ಬೆಂಗಳೂರು/ಬೆಳಗಾವಿ, (www.bengaluruwire.com) : ನಗರದಲ್ಲಿ ಮಳೆ ನಿಂತು ಹಲವು ದಿನಗಳು ಕಳೆದರೂ, ಈತನಕ ರಸ್ತೆ ಸರಿಪಡಿಸದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾನುವಾರ ನಗರದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಕುರಿತು ಶಾಸಕರು, ಸಂಸದರು ಮತ್ತು ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು. ಇದೇ ಸಭೆಯಲ್ಲಿ, ಮಳೆಯಿಂದ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ತಾಕೀತು ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ರಾಜಧಾನಿಯ ರಸ್ತೆಗಳು ಗುಂಡಿಮಯ ಆಗಿತ್ತು. ಗುಂಡಿಗಳಿಂದ ಸಾವು ನೋವುಗಳು ಕೂಡ ಉಂಟಾಗಿತ್ತು.
ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಿಎಂ, ಮಾರ್ಚ್ 31 ರೊಳಗೆ ಹೈ ಡೆನ್ಸಿಟಿ ರಸ್ತೆ ಸೇರಿದಂತೆ ಹಾಳಾದ 731 ಕಿಲೋ ಮೀಟರ್ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಗಡುವು ನೀಡಿದರು.
ಅಲ್ಲದೆ ಬೆಂಗಳೂರು ಅಭಿವೃದ್ಧಿ ಸಂಬಂಧ ಹಲವು ನಿರ್ಧಾರ ಗಳನ್ನು ಮಾಡಲಾಯಿತು. ಅವುಗಳ ಪ್ರಮುಖ ಅಂಶಗಳು ಈ ಕೆಳಗಿನಂತಿದೆ :
- ವೈಟ್ ಟಾಪಿಂಗ್ ಬಾಕಿ ಇರುವುದನ್ನು ಪೂರ್ತಿಗೊಳಿಸುವಂತೆ ಸೂಚನೆ.
- ರಾಜಕಾಲುವೆಯಿಂದ ನೀರು ಸುಗಮವಾಗಿ ಹೋಗುವ ಕಾಮಗಾರಿಗೆ 1,500 ಕೋಟಿ ಕೊಡಲು ನಿರ್ಣಯ.
- ಜನವರಿ 31 ರೊಳಗೆ ನಗರದ ಎಲ್ಲಾ ಬೀದಿ ದೀಪಗಳ ಬದಲಾವಣೆ – ಎಲ್ಇಡಿ ಬೀದಿ ದೀಪಗಳ ಅಳವಡಿಕೆಗೆ ತೀರ್ಮಾನ.
- ಬಿಬಿಎಂಪಿ ವ್ಯಾಪ್ತಿಯಲ್ಲಿ 150 ಇಂಜಿನಿಯರ್ ನೇಮಕದ ಪ್ರಕ್ರಿಯೆ ಮಾಡಲು ತೀರ್ಮಾನ.
- ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ 7 ಸಾವಿರ ಸಿಸಿಟಿವಿಗಳ ಅಳವಡಿಕೆಗೆ ನಿರ್ಧಾರ.
- ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಮುಗಿಸಲು ಸಿಎಂ ಸೂಚನೆ.
- ಅಮೃತ ನಗರೋತ್ಥಾನವನ್ನು ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ.
- ಜಲಮಂಡಳಿ ಹಾಗೂ ಬಿಬಿಎಂಪಿ ನಡುವೆ ಮುಖ್ಯಮಂತ್ರಿ ಗಳು ಹಾಗೂ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ.
- ಅಕ್ರಮ ಸಕ್ರಮದಡಿ ಎ ಹಾಗೂ ಬಿ ಖಾತಾ ಗೊಂದಲ ನಿವಾರಿಸಲು ಕ್ರಮ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಶೀಘ್ರ ಇತ್ಯರ್ಥಕ್ಕೆ ಕೋರ್ಟಿಗೆ ಮನವಿ.
- ಟಿಡಿಆರ್ ಸಮಸ್ಯೆ ಬಗೆಹರಿಸಲು ನೂತನ ನೀತಿ ಜಾರಿಗೆ ತರಲು ತೀರ್ಮಾನ.
ಹೀಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ, ಭಾನುವಾರ ನಡೆದ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಹಾಗೂ ಪ್ರಗತಿ ಪರಿಶೀಲನೆ ನಡೆಸುವ ಮೂಲಕ ನಗರದಲ್ಲಿ ನಾಗರೀಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಬೆಳಗಾವಿ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ – ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಕ್ರಮ :
ಕಳೆದ ಒಂದು ವಾರದಲ್ಲಿ ಕರೋನಾ, ಒಮಿಕ್ರಾನ್ ಕೇಸ್ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಅದರಲ್ಲಿಯೂ ಮುಂಬೈಯಲ್ಲಿ ಪ್ರಕರಣಗಳು ಹೆಚ್ಚುತ್ತಿದೆ. ಮುಂಬೈ ಮತ್ತು ಕರ್ನಾಟಕದ ವಹಿವಾಟು ಜಾಸ್ತಿಯಿರುವ ಕಾರಣ ಗಡಿಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಲು ಈಗಾಗಲೇ ಸೂಚಿಸಲಾಗಿದೆ
ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಡೋಸ್ ಕಡ್ಡಾಯ ಲಸಿಕೆ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಪ್ರವೇಶಕ್ಕೆ ಅನುಮತಿಸಲಾಗುವುದು. ಬೆಳಗಾವಿ ಚೆಕ್ ಪೋಸ್ಟ್ ಜೊತೆಗೆ ಅಕ್ಕಪಕ್ಕದ ಚೆಕ್ ಪೋಸ್ಟ್ಗಳನ್ನೂ ಬಿಗಿಗೊಳಿಸಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸುಮಾರು 11 ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ.
ಜ.3 ರಿಂದ ಲಸಿಕಾ ಅಭಿಯಾನ :
ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಜನವರಿ 3 ರಂದು ಚಾಲನೆ ನೀಡಲಾಗುವುದು. ಜನವರಿ 10 ರಂದು ಕೊ -ಮಾರ್ಬಿಡಿಟಿ ಇರುವ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟಿರುವ ವ್ಯಕ್ತಿಗಳಿಗೆ ಲಸಿಕಾಕರಣವನ್ನು ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರೋನಾ ಎದುರಿಸಲು ಸಕಲ ಸಿದ್ಧತೆ :
ಕರೋನಾ ವನ್ನು ನಿರ್ಬಂಧಿಸುವ ಜೊತೆಗೆ ಕರೋನಾವನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ. ಕಳೆದ ಬಾರಿ ಸಂಭವಿಸಿದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಂಬಂಧಪಟ್ಟ ಆಕ್ಸಿಜನ್ ಸರಬರಾಜು ಕಂಪನಿಗಳೊಂದಿಗೆ ಸಂಯೋಜಿಸಿ ಸಮರ್ಪಕ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಮತ್ತು ಹೆಚ್ಚುವರಿ ಬೆಡ್, 4,000 ಐಸಿಯುಗಳನ್ನು ಇಡೀ ರಾಜ್ಯದಲ್ಲಿ ಸಿದ್ಧಪಡಿಸಲು ಕ್ರಮ ವಹಿಸಲಾಗಿದೆ. ಸಮರ್ಪಕ ಔಷಧಿ ಪೂರೈಕೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ :
ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಸಿ ತೀರ್ಮಾನ ಕೈಗೊಳ್ಳಲಾಗುವುದು. ಕರೋನಾ ಸ್ಥಿತಿಗತಿ, ಬೆಂಗಳೂರು ನಗರದಲ್ಲಿ ಕರೋನಾ ಬೆಳವಣಿಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.