ಬೆಂಗಳೂರು, (www.bengaluruwire.com) :
ಚಿಕ್ಕಬಳ್ಳಾಪುರದ ಹಲವೆಡೆ ಬುಧವಾರ ಬೆಳಗ್ಗೆ 7 ಗಂಟೆ ಆಸುಪಾಸಿನಲ್ಲಿ ಎರಡು ಬಾರಿ ಲಘು ಭೂಕಂಪನ ಸಂಭವಿಸಿದೆ.
ಬುಧವಾರ ಬೆಳಗ್ಗೆ (ಡಿ.22) 7:10ಕ್ಕೆ ಮಂಡಿಕಲ್ಲು ಜಿಲ್ಲಾ ಪಂಚಾಯ್ತಿಂದ 1.4 ಕಿ.ಮೀ ನಿಂದ ದೂರದ ಸ್ಥಳದಲ್ಲಿ
ಭೂಕಂಪನದ ಕೇಂದ್ರಬಿಂದುವಿದ್ದು 2.9 ತೀವ್ರತೆಯ ಲಘು ಭೂಕಂಪನವಾಗಿತ್ತು. ಅದೇ ರೀತಿ 7:14 ಕ್ಕೆ ಪುನಃ 3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ಲು ಜಿಲ್ಲಾ ಪಂಚಾಯ್ತಿಯ ಭೋಗಪಾರ್ಥಿ ಹಳ್ಳಿಯಿಂದ 1.23 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರಬಿಂದುವಿತ್ತು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC)ದ ಭೂಕಂಪಶಾಸ್ತ್ರಜ್ಞರು ತಿಳಿಸಿದ್ದಾರೆ.
ಇದು ಲಘು ಭೂಕಂಪನವಾಗಿದ್ದು ಭೂಕಂಪನ ಕೇಂದ್ರದಿಂದ 10- 15 ಕಿ.ಮೀ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಷ್ಟು ತೀವ್ರತೆಯ ಭೂಕಂಪನದಿಂದ ಸಾರ್ವಜನಿಕರಿಗೆ ಏನೂ ತೊಂದರೆಯಾಗದು. ಸ್ಥಲೀಯವಾಗಿ ಜನರು ಭೂಮಿ ಕೆಲ ಸೆಕೆಂಡು ಅಲ್ಲಾಡಿದ ಅನುಭವಕ್ಕೆ ಒಳಗಾದರು. ನಾಗರೀಕರು ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್ ಎನ್ ಡಿಎಮ್ ಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭೂಮಿಯಿಂದ ಸ್ಫೋಟದ ಅನುಭವ ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಭಾರೀ ಸ್ಫೋಟದ ಶಬ್ದ ಕೇಳಿಬಂದಿದೆ. ನೀರಿಲ್ಲದೆ ಕೊಳವೆಬಾವಿಯಿಂದ ಏಕಾ ಏಕಿ ನೀರು ನುಗ್ಗಿ ಭಾರೀ ಸ್ಪೋಟವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು.
ಭೂಮಿಯ ಒಳಗಿನಿಂದ ಸ್ಪೋಟಿಸಿದ ಅನುಭವದಿಂದ ಗ್ರಾಮಸ್ಥರು ಬೆಚ್ಚಿ ಬಿದ್ದರು. ಬೆಳಿಗ್ಗೆ 7 ಗಂಟೆಯಿಂದ 7.30ರೊಳಗೆ ಸ್ಪೋಟಿಸಿದ ಅನುಭವ ಭಾರಿ ಶಬ್ದದಿಂದ ಗ್ರಾಮಸ್ಥರಲ್ಲಿ ಆತಂಕಗೊಂಡಿದ್ದರು.
ಇತ್ತೀಚೆಗೆ ಸುರಿದಿದ್ದ ಧಾರಾಕಾರ ಮಳೆಯಿಂದ ಅಂತರ್ಜಲ ಹೆಚ್ಚಾಗಿತ್ತು. ಅಂತರ್ಜಲ ಹೆಚ್ಚಾಗುತ್ತಿದ್ದಂತೆ ಸ್ಪೋಟದ ಶಬ್ದ ಜಿಲ್ಲೆಯ ಹಲವು ಭಾಗದಲ್ಲಿ ಕೇಳಿ ಬಂದಿತ್ತು. ಈ ಹಿಂದೆ ಇದೇ ರೀತಿ ಬೆಂಗಳೂರಿನಲ್ಲೂ ನ.26 ರಂದು ಬೆಳಗ್ಗೆ ರಾಜರಾಜೇಶ್ವರಿನಗರ, ಕೆಂಗೇರಿ ಮೊದಲಾದೆಡೆ ಸಾರ್ವಜನಿಕರಿಗೆ ಕೆಲವು ಸೆಕೆಂಡು ಲಘು ಭೂಕಂಪನದ ಅನುಭವವಾಗಿತ್ತು.