ಬೆಂಗಳೂರು, (www.bengaluruwire.com) : ನಗರದಲ್ಲಿ ಲಸಿಕಾಕರಣವನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಹಲವು ಎನ್ಜಿಒ ಸಂಸ್ಥೆಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(CSR) ಕಾರ್ಯಕ್ರಮದಡಿ ನೀಡುತ್ತಿರುವ 6 ‘ಲಸಿಕಾ ವಾಹನ’ಗಳಿಗೆ ಮುಖ್ಯ ಆಯುಕ್ತರು ಗೌರವ್ ಗುಪ್ತ ರವರು ಬುಧವಾರ ಚಾಲನೆ ನೀಡಿದರು.
ಲಸಿಕೆ ಪಡೆಯದೇ ಇರುವ ಸ್ಥಳಗಳಿಗೆ ಭೇಟಿ ನೀಡಿ ಲಸಿಕೆ ನೀಡುವುದು ಇದರ ಉದ್ದೇಶವಾಗಿದ್ದು, 3ಎಂ ಇಂಡಿಯಾ (3M India), ಜಿಇ (GE), ವ್ಯಾಕ್ಸಿನ್ ಆನ್ ವೀಲ್ಸ್ (Vaccine On Wheels ) ಹಾಗೂ ಯುನೈಟೆಡ್ ವೇ ಬೆಂಗಳೂರು (United Way Bengaluru) ಸಂಸ್ಥೆಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿ ಲಸಿಕೆ ನೀಡಲು ಮುಂದಾಗಿದೆ.
ಅದರಂತೆ ಪಾಲಿಕೆಯ ನಾಲ್ಕು ವಲಯಗಳಾದ ದಾಸರಹಳ್ಳಿ, ಪೂರ್ವ, ಮಹದೇವಪುರ ಮತ್ತು ಬೊಮ್ಮನಹಳ್ಳಿಗೆ 6 ವಾಹನಗಳನ್ನು ನಿಯೋಜಿಸಲಾಗಿದ್ದು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (UPHC)ಗಳ ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳೊಂದಿಗೆ ಲಸಿಕೆ ಪಡೆಯದವರಿಗೆ ಲಸಿಕೆ ನೀಡಲು ವಿಸ್ತೃತ ಕಾರ್ಯತಂತ್ರವನ್ನು ರೂಪಿಸಲಾಗಿದೆ.
ಮಾರ್ಚ್ 2022ರ ವೇಳೆಗೆ ಸೂಮಾರು 50,000 ಮಂದಿಗೆ ಲಸಿಕೆ :
ಪ್ರತಿ ಮೊಬೈಲ್ ಲಸಿಕಾ ವಾಹನ (Mobile Vaccination Vehicle) ದಲ್ಲಿ ಓರ್ವ ಲಸಿಕೆ ನೀಡುವ ಹಾಗೂ ಓರ್ವ ಡೆಟಾ ಎಂಟ್ರಿ ಆಪರೇಟರ್ನನ್ನು ವ್ಯವಸ್ಥೆ ಮಾಡಲಾಗಿದ್ದು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ಮಾರ್ಗದರ್ಶನದಂತೆ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಈ ಆರು ವಾಹನಗಳ ಮೂಲಕ ಮಾರ್ಚ್ 2022ರವರೆಗೆ ಸೂಮಾರು 50,000 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ನಗರದಲ್ಲಿ ಇದುವರೆಗೆ ಒಟ್ಟು 1,48,80,522 ಡೋಸ್ ಲಸಿಕೆ ನೀಡಲಾಗಿದ್ದು, 83,03,237 ಮೊದಲ ಡೋಸ್, 65,77,285 ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ ಹಾಗೂ ಯಲಹಂಕದ ಡಾ. ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಮಲ್ಲೇಶ್ವರದ ಯಂಗ್ಸ್ಟರ್ಸ್ ಕಬ್ಬಡಿ ಆಟದ ಮೈದಾನದಲ್ಲಿ ಸ್ಥಾಪಿಸಿರುವ ಬೃಹತ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ವಾಕ್ ಇನ್ ಹಾಗೂ ಡ್ರೈವ್ ಇನ್ ಮೂಲಕ ವಾಹನಗಳಲ್ಲೇ ಲಸಿಕೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೆ ಆಯಾ ವಾರ್ಡ್ ಗಳ ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಪಡೆದು ಲಸಿಕೆ ಪಡೆದುಕೊಳ್ಳದೇ ಇರುವವರಿಗೆ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಎಲ್ಲರೂ ಕೋವಿಡ್ ಲಸಿಕೆ ಪಡೆಕೊಳ್ಳಬೇಕೆಂಬ ಉದ್ದೇಶದಿಂದ ಹಲವಾರು ಎನ್ಜಿಒ ಸಂಸ್ಥೆಗಳು ಪಾಲಿಕೆಯ ಜೊತೆ ಕೈಜೋಡಿಸಿ ವಾಹನಗಳು ಹಾಗೂ ಲಸಿಕೆ ನೀಡಲು ಅಗತ್ಯ ಸಿಬ್ಬಂದಿಯ ವ್ಯವಸ್ಥೆ ಮಾಡುತ್ತಿವೆ.
ಈ ವೇಳೆ ವಿಶೇಷ ಆಯುಕ್ತ(ಆರೋಗ್ಯ) ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.