ಬೆಂಗಳೂರು, ಡಿ.9 (www.bengaluruwire.com) :
ಕಾಶಿಯಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಪಟಗಳನ್ನು ನಿರ್ಮಿಸುವ 30 ಕೋಟಿ ರೂ. ವೆಚ್ಚದ ಯೋಜನೆಗೆ ಜನವರಿ 14, 15 ರ ಹರಜಾತ್ರೆ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಗುರುವಾರ, ಹರಿಹರದ ಪಂಚಮಸಾಲಿ ಗುರುಪೀಠದ ಆಶ್ರಯದಲ್ಲಿ ನಡೆಯಲಿರುವ ಹರಜಾತ್ರೆಯ ಲೋಗೋ, ಧ್ವನಿಸುರುಳಿ, ಟಿ- ಶರ್ಟನ್ನು ಬಿಡುಗಡೆ ಮಾಡಿ ಮಾತನಾಡಿದರು.
ಶ್ರೀ ವಚನಾನಂದ ಸ್ವಾಮಿಗಳು ಪೀಠಕ್ಕೆ ಬಂದ ಕೆಲವೇ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಪಾದಯಾತ್ರೆ ಮಾಡುವ ಮೂಲಕ ತಮ್ಮ ಬದ್ಧತೆಯನ್ನು , ಕರ್ತವ್ಯನಿಷ್ಠೆಯನ್ನು ಇಡೀ ಸಮಾಜಕ್ಕೆ ತೋರಿಸಿದ್ದಾರೆ.
ಕೇವಲ ಒಬ್ಬ ವ್ಯಕ್ತಿ ಮಾತ್ರವಲ್ಲ, ಇಡೀ ಸಮಾಜ, ಸಮುದಾಯ, ನಾಡಿನ ಜನ ಉತ್ತಮ ರೀತಿಯಲ್ಲಿ ಬದುಕು ನಡೆಸುವ ಕಲ್ಪನೆಯೊಂದಿಗೆ ಶ್ರೀಗಳು ದುಡಿಯುತ್ತಿದ್ದಾರೆ. ಪರಮಪೂಜ್ಯರ ನೇತೃತ್ವದಲ್ಲಿ ಹರಜಾತ್ರೆ ದೊಡ್ಡಮಟ್ಟದಲ್ಲಿ ನಡೆಯುತ್ತಾ ಬಂದಿದೆ ಎಂದರು.
ಹರಜಾತ್ರೆಯ ಮೂಲಕ ನಾಡು, ಸಂಸ್ಕೃತಿಯ ಬೆಳವಣಿಗೆ :
ನಾಗರಿಕತೆ ಬೆಳೆಯುತ್ತದೆ. ಆದರೆ ಸಂಸ್ಕೃತಿಯನ್ನು ಬೆಳೆಸಬೇಕಾಗುತ್ತದೆ. ಹರಜಾತ್ರೆಯ ಮೂಲಕ ನಾಡು, ಸಂಸ್ಕೃತಿಯನ್ನು ಬೆಳೆಸುವ ಗುರಿ ಪೂಜ್ಯರು ಹೊಂದಿದ್ದಾರೆ. ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಹರಜಾತ್ರೆಯಲ್ಲಿ ಯುವಜನರಿಗೆ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಶಿಕ್ಷಣ ಮತ್ತು ಕೌಶಲ್ಯ ಸಿಕ್ಕ ನಂತರ ಉದ್ಯೋಗ ಮತ್ತು ಉದ್ಯಮ ಸೃಜನೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ :
ಸಮಾಜವನ್ನು ಕಟ್ಟುವ ಜೊತೆಗೆ ಸಮಾಜಕ್ಕೆ ನ್ಯಾಯವನ್ನು ಒದಗಿಸುವ ವಿಚಾರದಲ್ಲಿ ಬಹಳ ಸ್ಪಷ್ಠತೆಯಿಂದ ಮುನ್ನೆಡಿದ್ದಾರೆ. ಸಮಾಜವನ್ನು 2 ಎ ಮೀಸಲಾತಿ ನೀಡುವ ಬಗ್ಗೆ ಸೂಕ್ತ ಸಲಹೆ ಸಹಕಾರಗಳನ್ನು ನೀಡಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ಹರಜಾತ್ರೆಯ ಲೋಗೋ, ಧ್ವನಿಸುರುಳಿ, ಟಿ ಶರ್ಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ವಚನಾನಂದ ಸ್ವಾಮಿಗಳು, ಸಚಿವರಾದ ಅಶ್ವತ್ಥ ನಾರಾಯಣ, ಮುರುಗೇಶ ನಿರಾಣಿ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.