ಬೆಂಗಳೂರು, (www.bengaluruwire.com) : ಇನ್ನು ಎರಡು ತಿಂಗಳು ಕಳೆದರೆ ನಗರದಲ್ಲಿ ಬೇಸಿಗೆ ಬಿಸಿಗೆ ನೀರಿನ ಹಾಹಾಕಾರ ತಲೆಯತ್ತಲಿದೆ. ಈ ಮಧ್ಯೆ ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಕಳ್ಳತನ ಎಗ್ಗಿಲ್ಲದೆ ಮುಂದುವರೆಯುತ್ತಲೇ ಇದೆ. ಇದನ್ನು ತಪ್ಪಿಸಲು ಜಲಮಂಡಳಿ ಸಾಕಷ್ಟು ಸರ್ಕಸ್ ಮಾಡುತ್ತಿದೆ. ಆದರೆ ಅಕ್ರಮವಾಗಿ ಕಾವೇರಿ ನೀರು ಕದಿಯುವವರ ಸಂಖ್ಯೆ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ರಾಜಧಾನಿಯಲ್ಲಿ ಪ್ರಸ್ತುತ ಬರೋಬ್ಬರಿ 9,558 ಅಕ್ರಮ ನೀರಿನ ಸಂಪರ್ಕಗಳಿರುವುದಾಗಿ ಜಲಮಂಡಳಿ ತಿಳಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರದಲ್ಲಿ ಒಟ್ಟು 12 ವಿಭಾಗಗಳನ್ನು ಹೊಂದಿದ್ದು ಅವುಗಳನ್ನು ಪೂರ್ವ ಮತ್ತು ಪಶ್ಚಿಮ ವಲಯಗಳಾಗಿ ವಿಂಗಡಿಸಿದೆ. ಈ ವ್ಯಾಪ್ತಿಯಲ್ಲಿ 110 ಹಳ್ಳಿಗಳನ್ನು ಒಳಗೊಂಡು ನಗರದಲ್ಲಿನ 12.9 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ. ಇದೇ ವೇಳೆ ಅಕ್ರಮವಾಗಿ ಕಾವೇರಿ ನೀರಿಗೆ ಅಧಿಕೃತವಾಗಿ ಶುಲ್ಕ ಕಟ್ಟಿ, ಮೀಟರ್ ಹಾಕಿಸಿಕೊಂಡು ನೀರು ಪಡೆಯುವವರ ಮಧ್ಯೆ ಅಕ್ರಮವಾಗಿ ಪೈಪ್ ಎಳೆದು ನೀರು ಬಳಸುತ್ತಿರುವವರಿಗೇನು ಕಮ್ಮಿ ಇಲ್ಲ. ಇಂತಹ ಸಂಪರ್ಕಗಳ ಬಗ್ಗೆ ಬೆಂಗಳೂರು ಜಲಮಂಡಳಿ ನಿರಂತರವಾಗಿ ಪರಿಶೀಲನೆ ನಡೆಸಿದಾಗ ಬರೋಬ್ಬರಿ 53,865 ಅಕ್ರಮ ಸಂಪರ್ಕಗಳನ್ನು ಗುರ್ತಿಸಿದ್ದರು.
ಅವುಗಳ ಪೈಕಿ ಜಲಮಂಡಳಿಯು 39,854 ನೀರಿನ ಸಂಪರ್ಕಗಳನ್ನು ದಂಡ ಶುಲ್ಕ ಕಟ್ಟಿಸಿಕೊಂಡು ಸಕ್ರಮಗೊಳಿಸಿತ್ತು. ಆದರೆ 9,558 ಅಕ್ರಮ ಸಂಪರ್ಕಗಳು ಈವರೆಗೂ ಸಕ್ರಮವಾಗಿಲ್ಲ. ಅನಧಿಕೃತವಾಗಿ ನೀರಿನ ಸಂಪರ್ಕ ತೆಗೆದುಕೊಂಡವರ ಮೇಲೆ ಜಲಮಂಡಳಿಯು ಬೆಂಗಳೂರು ಮೆಟ್ರೊಪಾಲಿಟನ್ ಟಾಸ್ಕ್ ಫೋರ್ಸ್ (BMTF) ನಲ್ಲಿ 4,457 ಪ್ರಕರಣಗಳನ್ನು ದಾಖಲಿಸಿದೆ.
ಬಿಡಬ್ಲ್ಯುಎಸ್ ಎಸ್ ಬಿ ಪ್ರಸ್ತುತ ನಗರಕ್ಕೆ ಪ್ರತಿದಿನ 1,450 ದಶಲಕ್ಷ ಲೀಟರ್ ಕಾವೇರಿ ನೀರನ್ನು ಈ ಮೆಟ್ರೊಪಾಲಿಟನ್ ಸಿಟಿಗೆ ಪೂರೈಕೆ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಶೇ.35ರಷ್ಟು ನೀರು ಅನಗತ್ಯವಾಗಿ ಸೋರಿಕೆಯಾಗಿಯೋ, ಅಕ್ರಮ ನೀರಿನ ಸಂಪರ್ಕದಿಂದಾಗಿ ಹೀಗೆ ನಾನಾ ಕಾರಣಕ್ಕೆ ನಗರದಲ್ಲಿ ಲೆಕ್ಕಕ್ಕೇ ಸಿಗುತ್ತಿಲ್ಲ ಎಂದು ಜಲಮಂಡಳಿಯು ಹೇಳುತ್ತಿದೆ. ಪರಿಸ್ಥಿತಿ ಹೀಗಿರುವಾಗ ಜಲಮಂಡಳಿಯು ನಿರಂತರವಾಗಿ ನಗರದಲ್ಲಿ ಅಕ್ರಮವಾಗಿ ನೀರು ಸಂಪರ್ಕ ಪಡೆದಿರುವುದನ್ನು ಗುರುತಿಸಿ ಸಕ್ರಮಗೊಳಿಸುವತ್ತಲೂ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
“ಕಾವೇರಿ ನೀರು ಅಕ್ರಮ ಸಂಪರ್ಕದ ಬಗ್ಗೆ ನಿರಂತರವಾಗಿ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಪಡೆದುಕೊಂಡವರನ್ನು ಪತ್ತೆಹಚ್ಚುವ ಕಾರ್ಯ ಆರಂಭವಾಗಿದೆ. ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ, ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಿ ಸಕ್ರಮಗೊಳಿಸುವ ಕಾರ್ಯವಾಗುತ್ತಿದೆ. ಅದೇ ರೀತಿ ದೋಷಪೂರಿತ ನೀರಿನ ಮೀಟರ್ ಗಳನ್ನು ಬದಲಾಯಿಸಿ ಸ್ಮಾರ್ಟ್ ಮೀಟರ್ ಗೆ ಬದಲಾವಣೆ ಮಾಡಲಾಗುತ್ತಿದೆ. ಒಟ್ಟಾರೆ ನೀರಿನ ಸೋರಿಕೆ ತಡೆದು ಸಮರ್ಪಕವಾಗಿ ನೀರನ್ನು ಪೂರೈಕೆ ಮಾಡುವುದು ಜಲಮಂಡಳಿ ಉದ್ದೇಶವಾಗಿದೆ.”
– ಜಯರಾಮ್, ಬೆಂಗಳೂರು ಜಲಮಂಡಳಿ ಅಧ್ಯಕ್ಷರು
ನೀರು ಸೋರಿಕೆ ತಡೆಗೆ ಗುರಿ ಮತ್ತು ಜವಾಬ್ದಾರಿ ನಿಗಧಿಪಡಿಸಲು ಸರ್ಕಾರಕ್ಕೆ ತಜ್ಞರ ಸಲಹೆ :
ಕಳೆದ ವರ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಬೆಂಗಳೂರು ಜಲಮಂಡಳಿಯ ಪ್ರಗತಿ ಪರಿಶೀಲನೆ ವೇಳೆ ನಗರದಲ್ಲಿ ಲೆಕ್ಕಕ್ಕೆ ಸಿಗದೆ ಪೋಲಾಗುತ್ತಿರುವ ನೀರಿನ ಪ್ರಮಾಣವನ್ನು ಶೇಕಡ 20ಕ್ಕೆ ಇಳಿಸುವಂತೆ ಸೂಚನೆ ನೀಡಿದ್ದರು. ಆಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಲಮಂಡಳಿ ಅಧಿಕಾರಿಗಳು ತಲೆಯಾಡಿಸಿ ಬಂದಿದ್ದರು. ಲೆಕ್ಕಕ್ಕೆ ಸಿಗದ ನೀರು (UFW) ಕಡಿತಗೊಳಿಸುವ ಯೋಜನೆಯನ್ನು 2013ರಲ್ಲಿ ಜಾರಿಗೆ ಬಂತು. ಆಗ ಕಳ್ಳತನ ಅಥವಾ ನೀರಿನ ಸೋರಿಕೆಯಿಂದ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಬೆಂಗಳೂರಿನಲ್ಲಿ ಶೇಕಡ 51ರಷ್ಟು ಇತ್ತು. ಇದೀಗ ಅವುಗಳ ಪ್ರಮಾಣ ಶೇಕಡ 35ಕ್ಕೆ ಇಳಿದಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಯುಎಫ್ ಡಬ್ಲ್ಯು ಯೋಜನೆ ಅನುಷ್ಠಾನ ಆಮೆಗತಿಯಲ್ಲಿ ಸಾಗಿದೆ. ಪರಿಣಾಮಕಾರಿಯಾಗಿ ಕಾವೇರಿ ನೀರಿನ ನಿರ್ವಹಣೆಯನ್ನು ಜಲಮಂಡಳಿ ಮಾಡುತ್ತಿಲ್ಲ ಎಂದು ನೀರಿನ ತಜ್ಞರು ಆರೋಪಿಸುತ್ತಿದ್ದಾರೆ.
“ಜಲಮಂಡಳಿಯಲ್ಲಿ ನೀರು ಸರಬರಾಜು ಮಾಡುವುದೇ ಪ್ರಮುಖ ಆದಾಯ ಮೂಲ. ಹೀಗಿರುವಾಗ ಇಲ್ಲಿ ನೀರಿನ ಸೋರಿಕೆ ನಿಯಂತ್ರಿಸಿದರೆ ಬಿಡಬ್ಲ್ಯುಎಸ್ ಎಸ್ ಬಿಯು ಹೊರಗಿನಿಂದ ನೂರಾರು ಕೋಟಿ ರೂಪಾಯಿ ಕರ್ಚು ಮಾಡಿ ನೀರು ತರುವ ಪ್ರಮೇಯ ಬರುವುದಿಲ್ಲ. ನಗರದಲ್ಲಿರುವ 57 ನೆಲಮಟ್ಟದ ಜಲಾಗಾರಗಳಲ್ಲಿ ನೀರು ಸೋರಿಕೆ ಬಗ್ಗೆ ಸ್ವತಂತ್ರ್ಯ ಸಂಸ್ಥೆಯಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಬೇಕು. ಅಲ್ಲಿ ನೀರು ಸೋರಿಕೆಯಾಗುವ ಸಾಧ್ಯತೆಗಳಿವೆ. ಅಕ್ರಮ ನೀರಿನ ಸಂಪರ್ಕ, ನೀರಿನ ಸೋರಿಕೆ ಎರಡನ್ನು ಪರಿಣಾಮಕಾರಿಯಾಗಿ ತಡೆಯಲು ಜಲಮಂಡಳಿ ಅಧ್ಯಕ್ಷರು, ಪ್ರಧಾನ ಎಂಜನಿಯರ್ ಗಳು ಸೇರಿದಂತೆ ಎಲ್ಲರಿಗೂ ಸರ್ಕಾರ ನಿರೀಕ್ಷಿತ ಗುರಿಯನ್ನು ನೀಡಿ, ಜವಾಬ್ದಾರಿಯನ್ನು ವಹಿಸಬೇಕು. ಇಲ್ಲದಿದ್ದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಸಂಸ್ಕರಿಸಿ ತ್ಯಾಜ್ಯ ನೀರಿನ ಮರುಬಳಕೆಯನ್ನು ಯಶಸ್ವಿಯಾಗಿ ಬಳಕೆಯಾಗುತ್ತಿಲ್ಲ. ಯುಎಫ್ ಡಬ್ಲ್ಯು ಯೋಜನೆ ಜಾರಿಯು ತೃಪ್ತಿದಾಯಕವಾಗಿಲ್ಲ. ಹೀಗೆ ಆದರೆ 2030ಕ್ಕೆ ಬೆಂಗಳೂರಿನ ಭವಿಷ್ಯ ಕಷ್ಟವಿದೆ”
– ಕ್ಯಾಪ್ಟನ್ ರಾಜಾರಾವ್, ಜಲ ತಜ್ಞರು
ದೊಡ್ಡ ದೊಡ್ಡ ಕೈಗಾರಿಕೆಗಳು, ಉದ್ಯಮ ನಡೆಸುವವರು, ಕಟ್ಟಡ ನಿರ್ಮಾಣ ಸಂಸ್ಥೆಗಳು ತಮ್ಮ ದೈನಂದಿನ ನೀರಿನ ಅವಶ್ಯಕತೆಗಳಿಗಾಗಿ ಅಕ್ರಮ ನೀರಿನ ಸಂಪರ್ಕ ಪಡೆದು ದೊಡ್ಡ ಮಟ್ಟದಲ್ಲಿ ನೀರಿಗೆ ಕನ್ನ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆ ನಿಟ್ಟಿನಲ್ಲಿ ಜಲಮಂಡಳಿ ಪರಿಶೀಲನೆ ನಡೆಸಿ, ನೀರಿನ ಸೋರಿಕೆಯನ್ನು ತಡೆಗಟ್ಟಿ ನಗರದ ಜನತೆಗೆ ಗುಣಮಟ್ಟದ, ಶುದ್ಧ ನೀರು ಪೂರೈಕೆ ಮಾಡಬೇಕೆಂಬುದು ಪ್ರಜ್ಞ ನಾಗರೀಕರ ಅಭಿಪ್ರಾಯವಾಗಿದೆ.