ಬೆಂಗಳೂರು, (www.bengaluruwire.com) : ಕಾವೇರಿ ನೀರು ವಿಚಾರ ಬಂದಾಗಲೆಲ್ಲಾ ಕರ್ನಾಟಕಕ್ಕೆ ಸಂಕಷ್ಟ ಎದುರಾಗಿದ್ದೇ ಹೆಚ್ಚು. ಇದೀಗ ಕಾಂಗ್ರೆಸ್ ಪಕ್ಷವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಜ.9ರಿಂದ ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ಆರಂಭಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತೆವಳುತ್ತಾ ಕುಂಟುತ್ತಾ ಸಾಗಿದ್ದ ಯೋಜನೆಯ ವಿಚಾರವೀಗ ಮುನ್ನೆಲೆಗೆ ಬಂದು ನಿಂತಿದೆ. ಈ ಹಿನ್ನಲೆಯಲ್ಲಿ ಮೇಕೆದಾಟು ಯೋಜನೆ ಕುರಿತಂತೆ “ಬೆಂಗಳೂರು ವೈರ್” ಪ್ರಸ್ತುತ ಪರಿಸ್ಥಿತಿಯನ್ನು ತನ್ನ ಓದುಗರ ಮುಂದಿಡುವ ಪ್ರಯತ್ನ ಮಾಡುತ್ತಿದೆ.
ಮೇಕೆದಾಟು ಯೋಜನೆಯು ಮೇಕೆದಾಟು ಯೋಜನೆಯು ಒಂದು ಬಹುದ್ದೇಶಿತ ಯೋಜನೆಯಾಗಿದೆ. ಬೆಂಗಳೂರು ನಗರಕ್ಕೆ ಹಾಗೂ ಕಾವೇರಿ ಕಣಿವೆಯ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ಮತ್ತು ಗೃಹೋಪಯೋಗಿ ಉದ್ದೇಶಗಳಿಗೆ ಸುಮಾರು 4.75 ಟಿಎಂಸಿ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿದೆ. ಅಲ್ಲದೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯಾಗಿದೆ. ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಸಬೇಕಾದ 177 ಟಿಎಂಸಿ ನೀರನ್ನು ಬಿಟ್ಟು ಹೆಚ್ಚುವರಿಯಾಗಿ ಹರಿಯುವ ನೀರನ್ನು ಕುಡಿಯುವ ನೀರಿಗಾಗಿ ಶೇಖರಿಸುವ ಸಾಮರ್ಥ್ಯದ ಜಲಾಶಯ ರೂಪಿಸುವ ಯೋಜನೆ ಇದಾಗಿದೆ. ಒಂದು ಟಿಎಂಸಿ ಎಂದರೆ ಒಂದು ಸಾವಿರ ಅಡಿ ಉದ್ದ, ಸಾವಿರ ಅಡಿ ಎತ್ತರ ಹಾಗೂ ಸಾವಿರ ಅಡಿ ಅಗಲದ ಜಲರಾಶಿಯನ್ನು ಟಿಎಂಸಿ (One Thousand Million Cubic Feet – TMC) ಎಂದು ಅಳೆಯಲಾಗುತ್ತದೆ.
ಮೇಕೆದಾಟು ಸಮತೋಲನ ಅಣೆಕಟ್ಟು (Balancing Reservoir) ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಬರಲಿದ್ದು, ಈ ಸ್ಥಳವು ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿದೆ. ಅಲ್ಲದೆ ಕರ್ನಾಟಕ- ತಮಿಳುನಾಡು ಗಡಿ ಭಾಗದಿಂದ 4 ಕಿ.ಮೀ ಒಳಗೆ ಬರುತ್ತದೆ. 2017ರಲ್ಲಿ ಪ್ರಸ್ತಾಪಿತ ಯೋಜನೆಯ ಒಟ್ಟು ವೆಚ್ಚ 5,912 ಕೋಟಿ ರೂ. ವೆಚ್ಚವಾಗುತ್ತಿದ್ದು, 67.15 ಟಿಎಂಸಿ ನೀರನ್ನು ಸಂಗ್ರಹಿಸುವ ಹಿಡಿದಿಡುವ ಸಾಮರ್ಥ್ಯ ಕಲ್ಪಿಸಲಾಗುತ್ತದೆ. ಆದರೆ ಮೇಕೆದಾಟು ಯೋಜನೆಯ ಪ್ರಸ್ತುತ ವೆಚ್ಚ 9 ಸಾವಿರ ಕೋಟಿ ರೂಪಾಯಿಗಳಾಗಿದೆ.
ಮೇಕೆದಾಟು ಸಮತೋಲನ ಜಲಾಶಯದಿಂದ 5 ಸಾವಿರ ಹೆಕ್ಟೇರ್ ಪ್ರದೇಶ ಮುಳುಗಡೆ :
ಈ ಯೋಜನೆ ಜಾರಿಯಿಂದ ಒಟ್ಟು 5 ಸಾವಿರ ಹೆಕ್ಟೇರ್ ಪ್ರದೇಶ (4,996 ಹೆಕ್ಟೇರ್) ಮುಳುಗಡೆಯಾಗಲಿದೆ. ಆ ಪೈಕಿ 1,869.5 ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶ, 3,181 ಹೆಕ್ಟೇರ್ ವಿಸ್ತೀರ್ಣದ ಕಾವೇರಿ ಅಭಯಾರಣ್ಯ ಮುಳುಗಡೆಯಾಗಲಿದೆ. ಅಲ್ಲದೆ 201 ಹೆಕ್ಟೇರ್ ನಷ್ಟು ಕಂದಾಯ ಭೂಮಿಯೂ ಮುಳುಗಲಿದೆ. ಈ ಕಾರಣದಿಂದ ರಾಮನಗರ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಸುಮಾರು 10,000 ಎಕರೆ ಹೆಕ್ಟೇರ್ ಪ್ರದೇಶವನ್ನು, ಪರಿಸರ, ಅರಣ್ಯ, ವನ್ಯಜೀವಿಗಳ ಅವಾಸಸ್ಥಾನ ಹಾಗೂ ಅಲ್ಲಿ ಆಶ್ರಯ ಪಡೆದ ಇತರ ಪ್ರಾಣಿ ಪಕ್ಷಿಗಳನ್ನು ರಕ್ಷಿಸಲು ಹಾಗೂ ಆ ಪ್ರದೇಶದಲ್ಲಿ ಒಂದಕ್ಕೆ ಎರಡರಷ್ಟು ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯಸರ್ಕಾರವು ಕೇಂದ್ರ ಸರ್ಕಾರಕ್ಕೆ ನೀಡಿದೆ.
ಕರ್ನಾಟಕದ ಕಾವೇರಿ ನೀರಿನ ಪಾಲು ಒಟ್ಟು 284.75 ಟಿಎಂಸಿ :
ಕಾವೇರಿ ನ್ಯಾಯಾಧಿಕರಣವು 05-02-2007ರಂದು ತನ್ನ ತೀರ್ಪು ಪ್ರಕಟಿಸಿ, ಕರ್ನಾಟಕಕ್ಕೆ 270 ಟಿಎಂಸಿ ನೀರನ್ನು ಹಾಗೂ ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ ಮಾಸಿಕ 177.75 ಟಿಎಂಸಿ ನೀರನ್ನು ಹರಿಸುವಂತೆ ತೀರ್ಪು ಪ್ರಕಟಿಸಿತ್ತು. ಈ ತೀರ್ಪನ್ನು ಕೇಂದ್ರ ಸರ್ಕಾರ 19-02-2013ರಂದು ತನ್ನ ಗೆಜೆಟ್ ನಲ್ಲಿ ಪ್ರಕಟಿಸಿತ್ತು. ಇದಾದ ಬಳಿಕ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಅಣೆಕಟ್ಟು ಪ್ರಸ್ತಾವನೆಯನ್ನು 2013ರಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಅಲ್ಲದೆ 2018ರ ಫೆಬ್ರವರಿ 16ರಂದು ಸುಪ್ರೀಂಕೋರ್ಟ್ ಕಾವೇರಿ ತೀರ್ಪಿನ ಬಗ್ಗೆ ಕಣಿವೆ ರಾಜ್ಯಗಳು ಸಲ್ಲಿಸಿದ್ದ ಸಿವಿಲ್ ಅಪೀಲುಗಳ ಮೇಲೆ ಆದೇಶ ನೀಡಿತ್ತು. ಈ ಆದೇಶದಲ್ಲಿ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರು ಲಭ್ಯವಾಗಿತ್ತು. ಒಟ್ಟಾರೆ ಕಾವೇರಿ ಕಣಿವೆಯಿಂದ ರಾಜ್ಯಕ್ಕೆ 284.75 ಟಿಎಂಸಿ ನೀರು ಸಿಕ್ಕಂತಾಗಿತ್ತು.
ಮೇಕೆದಾಟು ಯೋಜನೆ ಹಿಂದಿದೆ ಬೆಂಗಳೂರಿನ ಕಥೆ- ವ್ಯಥೆ :
ಬೆಂಗಳೂರು ನಗರಕ್ಕೆ ಕಾವೇರಿಯಿಂದ ಪ್ರಸ್ತುತ ವಾರ್ಷಿಕ ಗರಿಷ್ಠ 19 ಟಿಎಂಸಿ ಹಾಗೂ ಅಂತರ್ಜಲದಿಂದ 8 ಟಿಎಂಸಿ ನೀರನ್ನು ಒದಗಿಸಲಾಗುತ್ತಿದೆ. ಬಿಡಬ್ಲ್ಯುಎಸ್ ಎಸ್ ಬಿ ಪ್ರತಿ ತಿಂಗಳು ಕಾವೇರಿ ನದಿ ತೀರದಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲು ಸುಮಾರು 50 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತಿದೆ. ಬೆಂಗಳೂರು ಕೇಂದ್ರ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕೃತ ಹಾಗೂ ಅನಧಿಕೃತ ಸೇರಿದಂತೆ 3.5 ಲಕ್ಷಕ್ಕೂ ಹೆಚ್ಚು ಕೊಳವೆಬಾವಿಗಳಿದ್ದು, ಈ ಕೊಳವೆಬಾವಿಗಳಿಂದ ವಾರ್ಷಿಕ 7 ರಿಂದ 8 ಟಿಎಂಸಿ ನೀರನ್ನು ಹೊರ ತೆಗೆಯಲಾಗುತ್ತಿದೆ. ಇದರಿಂದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ನೀತಿ ಆಯೋಗದ ವರದಿಯ ಪ್ರಕಾರ ಬೆಂಗಳೂರು ನಗರದ ಮುಂದಿನ ದಿನಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿ ಹೋಗುವ ಕಳವಳಕಾರಿ ಅಂಶವನ್ನು ಪ್ರಸ್ತಾಪಸಿರುತ್ತಾರೆ. ಇದರಿಂದ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿಗೆ ಬಹುದೊಡ್ಡ ಸವಾಲು ಎದುರಿಸಬೇಕಾದ ಸಾಧ್ಯತೆಯಿದೆ. ಸರ್ವೋಚ್ಛ ನ್ಯಾಯಾಲಯ ಈಗಾಗಲೇ ದೇಶದಲ್ಲಿ ಯಾವುದೇ ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸಬಾರದೆಂದು ನಿರ್ದಿಷ್ಟವಾದ ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ 2013ರಲ್ಲಿ ನಿರ್ಧರಿಸಿತ್ತು.
2017ರಲ್ಲಿ ಯೋಜನೆ ಡಿಪಿಆರ್ ಗೆ ತಾತ್ವಿಕ ಒಪ್ಪಿಗೆ :
ವಿಧಾನಸೌಧದ ಸಾಂದರ್ಭಿಕ ಚಿತ್ರ
ರಾಜ್ಯ ಸರ್ಕಾರವು ಮೇಕೆದಾಟು ಯೋಜನೆಯ ಪೂರ್ವ ಸಾಧ್ಯತಾ ವರದಿ (PFR) ಪಡೆಯಲು ಅಂತರಾಷ್ಟ್ರೀಯ ಟೆಂಡರ್ ಕರೆದಾಗ, ಅತಿಹೆಚ್ಚು ದರಕ್ಕೆ ಟೆಂಡರ್ ನಲ್ಲಿ ಬಿಡ್ ಮಾಡಿದ ಕಾರಣ ಆ ಟೆಂಡರ್ ಅನ್ನು ರದ್ದುಗೊಳಿಸಿ ಪಿಎಫ್ ಆರ್ ತಯಾರಿಸಲು ಸರ್ಕಾರ 3.25 ಕೋಟಿ ರೂ.ಗಳ ಮೊತ್ತಕ್ಕೆ ವೆಚ್ಚ ಮಾಡಲು 4ಜಿ ಅನುಮತಿ ನೀಡಿತ್ತು. ಈ ಯೋಜನೆಯ ಸಾಧ್ಯಾ ಸಾಧ್ಯತೆ, ತಜ್ಞರ ಅಭಿಪ್ರಾಯ, ಭೌಗೋಳಿಕ ಅಧ್ಯಯನ ಹಾಗೂ ಇತರೆ ಇಲಾಖೆಗಳ ಅಭಿಪ್ರಾಯದೊಂದಿಗೆ ಸರ್ವೇಕ್ಷಣಾ ಕಾರ್ಯ ಮುಗಿಸಿ, ಆಡಳಿತಾತ್ಮಕ ಒಪ್ಪಿಗೆಗೆ ಮಂಡಿಸಲು ಕನಿಷ್ಠ ಎರಡರಿಂದ ಮೂರು ವರ್ಷಗಳ ಕಾಲಾವಕಾಶ ಬೇಕಾಗಿತ್ತು. 2017ರ ಫೆಬ್ರವರಿ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಯೋಜನೆ ಸಮಗ್ರ ಯೋಜನಾ ವರದಿ (DPR)ಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿತ್ತು. ಆನಂತರ 2019ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ತದನಂತರ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯಿಂದ ಒಪ್ಪಿಗೆ ಪಡೆಯಿತು.
ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯ ಮೆಟ್ಟಿಲೇರಿದ್ದ ತಮಿಳುನಾಡು ಸರ್ಕಾರ :
ತಮಿಳುನಾಡು ಸರ್ಕಾರ, ಕರ್ನಾಟಕಕ್ಕೆ ಮೇಕೆದಾಟು ಯೋಜನೆ ಡಿಪಿಆರ್ ತಯಾರಿಸಲು ತಾನು ನೀಡಿರುವ ಅನುಮತಿಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಲ್ಲದೆ ಸುಪ್ರೀಂಕೋರ್ಟಿಗೆ ಅರ್ಜಿಯನ್ನು ದಾಖಲಿಸಿತ್ತು. ಇದಕ್ಕೆ ಪ್ರತಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವೂ ಪ್ರಮಾಣಪತ್ರವನ್ನು ಸಲ್ಲಿಸಿತ್ತು.
ಇನ್ನೊಂದೆಡೆ ಚೆನ್ನೈನ ಹಸಿರು ನ್ಯಾಯಾಧಿಕರಣ ಮೇಕೇದಾಟು ಯೋಜನೆ ನಿರ್ಮಾಣವಾಗುತ್ತಿರುವ ಬಗ್ಗೆ ಮಾಧ್ಯಮದ ವರದಿ ಆಧರಿಸಿ ಸ್ವಯಂ ಪ್ರಕರಣ ದಾಖಲಿಸಿ 21-05-2021ರಂದು ಸಮಿತಿ ರಚನೆ ಮಾಡಿ, ಮೇಕೆದಾಟು ಯೋಜನಾ ಸ್ಥಳ ಪರಿವೀಕ್ಷಿಸಿ ವರದಿ ನೀಡುವಂತೆ ಆದೇಶಿಸಿತ್ತು. ಈ ಬಗ್ಗೆ ಕರ್ನಾಟಕ 09-06-2021ರಂದು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಈ ಮಧ್ಯೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (National Green Tribunal )ದ ಪ್ರಧಾನ ಪೀಠವು ಈ ಪ್ರಕರಣವನ್ನು ತನ್ನ ವರ್ಗಾಯಿಸಿಕೊಂಡು 17-06-2021ರಂದು ವಿಚಾರಣೆ ನಡೆಸಿ, ರಾಜ್ಯ ಸರ್ಕಾರದ ವಾದವನ್ನು ಆಲಿಸಿ, ಚೆನ್ನೈ ಪೀಠದ ಆದೇಶವನ್ನು ರದ್ದುಗೊಳಿಸಿತು.
ಇಷ್ಟಕ್ಕೆ ಸುಮ್ಮನಾಗದ ತಮಿಳುನಾಡು ರಾಜ್ಯ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ ಈ ಅರ್ಜಿಯ ಜೊತೆಗೆ, ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ಇದೇ ಜನವರಿ 27ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೆ ತಿಳಿಸಿದೆ.
ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯ ಪಕ್ಷಗಳಿಂದ ಪರಸ್ಪರ ಕೆಸರೆರೆಚಾಟ :
www.bengaluruwire.com
ಈ ಯೋಜನೆಯಿಂದ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಅನುಕೂಲವಾಗಲಿದೆ ಎಂಬುದು ರಾಜ್ಯ ಸರ್ಕಾರದ ವಾದ. ಮೇಕೆದಾಟು ಯೋಜನೆಗೆ ಸಂಬಂಧಿಸಿದ ಕಡತವು ಪ್ರಸ್ತುತ ಎಲ್ಲಾ ಇಲಾಖೆಗಳ ಅನುಮೋದನೆ ಪಡೆದು, ಪರಿಸರ ಮೇಲಿನ ಪರಿಣಾಮ ವರದಿ ತಯಾರಿಸಲು ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರವು ಅರ್ಜಿಯನ್ನು ಸಲ್ಲಿಸಲಾಗಿದೆ. ಆದರೆ ತಮಿಳುನಾಡು ಬಿಜೆಪಿ ಪಕ್ಷದ ಘಟಕ ಹಾಗೂ ಇತರೆ ತಮಿಳುನಾಡಿನ ಸ್ಥಳೀಯ ರಾಜಕೀಯ ಪಕ್ಷಗಳ ಒತ್ತಡದಿಂದ ಪರಿಸರ ಒಪ್ಪಿಗೆ (Environment Clearance) ಪಡೆಯುವಲ್ಲಿ ಕೇಂದ್ರ ಸರ್ಕಾರವು ವಿಳಂಬ ಧೋರಣೆ ತೋರುತ್ತಿದೆ ಎಂದು ದೂರಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜ.9ರಿಂದ ಮೇಕೆದಾಟು ಪಾದಯಾತ್ರೆ ಆರಂಭಿಸಿ ಮೇಕೆದಾಟು ಪ್ರಾಜೆಕ್ಟ್ ಅನುಷ್ಠಾನದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತಂದು ಯೋಜನೆ ಜಾರಿಗೆ ಮುಂದಾಗುತ್ತಿಲ್ಲ ಎಂಬುದನ್ನು ಜನಜಾಗೃತಿ ಮೂಡಿಸಲು ಹೊರಟಿದೆ.
ರಾಜ್ಯ ಸರ್ಕಾರದಿಂದ ಮೇಕೆದಾಟು ಯೋಜನೆ ಜಾರಿಗೆ ಸಾಧ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನೀರಿನ ವಿಚಾರದಲ್ಲಿ ಸುಖಾಸುಮ್ಮನೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸ್ಪಷ್ಟನೆ ನೀಡಿದೆ. ಕಾಂಗ್ರೆಸ್ ಮೇಕಾದಟು ಪಾದಯಾತ್ರೆ ಉದ್ದೇಶ ಏನೇ ಇರಬಹುದು. ಆದರೆ ಈ ಪಾದಯಾತ್ರೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಮೇಕೆದಾಟು ಯೋಜನೆ ಜಾರಿಗೆ ಒಂದಷ್ಟು ಒತ್ತಡ ಆಗುವುದಂತೂ ಸತ್ಯ.
ತಮಿಳುನಾಡು ಸರ್ಕಾರದ ವಾದವೇನು?
- ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಪಡೆಯಲಿ
- ತಮಿಳುನಾಡಿಗೆ ಬರುವ ನೀರನ್ನು ತಡೆಯುವ ಹಕ್ಕು ಕರ್ನಾಟಕಕ್ಕೆ ಇಲ್ಲ
- ಈ ಯೋಜನೆಯಿಂದ ಪರಿಸರ ಹಾಗೂ ವನ್ಯಜೀವಿಗಳಿಗೆ ಹಾನಿಯಾಗುತ್ತದೆ
- ಕರ್ನಾಟಕವು ಈ ಯೋಜನೆ ಜಾರಿಗೊಳಿಸಿ ಮಾಲೀಕತ್ವದ ಹಕ್ಕು ಪಡೆಯಲು ಆಗದು
- ಪ್ರಸ್ತಾವಿತ ಯೋಜನೆ ಮೂಲಕ ತಮಿಳುನಾಡಿಗೆ ಬಿಡುವ ನೀರಿನ ನಿಯಂತ್ರಣ ಹಾಗೂ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಹೊರಬಿಡುವ ನಿಯಂತ್ರಣ ಕರ್ನಾಟಕಕ್ಕೆ ನೀಡಿದಂತೆ ಆಗುತ್ತದೆ
ಪರಿಸರ, ತಾಂತ್ರಿಕ ತಜ್ಞರು, ಪರಿಣತರ ಅಭಿಪ್ರಾಯಗಳೇನು ?
- ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯಿಂದ ವನ್ಯಜೀವಿಗಳ ಆವಾಸಸ್ಥಾನದ ಮೇಲೆ ದುಷ್ಪರಿಣಾಮವಾಗಲಿದೆ. ಇದರಿಂದ ಬಂಡಿಪುರ, ಬಿಳಿಗಿರಿರಂಗನ ಬೆಟ್ಟ, ಗುಬ್ಬಿ ಹಾಗೂ ಸತ್ಯಮಂಗಲ ಅರಣ್ಯ ಪರಿಸರದ ಜೀವಸಂಕುಲದ ಮೇಲೆ ಅಗಾಧ ಪರಿಣಾಮ ಬೀರುವ ಸಾಧ್ಯತೆಯಿದೆ.
- ವಿನಾಶದಂಚಿಗೆ ಸಾಗುತ್ತಿರುವ ವನ್ಯಪ್ರಬೇಧಗಳನ್ನು ಗುರ್ತಿಸಿ ಪಟ್ಟಿ ಮಾಡುವ ಅಂತರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (IUCN) ಮೇಕೆದಾಟು ಪರಿಸರದಲ್ಲಿ ಕಂಡು ಬರುವ ಹಂಪ್ಡ್ ಬ್ಯಾಕ್ಡ್ ಮಶೀರ್ (Humped Backed Mahseer) ಕೆಂಪು ಪಟ್ಟಿಯಲ್ಲಿದ್ದು ವಿನಾಶದಂಚಿನಲ್ಲಿದೆ ಎಂದು ಗುರ್ತಿಸಿದೆ.
- ಮೇಕೆದಾಟು ಯೋಜನೆ ಪ್ರದೇಶದಲ್ಲಿ ಆಶ್ರಯ ಪಡೆದಿರುವ ಅಪಾರ ಜೀವಸಂಕುಲಗಳು ಮತ್ತು ಜಲಚರಗಳಿಗೆ ಅಣೆಕಟ್ಟು ನಿರ್ಮಾಣದಿಂದ ಅಪಾರ ಪ್ರಮಾಣದ ಪ್ರದೇಶ ಮುಳುಗಡೆಯಾಗಿ ಇವುಗಳ ಇರುವಿಕೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ ಎಂದು ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
- ಅಲ್ಲದೆ ಯೋಜನೆ ಜಾರಿಯಿಂದ 5 ಹಳ್ಳಿಗಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಕಂದಾಯ ಭೂಮಿಗಳು, ಮುತ್ತತ್ತಿ ಪ್ರವಾಸಿ ತಾಣಗಳ ಮೇಲೆ ನಕಾರಾತ್ಮಕ, ಸಾಮಾಜಿಕ ಹಾಗೂ ನೈಸರ್ಗಿಕ ದುಷ್ಪರಿಣಾಮಗಳಾಗುತ್ತದೆ. ಜೊತೆಗೆ ನೂರಾರು ವಿಶೇಷ ಮತ್ತು ಅಪರೂಪದ ಗಿಡಮರಗಳು ನಾಶವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
“ಮೇಕೆದಾಟು ಯೋಜನೆಯು ಕುಡಿಯುವ ನೀರು ಸೇರಿದಂತೆ ಬಹು ಉದ್ದೇಶಿತ ಯೋಜನೆಯಾಗಿದೆ. ಯೋಜನೆಗೆ ಮುಳುಗಡೆಯಾಗುವ 5 ಸಾವಿರ ಹೆಕ್ಟೇರ್ ಪ್ರದೇಶದ ಬದಲಿಗೆ ಲಭ್ಯವಾಗುವ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಪಡಿಸಬೇಕು. ಅಲ್ಲದೆ ಯೋಜನೆಯಿಂದ ನಿರ್ವಸಿತವಾಗುವ 5 ಹಳ್ಳಿಗಳ ಜನರಿಗೆ, ವನ್ಯಜೀವಿಗಳಿಗೆ ಪುನರ್ವಸತಿ ಕಲ್ಪಿಸಿ, ಪರಿಸರಕ್ಕೆ ಪೂರಕವಾಗಿ ಯೋಜನೆಯನ್ನು ಕಾರ್ಯಗತಗೊಳಿಸಬೇಕಾದ ಜರೂರಿದೆ. ಆ ಮೂಲಕ ರಾಜ್ಯದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿ ಮಾಡಬಹುದು. ಇದರಿಂದ ಪ್ರಮುಖವಾಗಿ ಬೆಂಗಳೂರಿನ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ.”
– ಪಿ.ಆರ್.ರಮೇಶ್, ವಿಧಾನಪರಿಷತ್ ಸದಸ್ಯರು