ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ವ್ಯಾಪ್ತಿಯಲ್ಲಿ ಡಿ.31ರಿಂದ ನಗದಾದ್ಯಂತ ಕಸ ಸಂಗ್ರಹಣ, ಸಾಗಣೆ ಹಾಗೂ ವಿಲೇವಾರಿ ಸ್ಥಗಿತಗೊಳಿಸಲು ಗುತ್ತಿಗೆದಾರರು ನಿರ್ಧರಿಸಿದ್ದಾರೆ.
ಪಾಲಿಕೆಯ ಹಣಕಾಸು ಇಲಾಖೆ ವ್ಯತಿರಿಕ್ತ ತೀರ್ಮಾನ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳಿಂದ ಘನತ್ಯಾಜ್ಯ ಗುತ್ತಿಗೆದಾರರಿಗೆ ಆಗುವ ಅನಾನುಕೂಲದ ಬಗ್ಗೆ ಚರ್ಚಿಸಲು ಸಭೆ ಕರೆಯಲು ಮನವಿ ಮಾಡಿದ್ದರೂ ಗುತ್ತಿಗೆದಾರರನ್ನು ಅವರು ನಿರ್ಲಕ್ಷಿಸಿದ್ದಾರೆ.
ಹಾಗಾಗಿ ಡಿ.31ರಂದು ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಿ, ಸಾಗಣೆ ಹಾಗೂ ವಿಲೇವಾರಿ ಮಾಡುವುದಿಲ್ಲ ಎಂದು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಹಾಗೂ ಗುತ್ತಿಗೆದಾರರ ಸಂಘ (BSGS) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ದಿನ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಗೆ ತಮ್ಮ ಸಂಘಟನೆಯು ಬೆಂಬಲ ವ್ಯಕ್ತಪಡಿಸಲಿದೆ ಎಂದು ಬಿಎಸ್ ಜಿಎಸ್ ನ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಸುಬ್ರಮಣಿಯನ್ ಹೇಳಿದ್ದಾರೆ.
ಸೇವಾ ತೆರಿಗೆ ವಿಚಾರದಲ್ಲಿ 2014 ರಿಂದ 2017 ರ ತನಕ ಘನತ್ಯಜ್ಯ ಗುತ್ತಿಗೆದಾರರು ಜಿಎಸ್ ಟಿ ಕಟ್ಟುವಂತೆ ಜಿಎಸ್ ಟಿ ಇಲಾಖೆ ಹಲವು ನೋಟಿಸ್ ನೀಡಿದ್ದರೂ ಪಾಲಿಕೆ ಈತನಕ ಯಾವ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ ಹಣಕಾಸು ಇಲಾಖೆ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅನವಶ್ಯಕ ಹಾಗೂ ಅತಿರೇಖದ ನಿರ್ಧಾರವು ನಮ್ಮ ಮುಷ್ಕರಕ್ಕೆ ಪ್ರಮುಖ ಕಾರಣವಾಗಿದೆ.
ಪಾಲಿಕೆಯಲ್ಲಿ ಪರಿಸರ ಇಲಾಖೆ ಅಧಿಕಾರಿಗಳ ಲಂಚ ನೀಡಲು ಒತ್ತಡ, ವಾರ್ಡ್ ಗಳಲ್ಲಿ ಕೆಲಸ ನಿರ್ವಹಿಸುವ ಎಂಜನಿಯರ್ ಗಳು ಚುನಾಯಿತ ಪ್ರತಿನಿಧಿಗಳ ಹಮಬಾಲಕರಂತೆ ಅವರಿಗೆ ಹಣ ನೀಡುವಂತೆ ಒತ್ತಾಯಿಸುತ್ತಾರೆ. ಹಣ ಕೊಡದಿದ್ದರೆ ಗುತ್ತಿಗೆದಾರರ ಬದಲಾವಣೆ ಬೆದರಿಸುತ್ತಿದ್ದಾರೆ. 2018ರ ದರದಲ್ಲೇ ಕಸ ಸಾಗಿಸುವ ವಾಹನಗಳ ದುರಸ್ಥಿ ವೆಚ್ಚ, ಇಂಧನ ವೆಚ್ಚ ಸೇರಿದಂತೆ ಮೊದಲಾದ ಹಣ ಪಾವತಿಸಲಾಗುತ್ತಿದೆ.
ಸೂಕ್ತ ಸಂದರ್ಭದಲ್ಲಿ ಬಿಲ್ ಪಾವತಿಸದ ಕಾರಣ ಗುತ್ತಿಗೆದಾರರು ಸಂಕಷ್ಠ ಅನುಭವಿಸುವಂತಾಗಿದೆ. ” ಒಟ್ಟಾರೆ ಬಿಬಿಎಂಪಿ ಹಣಕಾಸು ಇಲಾಖೆ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಹುಚ್ಚು ದರ್ಬಾರ್ ವ್ಯವಸ್ಥೆಯೇ ಪ್ರತಿಭಟನೆ ನಿರ್ಣಯಕ್ಕೆ ಕಾರಣ” ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಸುಬ್ರಮಣಿಯನ್ ತಿಳಿಸಿದ್ದಾರೆ.
ಘನತ್ಯಾಜ್ಯ ಸಂಗ್ರಹಣೆ ಸಾಗಾಣಿಕೆ ಮತ್ತು ವಿಲೇವಾರಿ ಕೆಲಸವನ್ನು ಸ್ಥಗಿತ ಮಾಡುತ್ತಿರುವ ವಿಷಯವನ್ನು ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿರವರ ಪ್ರಧಾನ ಕಾರ್ಯದರ್ಶಿ, ಪಾಲಿಕೆ ಮುಖ್ಯ ಆಯುಕ್ತರ ಕಛೇರಿಗೆ ಮಾಹಿತಿ ನೀಡಿ ದೃಢೀಕರಣ ಪಡೆಯಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.