10 ಸಾವಿರ ಕೋಟಿ ರೂ. ನಂತೆ 5 ವರ್ಷಕ್ಕೆ 50 ಸಾವಿರ ಕೋಟಿ ರೂ. ಕೊಡುತ್ತೇವೆಂದರು. ಆದರೆ ವಾಸ್ತವದಲ್ಲಿ 7 ಸಾವಿರ ಕೋಟಿರೂ. ಹಣವನ್ನು ಆ ಯೋಜನೆಗೆ ಕೊಡಲಿಲ್ಲ ಎಂದು ಸಿಎಂ ಬೊಮ್ಮಾಯಿ ವಿವರಿಸಿದ್ದಾರೆ.
ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಒತ್ತಡ ಹಾಕಿದ ಪರಿಣಾಮ ಕೇಂದ್ರ ಜಲ ಆಯೋಗವು ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿಗೆ ಒಪ್ಪಿಗೆ ಪಡೆಯಲು ಕಾವೇರಿ ಉಸ್ತುವಾರಿ ಮಂಡಳಿಗೆ ಕಡತವನ್ನು ಕಳುಹಿಸಿದೆ. ಇದೇ ತಿಂಗಳು ಈ ವಿಚಾರವಾಗಿ ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚಿಸಲಿದೆ. ಸುಪ್ರೀಂಕೋರ್ಟ್ ನಲ್ಲಿ ಯೋಜನೆ ಕುರಿತಂತೆ ಸಲ್ಲಿಕೆಯಾಗಿರುವ ಪ್ರಕರಣದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗಿದೆ. ಇದೇ ತಿಂಗಳು ಸುಪ್ರೀಂಕೋರ್ಟ್ ನಲ್ಲಿ ಈ ವಿಷಯ ವಿಚಾರಣೆಗೆ ಬರಲಿದೆ.
ಕೇಂದ್ರ ಪರಿಸರ ಇಲಾಖೆಯಿಂದ ಯೋಜನೆಗೆ ಒಪ್ಪಿಗೆ ಪಡೆಯುವ ಕೆಲಸ ನಡೆಯುತ್ತಿದೆ. ಈ ಹಿಂದೆ ರೈತರು ಮೇಕೆದಾಟು ಸ್ಥಳಕ್ಕೆ ಪಾದಯಾತ್ರೆ ನಡೆಸಿದಾಗ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಯೋಜನೆಗೆ ತಡೆಯಾಜ್ಞೆ ನೀಡಿತ್ತು. ಆನಂತರ ರಾಜ್ಯ ಸರ್ಕಾರ ಆ ತಡೆಯಾಜ್ಞೆ ತೆರವು ಮಾಡಿಸಿತ್ತು. ಪರಿಸ್ಥಿತಿ ಸೂಕ್ಷ್ಮವಿರುವಾಗ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಹಮ್ಮಿಕೊಂಡಿರುವುದರಿಂದ ಯೋಜನೆಗೆ ಹಿನ್ನಡೆಯಾದರೆ ಯಾರು ಜವಾಬ್ದಾರರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಗೆ ಪ್ರಕರಣದ ಗಂಭೀರತೆ ಬಗ್ಗೆ ಅರಿವಿಲ್ಲವೇ ಎಂದು ಅವರು ಕಿಡಿಕಾರಿದ್ದಾರೆ.