ಬೆಂಗಳೂರು, (www.bengaluruwire.com) : ನಗರದ ರಾಜರಾಜೇಶ್ವರಿ ನಗರ ವಲಯದಲ್ಲಿ ಕೊಳಚೆನೀರು ಸೇರುತ್ತಿರುವ ಉಲ್ಲಾಳ ಕೆರೆ (Ullal Lake) ಯ ಅಭಿವೃದ್ಧಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೆರೆ ವಿಭಾಗದ ಅಧೀಕ್ಷಕ ಎಂಜಿನಿಯರ್ (SE) ವಿಜಯ್ ಕುಮಾರ್ “ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಉಲ್ಲಾಳ ಕೆರೆಗೆ “ಕೊಳಚೆ” ನೀರಿನ ವಿಷ ಪ್ರಾಶಾನ…!! ಸಾಯುತ್ತಿದೆ ವನ್ಯ ಪ್ರಾಣಿಪಕ್ಷಿಗಳು….!! ಎಲ್ಲಿದ್ದೀರಾ ಅಧಿಕಾರಿಗಳೇ? ಎಂಬ “ಬೆಂಗಳೂರು ವೈರ್” ಇದೇ ಡಿ.6 ರಂದು ವಿಶೇಷ ವರದಿ ಪ್ರಕಟಿಸಿತ್ತು.
ಈ ವರದಿಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯ ಕೆರೆ ವಿಭಾಗದ ಅಧೀಕ್ಷಕ ಎಂಜಿನಿಯರ್ ವಿಜಯ್ ಕುಮಾರ್ ಇಂದು (ಡಿ.14) ಉಲ್ಲಾಳ ಕೆರೆಗೆ ಖುದ್ದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಕೆರೆಗೆ ಕೊಳಚೆ ನೀರು ಸೇರಲು ಕಾರಣವಾಗಿರುವ ಒಡೆದ ವೆಟ್ ಲ್ಯಾಂಡ್ ಬಂಡ್ ತುರ್ತಾಗಿ ಸರಿಪಡಿಸುತ್ತೇವೆ. 0.350 ಎಂಎಲ್ ಡಿ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್ ಟಿಪಿ)ದ ಎಸ್ ಟಿಪಿ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಅಲ್ಪಾವಧಿ ಮತ್ತು ದೀರ್ಘಾವಧಿಗಾಗಿ ಸಮಗ್ರ ಯೋಜನಾ ವರದಿ (DPR) ತಯಾರಿಸಿ ಅನುದಾನ ಪಡೆದು ಕೆರೆಯ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದು “ಬೆಂಗಳೂರು ವೈರ್” ಗೆ ವಾಗ್ದಾನ ನೀಡಿದರು.
ಇದು “ಬೆಂಗಳೂರು ವೈರ್” IMPACT.
ಬಿಬಿಎಂಪಿಯ ಕೆರೆ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 202 ಕೆರೆಗಳಿವೆ. ಪ್ರತಿ ಕೆರೆಗಳ ಸಾಮಾನ್ಯ ವಾರ್ಷಿಕ ನಿರ್ವಹಣೆಗೆ ಕನಿಷ್ಠ 10 ರಿಂದ 15 ಲಕ್ಷ ರೂ. ಕರ್ಚಾಗಲಿದೆ. ಆದರೆ ಅಷ್ಟು ಹಣ ಕೆರೆ ವಿಭಾಗಕ್ಕೆ ಲಭಿಸುತ್ತಿಲ್ಲ. ಒಟ್ಟಾರೆ ಕೆರೆ ಅಭಿವೃದ್ದಿ, ಕೆರೆ ನಿರ್ವಹಣೆಗೆ ಬಿಬಿಎಂಪಿಯ 2021-22 ರ ಬಜೆಟ್ ನಲ್ಲಿ 35 ಕೋಟಿ ರೂ. ಮಾತ್ರ ತೆಗೆದಿರಿಸಲಾಗಿದೆ. ಉಲ್ಲಾಳ ಕೆರೆ ಅಭಿವೃದ್ಧಿಗೆ ಯಾವ ಅನುದಾನ ಸದ್ಯ ಲಭ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಉಲ್ಲಾಳ ಕೆರೆ ಅಭಿವೃದ್ಧಿ ಬಗ್ಗೆ ವಲಯ ಆಯುಕ್ತ ಬಾಬು ಶಂಕರರೆಡ್ಡಿ ಒಲವು :
ಹಾಗಾಗಿ ಮುಂದಿನ ಪಾಲಿಕೆ ಬಜೆಟ್ ನಲ್ಲಿ ಉಲ್ಲಾಳ ಕೆರೆಯ ಸಮಗ್ರ ಅಭಿವೃದ್ಧಿಗೆ ಡಿಪಿಆರ್ ತಯಾರಿಸಿ ಅನುದಾನ ಮೀಸಲಿಡಲು ಪ್ರಸ್ತಾವನೆ ಸಲ್ಲಿಸಲಾಗುವುದು. 15 ದಿನಗಳಲ್ಲಿ ಕೆರೆಯ ವೆಟ್ ಲ್ಯಾಂಡ್ ಬಂಡ್ ಸರಿಪಡಿಸಲಾಗುವುದು. ಈ ಕೆರೆಯ ಬಗ್ಗೆ ಈಗಾಗಲೇ ಕೆರೆ ವಿಭಾಗದ ವಿಶೇಷ ಆಯುಕ್ತ ಬಾಬು ಶಂಕರರೆಡ್ಡಿಯವರೂ ಆಸಕ್ತಿ ತೋರಿಸಿದ್ದು, ದೇಶ- ವಿದೇಶದ 20 ಕ್ಕೂ ಹೆಚ್ಚು ಹಕ್ಕಿಗಳ ಆಶ್ರಯತಾಣವಾಗಿರುವ ಕೆರೆಯನ್ನು ಸುಸ್ಥಿತಿಗೆ ತರಲು ಸೂಚಿಸಿದ್ದಾಗಿ ವಿಜಯ್ ಕುಮಾರ್ “ಬೆಂಗಳೂರು ವೈರ್”ಗೆ ಹೇಳಿದರು.
ಕ್ಷೇತ್ರದಲ್ಲಿನ ಕಾಮಗಾರಿಗೆ ಶಾಸಕರ ಅನುದಾನ ಕೋಟಿ ಕೋಟಿ – ಕೆರೆಗಳಿಲ್ಲ ನಯಾಪೈಸೆ :
ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ತಂದಿದ್ದಾರೆ. ಆದರೆ ದುರದೃಷ್ಟವಶಾತ್ ಆ ಪೈಕಿ ಬಿಡಿಗಾಸು ಹಣವನ್ನು ಅವರ ಶಾಸಕರ ಅನುದಾನದಲ್ಲಿ ಉಲ್ಲಾಳ ಸೇರಿದಂತೆ ಈ ಕ್ಷೇತ್ರದ ಇತರ ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ನೀಡಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಲ್ಲಾಳ ಕೆರೆ, ಹೇರೊಹಳ್ಳಿ ಕೆರೆ ಸೇರಿದಂತೆ 27 ಕೆರೆಗಳಿವೆ. ಈ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಕನಿಷ್ಠ 236 ಕೋಟಿ ರೂ. ಅಗತ್ಯವಿದೆ ಎಂದು ಹೇಳುತ್ತಾರೆ ಪಾಲಿಕೆ ಕೆರೆ ವಿಭಾಗದ ಅಧಿಕಾರಿಗಳು.
ಈ ಕೆರೆಗಳು ಕಂಗೊಳಿಸಲು ಅದ್ಯಾವ ಕಾಲಕ್ಕೆ ಹಣ ಬರುತ್ತೋ ಕಾದು ನೋಡಬೇಕು.
ಕಾರ್ಯ ನಿರ್ವಾಹಕ ಎಂಜಿನಿಯರ್ ಗೀತಾ, ಸಹಾಯಕ ಎಂಜಿನಿಯರ್ ಶಿಲ್ಪಾ, ಉಲ್ಲಾಳ ವಾರ್ಡ್ ಸಹಾಯಕ ಎಂಜಿನಿಯರ್ ಯದುಕೃಷ್ಣ ಅವರು ಉಲ್ಲಾಳ ಕೆರೆ ಪರಿಶೀಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.