ನವದೆಹಲಿ, (www.bengaluruwire.com) : ಹೊಸವರ್ಷಕ್ಕೆ ಮುನ್ನವೇ, ಕ್ರಿಸ್ ಮಸ್ ದಿನದಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಖುಷಿಯ ಸುದ್ದಿ ನೀಡಿದ್ದಾರೆ. ದೇಶವನ್ನು ಉದ್ದಿಶಿಸಿ ಶನಿವಾರ ರಾತ್ರಿ ಮಾಡಿದ ಭಾಷಣದಲ್ಲಿ, ದೇಶದಲ್ಲಿನ 15ರಿಂದ 18 ವರ್ಷದ ಮಕ್ಕಳಿಗೆ ಮುಂದಿನ ವರ್ಷದ ಜನವರಿ ಮೂರರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಜ.10ರಿಂದ ಮುಂಜಾಗ್ರತೆಯಾಗಿ ಲಸಿಕೆ (Precautionary Doses) ನೀಡಲಾಗುವುದು. ಇತರೆ ಖಾಯಿಲೆಗಳಿಂದ ನರಳುತ್ತಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ ಬೂಸ್ಟರ್ ಡೋಸ್ ನೀಡಿಕೆ ಕಾರ್ಯ ಆರಂಭವಾಗಲಿದೆ ಹಾಗೂ ಅದೇ ದಿನದಿಂದ ಎಂದು ಘೋಷಿಸಿದ್ದಾರೆ.
ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಾಧ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು, ಕೋವಿಡ್ ವಿಚಾರದಲ್ಲಿ ಜನರು ಅನವಶ್ಯಕವಾಗಿ ಭಯಪಡದಿರಿ. ಎಲ್ಲಾ ನಾಗರೀಕರು ಮುಖಗವಸು ಹಾಕಿಕೊಳ್ಳಬೇಕು ಹಾಗೂ ಆಗಾಗ್ಗೆ ತಮ್ಮ ಕೈಯನ್ನು ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ದೇಶದಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ 18 ಲಕ್ಷ ಐಸೋಲೇಷನ್ ಹಾಸಿಗೆ, 5 ಲಕ್ಷ ಆಮ್ಲಜನಕ ಪೂರೈಕೆಯಿರುವ ಹಾಸಿಗೆಗಳು ಹಾಗೂ 1.40 ಲಕ್ಷ ಐಸಿಯು ಬೆಡ್ ಗಳನ್ನು ಸಿದ್ಧಪಡಿಸಿಡಲಾಗಿದೆ. 90 ಸಾವಿರ ಮಕ್ಕಳ ಐಸಿಯು ಹಾಗೂ ಇತರ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ದೇಶಾದ್ಯಂತ 300ಕ್ಕೂ ಹೆಚ್ಚು ಆಕ್ಸಿಜನ್ ಪ್ಲಾಂಟ್ ಗಳನ್ನು ಹಾಗೂ 4 ಲಕ್ಷ ಆಮ್ಲಜನಕ ಸಿಲೆಂಡರ್ ಗಳನ್ನು ಈ ಉದ್ದೇಶಕ್ಕಾಗಿ ಪೂರೈಕೆ ಮಾಡಲಾಗಿದೆ ಎಂದು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ.