ಬೆಂಗಳೂರು, (www.bengaluruwire.com) : ದೇಶಾದ್ಯಂತ ಇಂದು ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ಸಾಮಾನ್ಯ ವಿಮಾ ಕಂಪನಿಗಳ ಖಾಸಗೀಕರಣಗಳನ್ನು ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆ (UFBU) ಮುಷ್ಕರ ಆರಂಭಿಸಿವೆ. ಇದು ನಾಳೆಯೂ ಕೂಡ ಮುಂದುವರೆಯಲಿದೆ.
ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ರಾಷ್ಟ್ರೀಕೃತ ಬ್ಯಾಂಕ್ ಗಳ ವಿವಿಧ ಶಾಖೆಗಳಲ್ಲಿ ಸಾಲ ಮಂಜೂರಾತಿ, ಚೆಕ್ ಕ್ಲಿಯರೆನ್ಸ್, ಹಣ ವರ್ಗಾವಣೆ, ಸ್ವೀಕೃತಿ ಮತ್ತಿತರ ಅಗತ್ಯ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿಯಾಗಿ ಬ್ಯಾಂಕ್ ಗ್ರಾಹಕರು ಪರದಾಡಿದರು. ಗುರುವಾರ ಬೆಳಗ್ಗೆ ಕೆಂಪೇಗೌಡ ರಸ್ತೆಯಲ್ಲಿರುವ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬ್ಯಾಂಕ್ ನೌಕರರು ಒಗ್ಗೂಡಿ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ 2021 ಮಂಡನೆಯನ್ನು ವಿರೋಧಿಸಿ ಘೋಷಣೆ ಕೂಗುತ್ತಾ ತಮ್ಮ ವಿರೋಧ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯದ, ಭಾರತೀಯ ರಾಷ್ಟ್ರೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (INBEF)ದ ಪ್ರಧಾನ ಕಾರ್ಯದರ್ಶಿ ಎಂ.ಕೆ.ನರಸಿಂಹಮೂರ್ತಿ, ದೇಶದ ಬಡತನ ನಿವಾರಣೆ, ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ ನೀಡಿರುವ ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ವಿಲೀನಗೊಳಿಸಿ ಅವುಗಳ ಒಡೆತನವನ್ನು ಖಾಸಗೀ ಕುಳಗಳಿಗೆ ನೀಡುವ ದೊಡ್ಡ ಹುನ್ನಾರ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಎರಡು ಬ್ಯಾಂಕ್ ಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಇಂದು ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಭಾಗಿಯಾಗಿ ಕೇಂದ್ರದ ನೀತಿ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಹೋರಾಟ ನಾಳೆಯೂ ಮುಂದುವರೆಯಲಿದೆ ಎಂದು ಅವರು ಹೇಳಿದರು.
ಅಧಿಕೃತ ಮಾಹಿತಿಯ ಪ್ರಕಾರ ದೇಶದಲ್ಲಿ ಕೆಟ್ಟ ಸಾಲ (NPA) ಗಳು ಎಂದು ಪರಿಗಣಿಸಿರುವ 45 ಸಾವಿರ ಕೋಟಿ ರೂ. ಮೊತ್ತದ ಸಾಲ ಕೇವಲ 100 ಜನ ದೊಡ್ಡ ಸಾಲಗಾರರಿಗೆ ಸೇರಿದ್ದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿತ್ತು. ಈ ದೊಡ್ಡ ಸಾಲಗಾರರ ಬಾಕಿ ವಸೂಲಿಗೆ ದಿಟ್ಟ ಪ್ರಯತ್ನ ಮಾಡುವುದರ ಬದಲಾಗಿ ಬ್ಯಾಂಕ್ ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳ ಲೂಟಿಗೆ ಅವಕಾಶ ನೀಡಲಾಗುತ್ತಿದೆ ಎಂದು ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಗಳ ಖಾಸಗೀಕರಣ ಎಂದರೆ ದೇಶದ ಹಣಕಾಸು ಕ್ಷೇತ್ರವನ್ನು ದೇಶ- ವಿದೇಶಗಳ ಬಂಡವಾಳಗಾರರಿಗೆ ಒಪ್ಪಿಸುವುದಾಗಿದೆ. ಇದರಿಂದಾಗಿ ಜನರ ಉಳಿತಾಯ ಹಣದ ಲೂಟಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಶಾಖೆಗಳು ಮುಚ್ಚುವ, ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವೆಂಚನೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಲಿದೆ ಎಂದು ಐಎನ್ ಬಿಇಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ನರಸಿಂಹಮೂರ್ತಿ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಡಿ.16 ಮತ್ತು 17ರಂದು ನಡೆಯುವ ದೇಶವ್ಯಾಪಿ ಮುಷ್ಕರದಲ್ಲಿ 9 ಲಕ್ಷಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದಾರೆ. ರಾಷ್ಟ್ರೀಕರಣಗೊಂಡ ಮೇಲೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಮುಳುಗಿ ಹೋಗಿಲ್ಲ. ಬದಲಿಗೆ ಸಾಲದ ಸುಳಿಯಲ್ಲಿ ಮುಳುಗಿದ್ದ ಖಾಸಗಿ ಬ್ಯಾಂಕ್ ಗಳನ್ನು ತನ್ನ ಹಿಡಿತಕ್ಕೆ ಸೇರಿಸಿಕೊಂಡು ಠೇವಣಿದಾರರ ಹಿತಾಸಕ್ತಿಗಳನ್ನು ಸರ್ಕಾರಿ ಬ್ಯಾಂಕ್ ಗಳು ರಕ್ಷಣೆ ಮಾಡಿವೆ ಎಂದು ಅವರು ಹೇಳಿದ್ದಾರೆ.