ನವದೆಹಲಿ, (www.bengaluruwire.com) :
” ಭಾರತ್ ಮಾತಾ ಕೀ ಜೈ”…. “ಒಂದೇ ಮಾತರಂ”….”ಎಲ್ಲಿಯವರೆಗೆ ಸೂರ್ಯ ಚಂದ್ರರು ಇರುತ್ತಾರೋ ಅಲ್ಲಿಯವರೆಗೆ ಬಿಪಿನ್ ರಾವತ್ ಅವರ ಹೆಸರು ಇರಲಿದೆ”…..!
ಇದು ನವದೆಹಲಿಯಲ್ಲಿ ತಮಿಳುನಾಡಿನ ಸೇನಾ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ (General Bipin Rawat)ಹಾಗೂ ಅವರ ಪತ್ನಿ ಮಧುಲಿಕ ರಾವತ್ (Madhulika Rawat) ಅವರ ಪಾರ್ಥೀವ ಶರೀರ ಅಂತ್ಯಕ್ರಿಯೆ ನಡೆಸುವ ಬ್ರಾರ್ ವೃತ್ತದ ಚಿತಾಗಾರದ ತನಕ ಮೆರವಣಿಗೆಯಲ್ಲಿ ಸಾಗುತ್ತಿದ್ದ ದಾರಿಯುದ್ದಕ್ಕೂ ನಾಗರೀಕರು ಅಭಿಮಾನದಿಂದ ಮುಗಿಲು ಮುಟ್ಟುವಂತೆ ಹೀಗೆ ಘೋಷಣೆ ಕೂಗುತ್ತಿದ್ದರು. ಮೆರವಣಿಗೆ ಸಾಗುತ್ತಿದ್ದ ವಾಹನ ಅಕ್ಕಪಕ್ಕ ರಾಷ್ಟ್ರಧ್ವಜ ಹಿಡಿದು ಓಡುತ್ತಲೇ ಸಾವಿರಾರು ನಾಗರೀಕರು ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ದೇಶದ ಸರ್ವೋತ್ತಮ ಸೇನಾಧಿಕಾರಿಗೆ ಮೇಲಿನಂತೆ ಜಯಘೋಷ ಕೂಗುತ್ತಾ ಹೂವಿನ ಪಕಳೆಯನ್ನು ಪಾರ್ಥೀವ ಶರೀರ ಹೊತ್ತೊಯ್ಯುತ್ತಿದ್ದ ವಾಹನಕ್ಕೆ ತೂರಿ ತಮ್ಮ ದೇಶಾಭಿಮಾನ ಮೆರೆಯುತ್ತಿದ್ದರು. ಇಂತಹ ದೇಶದ ಹೆಮ್ಮೆಯ ಪುತ್ರ ಜನರಲ್ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕ ರಾವತ್ ದಂಪತಿ ಬದುಕಿದ್ದಾಗಲೂ ಜೊತೆಗಿದ್ದು ಈಗ ಸಾವಿನಲ್ಲೂ ಒಂದಾದರು.
17 ಗನ್ ಸಲ್ಯೂಟ್ ಸೇನಾ ಗೌರವ :
ಶುಕ್ರವಾರ ಸಂಜೆ 800 ಭದ್ರತಾ ಸಿಬ್ಬಂದಿ ಸಮ್ಮುಖದಲ್ಲಿ, 17 ಗನ್ ಸೆಲ್ಯೂಟ್ ಮೂಲಕ ಅಗಲಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಿಗೆ ಸೇನಾ ಗೌರವ ಸಲ್ಲಿಸಲಾಯಿತು. ಬಳಿಕ ಬಿಪಿನ್ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಒಂದೇ ಚಿತೆಯಲ್ಲಿ ಅಕ್ಕಪಕ್ಕವಿಟ್ಟಿದ್ದ ತಂದೆ- ತಾಯಿಯ ಪಾರ್ಥೀವ ಶರೀರಕ್ಕೆ ಅಂತಿಮ ಸಂಸ್ಕಾರದ ವಿಧಿ ವಿಧಾನವನ್ನು ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಇದಕ್ಕೂ ಮುನ್ನ ಶುಕ್ರವಾರ ದೆಹಲಿಯ ಕಂಟೋನ್ಮೆಂಟ್ ನಲ್ಲಿ, ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ರಾವತ್ ಸಹಾಯಕರಾಗಿದ್ದ ಬ್ರಿಗೇಡಿಯರ್ ಲಕ್ವಿಂದರ್ ಸಿಂಗ್ ಲಿದ್ದರ್ ಹಾಗೂ ಇನ್ನೊಬ್ಬ ಸೇನಾಧಿಕಾರಿಯೊಬ್ಬರ ಅಂತ್ಯ ಸಂಸ್ಕಾರ ನೆಡೆಸಲಾಗಿತ್ತು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕ ರಾವತ್ ಅವರ ಪಾರ್ಥೀವ ಶರೀರ ಇಟ್ಟಿದ್ದ ದೆಹಲಿಯ ಅವರ ನಿವಾಸಕ್ಕೆ ಭೇಟಿದ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತಗ ದೋವಲ್, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರು ಅಗಲಿದ ದಂಪತಿಗಳ ಅಂತಿಮ ದರ್ಶನ ಪಡೆದು, ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು.
ಮೂರು ಸೇನೆಗಳ ಮುಖ್ಯಸ್ಥರಿಂದ ಅಗಲಿದ ಯೋಧರಿಗೆ ಗೌರವ ಸಲ್ಲಿಕೆ :
ಭೂಸೇನೆಯ ಮುಖ್ಯಸ್ಥರಾದ ಜನರಲ್ ಎಂಎಂ ನರವಣೆ (Army Chief General MM Naravane), ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ (IAF chief Air Chief Marshal VR Chaudhari) ಹಾಗೂ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಆರ್.ಹರಿಕುಮಾರ್ (Navy Chief Admiral R Hari Kumar) ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಮೃತದೇಹದ ಅಂತಿಮ ದರ್ಶನ ಮಾಡಿ, ಗೌರವ ಸಲ್ಲಿಸಿದರು.
ಅಂತಿ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಮಿತ್ರ ರಾಷ್ಟ್ರಗಳ ಕಮಾಂಡರ್ ಗಳು ಭಾಗಿ :
ಭಾರತದ ನೆರೆಯ ಮಿತ್ರ ರಾಷ್ಟ್ರಗಳಾದ ಶ್ರೀಲಂಕಾ, ಭೂತಾನ್, ನೇಪಾಳ ಹಾಗೂ ಬಾಂಗ್ಲಾದೇಶಗಳ ಸೇನಾ ಕಮಾಂಡರ್ ಗಳು ಸಿಡಿಎಸ್ ರಾವತ್ ಅವರ ಅಂತಿಮ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ರಾಷ್ಟ್ರಗಳ ಪರವಾಗಿ ಗೌರವ ಸಲ್ಲಿಕೆ ಮಾಡಿದರು.
ಗುರುವಾರ ಸಂಜೆಯಷ್ಟೆ ತಮಿಳುನಾಡಿನ ಸೂಲೂರಿನಿಂದ ದೆಹಲಿಯ ಪಾಲಮ್ ವಿಮಾನ ನಿಲ್ದಾಣಕ್ಕೆ ಬುಧವಾರದ ದುರ್ಘಟನೆಯಲ್ಲಿ ಮೃತಪಟ್ಟ ಜನರಲ್ ಬಿಪಿನ್ ರಾವತ್ ಹಾಗೂ ಇತರರ ಕಳೆಬರವನ್ನು ರಾಷ್ಟ್ರಧ್ವಜದಲ್ಲಿ ಸುತ್ತಿ ತರಲಾಗಿತ್ತು. ಇದೇ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದರು.