ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಉಳಿತಾಯ ಮಾಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ವಿವಿಧ ರೀತಿಯ ಬೀದಿ ದೀಪಗಳನ್ನು ಬದಲಿಸಿ ಎಲ್ ಇಡಿ ಲೈಟ್ಸ್ ಅಳವಡಿಸಲು ಜಾಗತಿಕ ಟೆಂಡರ್ ಕರೆದು ಪ್ರಭಾವಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಎರಡು ಮುಕ್ಕಾಲು ವರ್ಷವಾದರೂ ಇನ್ನು ಯೋಜನೆ ಕಾರ್ಯಗತವಾಗಿಲ್ಲ. ಈ ಕಾರಣಕ್ಕೆ ಬೆಂಗಳೂರು ಸ್ಟ್ರೀಟ್ ಲೈಟಿಂಗ್ ಪ್ರೈವೇಟ್ ಲಿಮಿಟೆಡ್ (BSPL) ಗೆ ನೀಡಿದ್ದ ಗುತ್ತಿಗೆಯನ್ನು ಬಿಬಿಎಂಪಿಯು ರದ್ದುಪಡಿಸಿದೆ.
ಅಂತರಾಷ್ಟ್ರೀಯ ಟೆಂಡರ್ ಕರೆದು, ರಾಜಧಾನಿಯ 198 ವಾರ್ಡ್ ನಲ್ಲಿನ ಬೀದಿಗಳಲ್ಲಿ ಹೈಟೆಕ್ ಎಲ್ ಇಡಿ ಬೀದಿ ದೀಪ ಅಳವಡಿಸಿ ವಿದ್ಯುತ್ ಉಳಿತಾಯ ಮಾಡುತ್ತೇನೆ ಎಂದು ಹೊರಟಿದ್ದ ಬಿಬಿಎಂಪಿಗೆ ಭಾರೀ ಹಿನ್ನಡೆಯಾಗಿದೆ. ರಾಜಧಾನಿಯಲ್ಲಿ ಒಟ್ಟು 4,85,246 ವಿವಿಧ ರೀತಿಯ ಬೀದಿ ದೀಪಗಳನ್ನು ಹೊಂದಿದೆ. ಆ ಜಾಗದಲ್ಲಿ ಎಲ್ ಇಡಿ ದೀಪ ಅಳವಡಿಸಿ ವಿದ್ಯುತ್ ಉಳಿತಾಯ ಮಾಡುವ ಯೋಜನೆ ಅನುಷ್ಠಾನಕ್ಕೆ ಮಾಡಬೇಕಿದ್ದ ಬಿಎಸ್ ಪಿಎಲ್, ಆ ಯೋಜನೆ ಜಾರಿಗೆ ತರಲು ಅಸಮರ್ಥವಾಗಿದ್ದನ್ನು ಉಲ್ಲೇಖಿಸಿ, ಯೋಜನೆ ಅನುಷ್ಠಾನ ಮಾಡುವಂತೆ ಬಿಬಿಎಂಪಿಯು ಈ ಹಿಂದೆ ಬಿಎಸ್ ಪಿಎಲ್ ಗೆ ನೀಡಿದ್ದ ಸ್ವೀಕೃತ ಪತ್ರ (Letter Of Acceptence)ವನ್ನು ಹಿಂಪಡೆದಿದೆ. ಜೊತೆಗೆ ಗುತ್ತಿಗೆ ರದ್ದತಿ ಮಾಡಿದೆ.
ಬಿಎಸ್ ಪಿಎಲ್ ನ ನಿರ್ದೇಶಕರುಗಳಿಗೆ ಡಿ.3ರಂದು ಗುತ್ತಿಗೆ ರದ್ಧತಿ ನೋಟಿಸ್ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಬಿಎಸ್ ಪಿಎಲ್ ನಡುವೆ 1-03-2019ರಂದು ವಿದ್ಯುತ್ ಕಾರ್ಯಕ್ಷಮತೆ ಗುತ್ತಿಗೆ (EPC) ಒಪ್ಪಿಗೆ ಮಾಡಿಕೊಂಡಿದ್ದು, ಆ ಗುತ್ತಿಗೆಯ ಷರತ್ತನ್ನು ಪೂರೈಸಲು ಬಿಎಸ್ ಪಿಎಲ್ ವಿಫಲವಾಗಿದೆ. ಸೂಕ್ತ ಕಾಲಾವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ವಿದ್ಯುತ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಎಲ್ ಇಡಿ ವಿದ್ಯುತ್ ದೀಪಗಳನ್ನು ಹಂತ ಹಂತವಾಗಿ ಅಳವಡಿಸಬೇಕಿತ್ತು. ಆ ನಿಟ್ಟಿನಲ್ಲಿ ಬಿಎಸ್ ಪಿಎಲ್ ಯೋಜನೆಗೆ ಅಗತ್ಯವಾದ ಹಣಕಾಸು ವಹಿವಾಟು, ಆ ಸಂಬಂಧದ ಸಂಸ್ಥೆಯು ಕಾರ್ಯಗತಗೊಳಿಸಿದ ಯೋಜನೆಯ ವಿವರಗಳನ್ನು ನಿಗಧಿಪಡಿಸಿದ ಕಾಲಾವಧಿಯಲ್ಲಿ ಬಿಬಿಎಂಪಿಗೆ ನೀಡಲು ವಿಫಲವಾಗಿದೆ. ಒಟ್ಟಾರೆ ಯೋಜನೆ ಜಾರಿಯಲ್ಲಿ ಸಮಾಧಾನಕರ ಪ್ರಗತಿಯನ್ನು ಬಿಎಸ್ ಪಿಎಲ್ ತೋರಿಸುವಲ್ಲಿ ಸೋತಿದೆ ಎಂದು ಗುತ್ತಿಗೆ ರದ್ದತಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಎಲ್ ಇಡಿ ಬೀದಿ ದೀಪ ಅಳವಡಿಕೆ ಯೋಜನೆ ಹಿಂದೆ – ಮುಂದೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ವ್ಯವಸ್ಥೆಯಲ್ಲಿ ವಿದ್ಯುತ್ ಕಾರ್ಯಕ್ಷಮತೆ ತಂದು ವಿದ್ಯುತ್ ಉಳಿತಾಯದ ಹಣವನ್ನು ಹಂಚಿಕೆ ಮಾಡುವ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (PPP Model) ಯೋಜನೆ ಜಾರಿಗೆ ತರಲು ಅಂತರಾಷ್ಟ್ರೀಯ ಹಣಕಾಸು ನಿಗಮ (IFC) ಜೊತೆ 30-11-2017ರಂದು ಬಿಬಿಎಂಪಿ ಕರಾರು ಒಪ್ಪಂದ ಮಾಡಿಕೊಂಡಿತ್ತು. ಅದಾದ ಬಳಿಕ ಐಎಫ್ ಸಿಯು ಜಾಗತಿಕ ಟೆಂಡರ್ ಕರೆದಿದ್ದು, ಅದರಲ್ಲಿ ಯೋಜನೆ ಅನುಷ್ಠಾನಕ್ಕೆ ಶಾಪೂರ್ಜಿ ಪಲ್ಲೊಂಜಿ ಮತ್ತು ಕಂಪನಿ ಪ್ರೈ.ಲಿ, ಎಸ್ಎಂಸಿ ಇನ್ ಫ್ರಾಸ್ಟ್ರಕ್ಚರ್ ಪ್ರೈ.ಲಿ ಹಾಗೂ ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಪ್ರೈ.ಲಿ ಮೂರು ಕಂಪನಿಗಳ ಒಕ್ಕೂಟವು ಟೆಂಡರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಇದಾದ ನಂತರ ಈ ಮೂರು ಕಂಪನಿಗಳು ಯೋಜನೆ ಅನುಷ್ಠಾನಕ್ಕಾಗಿ ಬೆಂಗಳೂರು ಸ್ಟ್ರೀಟ್ ಲೈಟಿಂಗ್ಸ್ ಪ್ರೈ.ಲಿ. (BSPL) ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದವು.
ನಗರದಲ್ಲಿರುವ 4.85 ಲಕ್ಷ ವಿವಿಧ ಬಗೆಯ ಬೀದಿ ದೀಪಗಳನ್ನು ಐದು ಹಂತಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಲು ಹಾಗೂ ಯೋಜನೆ ಅನುಷ್ಠಾನಕ್ಕಾಗಿ ಸ್ವಂತಂತ್ರ್ಯ ಎಂಜನಿಯರಿಂಗ್ ಸಂಸ್ಥೆಯ ಸೇವೆ ಪಡೆಯಲು ಬಿಬಿಎಂಪಿಯು ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಮೂಲಕ ಟೆಂಡರ್ ಕರೆದಿತ್ತು. ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಪ್ರೈ ಲಿ (PWC). ಸಂಸ್ಥೆಯು ಯಶಸ್ವಿ ಬಿಡ್ ದಾರರಾಗಿ ಆ ಟೆಂಡರ್ ಪಡೆದಿತ್ತು. ಆನಂತರ ಬಿಬಿಎಂಪಿ, ಬಿಎಸ್ ಪಿಎಲ್ ಹಾಗೂ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಯೋಜನೆ ಜಾರಿಗಾಗಿ ಪ್ರತ್ಯೇಕವಾಗಿ ತ್ರಿಪಕ್ಷಿಯ ಅಗ್ರಿಮೆಂಟ್ ಮಾಡಿಕೊಂಡಿದ್ದವು.
ಗುತ್ತಿಗೆ ಕರಾರು ಸಂಬಂಧ ಹಲವು ಬಾರಿ ಶೋಕಾಸ್ ನೋಟಿಸ್ ನೀಡಿದ್ದ ಪಾಲಿಕೆ :
ಎಲ್ ಇಡಿ ಬೀದಿ ದೀಪ ಅಳವಡಿಕೆ ಯೋಜನೆ ಸಂಬಂಧ ಬಿಬಿಎಂಪಿಯು, ಬೆಂಗಳೂರು ಸ್ಟ್ರೀಟ್ ಲೈಟಿಂಗ್ಸ್ ಜೊತೆ ಮಾಡಿಕೊಂಡ ಇಪಿಸಿ ಒಪ್ಪಂದ 13.06.2019 ರಿಂದ ಜಾರಿಗೆ ಬಂದಿತ್ತು. ಅದರಂತೆ 180 ದಿನಗಳ ಒಳಗಾಗಿ (18-06-2020) ಶಾಪೂರ್ಜಿ ಪಲ್ಲೊಂಜಿ ಮತ್ತು ಕಂಪನಿ ಪ್ರೈ.ಲಿ, ಎಸ್ಎಂಸಿ ಇನ್ ಫ್ರಾಸ್ಟ್ರಕ್ಚರ್ ಪ್ರೈ.ಲಿ ಹಾಗೂ ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಪ್ರೈ.ಲಿ ಸಂಸ್ಥೆಯು ಸ್ಥಾಪಿಸಿದ ಬೆಂಗಳೂರು ಸ್ಟ್ರೀಟ್ ಲೈಟಿಂಗ್ಸ್ ಕಂಪನಿಯು ಹಣಕಾಸು ಸಂಬಂಧಿಸಿದ ಮಾಹಿತಿಯನ್ನು ಬಿಬಿಎಂಪಿಗೆ ಸಲ್ಲಿಸಿರಲಿಲ್ಲ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಬಿಎಸ್ ಪಿಎಲ್ ವಿದ್ಯುತ್ ಕಾರ್ಯಕ್ಷಮತೆ ಕರಾರನ್ನು ಪಾಲಿಸುವಲ್ಲಿ ಸೋತಿತ್ತು. ಹೀಗಾಗಿ ಬಿಬಿಎಂಪಿ ವಿಶೇಷ ಆಯುಕ್ತರು ಮೂರು ಬಾರಿ ಹಾಗೂ ಪಾಲಿಕೆ ಆಯುಕ್ತರು ಒಂದು ಬಾರಿ ಶೋಕಾಸ್ ನೋಟಿಸ್ ನೀಡಿದ್ದರು. ಹೀಗಿದ್ದರೂ ಯೋಜನೆ ಕುರಿತಂತೆ ಬಿಎಸ್ ಪಿಎಲ್ ತೃಪ್ತಿದಾಯಕ ಪ್ರಗತಿ ತೋರಿಸಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಾಲಿಕೆ ಚೀಫ್ ಕಮಿಷನರ್ ಬೀದಿ ದೀಪಗಳಿಗೆ ಎಲ್ ಇಡಿ ಅಳವಡಿಕೆ ಯೋಜನೆ ಜಾರಿಗಾಗಿ , ಬಿಎಸ್ ಪಿಎಲ್ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನೇ ರದ್ದುಪಡಿಸಿ ಆದೇಶಿದ್ದಾರೆ.
ಯೋಜನೆ ಜಾರಿಗೆ 30 ತಿಂಗಳ ಗಡುವು ಮುಗಿಯುತ್ತಾ ಬಂದರೂ ಫೇಸ್-1 ಸಮೀಕ್ಷೆ ಮುಗಿದಿಲ್ಲ :
ಇಪಿಸಿ ಒಪ್ಪಂದ ಜಾರಿಗೆ ಬಂದ 10 ತಿಂಗಳಲ್ಲಿ ಮೊದಲ ಹಂತವಾಗಿ ಒಂದು ಲಕ್ಷ ಬೀದಿ ದೀಪಗಳ ಸರ್ವೆ ಕಾರ್ಯ ಪೂರ್ಣಗೊಳಿಸಬೇಕಿತ್ತು. ಆನಂತರ ಎರಡನೇ ಹಂತದಲ್ಲಿ 15 ತಿಂಗಳ ಒಳಗಾಗಿ, ಹೀಗೆ ಒಟ್ಟು ಐದು ಹಂತಗಳಲ್ಲಿ ಬಿಬಿಎಂಪಿಯ 198 ವಾರ್ಡ್ ಗಳಲ್ಲಿ 4.85 ಲಕ್ಷ ಬೀದಿ ದೀಪಗಳ ಸಮೀಕ್ಷೆ ನಡೆಸಿ ವರದಿ ನೀಡಬೇಕಿತ್ತು. ಇದೇ ಡಿಸೆಂಬರ್ 2021ರ ಒಳಗಾಗಿ ಐದನೇ ಹಂತದ ಬೀದಿ ದೀಪಗಳ ಸರ್ವೆ ಕಾರ್ಯ ಪೂರ್ಣಗೊಳಿಸಿ ವರದಿ ನೀಡಬೇಕಿತ್ತು. ಆದ್ರೆ 30 ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಫೇಸ್-1 ಹಂತದಲ್ಲೇ ಈ ಯೋಜನೆ ಇರೋದನ್ನು ಗಮನಿಸಿದ್ರೆ, ಯಾವ ಮಟ್ಟದಲ್ಲಿ ಎಲ್ ಇಡಿ ಬೀದಿ ದೀಪದ ಯೋಜನೆ ಹಳ್ಳ ಹಿಡಿದಿತ್ತು, ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಸಿಗಲ್ಲ.
ಈ ಬೆಳವಣಿಗೆಯಿಂದ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್, ವೈಟ್ ಟಾಪಿಂಗ್ ಯೋಜನೆ, ಘನತ್ಯಾಜ್ಯ ವಿಲೇವಾರಿ ಮತ್ತಿತರ ವಿಷಯದಲ್ಲಿ ಬೀಗುತ್ತಿರುವ ಬಿಬಿಎಂಪಿಗೆ ಸಾರ್ವಜನಿಕರ ಅನುಕೂಲಕ್ಕಾಗಿ, ಬೀದಿ ದೀಪಗಳಿಗೆ ಹೂಡಿಕೆಯಿಲ್ಲದೆ ಎಲ್ ಇಡಿ ಲೈಟ್ ಹಾಕುವ ಹಾಗೂ ವಾರ್ಷಿಕ 55 ಕೋಟಿ ರೂಪಾಯಿ ನಿರ್ವಹಣೆ ವೆಚ್ಚ ಉಳಿತಾಯ ಮಾಡುವಂತಹ ಯೋಜನೆ ನೆಲಕಚ್ಚಿದ್ದು, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆಯಂತಾಗಿದೆ.