ಬೆಂಗಳೂರು, (www.bengaluruwire.com) : ರಾಜ್ಯದಲ್ಲೇ ಮೊದಲ ಬಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ತನ್ನ ಪಿಂಚಣಿದಾರರಿಗೆ ಆನ್ ಲೈನ್ ಮೂಲಕ ತಾವಿದ್ದ ಸ್ಥಳದಿಂದಲೇ “ಜೀವಿತ ಪ್ರಮಾಣಪತ್ರ” ಪಡೆಯುವ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಇದಕ್ಕಾಗಿ ಸಾಫ್ಟ್‌ವೇರ್ ತಯಾರಿಸಲು ಹೊರಗುತ್ತಿಗೆ ನೀಡಿದೆ.
ಸರ್ಕಾರಿ ಸಂಸ್ಥೆಗಳಿಂದ ಕಾಲ ಕಾಲಕ್ಕೆ ಪಿಂಚಣಿ ಸಮಸ್ಯೆ ಪರಿಹಾರಕ್ಕೆ ನಿವೃತ್ತ ಸಿಬ್ಬಂದಿ ಕಚೇರಿಯಿಂದ ಕಚೇರಿಗೆ ಅಲೆದು ಅಲೆದೂ ಚಪ್ಪಲಿ ಸವೆಸಿರುತ್ತಾರೆ. ವಯೋ ಸಹಜ ಕಾರಣದಿಂದ ವರ್ಷಕ್ಕೊಮ್ಮೆ “ಜೀವಿತ ಪ್ರಮಾಣಪತ್ರ” ನೀಡಲು ಕಚೇರಿಗೆ ಹೋಗಿ ಬರುವುದು ಆ ವಯಸ್ಸಿನವರಿಗೆ ಕಷ್ಟವಾಗುತ್ತದೆ. ಹಾಸಿಗೆ ಹಿಡಿದವರು, ನಡೆಯಲಾಗದವರು, ಅಶಕ್ತರಿಗೂ ತೊಂದರೆಯಾಗುತ್ತಿತ್ತು. ಇದನ್ನು ಅರಿತ ಬಿಡಿಎ ತನ್ನ ನಿವೃತ್ತ ಕಾರ್ಮಿಕರಿಗೆ ನೆರವಾಗಲು ಈ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.
ಇದರಿಂದಾಗಿ ಬಿಡಿಎನ 700 ನಿವೃತ್ತ ಸಿಬ್ಬಂದಿ ಗೆ ಅನುಕೂಲವಾಗಲಿದೆ. ಕಳೆದ ತಿಂಗಳಿನಿಂದ “ಜೀವಿತ ಪ್ರಮಾಣಪತ್ರ” ಸಾಫ್ಟ್‌ವೇರ್ ತಯಾರಿಸುವ ಕಾರ್ಯ ಆರಂಭವಾಗಿದೆ.
ಬಿಡಿಎ ಪಿಂಚಣಿದಾರರ ಮಾಹಿತಿ ಆಧಾರ್ ಗೆ ಲಿಂಕ್ ಮಾಡಲಾಗುತ್ತದೆ. ಆ ಮೂಲಕ ಬಿಡಿಎ ವೆಬ್ ಸೈಟ್ ನಲ್ಲಿ ಅಳವಡಿಸುವ ಸಾಫ್ಟ್‌ವೇರ್ ನಲ್ಲಿ ಪಿಂಚಣಿದಾರರು ಆಧಾರ್ ಗೆ ಜೋಡಿಸಿದ ಮೊಬೈಲ್ ನಂಬರ್ ದಾಖಲಿಸಿದ ಕೂಡಲೇ ಅವರ ಮೊಬೈಲ್ ಗೆ ಬರುವ ಒಟಿಪಿ (OTP)ಯನ್ನು ಪೆನ್ಶನರ್ ದಾಖಲಿಸಿದ ನಂತರ ಲಾಗಿನ್ ಆಗಬೇಕು.
ಬಳಿಕ ತಾವು ಲಾಗಿನ್ ಆಗುವ ಮೊಬೈಲ್ ಅಥವಾ ಕಂಪ್ಯೂಟರ್ ನ ಮುಂದಿನ ಫ್ರಂಟ್ ಕ್ಯಾಮರಾ ಮೂಲಕ ಫೊಟೊ ಕ್ಲಿಕ್ ಮಾಡಿ ಅಪಲೋಡ್ ಮಾಡಬೇಕು. ಈ ಫೊಟೊವನ್ನು ಬಿಡಿಎ ಬಳಿಯಲ್ಲಿನ ಸರ್ವರ್ ನಲ್ಲಿ ಪರಿಶೀಲಿಸಿ ಆ ಸಾಫ್ಟ್ ವೇರ್ “ಲೈಫ್ ಸರ್ಟಿಫಿಕೇಟ್” ಜನರೇಟ್ ಮಾಡಿ ಪಿಂಚಣಿದಾರರ ಮೊಬೈಲ್ ಅಥವಾ ಅವರು ನೀಡಿದ ಇಮೇಲ್ ಗೆ ಹಾಗೂ ಬಿಡಿಎ ಸಂಬಂಧಿಸಿದ ಇಲಾಖೆಗೆ ಸೆಂಡ್ ಆಗಲಿದೆ. ಕಾರ್ಡ್ ವರ್ಕ್ಸ್ ಪ್ರೈ. ಲಿ. ಎಂಬ ಬೆಂಗಳೂರು ಮೂಲದ ಸಾಫ್ಟ್ ವೇರ್ ಸಂಸ್ಥೆ ಈ ಸಾಫ್ಟ್‌ವೇರ್ ಡೆವಲಪ್ ಮಾಡುತ್ತಿದೆ.
“ಬಿಡಿಎ ನಿವೃತ್ತ ಪಿಂಚಣಿದಾರರು ತಾವು ಇದ್ದ ಸ್ಥಳದಿಂದಲೇ ಪ್ರತಿ ವರ್ಷ ಬಿಡಿಎಗೆ “ಜೀವಿತ ಪ್ರಮಾಣಪತ್ರ” ಸಲ್ಲಿಸುವ ಸಾಫ್ಟ್ ವೇರ್ ಸಿದ್ದವಾಗುತ್ತಿದೆ. ಈಗ ವರ್ಷಕ್ಕೆ ಒಮ್ಮೆ ಲೈಫ್ ಸರ್ಟಿಫಿಕೇಟ್ ಬಿಡಿಎಗೆ ಸಲ್ಲಿಸುವ ವ್ಯವಸ್ಥೆಯಿದೆ. ನೂತನ ಸಾಫ್ಟ್ ವೇರ್ ಅಳವಡಿಕೆ ನಂತರ 6 ತಿಂಗಳಿಗೊಮ್ಮೆ ಸರ್ಟಿಫಿಕೇಟ್ ಸಲ್ಲಿಸುವುದನ್ನು ಕಡ್ಡಾಯ ಮಾಡುತ್ತೇವೆ. ಪಿಂಚಣಿದಾರರ ಮಾಹಿತಿ – ಆಧಾರ್ ಗೆ ಲಿಂಕ್ ಮಾಡಲು ರಾಜ್ಯ ಸರ್ಕಾರದಿಂದ ಆಧಾರ್ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ವಿವಿಧ ಇಲಾಖೆ, ಪ್ರಾಧಿಕಾರದ ಪೈಕಿ ಬಿಡಿಎ ಪ್ರಥಮ ಬಾರಿಗೆ ಇಂತಹ ಸೇವೆ ಒದಗಿಸಲಿದೆ. ಕೆಲವೇ ದಿನಗಳಲ್ಲಿ ಈ ವ್ಯವಸ್ಥೆ ಬಿಡಿಎ ವೆಬ್ ಸೈಟ್ ಗೆ ಅಳವಡಿಸುತ್ತೇವೆ.”
– ರಾಮಪ್ರಸಾದ್, ಆರ್ಥಿಕ ಸದಸ್ಯರು, ಬಿಡಿಎ