ಮೈಸೂರು, (www.bengaluruwire.com) : ಮಾರ್ಕೆಟ್ ನಲ್ಲಿ ಶುದ್ಧ ನಂದಿನಿ ತುಪ್ಪ ಅಂತ ತಿನ್ನುತ್ತಿದ್ದರೆ ಹುಷಾರು. ನಕಲಿ ನಂದಿನಿ ತುಪ್ಪದ ಬಗ್ಗೆ ಎಚ್ಚರವಿರಲಿ.
ಕೆಎಂಎಫ್ ನಂದಿನಿ ಬ್ರಾಂಡ್ ಹೆಸರಿನಲ್ಲಿ ನಕಲಿ ಸ್ಟಿಕ್ಕರ್ ತಯಾರಿಸಿ, ಕಲಬೆರೆಕೆ ತುಪ್ಪ ತಯಾರಿಸಿ ಮಾರುತ್ತಿದ್ದ ಗೋದಾಮಿನ ಮೇಲೆ ಮೈಸೂರು ಪೊಲೀಸರು ಹಾಗೂ ಮೈಸೂರು ಹಾಲು ಒಕ್ಕೂಟ (Mymul), ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದಾರೆ.
ಮೈಸೂರಿನಿಂದ 10 ಕಿ.ಮೀ ದೂರದಲ್ಲಿದಲ್ಲಿರುವ ಹೊಸಹುಂಡಿ ಎಂಬಲ್ಲಿ ಜೀವನ್ ತುಪ್ಪ ಘಟಕದ ಗೋಡೆನ್ ನಲ್ಲಿ ಅಕ್ರಮವಾಗಿ ಕೆಎಂಎಫ್ ನಂದಿನಿ ಬ್ರಾಂಡ್ ನ ಸ್ಟಿಕ್ಕರ್ ನಕಲೊ ಮಾಡಿ, ಡಾಲ್ಡಾ ಕಲಬೆರೆಕೆಯ ನಕಲಿ ತುಪ್ಪ ಮಾರಲಾಗುತ್ತಿತ್ತು ಎಂದು ಮೈಸೂರು ಪೊಲೀಸರು ಹಾಗೂ ಮೈಮೂಲ್ ಅಧಿಕಾರಿಗಳು ದಾಳಿ ನಡೆಸಿದಾಗ ತಿಳಿದು ಬಂದಿದೆ.
10 ರಿಂದ 11 ಟನ್ ಕಲಬೆರೆಕೆ ತುಪ್ಪ ವಶಕ್ಕೆ :
ದಾಳಿಯ ವೇಳೆ 4 ಟನ್ ನೈಜ್ ನಂದಿನಿ ತುಪ್ಪವಿರುವುದು ಪತ್ತೆಯಾಗಿದೆ. ಅದನ್ನು ಡಾಲ್ಡಾ ಮತ್ತಿತರ ಪದಾರ್ಥ ಬೆರೆಸಿ ಕಲಬೆರೆಕೆ ತುಪ್ಪವನ್ನು ಮೈಸೂರು ಸುತ್ತಮುತ್ತಲ ಪ್ರದೇಶದಲ್ಲಿ ನಕಲಿ ತುಪ್ಪದ ದಂಧೆಕೋರರು ಮಾರಾಟ ಮಾಡುತ್ತಿದ್ದರು. ಇದಕ್ಕಾಗಿ ಹೊಸ ಗೋಡೌನ್ ನನ್ನು ಹೊಸಹುಂಡಿಯಲ್ಲಿ ನಿರ್ಮಿಸಿಕೊಂಡಿದ್ದರು. ಇಂದಿನ ದಾಳಿಯಲ್ಲಿ 10 ರಿಂದ 11 ಟನ್ ಕಲಬೆರೆಕೆ ತುಪ್ಪ ಸಂಗ್ರಹ ಮಾಡಿಟ್ಟಿರುವುದು ಪತ್ತೆಯಾಗಿದೆ. ಅದರಲ್ಲಿ 300 ಟಿನ್ ಗಳು ಪ್ಯಾಕ್ ಆಗಿದ್ದವು ಎಂದು ಮೈಮೂಲ್ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಧಿಕಾರಿಗಳು ಗೋಡೌನ್ ನಲ್ಲಿ ಬೆಳಗ್ಗೆಯಿಂದ ಕಲಬೆರಕೆ ತುಪ್ಪದ ಬಗ್ಗೆ ಪರೀಕ್ಷೆ ನಡೆಸಿ ತದನಂತರ ಅದನ್ನು ತಮ್ಮ ವಶಕ್ಕೆ ಪಡೆದು ಮೈಸೂರು ದಕ್ಷಿಣ ಪೊಲೀಸರಿಗೆ ಹಸ್ತಾಂತರಿಸಿದರು. ಈ ಪ್ರಕರಣ ಸಂಬಂಧ ಕೆಎಂಎಫ್ ನ ಮೈಸೂರು ಹಾಲು ಒಕ್ಕೂಟದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ದಾಳಿ ವೇಳೆ ನಕಲಿ ತುಪ್ಪ ಹಾಗೂ ನಂದಿನಿ ಬ್ರಾಂಡ್ ಹೆಸರಿನ ನಕಲಿ ತುಪ್ಪದ ಕವರ್ ಅನ್ನು ಪೊಲೀಸರು ಮತ್ತು ಮೈಮೂಲ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ನಕಲಿ ನಂದಿನಿ ತುಪ್ಪದ ಜಾಲ ಕಳೆದ ನಾಲ್ಕು ತಿಂಗಳಿನಿಂದ ಮೈಸೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಡೂಪ್ಲಿಕೇಟ್ ತುಪ್ಪ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆಯ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಯಾವುದೇ ದೂರು ದಾಖಲಾದ ಬಗ್ಗೆ ಮಾಹಿತಿ ತಿಳಿದಿಲ್ಲ. ಒಂದೊಮ್ಮೆ ದೂರು ದಾಖಲಾದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಮಾನವ ಹಕ್ಕು ಹೋರಾಟಗಾರರಿಂದ ಪ್ರಕರಣ ಬೆಳಕಿಗೆ :
ಗುರುವಾರ ಬೆಳಗ್ಗೆ ಹೊಸ ಹುಂಡಿಯಲ್ಲಿ ಇರುವ ನಕಲಿ ನಂದಿನಿ ತುಪ್ಪ ತಯಾರಿಕಾ ಗೋದಾಮಿನ ಮೇಲೆ ಮಾನವ ಹಕ್ಕು ಹೋರಾಟಗಾರರ ತಂಡ ಮೊದಲು ದಾಳಿ ನಡೆಸಿತ್ತು. ಕೆಲವರು ಲಾಕ್ ಮಾಡಿ ಗೋಡೌನ್ ಒಳಗಡೆ ಕೆಲಸ ಮಾಡುತ್ತಿದ್ದರು.
ನಂದಿನಿ ತುಪ್ಪದ ರೂಪವೇ ಬರಲೆಂದು ನಕಲಿ ದಂಧೆಕೋರರು, ಕೆಲವು ಅಸಲಿ ನಂದಿನಿ ತುಪ್ಪವನ್ನೂ ಗೋಡೌನ್‌ನಲ್ಲಿ ಇಟ್ಟುಕೊಂಡಿದ್ದರು. ಅದಕ್ಕೆ ಡಾಲ್ಡಾ ಮಿಶ್ರಣ ಮಾಡಿ ಅದನ್ನು ಟನಲ್‌ನಲ್ಲಿ ತುಂಬಿಸಿ, ಪ್ಯಾಕಿಂಗ್ ಮಿಶನ್‌ನಲ್ಲಿ ಒಂದಾದ ನಂತರ ಒಂದು ಟಿನ್‌ಗಟ್ಟಲೆ ತುಂಬಿರುವುದು ಮಾನವ ಹಕ್ಕುಗಳ ಹೋರಾಟಗಾರರ ತಂಡದವರು ಗೋಡನ್ ಮೇಲೆ ದಾಳಿ ನಡೆಸಿದಾಗ ತಿಳಿದು ಬಂದಿತ್ತು ಎನ್ನಲಾಗಿದೆ.
ಈ ಬಗ್ಗೆ ಅವರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕೆಎಂಎಫ್ ನವರ ಗಮನಕ್ಕೂ ತಂದ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.