ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ಸೈಲೆಂಟಾಗಿ ಹಾವು ಕಡಿತದ ಪ್ರಕರಣಗಳು ಆಗುತ್ತಿದ್ದರೂ, ಅಧಿಕೃತವಾಗಿ ವರದಿಯಾಗುತ್ತಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಆಂಟಿ ವೆನಮ್ ಔಷಧಿಯೂ ಲಭ್ಯವಿಲ್ಲದಿರುವ ವಿಷವೂ ತಡವಾಗಿ ಬೆಳಕಿಗೆ ಬಂದ ಪ್ರಕರಣದಿಂದ ಬಹಿರಂಗಗೊಂಡಿದೆ.
ಬಿಬಿಎಂಪಿ ಕಂಟ್ರೋಲ್ ರೂಮ್ ಗೆ ಹಾವು ರಕ್ಷಣೆಗಾಗಿ ಕರೆ ಮಾಡಿದರೆ, ತಮಗೆ ಅನುಕೂಲವಾಗಬಹುದಾದ ಪ್ರಕರಣಗಳಲ್ಲಿ ಮಾತ್ರ ಕೆಲವು ವನ್ಯಜೀವಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಹಾವಿನ ರಕ್ಷಣೆ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬಂದಿದೆ.
ಡಿ.23ರಂದು ನಂದಿನಿ ಲೇಔಟ್ ನಲ್ಲಿ ಬಿಎಸ್ ಎನ್ ಎಲ್ ಕಚೇರಿಯಲ್ಲಿ ಟೆಕ್ನಿಷಿಯನ್ ಪ್ರದೀಪ್ (ಕೋರಿಕೆಯ ಮೇರೆಗೆ ಹೆಸರು ಬದಲಿಸಲಾಗಿದೆ) ಅವರಿಗೆ ವಿಷ ಸರ್ಪವೊಂದು ಕಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರದೀಪ್ ಅವರು ಅಂದು ಬೆಳಗ್ಗೆ 11.30ರ ಸಮಯದಲ್ಲಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ತಮ್ಮ ಉಪಕರಣವಿಡುವ ಲಾಕರ್ ಇರುವ ಬೀರು ತೆಗೆದಾಗ ಬೀರುವಿನ ಮೇಲಿದ್ದ ಹಾವು ಪ್ರದೀಪ್ ತಲೆಯ ಮೇಲೆ ಬಿದ್ದು ಕೆಳಗೆ ಬಿದ್ದಿತ್ತು. ಆಗ ಅವರ ಟೋಪಿಯೂ ಕೆಳಗೆ ಜಾರಿಬಿದ್ದಿತ್ತು. ಹಾವು ಕಂಡು ಒಂದು ಕ್ಷಣ ಹೌಹಾರಿದ ಅವರು ಆ ಕೊಠಡಿಯಿಂದ ಹೊರ ಓಡಿ ಹೋದವರು ಪುನಃ ವಾಪಸ್ ಅದೇ ಸ್ಥಳಕ್ಕೆ ಬಂದು ಟೋಪಿ ತೆಗೆದುಕೊಳ್ಳುವಾಗ ಅವರ ಕೈಗೆ ಹಾವು ಕಚ್ಚಿತ್ತು.
ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಲ್ಲ ಹಾವು ಕಡಿತಕ್ಕೆ ಔಷಧಿ :
ಹಾವು ಕಚ್ಚಿದ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು, ನಂದಿನಿ ಲೇಔಟ್ ಬಿಎಸ್ ಎನ್ ಎಲ್ ಕಚೇರಿಯಿಂದ ಕಾಲು ನಡಿಗೆಯಲ್ಲಿ ಸಾಗಿದರೆ 5 ನಿಮಿಷದಲ್ಲಿ ತಲುಪಬಹುದಾದ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾವು ಕಡಿತಕ್ಕೆ ಸೂಕ್ತ ಔಷಧಿಯೇ ಲಭ್ಯವಿರಲಿಲ್ಲ ಎಂಬ ಆಘಾತಕಾರಿ ಸುದ್ದಿಯೂ ಈ ಪ್ರಕರಣದಿಂದ ಬಹಿರಂಗವಾಗಿದೆ. ಅದೃಷ್ಟವಶಾತ್ ಆ ಬಿಎಸ್ ಎನ್ ಎಲ್ ಟೆಕ್ನಿಷಿಯನ್ ಗೆ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
“ನಂದಿನಿ ಲೇಔಟ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ನೀಡುವ ಔಷಧಿ ಇಟ್ಟುಕೊಳ್ಳದೆ, ಹಾವು ಕಡಿತದ ಔಷಧಿ ತಮ್ಮಲ್ಲಿ ಇಲ್ಲದ ಕಾರಣ ನೀಡಿ ಪ್ರದೀಪ್ ಅವರನ್ನು, ಆ ಪಿಎಚ್ ಸಿ ಕೇಂದ್ರದಿಂದ 1 ಗಂಟೆ ದೂರ ಕ್ರಮಿಸಬೇಕಾದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ಗಲಿಬಿಲಿಗೊಂಡ ನಮ್ಮ ಸಿಬ್ಬಂದಿ ಹತ್ತಿರದ ಕಣ್ವ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ತದನಂತರ ಮಲ್ಲೇಶ್ವರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಿದೆವು. ಬೆಳಗ್ಗೆ 11.30ಕ್ಕೆ ಹಾವು ಕಡಿತದ ಪ್ರಕರಣವಾದರೂ, ಪಾಲಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಪ್ರದೀಪ್ ಅವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಯಿತು. ಜೊತೆಗೆ ತಮ್ಮ ಕಚೇರಿಯಲ್ಲಿ ಹಾವು ಕಾಣಿಸಿಕೊಂಡಿದ್ದು ಅದನ್ನು ಬೇರೆಡೆ ಸಾಗಿಸುವಂತೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೂ ಪಾಲಿಕೆ ವನ್ಯಜೀವಿ ಕಾರ್ಯಕರ್ತರು ಒಬ್ಬರು ಮತ್ತೊಬ್ಬರ ಮೊಬೈಲ್ ನಂಬರ್ ನೀಡಿ ಸಾಗುಹಾಕಿದರು. ಸಂಜೆಯ ಬಳಿಕ ತಮ್ಮ ಕಚೇರಿಗೆ ಬಂದರು. ಅಷ್ಟರೊಳಗೆ ಹಾವು ಅಲ್ಲಿರಲಿಲ್ಲ”.
- ಪ್ರಶಾಂತ್, ಬಿಎಸ್ ಎನ್ ಎಲ್ ಕಿರಿಯ ಎಂಜಿನಿಯರ್
ನಂದಿನಿ ಲೇಔಟ್ ಹಾವು ಕಡಿತದ ವಿಚಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗಕ್ಕೆ ಆಗಲಿ, ಅದರ ಮೇಲಾಧಿಕಾರಿಗಳ ಗಮನಕ್ಕೆ ಬಂದೇ ಇಲ್ಲ ಎಂಬ ವಿಷಯ ಆತಂಕ ಮತ್ತು ಆಶ್ಚರ್ಯಕ್ಕೆ ಕಾರಣವಾಗಿದೆ. ಇದೇ ಜುಲೈ, ಆಗಸ್ಟ್ ಹಾಗೂ 15 ದಿನಗಳ ಹಿಂದಷ್ಟೇ ನಿಮ್ಹಾನ್ಸ್ ಆಸ್ಪತ್ರೆ ಹಿಂಬದಿಯಿರುವ ಬಾಲಮಂದಿರದಲ್ಲಿ ವಿಶೇಷ ಚೇತನ ಮಗುವಿಗೆ ಹಾವು ಕಚ್ಚಿದ ಪ್ರಕರಣ ತಿಳಿದುಬಂದಿದೆ. ಆಗಸ್ಟ್ ನಲ್ಲಿ ಹಾವು ಹಿಡಿಯಲು ಹೋದ ಯುವಕನೊಬ್ಬ ಮೃತಪಟ್ಟ ಘಟನೆಯೂ ನಡೆದಿದೆ ಎನ್ನಲಾಗಿದೆ. ಈ ಪೈಕಿ ನಿಮ್ಹಾನ್ಸ್ ಆಸ್ಪತ್ರೆಯ ಬಾಲಮಂದಿರದಲ್ಲಿ ನಡೆದ ಪ್ರಕರಣ ಅಧಿಕೃತವಾಗಿ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ತಿಳಿದು ಬಂದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮಗೆ ಅನುಕೂಲವಾಗುವ ಕರೆಬಂದ ಸ್ಥಳಗಳಲ್ಲಿ ಮಾತ್ರ ಹಾವು ರಕ್ಷಣೆ :
ಬಿಬಿಎಂಪಿ ಕೇಂದ್ರ ನಿಯಂತ್ರಣ ಕಚೇರಿಗೆ ಹಾವಿನ ರಕ್ಷಣೆಗೆಂದು ಬರುವ ಕರೆಗಳನ್ನು ಆ ಹಾವು ರಕ್ಷಿಸಿದರೆ ತಮಗೆ ಸಾಕಷ್ಟು “ಅನುಕೂಲ” ಆಗುತ್ತದೆ ಎಂಬ ಕರೆಗಳನ್ನು ಮಾತ್ರ ಪ್ರತಿಕ್ರಿಯಿಸಿ ಉಳಿದ ಕರೆಗಳನ್ನು ಬೇರೆ ವನ್ಯಜೀವಿ ಕಾರ್ಯಕರ್ತರ ನಂಬರ್ ಕೊಟ್ಟು ಸುಮ್ಮನಾಗುವ ಪ್ರಕರಣಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದೆ.
ಮನೆ, ಕಚೇರಿ, ಕಾರಿನ ಬಾನೆಟ್, ಅಡುಗೆಮನೆ, ಶೂ ಮತ್ತಿತರ ಕಡೆ ಹಾವು ಕಾಣಸಿಕೊಂಡಿದ್ದು ಅವುಗಳನ್ನು ಬೇರೆಡೆ ರಕ್ಷಿಸಿ ಕೊಂಡೊಯ್ಯಿರಿ ಅಂತ ಸಾಕಷ್ಟು ದೂರುಗಳು ಬಂದರೂ ಆ ದೂರಿನ ಸ್ವರೂಪ ಆಧರಿಸಿ ಯಾವುದು ಲಾಭದಾಯಕ ಎಂಬುದನ್ನು ನಿರ್ಧರಿಸಿ ಕೆಲವು ವನ್ಯಜೀವಿ ಕಾರ್ಯಕರ್ತರು ರಕ್ಷಣೆಗೆ ಧಾವಿಸುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಉರಗ ರಕ್ಷಣೆಯೆಂಬ ಹೆಸರಲ್ಲಿ ವರ್ಷಂಪ್ರತಿ ಲಕ್ಷ ಲಕ್ಷ ಕಮಾಯಿ :
ಬಿಬಿಎಂಪಿಯ ಕಂಟ್ರೋಲ್ ರೂಮ್ ಗೆ ಪ್ರತಿದಿನ ಉರಗ ರಕ್ಷಣೆ ಮಾಡುವಂತೆ ಕನಿಷ್ಠ 10ರಿಂದ 20 ಕರೆ ಬರುತ್ತದೆ. ಅಂದರೆ ವರ್ಷಕ್ಕೆ ಕನಿಷ್ಠ ಅಂದರೂ 3,650 ನಿಂದ ಹಿಡಿದು 7,300ರ ತನಕ ಕಂಟ್ರೋಲ್ ರೂಮ್ ಗೆ ದೂರು ಬರುತ್ತದೆ. ಹಾವಿನಿಂದ ಕರೆ ಮಾಡಿದವರು ಯಾವ ರೀತಿ ಬಾಧಿತರಾಗಿದ್ದಾರೆ ಎಂಬುದನ್ನು ಆಧರಿಸಿ ಉರಗ ರಕ್ಷಣೆಗೆ ಸ್ಪಾಟಲ್ಲೇ ರೇಟ್ ಫಿಕ್ಸ್ ಮಾಡುವ ಭೂಪರು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದಾರೆ. ನಗರದಲ್ಲಿ ಹೆಚ್ಚಾಗಿ ನಾಗರಹಾವು, ಕನ್ನಡಿ ಹಾವು, ಮಂಡಲದ ಹಾವು, ರಾಟ್ ಸ್ನೇಕ್ ಹಾಗೂ ಕೇರೆಹಾವು ಕಾಣಿಸಿಕೊಳ್ಳುತ್ತವೆ.
ಪ್ರತಿ ಪ್ರಕರಣದಲ್ಲಿ ಬೆಳಗ್ಗೆಯಾದರೆ ಎರಡು ಸಾವಿರದಿಂದ ಎರಡೂವರೆ ಸಾವಿರದ ತನಕ ಹಾಗೂ ರಾತ್ರಿಯಾದರೆ ನಾಲ್ಕರಿಂದ ಐದು ಸಾವಿರ ರೂಪಾಯಿ ತನಕ ಚಾರ್ಜ್ ಮಾಡ್ತಾರೆ ಎನ್ನಲಾಗುತ್ತಿದೆ. ಇವೆಲ್ಲದರ ಮಧ್ಯೆ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಾ ವನ್ಯಜೀವಿಗಳ ರಕ್ಷಣೆ ಮಾಡುವ ಕಾರ್ಯಕರ್ತರು ಸಾಕಷ್ಟು ಮಂದಿಯಿದ್ದರೂ ಅವರನ್ನು ಗುರ್ತಿಸುವ ಕೆಲಸವಾಗಿಲ್ಲ. ಹಾವು ರಕ್ಷಣೆಗಾಗಿ ಬರುವ ಕರೆಗಳನ್ನು ಬಿಬಿಎಂಪಿಯ ಗೌರವ ವನ್ಯಜೀವಿ ಕಾರ್ಯಕರ್ತರಲ್ಲದೆ ತಮ್ಮ ಕೈಬೆಚ್ಚಗೆ ಮಾಡುವ ವನ್ಯಜೀವಿ ಕಾರ್ಯಕರ್ತರ ಮೊಬೈಲ್ ನಂಬರ್ ಅನ್ನು ಆಯಾ ಪ್ರದೇಶ ಆಧರಿಸಿ ಇರುವವರ ಮೊಬೈಲ್ ನಂಬರ್ ಅನ್ನು ಕಂಟ್ರೋಲ್ ರೂಮ್ ಸಿಬ್ಬಂದಿ ಉರಗ ರಕ್ಷಣೆಗೆಂದು ಬರುವ ಕರೆ ಮಾಡಿದವರಿಗೆ ನೀಡುತ್ತಾರೆ ಎಂಬ ಆರೋಪಗಳಿವೆ.
ದಿನಕ್ಕೆ 10 ಹಾವು ರಕ್ಷಣೆಗೆಂದು ಹೋದ ಕಡೆಗಳಲ್ಲಿ ಕನಿಷ್ಠ 2 ರಿಂದ 2,500 ಸಾವಿರ ಅನಧಿಕೃತ ಶುಲ್ಕ ಸಂಗ್ರಹಿಸುತ್ತಾರೆಂದರೂ ವರ್ಷಕ್ಕೆ 73 ಲಕ್ಷದಿಂದ 1 ಕೋಟಿ ರೂ. ತನಕ ಕಮಾಯಿ ಆಗುತ್ತದೆ. ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಈ ವ್ಯಾಪಾರ ನಡೆಯುತ್ತಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ತಮ್ಮ ತಮ್ಮಲ್ಲೇ ಉರಗ ರಕ್ಷಣೆಯ ಅನಧಿಕೃತ ಶುಲ್ಕ ಹಂಚಿಕೆ :
ಉರಗ ರಕ್ಷಣೆಗೆ ಬರುವ ಕರೆಯನ್ನು ತಾವೇ ರಚಿಸಿಕೊಂಡ ತಂಡಗಳನ್ನು ಹೊರತುಪಡಿಸಿ ಹೊರಗಿನ ವನ್ಯಜೀವಿ ಕಾರ್ಯಕರ್ತರಿಗೆ ಕರೆ ಹೋಗದಂತೆ ಮಾಡಿ ಹಾವಿನ ರಕ್ಷಣೆಗಾಗಿ ಅಲಿಖಿತವಾಗಿ ವಿಧಿಸಿದ ಶುಲ್ಕವನ್ನು ಸಂಗ್ರಹಿಸಿ ಹಂಚಿಕೊಳ್ಳುವ ವ್ಯವಸ್ಥೆಯೂ ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಹಾವು ಸಂರಕ್ಷಣೆ ಸಾಮಾನ್ಯವಾಗಿ ಸಾಮಾಜಿಕ ಸೇವೆಯ ರೀತಿ ಪರಿಗಣಿಸಲಾಗುತ್ತಿದೆ. ಹಾಗಾಗಿಯೇ ಬಿಬಿಎಂಪಿ ನಗರದಲ್ಲಿ ಹಾವು ಮತ್ತಿತರ ವನ್ಯಪ್ರಾಣಿಗಳ ರಕ್ಷಣೆಗೆಂದು ಸದ್ಯ ಏಳು ಮಂದಿಯನ್ನು ಗೌರವ ವನ್ಯಜೀವಿ ಪರಿಪಾಲಕರು ಎಂದು ಗುರುತಿಸಿ ಅವರಿಗೆ ಮಾನ್ಯತೆ ನೀಡಿದೆ. ಅದರ ಹೊರತಾಗಿಯೂ ಬಿಬಿಎಂಪಿಯಿಂದ ನೋಂದಣಿಯಾಗದವರು ಹಾವು ರಕ್ಷಣೆ ಹೆಸರಿನಲ್ಲಿ ತಮಗಿಷ್ಟ ಬಂದಂತೆ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ.
“ಡಿ.23ರಂದು ಬಿಎಸ್ ಎನ್ ಎಲ್ ಉದ್ಯೋಗಿಗೆ ಹಾವು ಕಡಿತ ಪ್ರಕರಣ ತಮ್ಮ ಗಮನಕ್ಕೆ ಬಂದಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾವು ಕಡಿತ ಪ್ರಕರಣಗಳು ಅಧಿಕೃತವಾಗಿ ವರದಿಯಾಗುವುದೇ ಕಮ್ಮಿ. ಪಾಲಿಕೆಯಿಂದ ಇಂತಹ ಕೇಸ್ ಗಳಲ್ಲಿ ಪರಿಹಾರ ನೀಡುವ ಪದ್ಧತಿಯಿಲ್ಲ. ಹಾಗಾಗಿ ಇಂತಹ ಪ್ರಕರಣ ತಮ್ಮ ಗಮನಕ್ಕೆ ಬರುವುದಿಲ್ಲ. ಹಾವು ರಕ್ಷಣೆಗಾಗಿ ಸಾಮಾನ್ಯವಾಗಿ ನವೆಂಬರ್ ನಿಂದ ಮೇ ತನಕ ಸಾಕಷ್ಟು ಕರೆಗಳು ಬರುತ್ತವೆ. ಕೆಲವೊಮ್ಮೆ ವನ್ಯಜೀವಿ ಕಾರ್ಯಕರ್ತರು ತಡವಾಗಿ ಸ್ಥಳಕ್ಕೆ ತೆರಳಿದ ಉದಾಹರಣೆಗಳಿವೆ. ಆದರೆ ಕರೆಬಂದರೂ ಅವುಗಳನ್ನು ಅಟೆಂಡ್ ಮಾಡದವರ ಮೇಲೆ ಕಾನೂನು ಕ್ರಮ ಜರುಗಿಸಲು ಅವಕಾಶವಿಲ್ಲ. ಏಕೆಂದರೆ ಅವರನ್ನು ಪಾಲಿಕೆಯಿಂದ ನೇಮಿಸಿಕೊಂಡಿಲ್ಲ. ಪ್ರತಿ 27 ವಿಧಾನಸಭಾ ಕ್ಷೇತ್ರಕ್ಕೂ ಒಬ್ಬ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಿಸುವ ಹಾಗೂ ಅವರ ಗೌರವಧನ ಏರಿಕೆ ಬಗ್ಗೆ ಆಡಳಿತಗಾರರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.”
- ಗೋವಿಂದರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ
ಗೌರವ ವನ್ಯಜೀವಿ ಪರಿಪಾಲಕರಿಗೆ ಗೌರವಧನ ನೀಡದೆ ಸತಾಯಿಸುವ ಬಿಬಿಎಂಪಿ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಯೇ ನೇಮಿಸಿದ ಏಳುಮಂದಿ ಗೌರವ ವನ್ಯಜೀವಿ ಪರಿಪಾಲಕರಿದ್ದಾರೆ. ಅವರಿಗೆ ವರ್ಷಕ್ಕೆ ಇಂತಿಷ್ಟು ಎಂದು ಪಾಲಿಕೆಯಿಂದ ಗೌರವಧನ ನಿಗಧಪಡಿಸಲಾಗಿದೆ. ಆದರೆ ಪಾಲಿಕೆಯು ಪ್ರತಿವರ್ಷವೂ ವನ್ಯಜೀವಿ ಪರಿಪಾಲಕರಿಗೆ ಎರಡು ಮೂರು ವರ್ಷದ ಗೌರವಧನವನ್ನು ಉಳಿಸಿಕೊಳ್ಳುತ್ತಲೇ ಬರುತ್ತಿದ್ದಾರೆ. ಬಾಕಿ ಗೌರವಧನ ಹಣ ಪಡೆಯಲು ಈ ವನ್ಯಜೀವಿ ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿಗೆ ಅಲೆಯುವುದು ಮಾತ್ರ ತಪ್ಪಿಲ್ಲ.
ಗಣ್ಯ ವ್ಯಕ್ತಿಗಳ ಮನೆಯಲ್ಲಿ ಹಾವು ಹಿಡಿದು ಪ್ರಭಾವಿಯೆಂಬ ಪೋಸ್ :
ಬಿಬಿಎಂಪಿಯಲ್ಲಿ ಕೆಲವು ವನ್ಯಜೀವಿ ಕಾರ್ಯಕರ್ತರು ಗಣ್ಯವ್ಯಕ್ತಿಗಳು ಅಥವಾ ರಾಜಕಾರಣಿಗಳ ಮನೆ ಅಥವಾ ಕಚೇರಿಯಲ್ಲಿ ಹಾವುಗಳನ್ನು ಹಿಡಿದ ಬಂದ ಮೇಲೆ ಆ ವಾಲ್ಯುವೆಂಟರ್ ತಾನೇ ಪ್ರಭಾವಿ ಎಂಬ ರೀತಿ ಬಿಂಬಿಸಿಕೊಳ್ಳುತ್ತಾರೆ. ಆ ಜನಪ್ರತಿನಿಧಿ ಅಥವಾ ಗಣ್ಯರೊಂದಿಗೆ ಸಂಪರ್ಕ ಸಾಧಿಸಿ ತಮಗೆ ಬೇಕಾದ ಕಾರ್ಯಗಳನ್ನು ನೆರವೇರಿಸಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಇದೇ ಕಾರಣಕ್ಕೆ ಈ ಹಿಂದೆ ಪ್ರಕರಣವೊಂದರಲ್ಲಿ ಬಿಬಿಎಂಪಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರಿಗೆ ಸದನದಲ್ಲಿ ಜನಪ್ರತಿನಿಧಿಗಳಿಂದ ವಾಖ್ ಪ್ರಹಾರ ನಡೆಸಲು ಕಾರಣರಾಗಿದ್ದರು. ಇದು ಕೇವಲ ಉದಾಹರಣೆಯಷ್ಟೆ.
ಒಟ್ಟಾರೆ ಬಿಬಿಎಂಪಿ ಅರಣ್ಯವಿಭಾಗದಲ್ಲಿ ವನ್ಯಜೀವಿ ಪ್ರಾಣಿ, ಪಕ್ಷಿ, ಸರೀಸೃಪಗಳ ರಕ್ಷಣೆಗೆ ಸೂಕ್ತ ಆಂಬುಲೆನ್ಸ್, ತುರ್ತು ರಕ್ಷಣಾ ವಾಹನ ವ್ಯವಸ್ಥೆ, ರಕ್ಷಣಾತ್ಮಕ ಉಪಕರಣಗಳು, ಗೌರವ ವನ್ಯಜೀವಿ ಕಾರ್ಯಕರ್ತರಿಗೆ ನಿಗಧಿತ ಅವಧಿಯಲ್ಲಿ ಗೌರವಧನ ನೀಡುವುದು, ವನ್ಯಜೀವಿ ಕಾರ್ಯಕರ್ತರಿಗೆ ವನ್ಯಜೀವಿಗಳ ರಕ್ಷಣೆ ಮಾಡಲು ಅವರಲ್ಲಿ ಇರಬೇಕಾದ ಕನಿಷ್ಠ ಅರ್ಹತೆ ಮತ್ತು ಮಾನದಂಡವನ್ನು ನಿಗಧಪಡಿಸಬೇಕು, ಅಂತಹವರಿಗೆ ಬಿಬಿಎಂಪಿಯಿಂದಲೇ ನಿಗಧಿತ ಗುರುತಿನ ಚೀಟಿ ನೀಡುವಂತಾಗಬೇಕು. ಹಾಗೂ ಹಾವು ರಕ್ಷಣೆ ಮಾಡಿದ ಕಾರ್ಯಕರ್ತರಿಗೆ ಬಿಬಿಎಂಪಿಯಿಂದಲೇ ಕನಿಷ್ಠ- ಗರಿಷ್ಠ ಶುಲ್ಕ ನಿಗಧಿಪಡಿಸಿ, ಅದಕ್ಕಿಂತ ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಇಟ್ಟಲ್ಲಿ ಕಾನೂನು ಕ್ರಮ ಕೈಗೊಳ್ಳುವ ರೀತಿ ನಿಯಮ ಜಾರಿಗೆ ತಂದರೆ ಒಳಿತು. ಹಾಗಾದರೆ ಹಾವು ಹಿಡಿಯುವ ಕಾರ್ಯವು ಸೇವೆಯಾಗಿಯೇ ಉಳಿಯಲಿದೆ. ಇಲ್ಲವಾದಲ್ಲಿ ಇದೊಂದು ಮತ್ತೊಂದು ದೊಡ್ಡ ದಂಧೆಯಾಗುವುದರಲ್ಲಿ ಆಶ್ಚರ್ಯವಿಲ್ಲ.