ನವದೆಹಲಿ, (www.bengaluruwire.com) :
ತಮಿಳುನಾಡಿನ ನೀಲಗಿರಿ ಬೆಟ್ಟದ ಕೊನೂರು ಜಿಲ್ಲೆಯಲ್ಲಿ ಬುಧವಾರ ಸೇನಾ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದಾಗ ಜನರಲ್ ಬಿಪಿನ್ ರಾವತ್ ಸೇರಿ 13 ಮಂದಿ ಹೆಲಿಕಾಪ್ಟರ್ ದುರಂತದಿಂದ ದಾರುಣ ಸಾವನ್ನಪ್ಪಿರುವುದು ದೇಶದ ರಕ್ಷಣಾ ವ್ಯವಸ್ಥೆಗೆ ತುಂಬಲಾರದ ನಷ್ಟವಾಗಿದೆ.
ಈ ದುರ್ಘಟನೆ ಕುರಿತಂತೆ ಮೂರು ಸ್ಟಾರ್ ಹೊಂದಿದ ಏರ್ ಮಾರ್ಷಲ್ ನೇತೃತ್ವದಲ್ಲಿ Mi-17 ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ತನಿಖೆ ನಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಲೋಕಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಜನರಲ್ ಬಿಪಿನ್ ರಾವತ್ ಅವರ ಅಂತ್ಯಸಂಸ್ಕಾರವನ್ನು ಸಕಲ ಮಿಲಿಟರಿ ಗೌರವದೊಂದಿಗೆ ನೆರವೇರಿಸಲಾಗುತ್ತದೆ. ಅದೇ ರೀತಿ ಉಳಿದ ಸೇನಾ ಸಿಬ್ಬಂದಿ ಅಂತ್ಯಸಂಸ್ಕಾರವನ್ನು ಸೂಕ್ತ ಮಿಲಿಟರಿ ಗೌರವ ದೊಂದಿಗೆ ಪೂರೈಸಲಾಗುವುದು ಎಂದು ಸಂಸತ್ ನಲ್ಲಿ ಸಚಿವ ರಾಜನಾಥ್ ಸಿಂಗ್ ವಿವರಿಸಿದ್ದಾರೆ.
ಹಲವು ಮಾಧ್ಯಮ ವರದಿಗಳ ಪ್ರಕಾರ ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಮೂರು ಪಡೆಗಳ ನೇತೃತ್ವವಹಿಸಿ ಬುಧವಾರದ ಹೆಲಿಕಾಪ್ಟರ್ ದುರಂತದ ತನಿಖೆ ನಡೆಸಲಿದ್ದಾರೆ ಎಂದು ಹೇಳಿವೆ. ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಪ್ರಸ್ತುತ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್ ನ ಕಮಾಂಡರ್ ಹಾಗೂ ಹೆಲಿಕಾಪ್ಟರ್ ಪೈಲೆಟ್ ಕೂಡ ಆಗಿದ್ದಾರೆ.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿಗೆ ಶಿಫ್ಟ್
ಅಪಘಾತದಲ್ಲಿ ಬದುಕಿಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಏರ್ ಫೋರ್ಸ್ ಕಮಾಂಡ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಶೌರ್ಯ ಚಕ್ರ ಪ್ರಶಸ್ತಿ ವಿಜೇತ ವರುಣ್ ಸಿಂಗ್ ಬುಧವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಿಲುಕಿದ್ದ 14 ಮಂದಿಯ ಪೈಕಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದಾರೆ.
ಅಪಘಾತಕ್ಕೀಡಾದ ಹೆಲಿಕಾಪ್ಟರ್ ಬ್ಲಾಕ್ ಬಾಕ್ಸ್ ಪತ್ತೆ :
ಬುಧವಾರ ಮಧ್ಯಾಹ್ನ ವೆಲ್ಲಿಂಗ್ಟನ್ ಸೇನಾ ಕಾಲೇಜಿನತ್ತ ಹೊರಟಿದ್ದ Mi-17VH ಸೇನಾ ಹೆಲಿಕಾಪ್ಟರ್ ಹೊತ್ತಿಯುರಿದು ಜನರಲ್ ಬಿಪಿಎನ್ ರಾವತ್ ಸೇರಿದಂತೆ 13 ಮಂದಿಯು ಸಾವನ್ನಪಿದ್ದರು. ಆ ಹೆಲಿಕಾಪ್ಟರ್ ನಲ್ಲಿ ದುರಂತಕ್ಕೀಡಾದ ಸಮಯದಲ್ಲಿನ ಮಹತ್ವದ ಮಾಹಿತಿ ಹೊಂದಿದ್ದ ಬ್ಲಾಕ್ ಬಾಕ್ಸ್ (ಕಪ್ಪು ಪೆಟ್ಟಿಗೆ) ಅನ್ನು ದುರಂತಕ್ಕೀಡಾದ ಸ್ಥಳದಿಂದ 300 ರಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ಶೋಧ ನಡೆಸಿದಾಗ ಪತ್ತೆಯಾಗಿದೆ.
ಬ್ಲಾಕ್ ಬಾಕ್ಸ್ ನಲ್ಲಿ ಏನಿರುತ್ತದೆ?
ಇದರ ಜೊತೆಗೆ ಸೇನಾ ಹೆಲಿಕಾಪ್ಟರ್ ನಲ್ಲಿನ ಫ್ಲೈಟ್ ಡಾಟಾ ರೆಕಾರ್ಡರ್ ಹಾಗೂ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ಅಪಘಾತ ಸ್ಥಳದಿಂದ ರಕ್ಷಣಾ ಇಲಾಖೆ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಬ್ಲಾಕ್ ಬಾಕ್ಸ್ ಅಥವಾ ಫ್ಲೈಟ್ ಡಾಟಾ ರೆಕಾರ್ಡರ್ ಎಂದು ಕರೆಯಲಾಗುವ ಎಲೆಕ್ಟ್ರಾನಿಕ್ ಸಾಧನದಲ್ಲಿ ಹೆಲಿಕಾಪ್ಟರ್ ಹಾರುವಾಗ ಇದ್ದ ಗಾಳಿಯ ವೇಗ, ಹಾರಾಟದ ಎತ್ತರ, ಕಾಕ್ ಪಿಟ್ ನಲ್ಲಿ ಪೈಲಟ್ ಸಂವಹನ, ಗಾಳಿಯ ಒತ್ತಡ ಸೇರಿದಂತೆ 88 ವಿವಿಧ ಬಗೆಯ ಅಂಕಿ- ಅಂಶಗಳ ಮಾಹಿತಿಯನ್ನು ಒಳಗೊಂಡಿರುತ್ತದೆ. ಒಟ್ಟಾರೆ ದುರ್ಘಟನೆ ಕಾರಣ ಏನೆಂಬುದನ್ನು ತಿಳಿಸುವ ಮಹತ್ವದ ಮಾಹಿತಿಯನ್ನು ಒಳಗೊಂಡಿರುತ್ತದೆ.
ಯಾರಾಗಬಹುದು ಸಿಡಿಎಸ್ ಹುದ್ದೆಗೇರುವ ಅಧಿಕಾರಿ ?
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS)ರಾಗಿದ್ದ ಜನರಲ್ ಬಿಪಿನ್ ರಾವತ್ ನಿಧನದಿಂದ ಆ ಸ್ಥಾನವೀಗ ಖಾಲಿಯಾಗಿದೆ. ಆ ಸ್ಥಾನಕ್ಕೆ ಸೇನಾಪಡೆ, ವಾಯುಪಡೆ ಹಾಗೂ ನೌಕಾಪಡೆಯೊಂದಿಗೆ ಯಶಸ್ವಿಯಾಗಿ ಸಮನ್ವಯ ಸಾಧಿಸಬಲ್ಲ ಸರ್ವಸಮ್ಮತ ಹಿರಿಯ ಸೇನಾಧಿಕಾರಿಯೊಬ್ಬರನ್ನು ಆಯ್ಕೆ ಮಾಡುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರಕ್ಕೆ ಪ್ರಮುಖ ಸವಾಲಾಗಿದೆ.
ಮಾಧ್ಯಮಗಳಲ್ಲಿ ಉನ್ನತ ಮೂಲಗಳ ಆಧಾರದ ಮೇಲೆ ಬಂದಿರುವ ವರದಿಗಳ ಪ್ರಕಾರ ಮುಂದಿನ ಒಂದು ವಾರದಿಂದ 10 ದಿನಗಳಲ್ಲಿ ಖಾಲಿಯಿರುವ ಸಿಡಿಎಸ್ ಸ್ಥಾನಕ್ಕೆ ನೇಮಕ ಮಾಡಲು ಮೋದಿ ಸರ್ಕಾರ ಮುಂದಾಗಿದ್ದು, ಆರಂಭಿಕ ಪ್ರಕ್ರಿಯೆಗೆ ಚಾಲನೆ ದೊರೆತಿರುವುದಾಗಿ ತಿಳಿದುಬಂದಿದೆ.
ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ಮರಣದಿಂದಾಗಿ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಬಿಪಿನ್ ರಾವತ್ ನಂತರ ಸದ್ಯ ಇರುವ ದೇಶದ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿಯಾಗಿದ್ದಾರೆ. ಆರ್ಮಿ ವೈಸ್ ಚೀಫ್ ಲೆಫ್ಟಿನೆಂಟ್ ಜನರಲ್ ಸಿಪಿ ಮೊಹಂತಿ ಮತ್ತು ಉತ್ತರ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ.ಕೆ ಜೋಶಿ ಅವರು ನಂತರದ ಸ್ಥಾನದಲ್ಲಿದ್ದಾರೆ.
2019 ರಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಿಡಿಎಸ್ ಅನ್ನು ನೇಮಕ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. 2020 ರ ಜನವರಿಯಲ್ಲಿ ಜನರಲ್ ಬಿಪಿನ್ ರಾವತ್ ಅವರು ದೇಶದ ಮೊದಲ ಸಿಡಿಎಸ್ ಮುಖ್ಯಸ್ಥರಾದರು. ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮ್ಮತಿ ಈ ಸ್ಥಾನದ ನೇಮಕಕ್ಕೆ ದೊರೆತಿತ್ತು. ರಕ್ಷಣಾ ಇಲಾಖೆಯ ಮೂರೂ ಪಡೆಗಳ ಮುಖ್ಯಸ್ಥರಾಗಿ ದೇಶದ ಮಹಾ ದಂಡನಾಯಕ ರಾಷ್ಟ್ರಪತಿಗಳಾಗಿರುತ್ತಾರೆ.
ರಾಷ್ಟ್ರಪತಿಗಳ ಅಂಕಿತ ದೊರೆತ ಮೇಲೆ ಜನರಲ್ ಬಿಪಿನ್ ಆಯ್ಕೆಯಾಗಿದ್ದರು. ಅವರ ಸೇವಾವಧಿ ಇದೇ ಡಿಸೆಂಬರ್ 31ಕ್ಕೆ ಮುಗಿಯುವುದಲ್ಲಿತ್ತು. ಆದರೆ ಅದಿಕ್ಕೆ ಮುಂಚೆಯೇ ವಿಧಿಯ ಕ್ರೂರದಾಟಕ್ಕೆ ಒಬ್ಬ ಮಹಾನ್ ವೀರಯೋಧ ಮೃತಪಟ್ಟಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನವರಣೆ ಅವರ ಸೇವಾವಧಿ ಏಪ್ರಿಲ್ 2022ರ ತನಕ ಇದೆ.