ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ವಿರುದ್ಧ ಯಾವುದೇ ಕೇಸ್ ಹಾಕಿದ್ರೂ ಸುಲಭವಾಗಿ ಗೆಲ್ಲಬಹುದು…! ಎಂಬ ಚಿತ್ರಣ ಬಹುತೇಕ ಕಡೆಯಿದೆ. ಇದಕ್ಕೆ ಕಾರಣ ಬಲಹೀನವಾಗಿರೋ ಕಾನೂನು ಕೋಶ. ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಬಿಬಿಎಂಪಿಗೆ ಸಂಬಂಧಿಸಿದ 6,119 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಕೋರ್ಟ್ ಗಳಲ್ಲಿ ಹಲವು ರೀತಿಯ ಪ್ರಕರಣಗಳನ್ನು ಎದುರಿಸುತ್ತಿದ್ದರೂ ಪಾಲಿಕೆ ನಗರ ಯೋಜನೆ ವಿಭಾಗ ವ್ಯಾಪ್ತಿಗೆ ಬರುವ, ಕಟ್ಟಡ ನಕ್ಷೆಗೆ ವ್ಯತಿರಿಕ್ತವಾಗಿ ಸಾರ್ವಜನಿಕರು, ಬಿಲ್ಡರ್ ಮತ್ತಿತರು ಕಟ್ಟಡ ಕಟ್ಟಿ ನಕ್ಷೆ ಉಲ್ಲಂಘಿಸದ ಪ್ರಕರಣಗಳು, ಕಂದಾಯ ವಿಭಾಗದಲ್ಲಿ ಖಾತಾ ನೋಂದಣಿ, ಖಾತಾ ಬದಲಾವಣೆ ಹೀಗೆ ಮತ್ತಿತರ ವಿಷಯಗಳೇ ಹೆಚ್ಚಾಗಿ ನ್ಯಾಯಾಲಯದಲ್ಲಿ ವಿಚಾರಣೆ ದಾಖಲಾಗುತ್ತಿವೆ.
ಕೋರ್ಟಲ್ಲಿ ಗೆಲವು ಸಾಧಿಸಿದ ಪ್ರಕರಣಗಳೇ ಕಮ್ಮಿ :
ಜನಪ್ರತಿನಿಧಿಗಳ ಆಡಳಿತವಿದ್ದಾಗ ಪ್ರತಿ ತಿಂಗಳ ಕೌನ್ಸಿಲ್ ಮೀಟಿಂಗ್ ನಲ್ಲಿಯೂ ಬಿಬಿಎಂಪಿಯ ಕಾನೂನು ಕೋಶದ ಅಧಿಕಾರಗಳ ಕಾರ್ಯವೈಖರಿ ಬಗ್ಗೆ ಕಾರ್ಪೊರೇಟರ್ ಗಳು ಶತನಾಮಾವಳಿ ಮಾಡದ ದಿನವೇ ಇರುತ್ತಿರಲಿಲ್ಲ. ಪಾಲಿಕೆಯ ವ್ಯಾಪ್ತಿಯಲ್ಲಿ 6,800 ಆಸ್ತಿಗಳನ್ನು ಬಿಬಿಎಂಪಿ ಹೊಂದಿದೆ. ಆ ಪೈಕಿ 324 ಆಸ್ತಿಗಳನ್ನು ಪಾಲಿಕೆಯು ವಿವಿಧ ಉದ್ದೇಶಗಳಿಗೆ ಬಾಡಿಗೆ, ಭೋಗ್ಯದ ಆಧಾರದ ಮೇಲೆ ಕಡಿಮೆ ಹಣಕ್ಕೆ ನೀಡಿದೆ. ಆದರೆ ಎಷ್ಟೋ ಪಾಲಿಕೆ ಆಸ್ತಿಗಳನ್ನು ಕೊಟ್ಟ ಉದ್ದೇಶಗಳಿಗೆ ಬಿಟ್ಟು ವಾಣಿಜ್ಯ ಉದ್ದೇಶಕ್ಕೆ ಬದಲಾವಣೆ ಮಾಡಿಕೊಂಡು ಆ ಅಂಗಡಿ ಮಾಲೀಕರು ಲಕ್ಷಾಂತರ ರೂಪಾಯಿ ಆದಾಯ ಸಂಪಾದಿಸುತ್ತಿದ್ದರೂ, ಪಾಲಿಕೆಗೆ ಮಾತ್ರ ಬಿಡಿಗಾಸು ಬಾಡಿಗೆ ನೀಡುತ್ತಿದ್ದಾರೆ.
ಈ ಬಗ್ಗೆ ನೋಟಿಸ್ ನೀಡಿದರೆ ಅಂಗಡಿ ಬಾಡಿಗೆ, ಭೋಗ್ಯಕ್ಕೆ ಪಡೆದವರು ಕೋರ್ಟಿನ ಮೊರೆ ಹೋದಾಗ, ಪಾಲಿಕೆ ಕಾನೂನು ಕೋಶದ ವಕೀಲರು ಯಶಸ್ವಿಯಾಗಿ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸಿ ಗೆಲವು ಸಾಧಿಸಿದ ಉದಾಹರಣೆಗಳೇ ಕಮ್ಮಿ. ಹೀಗಾಗಿ ಪಾಲಿಕೆಯು ವಾಣಿಜ್ಯ ಉದ್ದೇಶಕ್ಕೆ ಬಳಸಿದ ಆಸ್ತಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುವಲ್ಲಿ ಸೋಲುಂಟಾಗಿದೆ. ಪಾಲಿಕೆಯ ಕಾನೂನು ಕೋಶದ ಅಧಿಕಾರಿಗಳು ವಿವಿಧ ಕೋರ್ಟ್ ಗಳಲ್ಲಿ ಎಷ್ಟು ಕೇಸ್ ಪೆಂಡಿಂಗ್ ಇದೆ ಅನ್ನೋ ಮಾಹಿತಿ ನೀಡುತ್ತಾರೆ. ಆದರೆ ಕಳೆದ ಮೂರು ವರ್ಷಗಳಿಂದ ಎಷ್ಟು ಕೇಸ್ ಗಳಲ್ಲಿ ಪಾಲಿಕೆ ಗೆಲವು ಸಾಧಿಸಿದೆ ಮಾಹಿತಿ ಕೊಡಿ ಎಂದರೆ, ಆ ಕೇಸ್ ವಿಲೇವಾರಿ ಆದ ಬಳಿಕ ಅವುಗಳ ಅಂಕಿಸಂಖ್ಯೆ ನಿರ್ವಹಣೆ ಮಾಡಿಡುವುದಿಲ್ಲ ಎಂದು ಸಬೂಬು ನೀಡಿ ಜಾರಿ ಕೊಳ್ಳುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ಜಯ ಲಭಿಸಿದ ಕಾರಣ ಮಾಹಿತಿ ಕೊಡಲು ಹಿಂದೇಟು ಹಾಕುತ್ತಾರೆ ಎನ್ನಲಾಗಿದೆ.
“ಬಿಬಿಎಂಪಿಯ ಕಾನೂನು ಕೋಶದ ಅಧಿಕಾರಿಗಳು ಆಸ್ತಿ ತೆರಿಗೆ ಸೋರಿಕೆ, ಪಾಲಿಕೆ ಆಸ್ತಿ ರಕ್ಷಣೆ, ಗುತ್ತಿಗೆ ಆಸ್ತಿ ವಾಪಸ್ ಪಡೆಯುವಿಕೆ ಮತ್ತಿತರ ಪಾಲಿಕೆಯ ನ್ಯಾಯಾಲಯ ಪ್ರಕರಣಗಳನ್ನು ಕಾಲ ಕಾಲಕ್ಕೆ ಟ್ರಾಕಿಂಗ್ ಮಾಡಿ, ನ್ಯಾಯಾಲಯಕ್ಕೆ ಸೂಕ್ತ ಕಾಲಾವಧಿಯಲ್ಲಿ ಅಗತ್ಯ ರೀತಿಯಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸಿದ್ದರೆ ಕೋರ್ಟ್ ನಲ್ಲಿ ಇಷ್ಟೆಲ್ಲಾ ಪ್ರಕರಣಗಳು ಬಾಕಿ ಉಳಿಯುತ್ತಿರಲಿಲ್ಲ. ಬಿಬಿಎಂಪಿಯ ಲೀಗಲ್ ಸೆಲ್ ಅನ್ನೋದು ಇಲ್ಲೀಗಲ್ ಸೆಲ್ ರೀತಿ ಆಗೋಗಿದೆ. ಇದನ್ನು ಬಲಗೊಳಿಸಬೇಕು. ಪಾಲಿಕೆಯ ಕಾನೂನು ಕೋಶದಲ್ಲಿನ ವಕೀಲರ ಸಂಖ್ಯೆ ಯಾತಕ್ಕೂ ಸಾಲದು. ತಾವು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ಮಾನ್ಯತಾ ಟೆಕ್ ಪಾರ್ಕ್ ತೆರಿಗೆ ವಸೂಲಾತಿ ಪ್ರಕರಣದಲ್ಲಿ ಪಾಲಿಕೆಯು ಹಣಕೊಟ್ಟು ಖಾಸಗಿ ವಕೀಲರನ್ನು ಹೊರಗಿನಿಂದ ನೇಮಿಸಿ ಪ್ರಕರಣ ಗೆದ್ದಿದ್ದವು. ಬಿಬಿಎಂಪಿಯ ಕಾನೂನು ಕೋಶವನ್ನು ಸಮಗ್ರವಾಗಿ ಸರಿಪಡಿಸಬೇಕಿದೆ.”
– ಶಿವರಾಜ್, ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು
30 ನವೆಂಬರ್ 2011ರಲ್ಲಿರುವಂತೆ ಯಾವ್ಯಾವ ಕೋರ್ಟ್ ಗಳಲ್ಲಿ ಎಷ್ಟೆಷ್ಟು ಪ್ರಕರಣಗಳು ಬಾಕಿ ಉಳಿದಿವೆ ಎಂಬ ವಿವರ ಈ ಕೆಳಕಂಡಂತಿದೆ :
ನ್ಯಾಯಾಲಯದ ವಿಧ | ಒಟ್ಟು ಬಾಕಿ ಪ್ರಕರಣಗಳು |
ಸುಪ್ರೀಂಕೋರ್ಟ್ | 86 |
ಹೈಕೋರ್ಟ್ | 3,271 |
ಸಿವಿಲ್ ಕೋರ್ಟ್ | 1,877 |
ಕೆಎಟಿ (ಕರ್ನಾಟಕ ರಾಜ್ಯ ಮೇಲ್ಮನವಿ ನ್ಯಾಯಾಧಿಕರಣ) | 660 |
ಕೆಎಸ್ ಎ ಟಿ (ಆಡಳಿತ) | 69 |
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ | 22 |
ಕರ್ನಾಟಕ ಭೂ ಕಬಳಿಕೆ ನ್ಯಾಯಾಲಯ | 85 |
ಇತರೆ (ಕಾರ್ಮಿಕ ನ್ಯಾಯಾಲಯ, ಗ್ರಾಹಕ ನ್ಯಾಯಾಲಯ, ಕಂದಾಯ ನ್ಯಾಯಾಲಯ ಪ್ರಕರಣ, ಮಧ್ಯಸ್ಥಿಕೆ ಕೇಂದ್ರ) | 49 |
ಒಟ್ಟಾರೆ | 6,119 |
ಯಾಕೆ ಇಷ್ಟೆಲ್ಲಾ ಕೇಸ್ ಗಳನ್ನು ಪೆಂಡಿಂಗ್ ಉಳಿಸಿಕೊಂಡಿದ್ದೀರಾ ಅಂತ ಕಾನೂನು ಕೋಶದ ಮುಖ್ಯಸ್ಥ ಕೆ.ಡಿ.ದೇಶಪಾಂಡೆಯವರನ್ನು ಕೇಳಿದ್ರೆ ಅವರು ಹೇಳೋದು ಹೀಗೆ…
“ಇಡೀ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿವರ್ಷ 1,500 ಹೊಸ ನ್ಯಾಯಾಲಯ ಪ್ರಕರಣಗಳು ಈ ವಿಭಾಗಕ್ಕೆ ಸೇರ್ಪಡೆಯಾಗುತ್ತವೆ. ಕಾನೂನು ಕೋಶದ ಮುಖ್ಯಸ್ಥರ ಒಂದು ಹುದ್ದೆ, 2 ಉಪ ಕಾನೂನು ಅಧಿಕಾರಿ, ನಾಲ್ವರು ಸಹಾಯಕ ಕಾನೂನು ಅಧಿಕಾರಿ, ಇಬ್ಬರು ಕಿರಿಯ ಕಾನೂನು ಅಧಿಕಾರಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅಷ್ಟೂ ಪ್ರಕರಣಗಳನ್ನು ನಿಭಾಯಿಸಲು ಬಿಬಿಎಂಪಿಯ ಬಳಿ ಅಗತ್ಯವಾದ ವಕೀಲರ ಕೊರತೆಯಿದೆ. 2015ರಲ್ಲೇ ಕರ್ನಾಟಕ ಲೋಕಾಸೇವಾ ಆಯೋಗಕ್ಕೆ 13 ಮಂದಿ ಕಿರಿಯ ಕಾನೂನು ಅಧಿಕಾರಿಗಳ ಹುದ್ದೆಗೆ ನೇಮಕ ಮಾಡಿಕೊಡುವಂತೆ ಕೇಳಿದ್ದೆವು ಆ ಕೆಲಸ ಇನ್ನೂ ಆಗಿಲ್ಲ. ಅಲ್ಲದೆ 30 ಕಾನೂನು ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಬಿಬಿಎಂಪಿ ಆಡಳಿತ ವಿಭಾಗಕ್ಕೆ ಪ್ರಸ್ತಾವನೆ ಕಳಿಸಿದ್ದೆವು. ಆದರೆ ಇನ್ನೂ ಯಾವುದೇ ಕೆಲಸ ಆಗಿಲ್ಲ. ಕಾನೂನು ವಿಭಾಗವನ್ನು ಸಶಕ್ತಗೊಳಿಸುವ ಕೆಲಸ ತುರ್ತಾಗಿ ಆಗಬೇಕಿದೆ.” ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಮೂರು ಅವಧಿ ಪೂರ್ಣಗೊಂಡರೂ ಕಾನೂನು ಮುಖ್ಯಸ್ಥರಾಗಿ ಮುಂದುವರಿಕೆ? :
ಬಿಬಿಎಂಪಿ ಕಾನೂನು ಕೋಶದ ವಕೀಲರ ಸಮಿತಿಯಲ್ಲಿ 70ಕ್ಕೂ ಹೆಚ್ಚು ಖಾಸಗಿ ವಕೀಲರಿದ್ದಾರೆ. ಈ ವಕೀಲರಿಗೆ ಕೇಸ್ ಗೆ ಇಂತಿಷ್ಟು ಹಣ ಪಾಲಿಕೆಯಿಂದ ಸಂದಾಯವಾಗುತ್ತದೆ. ಆದರೂ ಯಾಕೆ ಪಾಲಿಕೆಯ ಪ್ರಕರಣಗಳು ಬಾಕಿ ಉಳಿದಿರುತ್ತದೆ. ಬಿಲ್ಡರ್ ಒಬ್ಬ ಬಿಲ್ಡಿಂಗ್ ಲೈಸೆನ್ಸ್ ಫೀಸ್ ನಿಗಧಿ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿ ಕೋರ್ಟ್ ನಿಂದ ಆದೇಶ ತಂದರೆ ಪಾಲಿಕೆಗೆ ಅನುಕೂಲವಾಗುವಂತೆ ಕಾನೂನು ಕೋಶದ ಅಧಿಕಾರಿಗಳು ಕೋರ್ಟ್ ನಲ್ಲಿ ಆ ತೀರ್ಪನ್ನು ಪ್ರಶ್ನಿಸುವ ಬದಲು, ನಗರ ಯೋಜನೆ ವಿಭಾಗಕ್ಕೆ ಕಾನೂನು ಅಭಿಪ್ರಾಯ ನೀಡಿ ಕೈತೊಳೆದುಕೊಳ್ಳುತ್ತಿದೆ. ಅಲ್ಲಿಗೆ ಬಿಬಿಎಂಪಿಗೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಶುಲ್ಕ ತಾನು ನಿಗಧಿ ಮಾಡಿದಷ್ಟು ಲಭಿಸದೆ, ಪಾಲಿಕೆ ಆದಾಯ ಕಡಿಮೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಈ ಮಧ್ಯೆ ಕಾನೂನು ಕೋಶದ ಮುಖ್ಯಸ್ಥರಾದ ಕೆ.ಡಿ.ದೇಶಪಾಂಡೆ 21 ಡಿಸೆಂಬರ್ 2013ರಂದು ಅಧಿಕಾರ ಸ್ವೀಕರಿಸಿದ್ದರು. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅವರ ಅವಧಿಯನ್ನು ಒಂದು ವರ್ಷಕ್ಕೆ ನಿಗಧಿಪಡಿಸಿದ್ದು, ಅವರ ಕಾರ್ಯ ತೃಪ್ತಿಯಾದಲ್ಲಿ ಮೂರು ವರ್ಷಕ್ಕೆ ವಿಸ್ತರಿಸಲು ಹೇಳಲಾಗಿತ್ತು. ಅದರಂತೆ 2016ಕ್ಕೆ ಅವರ ಅವಧಿ ಪೂರ್ಣವಾಗಿತ್ತು.
ಅವರ ಅವಧಿ ಪೂರ್ಣವಾದರೂ ಈತನಕ ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಬಿಬಿಎಂಪಿಯು ಹೊಸದಾಗಿ ಅಧಿಸೂಚನೆ ಹೊರಡಿಸಿಲ್ಲ. ಈಗಿರುವ ಕಾನೂನು ಕೋಶದ ಮುಖ್ಯಸ್ಥರ ಅವಧಿ ಹಾಗೂ ಅವರ ವಯಸ್ಸು ಮೀರಿದರೂ ಅದೇ ಹುದ್ದೆಯಲ್ಲಿ ಮುಂದುವರೆದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಕಾನೂನು ಪಾಲಿಸಬೇಕಾದವರು ಕಾನೂನು ಉಲ್ಲಂಘಿಸಿದರೆ, ಕಾನೂನು ಅಭಿಪ್ರಾಯ ಕೇಳುವ ಇತರೆ ಇಲಾಖೆಯ ಅಧಿಕಾರಿಗಳು ಅವರ ಮಾತನ್ನು ಹೇಗೆ ಕೇಳುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಅಮರೇಶ್ ಪ್ರಶ್ನಿಸಿದ್ದಾರೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನವೆಂಬರ್ ನಲ್ಲಿ ದೂರು ನೀಡಿದ್ದಾರೆ.
“ಬಿಬಿಎಂಪಿಯ ಕಾನೂನು ಕೋಶದ ಮುಖ್ಯಸ್ಥರ ವಯಸ್ಸು 62 ವರ್ಷ ಎಂದು 2012ರಲ್ಲಿ ಬಿಬಿಎಂಪಿಯು ಈ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ ತಿಳಿಸಿತ್ತು. 2013ರಲ್ಲಿ ತಮ್ಮ 62ನೇ ವಯಸ್ಸಿನಲ್ಲಿ ಕೆ.ಡಿ.ದೇಶಪಾಂಡೆಯವರು ಕಾನೂನು ಕೋಶದ ಮುಖ್ಯಸ್ಥರಾಗಿ ನೇಮಕವಾದರು. ಮೂರು ವರ್ಷದ ಬಳಿಕ ಆ ಹುದ್ದೆಗೆ ಹೊಸದಾಗಿ ನೇಮಕಾತಿ ಆಗಬೇಕಿತ್ತು. ಆದರೆ ಕಳೆದ 8 ವರ್ಷಗಳಿಂದ ಮೂರನೇ ಸಲ ಕೆ.ಡಿ.ದೇಶಪಾಂಡೆಯವರು ಆ ಹುದ್ದೆಯಲ್ಲಿ ಮುಂದುವರೆದಿದ್ದಾರೆ. 71 ವರ್ಷ ವಯಸ್ಸಿನ ಕಾನೂನು ಕೋಶದ ಮುಖ್ಯಸ್ಥರನ್ನು ಬದಲಿಸಿ, ಹೊಸದಾಗಿ ಈ ಹುದ್ದೆ ತುಂಬಲು ಬಿಬಿಎಂಪಿಯು ಕ್ರಮ ಕೈಗೊಳ್ಳಬೇಕು ಎಂದು ನವೆಂಬರ್ ನಲ್ಲಿ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ದೂರು ನೀಡಿದ್ದೆ. ಈತನಕ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.”
– ಎಸ್.ಅಮರೇಶ್, ಸಾಮಾಜಿಕ ಕಾರ್ಯಕರ್ತರು
ಪ್ರಕರಣ ಹಂಚಿಕೆಯಲ್ಲೂ ವಕೀಲರಿಗೆ ತಾರತಮ್ಯ ಮಾಡುತ್ತಿರುವ ಕಾನೂನು ಕೋಶ ? :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾನೂನು ವಿಭಾಗದಲ್ಲಿ ವಕೀಲರ ಸಮಿತಿಯಲ್ಲಿ 70 ವಕೀಲರಿದ್ದು, ತಮಗೆ ಬೇಕಾದ ವಕೀಲರಿಗೆ ಹೆಚ್ಚು ಕೇಸ್ ನೀಡುವ, ಉಳಿದವರಿಗೆ ಕಡಿಮೆ ಪ್ರಕರಣಗಳನ್ನು ನೀಡುತ್ತಾ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂಬ ದೂರುಗಳು ಪಾಲಿಕೆ ಪಡಸಾಲೆಯಲ್ಲಿ ಸಾಕಷ್ಟು ಕೇಳಿಬರುತ್ತಿದೆ. ಕಾನೂನು ಕೋಶದ ಅವ್ಯವಸ್ಥೆ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಬೆಂಗಳೂರು ವೈರ್ ಮಾತನಾಡಿಸಿದಾಗ, ಅವರು ಹೇಳಿದ್ದು ಹೀಗೆ :
“ಪಾಲಿಕೆಯ ಕಾನೂನು ವಿಭಾಗದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾನೂನು ಅಧಿಕಾರಿಗಳು ಸಮರ್ಥವಾಗಿ ನ್ಯಾಯಾಲಯದಲ್ಲಿ ಪ್ರಕರಣವನ್ನು ನಿಭಾಯಿಸುವಲ್ಲಿ ವಿಫರಾಗಿದ್ದಾರೆ. ಈ ವಿಭಾಗವನ್ನು ಸಶಕ್ತಗೊಳಿಸಲು ಕೋರ್ಟ್ ನಲ್ಲಿ ಉತ್ತಮವಾಗಿ ಕೇಸ್ ನಿರ್ವಹಿಸಿ, ಗೆಲವು ಸಾಧಿಸುವ ವಕೀಲರನ್ನು ನೇಮಿಸುವ ಕೆಲಸ ಮಾಡಲಿದ್ದೇವೆ. ಕಾನೂನು ಕೋಶದ ಮುಖ್ಯಸ್ಥರ ಅವಧಿ ಈಗಾಗಲೇ ಮುಗಿದಿರುವುದು ಗಮನಕ್ಕೆ ಬಂದಿದೆ. ಸಮರ್ಥವಾಗಿ ಕಾನೂನು ಕೋಶ ಮುನ್ನೆಡೆಸುವ ಮುಖ್ಯಸ್ಥರನ್ನು ನೇಮಕ ಮಾಡಲು ಹೊಸದಾಗಿ ಅಧಿಸೂಚನೆ ಹೊರಡಿಸುತ್ತೇವೆ. ಎನ್ ಐಸಿ ಅಭಿವೃದ್ಧಿಪಡಿಸಿದ ಕೋರ್ಟ್ ಪ್ರಕರಣದ ಮಾನಿಟರಿಂಗ್ ವ್ಯವಸ್ಥೆ ಸಾಫ್ಟ್ ವೇರ್ ಅನ್ನು ಪಾಲಿಕೆಯಲ್ಲಿ ನಿಲ್ಲಿಸಿರುವ ಬಗ್ಗೆ ವರದಿ ತರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.”
– ಗೌರವ್ ಗುಪ್ತಾ, ಬಿಬಿಎಂಪಿ ಮುಖ್ಯ ಆಯುಕ್ತರು
ಒಟ್ಟಾರೆ ವಿವಿಧ ನ್ಯಾಯಾಲಯಗಳಲ್ಲಿ ಬಿಬಿಎಂಪಿಯ ಪರವಾಗಿ ಸಮರ್ಥವಾಗಿ ವಾದ ಮಂಡಿಸಿ, ಪ್ರಕರಣ ಗೆಲವಿಗೆ ಅಗತ್ಯ ವಕೀಲರನ್ನು ನೇಮಿಸಿ, ಸಶಕ್ತ ಕಾನೂನು ಕೋಶ ರಚಿಸುವುದು ಬೆಂಗಳೂರಿನ ಜನತೆ ಹಾಗೂ ಪಾಲಿಕೆ ದೃಷ್ಟಿಯಿಂದ ಅತಿಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಇಲಾಖೆಯಲ್ಲಿ ಬದಲಾವಣೆ ಯಾವಾಗ ಆಗುತ್ತೋ ಕಾದು ನೋಡಬೇಕು.