ಬೆಂಗಳೂರು, (www.bengaluruwire.com) : ಕನ್ನಡದ ಪತ್ರಿಕೋದ್ಯಮ ಹಿರಿಯ ಪತ್ರಕರ್ತ ವಾಗೀಶ್ ಕುಮಾರ್ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಅಕಾಲಿಕವಾಗಿ ನಿಧನರಾಗಿದ್ದಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳೆಡರಲ್ಲೂ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದ ವಾಗೀಶ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ವಿಜಯ ಕರ್ನಾಟಕ, ವಿಜಯ ವಾಣಿ, ಈ-ಟಿವಿ, ಟಿವಿ9, ಸಮಯ ಟಿ ವಿ ಸೇರಿದಂತೆ ನಾಡಿನ ಹಲವು ಪ್ರಮುಖ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಹಿರಿಯ ಪತ್ರಕರ್ತರ ವಾಗೀಶ್ ಕುಮಾರ್ ಅನಾರೋಗ್ಯದಿಂದ ನಮ್ಮನ್ನು ಅಗಲಿದ್ದಾರೆ. ವಾಗೀಶ ಕುಮಾರ್ ಹಿರಿಯ ಪೇಜಾವರ ಶ್ರೀಗಳಾಗಿದ್ದ ಶ್ರೀ ವೀಶ್ವೇಶ್ವರ ತೀರ್ಥರ ಪೂರ್ವಾಶ್ರಮದ ಸಂಬಂಧಿಗಳಾಗಿದ್ದರು.
ಪ್ರಸ್ತುತ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವಾಗೀಶ್, ತಮ್ಮ ಪತ್ನಿ ಸುಮ ಹಾಗೂ ಪುತ್ರಿ ಮಂದಾರ ಅವರನ್ನು ಅಗಲಿದ್ದಾರೆ. ತಮ್ಮ ಬರವಣಿಗೆ ಹಾಗೂ ಕಾರ್ಯತತ್ಪರತೆಯ ಮೂಲಕವೇ ಸಾಕಷ್ಟು ಹೆಸರಾಗಿದ್ದರು. ಅವರ ಗರಡಿಯಲ್ಲಿ ನೂರಾರು ಪತ್ರಕರ್ತರು ಕೆಲಸ ಕಲಿತು ನಾಡಿನ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಮೃತರ ಅಂತ್ಯಕ್ರಿಯೆ ಅವರ ಸ್ವಂತ ಊರಾದ ಕುಕ್ಕೆ ಸುಬ್ರಮಣ್ಯದಲ್ಲಿ ನೆರವೇರಲಿದೆ ಎಂದು ಅವರ ಸಮೀಪವರ್ತಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಸರಳ ಜೀವನ ಶೈಲಿ ನಡೆಸಿದ ವಾಗೀಶ್ ಅವರ ಸಾವಿನಿಂದ ಕನ್ನಡ ಪತ್ರಿಕೋದ್ಯಮವು ಓರ್ವ ಉತ್ತಮ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ. ವಾಗೀಶ್ ಸಾವಿಗೆ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾದ್ಯಮ, ಪತ್ರಕರ್ತರು, ವಿವಿಧ ಪತ್ರಕರ್ತ ಸಂಘಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ವಾಗೀಶ್ ಅವರ ಅಕಾಲಿಕ ನಿಧನಕ್ಕೆ “ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಬಳಗ ಕೂಡ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.