ಬೆಂಗಳೂರು, (www.bengaluruwire.com) : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಅಪಾರ್ಟ್ ಮೆಂಟ್ ಗಳಲ್ಲಿ ಓಪನ್ ಜಿಮ್ (Open Gym) ನಿರ್ಮಾಣ ಮಾಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರಿನಲ್ಲಿ ನಿರ್ಮಾಣವಾಗಿರುವ ಅಪಾರ್ಟ್ ಮೆಂಟ್ ಸುತ್ತ 1 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಪೌಂಡ್, ಹುಸೇನ್ ಸಾಬ್ ಪಾಳ್ಯವನ್ನು ಸಂಪರ್ಕಿಸುವ ಪ್ರತ್ಯೇಕ ರಸ್ತೆ ನಿರ್ಮಾಣ ಹಾಗೂ ಸುಮಾರು 3.5 ಕೋಟಿ ರೂಪಾಯಿ ವೆಚ್ಚದ ಎಸ್ ಟಿಪಿ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಬಿಡಿಎದಿಂದ ಹೊಸದಾಗಿ ನಿರ್ಮಾಣವಾಗಿರುವ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್ ಅನ್ನು ಹಂತ ಹಂತವಾಗಿ ಅಳವಡಿಕೆ ಮಾಡಲಾಗುತ್ತದೆ. ಈ ಓಪನ್ ಜಿಮ್ ಗಳನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕೊರೊನಾದಿಂದಾಗಿ ಬಡಿಎ ಅಭಿವೃದ್ಧಿ ಯೋಜನೆಗಳಿಗೆ ಸ್ವಲ್ಪ ಹಿನ್ನಡೆ ಉಂಟಾಗಿತ್ತು. ಇದೀಗ ಸ್ವಲ್ಪ ಚೇತರಿಕೆ ಕಂಡು ಬಂದಿದ್ದು, ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಅಪಾರ್ಟ್ ಮೆಂಟ್ ಗಳಲ್ಲಿ ಓಪನ್ ಜಿಮ್ ನಿರ್ಮಾಣ ಮಾಡಿಕೊಡುವಂತೆ ಹಲವು ನಿವಾಸಿಗಳು ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಿಕರ ವ್ಯಾಯಾಮಕ್ಕೆ ಅನುಕೂಲವಾಗುವಂತಹ ಪರಿಕರಗಳನ್ನು ಅಳವಡಿಸಲಾಗುತ್ತದೆ ಎಂದು ಅವರು ಹೇಳಿದರು.
“ಬಿಡಿಎ ನಿರ್ಮಿಸಿದ ಎಷ್ಟೋ ಅಪಾರ್ಟ್ ಮೆಂಟ್ ಗಳಲ್ಲಿ ತೆರೆದ ವ್ಯಾಯಾಮ ವ್ಯವಸ್ಥೆ ಹಂತ ಹಂತವಾಗಿ ಮಾಡುತ್ತೇವೆ ಎಂದು ಬಿಡಿಎ ಅಧ್ಯಕ್ಷರೇನೊ ಹೇಳುತ್ತಾರೆ. ಆದರೆ ಬಿಡಿಎ ಈಗಾಗಲೇ ನಿರ್ಮಿಸಿರುವ ಅಪಾರ್ಟ್ ಮೆಂಟ್ ಗಳಲ್ಲಿ ಹಲವು ಅಪಾರ್ಟ್ ಮೆಂಟ್ ಮಳೆಗಾಲದಲ್ಲಿ ಸೋರುತ್ತವೆ, ಸರಿಯಾದ ರಸ್ತೆಯಂತಹ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಗುಣಮಟ್ಟಕ್ಕೆ ಆದ್ಯತೆ ನೀಡಿ ಜನರಿಗೆ ಅಗತ್ಯಕ್ಕೆ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲಿ. ಯಾವುದು ಬೇಕೊ ಅದನ್ನು ಮೊದಲು ಮಾಡಲಿ. ಜಿಮ್ ನಿರ್ಮಾಣ ಮತ್ತು ನಿರ್ವಹಣೆಗೆ ಮತ್ತೆ ಅನವಶ್ಯಕ ವೆಚ್ಚ ಮಾಡೋದು ಯಾಕೆ?”
– ಶಿವಕುಮಾರ್, ಅಧ್ಯಕ್ಷರು, ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆ