ಬೆಂಗಳೂರು, (www.bengaluruwire.com) : ಮಾತೆತ್ತಿದ್ರೆ ಬೆಂಗಳೂರಿನ ಪರಿಸರ ಹಾಳಾಗಿದೆ, ಅದನ್ನು ಅಭಿವೃದ್ಧಿ ಮಾಡ್ತೀವಿ. ಅದಕ್ಕಾಗಿ ಗಿಡ ನೆಡ್ತೀವಿ, ಕೆರೆ ಅಭಿವೃದ್ಧಿ ಮಾಡ್ತೀವಿ ಅಂತ ಸರ್ಕಾರದಲ್ಲಿ ಆಡಳಿತ ನಡೆಸುವ ಬೆಂಗಳೂರು ಅಭಿವೃದ್ಧಿ ಸಚಿವರು, ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಬರಿ ಮೈಕಲ್ಲಿ, ಮಾಧ್ಯಮಗಳಲ್ಲಿ ಹೇಳಿದ್ದೇ ಬಂತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 204 ಕೆರೆಗಳನ್ನು ರಕ್ಷಣೆ ಮಾಡುವವರೇ ಇಲ್ಲದಂತಾಗಿದೆ. ನಗರದಲ್ಲಿರುವ 20 ಕೆರೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕೆರೆಗಳು ಒಂದಲ್ಲಾ ಒಂದು ರೀತಿಯಲ್ಲಿ ಸರ್ಕಾರಿ ಸಂಸ್ಥೆಗಳು, ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಪಾಲಿಕೆಯ 204 ಕೆರೆಗಳು 6,426.19 ಎಕರೆ ವಿಸ್ತೀರ್ಣವಿದ್ದು ಆ ಪೈಕಿ 941.27 ಎಕರೆ ಕೆರೆ ಜಾಗ ಒತ್ತುವರಿ (Lake Area Enchroachment) ಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸರ್ಕಾರಿ ಸಂಸ್ಥೆಗಳಿಂದಲೇ 77.25 ಎಕರೆ ಕೆರೆ ಒತ್ತುವರಿ
ಪಾಲಿಕೆ ಸೇರಿದ 28 ಕೆರೆಗಳಲ್ಲಿ 77.25 ಎಕರೆ ಕೇವಲ ವಿವಿಧ ಸರ್ಕಾರಿ ಸಂಸ್ಥೆಗಳಿಂದಲೇ ಒತ್ತುವರಿಯಾಗಿದೆ. ಈ ಸರ್ಕಾರಿ ಒತ್ತುವರಿಯಲ್ಲಿ ಬಿಡಿಎ ಲೇಔಟ್ ನಿರ್ಮಾಣ, ರಸ್ತೆ, ಉದ್ಯಾನವನ, ಸ್ಮಶಾನ, ರಾಷ್ಟ್ರೀಯ ಹೆದ್ದಾರಿ ರಚನೆ, ಬೆಂಗಳೂರು ಜಲಮಂಡಳಿ ಸೇರಿದಂತೆ ನಾನಾ ಒತ್ತುವರಿಗಳು ಸೇರಿವೆ. ಖಾಸಗಿ ಒತ್ತುವರಿಯಲ್ಲಿ ಸ್ಲಂ ನಿವಾಸಿಗಳಿಂದ ಒತ್ತುವರಿ, ಖಾಸಗಿ ಅಪಾರ್ಟ್ ಮೆಂಟ್, ಮನೆ ಮತ್ತಿತರ ಒತ್ತುವರಿಗಳಾಗಿದೆ.
19 ಕೆರೆಗಳ ಅನ್ಯ ಉದ್ದೇಶಕ್ಕೆ ಬಳಕೆ :
ಲಿಂಗರಾಜಪುರ ಕೆರೆ, ಗೆದ್ದಲಹಳ್ಳಿ ಕೆರೆ, ವಿಜಿನಾಪುರ ಕೆರೆ, ಇಟ್ಟಮಡು ಕೆರೆ, ಕೊನೇನ ಅಗ್ರಹಾರ ಕೆರೆ ಸೇರಿದಂತೆ 251.15 ಎಕರೆ ವಿಸ್ತೀರ್ಣ ಹೊಂದಿದ 19 ಕೆರೆಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಆ ಕೆರೆಗಳಿದ್ದ ಸ್ಥಳಗಳಲ್ಲಿ ರಸ್ತೆ, ಮನೆ, ಕಟ್ಟಡ, ರಾಜಕಾಲುವೆ, ಬಿಡಿಎ ಪಾರ್ಕ್, ಕಲ್ಯಾಣಮಂಟಪ, ಆಸ್ಪತ್ರೆ ಮತ್ತಿತರ ನಿರ್ಮಾಣಗಳಾಗಿ ಬಳಕೆಯಾಗುತ್ತಿದೆ.
ಇಲ್ಲಿಯ ತನಕ 42.1 ಎಕರೆ ಕೆರೆ ಒತ್ತುವರಿ ತೆರವು :
ಇಲ್ಲಿಯ ತನಕ ಬಿಬಿಎಂಪಿಯ ಕೆರೆ ವಿಭಾಗದ ಅಧಿಕಾರಿಗಳು ಕೇವಲ 42.1 ಎಕರೆ ವಿಸ್ತೀರ್ಣದ ಒತ್ತುವರಿಯನ್ನು ಮಾತ್ರ ತೆರವು ಮಾಡಿದ್ದಾರೆ. ಇನ್ನು 899.17 ಎಕರೆ ವಿಸ್ತೀರ್ಣದ ಒತ್ತುವರಿಯನ್ನು ತೆರವು ಮಾಡಿಲ್ಲ. ಪಾಲಿಕೆಯ 204 ಕೆರೆಗಳಲ್ಲಿ ಎಷ್ಟೋ ಕೆರೆಗಳಿಗೆ ಬೇಲಿಯೇ ಇಲ್ಲ. ಕೊಳಚೆ ನೀರು ಅವ್ಯಾಹತವಾಗಿ ಕೆರೆಗೆ ಸೇರಿ ಒಂದು ಕಾಲದಲ್ಲಿ ಶುದ್ಧ ನೀರಿನಿಂದ ಕೂಡಿದ ಜಲ ಮೂಲಗಳು ವಿಷಕಾರಿ ಮಾಲಿನ್ಯದ ತಾಣಗಳಾಗಿವೆ.
ವಿವಿಧ ಪ್ರಕರಣಗಳಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೆರೆಗಳ ಮಾಲಿನ್ಯ ನಿಯಂತ್ರಣ, ಒತ್ತುವರಿ ತೆರವಿಗೆ ಆದೇಶಿಸಿದ್ದರೂ ಪಾಲಿಕೆ ಕೆರೆ ವಿಭಾಗದ ಅಧಿಕಾರಿಗಳು ಮಾತ್ರ ಗಾಢ ನಿದ್ದೆಯಲ್ಲಿದ್ದಾರೆ.
204 ಕೆರೆಗಳ ಅಭಿವೃದ್ಧಿಗೆ 30 ಕೋಟಿ ರೂ. ಸಾಲದು :
2021-22ನೇ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿ 25 ಕೆರೆಗಳ ಅಭಿವೃದ್ಧಿಗೆ 30 ಕೋಟಿ ರೂ. ಹಣ ಮೀಸಲಿಟ್ಟು ಪಾಲಿಕೆ ಕೈತೊಳೆದುಕೊಂಡಿದೆ. ಈಗಾಗಲೇ 79 ಕೆರೆಗಳನ್ನು ಕೆರೆ ವಿಭಾಗದಿಂದ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಉಳಿದ ಕೆರೆಗಳ ವಾರ್ಷಿಕ ನಿರ್ವಹಣೆಗೆ ಕನಿಷ್ಠ 15 ಲಕ್ಷ ರೂ. ವೆಚ್ಚವಾಗಲಿದೆ. ಕೆರೆಯಲ್ಲಿ ಬೆಳೆಯುವ ಜೊಂಡು, ಕಳೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳದಿದ್ದಲ್ಲಿ ಕೆರೆ ನಾಶವಾಗುತ್ತದೆ. ಪರಿಸ್ಥಿತಿ ಹೀಗಿದ್ದರೂ ಪಾಲಿಕೆ ಕೆರೆ ನಿರ್ವಹಣೆಗೆ ಹಣ ಮೀಸಲಿಟ್ಟಿದ್ದು ಯಾವುದಕ್ಕೂ ಸಾಲದು ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇರುವ ಕೆರೆಗಳು ಹಾಗೂ ರಾಜಕಾಲುವೆ ಒತ್ತುವರಿ, ಕೆರೆ ನಿರ್ವಹಣೆ ಕೊರತೆಯಿಂದಾಗಿ ಪ್ರತಿ ಮಳೆಗಾಲದಲ್ಲೂ ನಗರದಲ್ಲಿ ಪ್ರವಾಹ, ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗಿ ಹಾನಿಯಾಗುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಹಾಗಾದಾಗ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರಿಪಡಿಸುವ ನಾಟಕ ಆಡ್ತಾರೆ ಬಿಟ್ರೆ ಆಮೇಲೆ ಏನೂ ಆಗಲ್ಲ ಅಂತ ಕೆರೆ ಸಂರಕ್ಷಣೆ ಹೋರಾಟಗಾರರು, ನಾಗರೀಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸಿಎಸ್ ಆರ್ ನಿಧಿ ಬಳಸಿ ನಗರದ ಕೆರೆಗಳ ಅಭಿವೃದ್ಧಿ ಮಾಡಲು ಸಲಹೆ :
“ಬೆಂಗಳೂರಿನಲ್ಲಿ ಕಾರ್ಪೊರೇಟ್ ಕುಳಗಳು, ಪ್ರಭಾವಿ ಭೂಗಳ್ಳರು ಕೆರೆ ಒತ್ತುವರಿ ಮಾಡ್ತಿದ್ದರೂ, ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕಗ್ಗದಾಸಪುರ ಕೆರೆ ಹಾಗೂ ಭೈರಸಂದ್ರ ಕೆಳಗಿನ ಕೆರೆ. ಇಲ್ಲಿ ಕಾರ್ಪೊರೇಟ್ ಕಂಪನಿಗಳ ಜೊತೆ ಸ್ಥಳೀಯ ಜನಪ್ರತಿನಿಧಿಗಳೇ ಕೈಜೋಡಿಸಿ ಆ ಕೆರೆಗಳ ಒತ್ತುವರಿಗೆ ಸಹಕರಿಸುತ್ತಿದ್ದಾರೆ. ಬಿಬಿಎಂಪಿಯಲ್ಲಿ 204 ಕೆರೆಗಳಿದ್ದರೂ ಅದರ ಅಭಿವೃದ್ಧಿಗೆ ಹಣ ಮೀಸಲಿಡಲ್ಲ. ಪಾಲಿಕೆ ಬಳಿ ದುಡ್ಡಿಲ್ಲದಿದ್ದರೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ (CSR FUND) ಪಡೆದು ಕೆರೆ ನಿರ್ವಹಣೆ ಮಾಡಲಿ. ಯಾವುದಕ್ಕೂ ಇಚ್ಛಾಶಕ್ತಿ ಬೇಕು.”
– ಮೋಹನ್ ದಾಸರಿ, ಅಧ್ಯಕ್ಷರು, ಆಮ್ ಆದ್ಮಿ ಪಕ್ಷ (ಬೆಂಗಳೂರು)
ಭಾಷಣಕ್ಕೆ ಸೀಮಿತವಾಯ್ತಾ ಸಿಎಂ ಬೊಮ್ಮಾಯಿ ಹೇಳಿಕೆ?
ಆಗಸ್ಟ್ 15 ರ 75ನೇ ಸ್ವಾತಂತ್ರೋತ್ಸವ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರದಲ್ಲಿನ 39 ಕೆರೆ, 36 ಪಾರ್ಕ್ ಗಳ ಅಭಿವೃದ್ಧಿಪಡಿಸ್ತೇವೆ ಹೇಳಿದ್ರು. ಆದ್ರೆ ಈತನಕ 8 ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಅಂತಿಮ ಹಂತಕ್ಕೆ ಬಂದಿವೆ. ಆದರೆ ಈ ಕೆರೆಗಳ ಪುನರುಜ್ಜೀವನ ಕಾರ್ಯಕ್ಕೆ 2018-19ನೇ ಸಾಲಿನ ಅನುದಾನದ ಹಣವನ್ನು ಈ ಕಾಮಗಾರಿಗಳಿಗೆ ವರ್ಗಾಯಿಸಿದರೆ ವಿನಃ ಸರ್ಕಾರದಿಂದ ಬಿಡಿಗಾಸು ಕೊಡಲಿಲ್ಲ.
ನಗರದಲ್ಲಿ ರಸ್ತೆ, ರಾಜಕಾಲುವೆ, ಘನತ್ಯಾಜ್ಯ ನಿರ್ವಹಣೆಗೆ ವರ್ಷಂಪ್ರತಿ ನೂರಾರು ಕೋಟಿ ಖರ್ಚು ಮಾಡುವ ಬಿಬಿಎಂಪಿ ಪರಿಸರ ಸಮತೋಲನ ದೃಷ್ಟಿಯಿಂದ ಕೆರೆಗಳ ಸಂರಕ್ಷಣೆಗೆ ನಿರ್ಲಕ್ಷ್ಯ ತೋರುತ್ತಿರುವುದು ಪರಿಸರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಹೈಕೋರ್ಟ್ ನಲ್ಲಿ ಮತ್ತಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾದರೂ ಆಶ್ಚರ್ಯಪಡಬೇಕಿಲ್ಲ. ದಪ್ಪಚರ್ಮದ ಪಾಲಿಕೆ ಅಧಿಕಾರಿಗಳಿಗೆ ಕೋರ್ಟ್ ಚಾಟಿಯೇಟು ಬಿದ್ದರಷ್ಟೆ ಎಚ್ಚರವಾಗುವುದಾ? 2022 ಹೊಸ ವರ್ಷ (New Year 2022)ದ ಸಂದರ್ಭದಲ್ಲಾದರೂ ರಾಜ್ಯ ಸರ್ಕಾರ, ಬಿಬಿಎಂಪಿ ಅಧಿಕಾರಿಗಳು ಕೆರೆಗಳ ಸಂರಕ್ಷಣೆಗೆ ಮುಂದಾಗಲಿ ಎಂದು ಆಶಿಸೋಣ.