ಬೆಂಗಳೂರು, (www.bengaluruwire.com) : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ನಲ್ಲಿ 2 ಲಕ್ಷ ಬೆಲೆಬಾಳುವ ಚಿನ್ನಾಭರಣ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನು ಮರೆತು ಬಿಟ್ಟು ಹೋಗಿದ್ದ ವ್ಯಕ್ತಿಗೆ ಪುನಃ ಆ ವಸ್ತುಗಳಿದ್ದ ಚೀಲವನ್ನು ಕೆಎಸ್ ಆರ್ ಟಿಸಿ ಡ್ರೈವರ್ ಮತ್ತು ಕಂಡೆಕ್ಟರ್ ಮರಳಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕೆಎಸ್ ಆರ್ ಟಿಸಿಯ ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಸಿ.ಎಂ ಲಿಂಗೇಶ್, ಚಾಲಕ ಕಂ ನಿರ್ವಾಹಕರಾದ ಹೆಚ್.ಕೆ.ರಾಜು ಅವರೇ ಪ್ರಯಾಣಿಕರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗನ್ನು ಪ್ರಾಮಾಣಿಕವಾಗಿ ಪ್ರಯಾಣಿಕರಿಗೆ ಹಿಂದಿರುಗಿಸಿದ ಸಿಬ್ಬಂದಿಯಾಗಿದ್ದಾರೆ.
ಬೆಂಗಳೂರು-ಕುಂದಾಪುರ ಮಾರ್ಗದ ಕೆ.ಎ57-ಎಫ್ 2885 ವಾಹನ ಸಂಖ್ಯೆ ಬಸ್ಸಿನಲ್ಲಿ ಡಿ.9 ರಂದು ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು 2 ಲಕ್ಷ ರೂ. ಬೆಲೆಬಾಳುವ ಮೊಬೈಲ್, ನಗದು ಮತ್ತು ಚಿನ್ನಾಭರಣವನ್ನೊಳಗೊಂಡ ಬ್ಯಾಗನ್ನು ಬಸ್ಸಿನಲ್ಲಿ ಬಿಟ್ಟು ಉಡುಪಿ ಬಸ್ ನಿಲ್ದಾಣ ಇಳಿದಿದ್ದರು.
ತದನಂತರ ಕುಂದಾಪುರ ಘಟಕದಲ್ಲಿ, ಚಾಲಕ ಮತ್ತು ನಿರ್ವಾಹಕರು ಬಸ್ಸಿನಲ್ಲಿರುವ ಬ್ಯಾಗ್ನ್ನು ಗಮನಿಸಿ, ಆ ಪ್ರಯಾಣಿಕರಿಗೆ ದೂರವಾಣಿ ಮೂಲಕ ಕರೆಮಾಡಿ ವಿಷಯ ತಿಳಿಸಿ, ಕುಂದಾಪುರ ಘಟಕ ವ್ಯವಸ್ಥಾಪಕರ ಸಮ್ಮುಖದಲ್ಲಿ ಆ ಪ್ರಯಾಣಿಕರಿಗೆ ಬೆಲೆಬಾಳುವ ವಸ್ತುಗಳ ಬ್ಯಾಗನ್ನು ತಲುಪಿಸಿದರು.
ಡ್ರೈವರ್ ಸಿ.ಎಂ.ಲಿಂಗೇಶ್ ಹಾಗೂ ಕಂಡೆಕ್ಟರ್ ಹೆಚ್.ಕೆ.ರಾಜು ಅವರ ಪ್ರಾಮಾಣಿಕ ಕಾರ್ಯವನ್ನು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ.ಕಳಸದ ಅವರು ಶ್ಲಾಘಿಸಿರುತ್ತಾರೆ.