ಬೆಂಗಳೂರು, ಡಿ.13,(www.bengaluruwire.com)
ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಶಿಕ್ಷಣ ತಜ್ಞರಾದ ಪ್ರೊ.ಪಿ.ವಿ.ಕೃಷ್ಣ ಭಟ್ ಮತ್ತು ಕಮಲಾದೇವಿ ದಂಪತಿಗಳ ಸಹಸ್ರ ಚಂದ್ರದರ್ಶನ ಶಾಂತಿ ಕಾರ್ಯಕ್ರಮ ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳ ಕಲ್ಯಾಣ ಮಂಟಪದಲ್ಲಿ ಸಂಪನ್ನವಾಯಿತು.
ಸಹಸ್ರ ಚಂದ್ರದರ್ಶನ ಶಾಂತಿ ಕಾರ್ಯಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ಪಿ.ವಿ.ಕೃಷ್ಣಭಟ್ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಸವಾಲುಗಳನ್ನು ಮೆಲುಕು ಹಾಕಿದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜೊತೆಗಿನ ಒಡನಾಟದ ಬಗ್ಗೆ ವಿವರಿಸುತ್ತಾ ಪ್ರಸ್ತುತ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಹಲವು ಕಾರ್ಯಗಳನ್ನು ಆಯಾ ಕ್ಷೇತ್ರದ ತಜ್ಞರ ಜೊತೆ ಸೇರಿ ಮುಂದುವರೆಸುತ್ತಿರುವುದಾಗಿ ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಮ್ಮ ಬಳಿಯಿರುವ 12.5 ಲಕ್ಷ ರೂ. ಹಣವನ್ನು ತಮ್ಮ ಮಾತಾಪಿತೃಗಳಾದ “ಗಂಗಮ್ಮ ವೆಂಕಟಸುಬ್ಬ ಭಟ್ಟ ಟ್ರಸ್ಟ್” ಸ್ಥಾಪಿಸಿ ಅಲ್ಲಿ ಶಾಶ್ವತ ನಿಧಿಯಿಟ್ಟು, ಅದರಿಂದ ಬಂದ ಬಡ್ಡಿ ಹಣವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ಪ್ರೊ.ಪಿ.ವಿ.ಕೃಷ್ಣಭಟ್ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡುತ್ತಾ, ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರ ಅಭಿವೃದ್ಧಿಗಾಗಿ ಪ್ರೊ.ಪಿ.ವಿ.ಕೆ ಸಾಕಷ್ಟು ಶ್ರಮಿಸಿದ್ದಾರೆ. ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಪ್ರೊ.ಪಿ.ವಿ.ಕೆ ಮಾತನಾಡುವಾಗ, ಅರ್ ಎಸ್ ಎಸ್ ನಲ್ಲಿ ತಾವು ಕಾರ್ಯಕರ್ತರನ್ನು ಬೆಳೆಸಿಲ್ಲ, ಬದಲಿಗೆ ತಾವು ಅವರೊಂದಿಗೆ ಕಾರ್ಯನಿರ್ವಹಿಸಿ ಅವರಿಂದ ಸಾಕಷ್ಟು ಕಲಿತಿದ್ದಾಗಿ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಇತರರು ಕಾರ್ಯ ಮಾಡುತ್ತಾರೆಂದು ನಿರೀಕ್ಷಿಸುವುದಿಲ್ಲ. ತಾವೇ ಸ್ವತಃ ಕೆಲಸ ಮಾಡುತ್ತಾರೆ. ಈ ಶಿಸ್ತು ಆರ್ ಎಸ್ ಎಸ್ ಕಾರ್ಯಕರ್ತರ ಲಕ್ಷಣ ಎಂದು ಕೃಷ್ಣಭಟ್ ಅವರ ಮಾತನ್ನು ಉಲ್ಲೇಖಿಸಿ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಶತಾವಧಾನಿ ಗಣೇಶ್, ತಮ್ಮ ಹಾಗೂ ಪ್ರೊ.ಪಿ.ವಿ.ಕೃಷ್ಣಭಟ್ ಅವರ ಸಂಪರ್ಕ ಐಜಿಎನ್ ಸಿಎ ನಿಂದ ಸಾಧ್ಯವಾಯಿತು. ತಮ್ಮ ವಿದ್ವತ್ ನಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರಿಗೆ ಸಹಸ್ರ ಚಂದ್ರದರ್ಶನ ಶಾಂತಿ ಮಾಡಿರುವುದು ಸಂತೋಷಕರ ವಿಷಯ ಎಂದರು.
ಇದೇ ವೇಳೆ ಸಹಸ್ರ ಚಂದ್ರದರ್ಶನದ ಆಚರಣೆಯ ಸಂಸ್ಕೃತಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ, ಹಿಂದೂ ಪರಂಪರೆಯಲ್ಲಿ ಪೂರ್ಣಾಯುಷ್ಯ ಎಂದರೆ 120 ವರ್ಷ ಪೂರೈಸುವುದಾಗಿದೆ. 60 ವರ್ಷ ಪೂರ್ಣಗೊಳಿಸುವುದು ಎಂದರೆ ಜೀವನದ ಅರ್ಧಭಾಗ ಮುಗಿಸಿದಂತೆ. ಅಲ್ಲಿಂದ 120 ವರ್ಷ ಆಯಸ್ಸಿನ ವರೆಗೆ ಹಲವು ರೀತಿಯ ವರ್ಧಂತಿಗಳನ್ನು ಆಚರಣೆ ಮಾಡುವ ಬಗ್ಗೆ ಶಾಸ್ತ್ರದಲ್ಲಿದೆ. ಜೀವನದ ಸಂಧ್ಯಾಕಾಲವನ್ನು ಅರ್ಥಪೂರ್ಣವಾಗಿ, ಶಾಂತಿಯಿಂದ ಕಳೆದು ಜೀವನದ ಪಯಣ ಮುಗಿಸುವುದಾಗಿದೆ ಎಂದು ತಮ್ಮದೇ ಧಾಟಿಯಲ್ಲಿ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿ ಸೊಗಸಾಗಿ ಮನಮುಟ್ಟುವಂತೆ ತಿಳಿಸಿದರು.
ಗದಗದ ಕರ್ನಾಟಕ ರಾಜ್ಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೂನಿವರ್ಸಿಟಿಯ ಉಪಕುಲಪತಿ ಪ್ರೊ.ವಿಷ್ಣುಕಾಂತ ಚಟಪಲ್ಲಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣತಜ್ಞ ಪ್ರೊ.ಪಿ.ವಿ.ಕೃಷ್ಣಭಟ್ ರ ಜೊತೆಗಿನ ಒಡನಾಟ, ಸಮಾಜ, ವಿದ್ಯಾರ್ಥಿಗಳ ಶಿಕ್ಷಣ ಕ್ರಮದ ಬಗ್ಗೆ ಪಿವಿಕೆಗೆ ಇರುವ ಒಳನೋಟಗಳು, ಅವರ ಕಾರ್ಯಗಳ ಬಗ್ಗೆ ತಿಳಿಸಿದರು.
ಮಾಜಿ ಸಚಿವರಾದ ಡಿ.ಎಚ್.ಶಂಕರಮೂರ್ತಿ, ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್, ಬಿ.ವೈ.ವಿಜಯೇಂದ್ರ, ಶಿಕ್ಷಣ ತಜ್ಞ ಪ್ರೊ.ಎಂ.ಕೆ.ಶ್ರೀಧರ್, ಆರ್ ಎಸ್ ಎಸ್ ಪ್ರಮುಖರಾದ ವಿ.ನಾಗರಾಜ, ಎಮ್.ಎಚ್.ಶ್ರೀಧರ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.