ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಕರೋನಾ ಸೋಂಕಿನಿಂದ ಸರ್ಕಾರ ಘೋಷಿಸಿದ 14,229 ಮೃತ ವ್ಯಕ್ತಿಗಳ ಕುಟುಂಬದ ಪೈಕಿ ಒಂದೇ ಒಂದು ಕುಟುಂಬಕ್ಕೂ ರಾಜ್ಯ ಸರ್ಕಾರದ ಕೋವಿಡ್ ಪರಿಹಾರದ ಹಣ ತಲುಪಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಸೆ.30 ರಂದು ಪಾಲಿಕೆ ಮುಖ್ಯ ಆಯುಕ್ತರಾದ ಗೌರವಗುಪ್ತಾ ಕಚೇರಿ ಆದೇಶ ಹೊರಡಿಸಿದ್ದರು.
ಅಲ್ಲಿಂದ ಎರಡು ತಿಂಗಳಾದರೂ ಕೋವಿಡ್ ನಿಂದ ಮೃತಪಟ್ಟ 14,229 ವ್ಯಕ್ತಿಗಳ ಕೇವಲ 1,715 ಕುಟುಂಬಗಳಿಗೆ (ಡಿ.6ರ ತನಕದ ಮಾಹಿತಿಯಂತೆ) ಕೇಂದ್ರ ಸರ್ಕಾರದ ಅನುದಾನದ ರಾಜ್ಯ ವಿಪತ್ತು ಪರಿಹಾರ ನಿಧಿಯಲ್ಲಿ ತಲಾ 50 ಸಾವಿರ ಹಣ ನೀಡಲು ಕರ್ನಾಟಕ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಕೇವಲ ಒಪ್ಪಿಗೆ ಸೂಚಿಸಿದೆಯಷ್ಟೆ.
ಇದರಲ್ಲಿ ಬಿಪಿಎಲ್ (575 ಕುಟುಂಬ) ಮತ್ತು ಎಪಿಎಲ್ ಕಾರ್ಡ್ (1,140 ಕುಟುಂಬ) ಹೊಂದಿದ ಎರಡೂ ವರ್ಗದವರು ಸೇರಿದ್ದಾರೆ. ಇದೇ ವರ್ಷದ ಜೂನ್ ನಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋವಿಡ್ ನಿಂದ ದುಡಿಯುವ ವ್ಯಕ್ತಿ ಸಾವನ್ನಪ್ಪಿದ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಒಂದು ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಅವರ ಘೋಷಣೆ ಮಾಡಿ ಏಳು ತಿಂಗಳಾದರೂ ಅದಿನ್ನೂ ಕಾರ್ಯಗತವಾಗಿಲ್ಲ.
ದತ್ತಾಂಶದಲ್ಲಿನ ತೊಡಕುಗಳೇ ಪರಿಹಾರ ವಿತರಣೆಗೆ ಅಡ್ಡಿ :
ಕೋವಿಡ್ ಮೊದಲ ಅಲೆ ಹಾಗೂ ಎರಡನೇ ಅಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 14,229 ಮಂದಿ ಮೃತಪಟ್ಟಿರುವ ದತ್ತಾಂಶವನ್ನು ಕಂದಾಯ ಇಲಾಖೆಯಡಿ ಬರುವ ಕರ್ನಾಟಕ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ(DSSP)ವು ಪಾಲಿಕೆಗೆ ನೀಡಿತ್ತು. ಇದರ ಜೊತೆಗೆ ಬಿಬಿಎಂಪಿಯು ತನ್ನ ವ್ಯಾಪ್ತಿಯಲ್ಲಿ ಸಿಎಚ್ ಎಂಬಿಎಸ್ ಸಾಫ್ಟ್ ವೇರ್ ದತ್ತಾಂಶದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಡಾಟಾವನ್ನು ಹೊಂದಿದೆ.
ಆದರೆ ಡಿಎಸ್ ಎಸ್ ಪಿ ನೀಡಿದ ದತ್ತಾಂಶವನ್ನು ಬಳಸಿ, ಪಾಲಿಕೆಯ ಸಿಎಚ್ ಎಂಬಿಎಸ್ ಸಾಫ್ಟ್ ವೇರ್ ನಲ್ಲಿ ಹುಡುಕಿದಾಗ ಹಲವು ದತ್ತಾಂಶಗಳು ತಾಳೆಯಾಗುತ್ತಿಲ್ಲ. ಹೀಗಾಗಿ ಕೋವಿಡ್ ನಿಂದ ಮೃತಪಟ್ಟ ಅಂತಹ ಕುಟುಂಬಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಪರಿಹಾರ ವಿತರಣೆಯಲ್ಲಿನ ಸಮಸ್ಯೆಗಳು ಹಾಗೂ ಗೊಂದಲಗಳ ಬಗ್ಗೆ ಕಂದಾಯ ಇಲಾಖೆಯ ಕರ್ನಾಟಕ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ನಿರ್ದೇಶಕ ಸತೀಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
ಕೆಲವು ಪ್ರಕರಣಗಳಲ್ಲಿ ಕೋವಿಡ್ ಪೀಡಿತರಾಗಿ ಮೃತಪಟ್ಟವರ ಬಿಯು ನಂಬರ್ ಪತ್ತೆಯಾಗುತ್ತಿಲ್ಲ ಎಂದು ಕಂಪ್ಯೂಟರ್ ಸಾಫ್ಟ್ ವೇರ್ ನಲ್ಲಿ ತೋರಿಸುತ್ತಿದೆ. ಇದು ಬಿಬಿಎಂಪಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನುಂಗಲಾರದ ತುತ್ತಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ನೀಡಿದ ದತ್ತಾಂಶದ ವಿವರಗಳು, ಪಾಲಿಕೆ ಬಳಿಯಿರುವ ದತ್ತಾಂಶಕ್ಕೆ ಕೆಲವೆಡೆ ತಾಳೆಯಾಗುತ್ತಿಲ್ಲ. ಹೀಗಾಗಿ ನಿಜವಾದ ಫಲಾನುಭವಿಗಳನ್ನು ಹುಡುಕಲು ತೊಡಕಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರ ಹೆಸರಿನಲ್ಲಿ ಬಿಯು ನಂಬರ್ ಪತ್ತೆಯಾಗುತ್ತಿಲ್ಲ. ಕೋವಿಡ್ ನಿಂದ ಸಾವಿಗೀಡಾದವರ ವಿಳಾಸವಿರುವ ಆಯಾ ಜೋನ್ ಗಳಿಗೆ ದತ್ತಾಂಶ ವರ್ಗಾವಣೆ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಚುನಾವಣೆ ನೀತಿಸಂಹಿತೆ ಮುಗಿದ ಬಳಿಕ ರಾಜ್ಯ ಸರ್ಕಾರದಿಂದ ಬಿಪಿಎಲ್ ಫಲಾನುಭವಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ. ಕೆಲವು ಮೃತರ ಕುಟುಂಬಸ್ಥರು ಸರ್ಕಾರದ ಪರಿಹಾರ ಪಡೆಯಲು ನಿರಾಕರಿಸಿದ್ದಾರೆ.”
– ದಯಾನಂದ್, ಕೋವಿಡ್ ಪರಿಹಾರ ವಿತರಣೆ ನೋಡೆಲ್ ಅಧಿಕಾರಿ ಮತ್ತು ವಿಶೇಷ ಆಯುಕ್ತರು, ಬಿಬಿಎಂಪಿ
ಕೋವಿಡ್ ನಿಂದ ಮೃತರಾದ ಕುಟುಂಬಕ್ಕೆ ಪರಿಹಾರ ವಿತರಣೆ ಹೇಗಾಗುತ್ತೆ?
ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನೀಡಿದ ದತ್ತಾಂಶದಲ್ಲಿನ ವಿಳಾಸದ ಮನೆಗೆ ಭೇಟಿ ನೀಡುವ ಪಾಲಿಕೆಯ ಕಂದಾಯ ಪರಿವೀಕ್ಷಕ (Revenue Inspector)ರು ಮೃತ ವ್ಯಕ್ತಿಯ ಕುಟುಂಬದಿಂದ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಪಡೆದು ಹಿರಿಯ ಆರೋಗ್ಯ ಪರಿವೀಕ್ಷಕ (Senior Health Inspector)ರಿಗೆ ಹಸ್ತಾಂತರಿಸುತ್ತಾರೆ.
ಈ ದಾಖಲೆಗಳನ್ನು ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಕೋವಿಡ್ ಪರಿಹಾರ ನೀಡುವ ಕಂಪ್ಯೂಟರ್ ತಂತ್ರಾಂಶ ದಲ್ಲಿ ಡಾಟಾ ಎಂಟ್ರಿ ಮಾಡುತ್ತಾರೆ. ಅಲ್ಲಿಂದ ಕಡತ ವಲಯ ಆರೋಗ್ಯಾಧಿಕಾರಿಗಳು, ಆಯಾ ವಲಯದ ಜಂಟಿ ಆಯುಕ್ತರ ಅಧ್ಯಕ್ಷತೆಯ ಮರಣ ಪರಿಶೀಲನಾ ಸಮಿತಿ ಒಪ್ಪಿಗೆ ಬಳಿಕ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ನಿರ್ದೇಶಕರಿಗೆ ತಲುಪಿ ಅಲ್ಲಿಂದ ಮೃತ ವ್ಯಕ್ತಿಯ ಅಧಿಕೃತ ಕಾನೂನು ಬದ್ಧ ವಾರಸುದಾರರಿಗೆ ಪರಿಹಾರದ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ.
ಬಿಎಪಿಲ್ – ಎಪಿಎಲ್ ಕುಟುಂಬಗಳಿಗೆ ಪರಿಹಾರ ನಿಗಧಿ ಕ್ರಮ ಹೇಗೆ?
ರಾಜ್ಯ ಸರ್ಕಾರವು ಘೋಷಿಸಿರುವಂತೆ ಕೋವಿಡ್‌ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಕುಟುಂಬದ ಒಬ್ಬ ಕಾನೂನುಬದ್ಧ ವಾರಸುದಾರರಿಗೆ ‘ಸಂಧ್ಯಾ ಸುರಕ್ಷಾ ಯೋಜನೆ’ ಅಡಿ 1 ಲಕ್ಷ ರೂ. ಪಾವತಿಸಲಿದೆ. ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್) ಯಿಂದ 50 ಸಾವಿರ ರೂ. ಸೇರಿದಂತೆ ಒಟ್ಟು 1.50 ಲಕ್ಷ ರೂ.ಗಳನ್ನು ಪಾವತಿಸುತ್ತದೆ.
ಸಂಧ್ಯಾ ಸುರಕ್ಷಾ ಯೋಜನೆಯಡಿ ಒಂದು ಲಕ್ಷ ರೂ. ಪಾವತಿಸುವಾಗ ಆ ಕುಟುಂಬದಲ್ಲಿ ಎಷ್ಟೇ ಮಂದಿ ಮೃತಪಟ್ಟಿದ್ದರೂ, ಒಂದು ಕುಟುಂಬವನ್ನು ಒಂದು ಘಟಕ (Unit) ರೀತಿ ಪರಿಗಣಿಸಿ 1 ಲಕ್ಷ ರೂ. ಪರಿಹಾರ ನೀಡಲಾಗುತ್ತೆ.
ಆದರೆ ಕೇಂದ್ರ ಸರ್ಕಾರದ ಅನುದಾನದ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ನೀಡುವಾಗ ಪ್ರತಿ ವ್ಯಕ್ತಿ ಸಾವನ್ನು ಗಣನೆಗೆ ತೆಗೆದುಕೊಂಡು ಆ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆ. ಉದಾ: ಒಂದು ಕುಟುಂಬದಲ್ಲಿ ಮೂವರು ಸದಸ್ಯರಿದ್ದು, ಆ ಪೈಕಿ ಇಬ್ಬರು ಕೋವಿಡ್ ನಿಂದ ಮೃತಪಟ್ಟರೆ ಆ ಕುಟುಂಬದ ಜೀವಂತವಿರುವ ಮೂರನೇ ವ್ಯಕ್ತಿಗೆ ಕೋವಿಡ್ ನಿಂದ ಸಾವನ್ನಪ್ಪಿದ ಇಬ್ಬರನ್ನು ಗಣನೆಗೆ ತೆಗೆದುಕೊಂಡು (ತಲಾ 50 ಸಾವಿರದಂತೆ) ಒಟ್ಟು 1 ಲಕ್ಷ ರೂ. ಗಳನ್ನು ಆ ಕುಟುಂಬದ ವ್ಯಕ್ತಿಗೆ ಪರಿಹಾರ ನೀಡಲಾಗುತ್ತದೆ ಎಂದು ಪಾಲಿಕೆ ಕೋವಿಡ್ ಪರಿಹಾರ ವಿತರಣೆ ಅಧಿಕಾರಿಗಳು ತಿಳಿಸಿದ್ದಾರೆ.
ಆದಷ್ಟು ಶೀಘ್ರವಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ರಾಜ್ಯಸರ್ಕಾರ ನುಡಿದಂತೆ ಪರಿಹಾರ ನೀಡಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.