ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಆಂಜನೇಯ ಸ್ವಾಮಿ ಆರಾಧನೆ ನಗರದ ಹಲವು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಭಕ್ತಿಪೂರ್ವಕವಾಗಿ ನಡೆಯುತ್ತಿದೆ. ಹನುಮ ಜಯಂತಿ ಪ್ರಯುಕ್ತ ಮಾರುತಿ ದೇಗುಲಗಳಲ್ಲಿ ಹನುಮದ್ ವ್ರತಾಚರಣೆ ಕೂಡ ನಡೆಯುತ್ತಿದೆ.
ಮಹಾಲಕ್ಷ್ಮಿಪುರದ ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನ, ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಗುಟ್ಟೆ ಆಂಜನೇಯಸ್ವಾಮಿ ದೇವಸ್ಥಾನ, ಉಲ್ಲಾಳದ ವೀರಾಂಜನೇಯ ಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ನಗರದ ಕೆಂಚೇನಹಳ್ಳಿ ಆಂಜನೇಯ ದೇವಸ್ಥಾನ, ಇಸ್ಕಾನ್ ಆಂಜನೇಯ ದೇವಸ್ಥಾನ ಸೇರಿದಂತೆ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು.
ವ್ರತಾಚರಣೆಯ ಮೊದಲ ದಿನ: ’ಡಿ.16 ಹನುಮ ಜಯಂತಿ (ಆಂಜನೇಯನ ಜನ್ಮದಿನ) ಅಲ್ಲ. ರಾವಣನ ಹಿಡಿತದಲ್ಲಿದ್ದ ಸೀತೆಯನ್ನು ಕರೆತರುವವರೆಗೆ ನೀರು, ಫಲಾಹಾರ ಯಾವುದನ್ನೂ ಸೇವಿಸುವುದಿಲ್ಲ ಎಂದು ರಾಮನ ಭಕ್ತ ಆಂಜನೇಯ ಸ್ವಾಮಿ ಪಣತೊಟ್ಟು ವ್ರತಾಚರಣೆ ಆರಂಭಿಸಿದ ಮೊದಲ ದಿನವಿದು. ಈ ದಿನ ಅತ್ಯಂತ ಶ್ರೇಷ್ಠವಾದುದು. ಈ ಹಿನ್ನೆಲೆಯಲ್ಲಿ ಹನುಮದ್ ವ್ರತಾಚರಣೆಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ‘ ಎಂದು ಅರ್ಚಕರೊಬ್ಬರು ತಿಳಿಸಿದರು.
ಕೆಂಚೇನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿ ಹನುಮ ಜಯಂತಿ :
ರಾಜರಾಜೇಶ್ವರಿ ನಗರದಲ್ಲಿರುವ ಕೆಂಚೇನಹಳ್ಳಿ ಆಂಜನೇಯ ಸೇವಾ ಸಮಿತಿ ಅಧ್ಯಕ್ಷರಾದ ಟಿ ಅಶೋಕ್ ಅವರು ಮಾತನಾಡುತ್ತಾ, ಪ್ರಸಿದ್ಧವಾದ ಕೆಂಚೇನಹಳ್ಳಿ ಆಂಜನೇಯ ದೇವಸ್ಥಾನದಲ್ಲಿ ಪ್ರತಿವರ್ಷವೂ ಅದ್ದೂರಿಯಾಗಿ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸುತ್ತಾ ಬಂದಿದ್ದೇವೆ. ನಗರದ ಬೇರೆ ಬೇರೆ ಭಾಗಗಳಿಂದ ಭಗವಂತನ ದರ್ಶನ ಮಾಡಲು ಭಕ್ತಾದಿಗಳು ಬಂದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದು ಹೇಳಿದರು.
ಕೆಂಚೇನಹಳ್ಳಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟಿಗಳಾದ ಆರ್.ಸುರೇಶ್ ರಾವ್, ಎಸ್.ಶಶಿಕಾಂತ್ ರಾವ್, ಕೆ.ಟಿ. ಪ್ರಕಾಶ್, ಪ್ರಸಾದ್*,ಹಾಗೂ ಕೆಂಚೇನಹಳ್ಳಿ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಸುರೇಶ್, ಖಜಾಂಚಿ ರಮೇಶ್ ಮತ್ತಿತರು ಪಾಲ್ಗೊಂಡಿದ್ದರು.
ಉಲ್ಲಾಳದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಡಗರದ ಜಯಂತಿ :
ಉಲ್ಲಾಳ ಗ್ರಾಮಸ್ಥರು ಪುರಾತನ ವೀರಾಂಜನೇಯ ಸ್ವಾಮಿ ದೇವರಿಗೆ ಹನುಮ ಜಯಂತಿ ಪ್ರಯುಕ್ತ ಮುನ್ನಾದಿನವಾದ ಬುಧವಾರ, ಕಲ್ಯಾಣೋತ್ಸವ ನೆರವೇರಿಸಿದರು. ಇಂದು ಗ್ರಾಮಸ್ಥರೆಲ್ಲರೂ ಒಡಗೂಡಿ ಸಡಗರದಿಂದ ಹನುಮ ಜಯಂತಿ ಆಚರಿಸಿ, ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು. ಶ್ರೀ ದೇವರನ್ನು ಗ್ರಾಮಸ್ಥರು ಅನಾದಿ ಕಾಲದಿಂದ ಪೂಜಿಸಿಕೊಂಡು ಬರುತ್ತಿದ್ದಾರೆ ಎಂದು ದೇವಸ್ಥಾನ ಅಧ್ಯಕ್ಷರಾದ ಅನಿಲ್‌ಕುಮಾರ್ “ಬೆಂಗಳೂರು ವೈರ್” ಗೆ ತಿಳಿಸಿದ್ದಾರೆ.
ಮಹಾಲಕ್ಷ್ಮಿಪುರದ ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಬಹುತೇಕ ಆಂಜನೇಯ ದೇವಾಲಯಗಳಲ್ಲಿ ಗುರುವಾರ ಹನುಮದ್ ವ್ರತ ಆಚರಿಸಲಾಯಿತು.
ನಗರದ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಜರುಗಿತು. ಆಂಜನೇಯ ದೇವರ ಮೂರ್ತಿಗಳಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಕೆಲವೆಡೆ ತೋಮಾಲೆ ಮತ್ತು ವಡೆಮಾಲೆ ಸೇವೆ ನಡೆಯಿತು. ಸಿಹಿಯನ್ನು ಪ್ರಸಾದವಾಗಿ ಹಂಚಲಾಯಿತು. ಕಳೆದ ಬಾರಿ ಕೋವಿಡ್ ಕಾರಣದಿಂದ ಹಲವು ದೇಗುಲಗಳಲ್ಲಿ ನಿರೀಕ್ಷಿಸಿದಷ್ಟು ಭಕ್ತರು ಆಗಮಿಸಿರಲಿಲ್ಲ. ಈಗ ಕೋವಿಡ್ ಸಾಕಷ್ಟು ಕಡಿಮೆಯಾಗಿರುವ ಕಾರಣ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿತ್ತು.
ಹಲವು ಕಡೆಗಳಲ್ಲಿ ಆಂಜನೇಯನಿಗೆ ಹಾಲಿನ ಅಭಿಷೇಕ, ಅನ್ನದಾನ :
ಯಡಿಯೂರಿನ ಪ್ರಸನ್ನ ಆಂಜನೇಯ ದೇವಸ್ಥಾನ, ವಿಜಯನಗರದ ಸನಾತನ ಭಕ್ತ ಮಂಡಳಿ, ಕತ್ರಿಗುಪ್ಪೆಯ ಹರಕೆ ಹನುಮ ದೇವಸ್ಥಾನ, ಆರ್‌ಪಿಸಿ ಬಡಾವಣೆಯ ಪಂಚಮುಖಿ ಆಂಜನೇಯ ದೇವಾಲಯ, ಮಾರತ್ತಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನ, ದಾಸನಪುರದ ವೀರಾಂಜನೇಯಸ್ವಾಮಿ, ಹೊಸಕೆರೆಹಳ್ಳಿಯ ಅಭಯಾಂಜನೇಯಸ್ವಾಮಿ, ಮಹಾಲಕ್ಷ್ಮಿಪುರದ ಪ್ರಸನ್ನ ಆಂಜನೇಯಸ್ವಾಮಿ, ಯಶವಂತಪುರದ ದಾರಿ ಆಂಜನೇಯ ಸ್ವಾಮಿ, ಗುಟ್ಟಹಳ್ಳಿಯ ಆಂಜನೇಯ ಸ್ವಾಮಿ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಕೆಲವು ದೇವಸ್ಥಾನಗಳಲ್ಲಿ ಹಾಲಿನ ಅಭಿಷೇಕ, ಹನುಮ ಜಯಂತಿ ಪ್ರಯುಕ್ತ ಅನ್ನದಾನ ಕಾರ್ಯಕ್ರಮಗಳು ನಡೆಯುತ್ತಿವೆ.