ನವದೆಹಲಿ, (www.bengaluruwire.com) : ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ವಾಹನಗಳ ಪಟ್ಟಿ ಹೊಸ ಮಾರುಕಟ್ಟೆಯಲ್ಲಿ 12 ಕೋಟಿ ರೂ. ಮೌಲ್ಯದ ಮೇಬ್ಯಾಚ್ ಎಸ್ 650 ಗಾರ್ಡ್ ಮರ್ಸಿಡೀಸ್ ಬೆನ್ಜ್ (Mercedes-Maybach S 650 Guard) ಕಾರು ಇತ್ತೀಚೆಗೆ ಸೇರ್ಪಡೆಯಾಗಿದ್ದಲ್ಲ ಬದಲಿಗೆ ಈ ವಾಹನವು ಏಪ್ರಿಲ್ ನಲ್ಲೇ ರಿಜಿಸ್ಟ್ರೇಷನ್ ಆಗಿ ಬಳಕೆಯಲ್ಲಿತ್ತು.
ಕಾರು ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಮರ್ಸಿಡೀಸ್ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹೊಂದಿದ್ದು, ಶಸ್ತ್ರಸಜ್ಜಿತ ಕಾರಾಗಿದ್ದು, ಪ್ರಧಾನಿಯವರ ಅಧಿಕೃತ ಓಡಾಟಕ್ಕೆ ಬಳಸುವ ರೇಂಜ್ ರೋವರ್ ವೋಗ್ ಹಾಗೂ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೆ ನವದೆಹಲಿಯ ಹೈದರಾಬಾದ್ ಹೌಸ್ ಗೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಪ್ರಧಾನಿ ನರೇಂದ್ರ ಮೋದಿ ಮೇಬ್ಯಾಚ್ ಎಸ್ 650 ಗಾರ್ಡ್ ಮರ್ಸಿಡೀಸ್ ಕಾರಿನಲ್ಲಿ ಬಂದಿಳಿದಾಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಕಾರು ಕಂಡು ಬಂದಿತ್ತು.
ಮರ್ಸೀಡಸ್ ಮೇಬ್ಯಾಚ್ ಎಸ್-650 ಗಾರ್ಡ್ ಕಾರು ಅತಿಹೆಚ್ಚು ಭದ್ರತೆಯ ಹೊಂದಿದ ಕಾರಾಗಿದೆ. ಈ ಕಾರಿನ ಗಾಜು ಹಾಗೂ ವಾಹನದ ಹೊರಮೈ ವ್ಯವಸ್ಥೆ ಎಕೆ-47 (AK-47 Rifles) ರೈಫಲ್ ಗುಂಡಿನ ದಾಳಿಯನ್ನು ಸಮರ್ಥವಾಗಿ ತಾಳಿಕೊಳ್ಳಬಲ್ಲದು. ಈ ಕಾರಿನ ಮಾರುಕಟ್ಟೆ ಮೌಲ್ಯ 12 ಕೋಟಿ ರೂಪಾಯಿ ಎನ್ನಲಾಗಿದೆ. 2010 ರ ಇಆರ್ ವಿ (Explosive Resistant Vehicle) ಶ್ರೇಯಾಂಕ ಹೊಂದಿರುವ ಮೇಬ್ಯಾಚ್ ಮರ್ಸಿಡೀಸ್ ಕಾರು ಕೇವಲ ಎರಡು ಮೀಟರ್ ಅಂತರದಿಂದ 15 ಕೆಜಿ ಸ್ಪೋಟಕ ಬಳಸಿ ಸ್ಪೋಟಿಸುವ ಬಾಂಬ್ ದಾಳಿಯನ್ನು ತಾಳಿಕೊಳ್ಳುವ ಶಕ್ತಿ ಹೊಂದಿದೆ.
ಬೆಂಗಳೂರು ವೈರ್ ನಲ್ಲಿ ಎಕ್ಸ್ ಕ್ಲೂಸಿವ್ ಮಾಹಿತಿ : 4.37 ಕೋಟಿ ರೂ.ಗೆ ಕಾರು ಖರೀದಿ :
ಪ್ರಧಾನಿ ನರೇಂದ್ರ ಮೋದಿಯವರು ಬಳಸುವ ಡಿಎಲ್ 2ಸಿ- ಬಿಸಿ- 5944 ನೋಂದಣಿಯಿರುವ ಮರ್ಸೀಡಸ್ ಮೇಬ್ಯಾಚ್ ಎಸ್-650 ಗಾರ್ಡ್ ಕಪ್ಪು ಬಣ್ಣದ ಕಾರು 2020 ಆಗಸ್ಟ್ ನಲ್ಲಿ ತಯಾರಿಕೆಯಾಗಿದ್ದು, 7ನೇ ಏಪ್ರಿಲ್ 2021ರಂದು ನೋಂದಣಿಯಾಗಿದೆ. ಈ ದುಬಾರಿ ವಾಹನದ ಮಾರುಕಟ್ಟೆ ಮೌಲ್ಯ ಸರಿ ಸುಮಾರು 12 ಕೋಟಿ ರೂ. ಆಗಿದೆ. ಆದರೆ ಕೇಂದ್ರ ಸರ್ಕಾರದ ಮಾಲೀಕತ್ವ ಹೊಂದಿದ ಈ ಕಾರನ್ನು 4,37,25,845 ರೂ.ಗಳನ್ನು ನೀಡಿ ಖರೀದಿಸಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಖಚಿತಪಡಿಸಿವೆ. 17.93 ಅಡಿ ಉದ್ದ ಹಾಗೂ 6.27 ಅಡಿ ಅಗಲ ಹೊಂದಿದ ಈ ಕಾರಿನ ತೂಕ 4,350 ಕಿಲೋ ಗ್ರಾಂ (4.35 Tonnes) ಆಗಿದ್ದರೆ, ವಾಹನಗಳು ಪೂರ್ಣರೀತಿಯಲ್ಲಿ ಪ್ರಯಾಣಿಕರಿಂದ ಭರ್ತಿಯಾದರೆ 4,870 ಕೆ.ಜಿ ತೂಕ ಹೊಂದಲಿದೆ.
ಮರ್ಸೀಡಸ್ ಮೇಬ್ಯಾಚ್ ಎಸ್-650 ಗಾರ್ಡ್ ಕಾರಿನ ವಿಶೇಷತೆಗಳು
- ವಾಹನದ ಕಿಟಕಿ ಗಾಜು ಹಾಗೂ ಹೊರಮೈ ಎಕೆ-47 ಗುಂಡಿನ ದಾಳಿ ತಡೆಯಬಲ್ಲದು
- 12 ಕೋಟಿ ರೂ. ಮೌಲ್ಯದ ಅತಿಹೆಚ್ಚು ಭದ್ರತೆಯ ಅತ್ಯಾಧುನಿಕ ದುಬಾರಿ ಕಾರು
- 2010ರ ಇಆರ್ ವಿ ಶ್ರೇಯಾಂಕ ಹೊಂದಿದ ಕಾರು
- 2 ಮೀಟರ್ ಅಂತರದಲ್ಲಿ 15 ಕೆ.ಜಿ.ವರೆಗಿನ ಸ್ಪೋಟಕ ತಾಳಿಕೊಳ್ಳುವ ಸಾಮರ್ಥ್ಯ
- ಕಿಟಕಿ ಗಾಜು ಒಳಭಾಗ ಪಾಲಿಕಾರ್ಬೊನೇಟ್ ಕೋಟಿಂಗ್ ರಕ್ಷಣೆ
- ಗ್ಯಾಸ್ ದಾಳಿಯಾದರೂ ಕಾರಿನ ಒಳಗಿದ್ದವರಿಗೆ ಪ್ರತ್ಯೇಕ ಗಾಳಿ ಪೂರೈಕೆ ವ್ಯವಸ್ಥೆ
- ಟೈರ್ ಪಂಕ್ಚರ್ ಆದರೂ ಕಾರು ಓಡಿಸಬಹುದು
- ಇಂಧನ ಟ್ಯಾಂಕ್ ಹಾನಿಯಾಗದಂತೆ ತಡೆಯುವ ತಂತ್ರಜ್ಞಾನ ಬಳಕೆ
- ಗಂಟೆಗೆ ಗರಿಷ್ಠ ವೇಗ ಮಿತಿ 160 ಕಿ.ಮೀ
ಈ ಕಾರಿನ ಕಿಟಕಿ ಗಾಜುಗಳ ಒಳಭಾಗವನ್ನು ಪಾಲಿಕಾರ್ಬೊನೇಟ್ ಕೋಟಿಂಗ್ ನಿಂದ ತಯಾರು ಮಾಡಲಾಗಿದ್ದು, ಕಾರಿನ ಹೊರಭಾಗದಲ್ಲಿ ಯಾವುದೇ ಬ್ಲಾಸ್ಟ್ ಆದರೂ ಅದನ್ನು ತಾಳಿಕೊಂಡು, ಕಾರಿನ ಒಳಗಿದ್ದವರನ್ನು ಸಂರಕ್ಷಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಒಂದೊಮ್ಮೆ ಕಾರಿನ ಮೇಲೆ ಯಾವುದೇ ಸಂಭಾವ್ಯ ಗ್ಯಾಸ್ ದಾಳಿಯಾದಲ್ಲಿ, ಮೇಬ್ಯಾಚ್ ಎಸ್-650 ಗಾರ್ಡ್ ಕಾರಿನ ಒಳ ಕ್ಯಾಬಿನ್ ನಲ್ಲಿ ಪ್ರಯಾಣಿಸುವರು ಉಸಿರಾಡಲು ಪ್ರತ್ಯೇಕ ಆಮ್ಲಜನಕ ಪೂರೈಸುವ ವ್ಯವಸ್ಥೆಯಿದೆ.
ಮರ್ಸೀಡಸ್ ಮೇಬ್ಯಾಚ್ ಎಸ್-650 ಗಾರ್ಡ್ ಕಾರು ಆರು ಲೀಟರ್ ಟ್ವಿನ್ ಟರ್ಬೋ ವಿ12 ಎಂಜಿನ್ ಹೊಂದಿದ್ದು, 516 ಬಿಎಚ್ ಪಿ ಸಾಮರ್ಥ್ಯ ಹೊಂದಿದೆ. ಈ ಕಾರಿನ ಗರಿಷ್ಠ ವೇಗ ಮಿತಿಯನ್ನು ಪ್ರತಿ ಗಂಟೆಗೆ 160 ಕಿಲೋ ಮೀಟರ್ ನಿಗಧಿಪಡಿಸಲಾಗಿದೆ. ಎಸ್-650 ಗಾರ್ಡ್ ಕಾರಿನ ಇಂಧನ ಟ್ಯಾಂಕ್ ಮೇಲೆ ವಿಶೇಷ ವಸ್ತುವಿನ ಹೊದಿಕೆ ಹಾಕಲಾಗಿರುತ್ತದೆ. ಒಂದೊಮ್ಮೆ ಇಂಧನ ಟ್ಯಾಂಕ್ ದುಷ್ಕರ್ಮಿಗಳ ದಾಳಿ ಅಥವಾ ಅಪಘಾತದಿಂದ ಹಾನಿಯಾದರೂ, ಆ ಫ್ಯುಯೆಲ್ ಟ್ಯಾಂಕ್ ನಿಂದ ಇಂಧನ ಸೋರಿಕೆಯಾಗದಂತೆ ತಡೆಯುವಲ್ಲಿ ಸಹಕಾರಿಯಾಗಿದೆ. ಈ ಕಾರಿನ ಟೈರ್ ಅನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದ್ದು, ಒಂದೊಮ್ಮೆ ಕಾರಿನ ಚಕ್ರ ಹಾಳಾದರೆ ಅಥವಾ ಪಂಕ್ಚರ್ ಆದರೂ ಸಹ ಫ್ಲಾಟ್ ಆದ ಚಕ್ರವೂ ಸೂಕ್ತ ರೀತಿ ಚಲಿಸಲು ಯೋಗ್ಯವಾಗುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಇನ್ನು ಮೇಬ್ಯಾಚ್ ಎಸ್-650 ಗಾರ್ಡ್ ಕಾರಿನ ಒಳ ವಿನ್ಯಾಸ ಕಣ್ಣಿಗೆ ಮುದನೀಡುವಂತಿದ್ದು, ಕೂರುವ ಆಸನದಲ್ಲೇ ಬಾಡಿ ಮಸಾಜರ್, ಆರಾಮದಾಯಕವಾಗಿ ಕಾಲು ನೀಡಿ ಕೂರಲು ಹೆಚ್ಚುವರಿ ಸ್ಥಳದ ಸೌಲಭ್ಯವನ್ನು ಈ ಕಾರು ಹೊಂದಿದೆ.
ವಿಶೇಷ ಭದ್ರತಾ ಪಡೆಯಿಂದ ಇಂತಹ ಕಾರುಗಳ ಖರೀದಿಗೆ ಮುನ್ನ ಮೌಲ್ಯಮಾಪನ :
ಸಾಮಾನ್ಯವಾಗಿ ಇಂತಹ ಹೆಚ್ಚು ಭದ್ರತೆಯ ಕಾರುಗಳನ್ನು ರಾಷ್ಟ್ರ ಅಥವಾ ರಾಜ್ಯದ ಮುಖ್ಯಸ್ಥರನ್ನು ರಕ್ಷಿಸುವ ಹೊಣೆಹೊತ್ತ ವಿಶೇಷ ಭದ್ರತಾ ಪಡೆ (Special Protection Group or SPG) ಇಂತಹ ಕಾರು ಖರೀದಿಗೆ ಮನವಿ ಮಾಡುತ್ತವೆ. ಒಂದು ರಾಷ್ಟ್ರದ ಪ್ರಧಾನಿ, ರಾಷ್ಟ್ರಪತಿ ಮತ್ತಿತರ ಗಣ್ಯರ ರಕ್ಷಣೆ ಹೆಚ್ಚು ಮಾಡುವ ಅಗತ್ಯವಿದ್ದಲ್ಲಿ ಯಾವ ರೀತಿಯ ರಕ್ಷಣೆ ಅಗತ್ಯವಿದೆ ಎಂಬುದನ್ನು ಮೌಲ್ಯಮಾಪನ ಮಾಡಿ ಅದಕ್ಕೆ ಸರಿಹೊಂದುವ ಕಾರನ್ನು ಗಣ್ಯರ ಓಡಾಟಕ್ಕೆ ಎಸ್ ಪಿಜಿ ಖರೀದಿಸುತ್ತದೆ. ಸಾಮಾನ್ಯವಾಗಿ ಎಸ್ ಪಿಜಿ ಶತ್ರುಗಳಿಂದ ಗಣ್ಯರನ್ನು ರಕ್ಷಿಸಲು ಒಂದೇ ಮಾದರಿಯ ಎರಡು ಕಾರುಗಳನ್ನು ಖರೀದಿಸುತ್ತದೆ ಎಂದು ಕರನ್ ಬೈಕ್.ಕಾಮ್ ಎಂಬ ವೆಬ್ ಸೈಟ್ ನ ವರದಿ ತಿಳಿಸಿದೆ.