ಬೆಂಗಳೂರು, (www.bengaluruwire.com) : ಸ್ಯಾಂಡಲ್ ವುಡ್ ನ ಯುವರತ್ನ ದಿವಂಗತ ಪುನೀತ್ ರಾಜಕುಮಾರ್ ಅವರ ಕನಸಿನ “ಗಂಧದಗುಡಿ” ಟೀಸರ್ (Gandhada Gudi teaser) ಯೂಟ್ಯೂಬ್ ನಲ್ಲಿ ಸೋಮವಾರ ಬಿಡುಗಡೆಯಾದ ನಾಲ್ಕು ಗಂಟೆಗಳಲ್ಲಿ 8 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ.
ಪಿಆರ್ ಕೆ ಪ್ರೊಡಕ್ಷನ್ (PRK Production) ನಲ್ಲಿ ಮೂಡಿಬಂದಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಈ ಚಿತ್ರ 2022 ರಲ್ಲಿ ರಿಲೀಸ್ ಆಗಲಿದೆ ಎಂದು ಟೀಸರ್ ನಲ್ಲಿ ತಿಳಿಸಲಾಗಿದೆ. ಪಿಆರ್ ಕೆ ಪ್ರೊಡಕ್ಷನ್ ಯೂಟ್ಯೂಬ್ (Youtube) ಅಕೌಂಟ್‌ನಿಂದ ಈ ಟೀಸರ್ ಅಪಲೋಡ್ ಮಾಡಲಾಗಿದೆ. ಕಾಕತಾಳೀಯ ಎಂಬಂತೆ ಪುನೀತ್ ರಾಜಕುಮಾರ್ ತಾಯಿ ಪಾರ್ವತಮ್ಮ ರಾಜಕುಮಾರ್ ಹುಟ್ಟುಹಬ್ಬದ ದಿನವಾದ ಸೋಮವಾರವೇ ಈ ಟೀಸರ್ ಬಿಡುಗಡೆಯಾಗಿದೆ.
ರಸಿಕರ ರಾಜ ಡಾ.ರಾಜ್ ಕುಮಾರ್ 1973 ರಲ್ಲಿ ತಮ್ಮ ಅಭಿನಯದ ಬ್ಲಾಕ್ ಬಸ್ಟರ್ ಚಲನಚಿತ್ರ “ಗಂಧದಗುಡಿ” ಯಲ್ಲಿ ಕಾಡಿನಲ್ಲಿನ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡುವಂತೆ ಕರೆ ಕೊಟ್ಟ ಧ್ವನಿಯನ್ನೇ ಈ ಟೀಸರ್ ನಲ್ಲಿ ಬಳಸಿಕೊಳ್ಳಲಾಗಿದೆ. ನಾಡಿನ ಕಾಡಿನಲ್ಲಿನ ವನ್ಯಪ್ರಾಣಿ – ಪಕ್ಷಿಗಳ, ಸುಂದರ ಕಾನನ, ನೀರೊಳಗಿನ ಲೋಕವನ್ನು ಅನಾವರಣ ಮಾಡುವ ದೃಶ್ಯಗಳನ್ನು ಈ ಒಂದು ನಿಮಿಷ ಇಪ್ಪತ್ತು ಸೆಕೆಂಡುಗಳ ವಿಡಿಯೋದಲ್ಲಿ ತೋರಿಸಲಾಗಿದೆ.
ವೈಲ್ಡ್ ಲೈಫ್ ಫಿಲಮ್ ಮೇಕರ್ ಜೆ.ಎಸ್.ಅಮೋಘವರ್ಷ (wildlife filmmaker Amoghavarsha JS) ಅವರ ಜೊತೆ ಸೇರಿ ಬಹಳ ಕಾಲದಿಂದ ರಾಜ್ಯದ ಕಾಡಿನಲ್ಲಿ ಸಂಚರಿಸಿ ಅರಣ್ಯ ಕುರಿತ ಈ ಡಾಕ್ಯುಮೆಂಟರಿ (wildlife documentary)ಯನ್ನು ಸಿದ್ಧಪಡಿಸಲಾಗಿದೆ.
ಈ ಟೀಸರ್ ಕುರಿತು ಪುನೀತ್ ಪತ್ನಿ ಆಶ್ವಿನಿ ತಮ್ಮ ಟ್ವಿಟರ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ….
“ಅಪ್ಪು ಅವರ ಕನಸಿದು, ಅದ್ಭುತ ಪಯಣ
ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ
ಮರುಕಳಿಸಿದ ಚರಿತ್ರೆಯಿದು – “ಗಂಧದ ಗುಡಿ” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಅಪ್ಪು ಅಭಿಮಾನಿಗಳು, “ಗಂಧದ ಗುಡಿ” ಟೀಸರ್ ನೋಡಿ ಖುಷಿಯಾಯಿತು. ಆದರೆ ಅಪ್ಪು ಇಲ್ಲದೆ ಬಹಳ ಬೇಸರವಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವರು, ಅಪ್ಪು ಅವರಿಗೆ ನಾಡಿನ ಪರಿಸರ, ಪ್ರಾಣಿ- ಪಕ್ಷಿಗಳ ಬಗ್ಗೆ ಪ್ರೀತಿ- ಒಲುಮೆಯಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಈ “ಗಂಧದಗುಡಿ” ಫಿಲಮ್ ಪ್ರಾಜೆಕ್ಟ್ ಮೂಲಕ ಪುನೀತ್ ರಾಜ್ ಕುಮಾರ್ ರಾಜ್ಯದ ಹೊರಭಾಗದ ವೀಕ್ಷಕರನ್ನು ಸೆಳೆಯುವ ಉದ್ದೇಶ ಹೊಂದಿದ್ದರು.