ಲಕ್ನೋ, (www.bengaluruwire.com) : ಬೆಂಗಳೂರಿನ ಕಳಪೆ ರಸ್ತೆಗೆ ಕಾಂಪಿಟೇಷನ್ ಕೊಡೋ ಸುದ್ದಿಯೊಂದು ಹೊರಬಿದ್ದಿದೆ…..!
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರು ರಸ್ತೆಯ ಉದ್ಘಾಟನೆಗಾಗಿ ಎಲ್ಲರೂ ತೆಂಗಿನಕಾಯಿ ಒಡೆದಂತೆ ರಸ್ತೆ ಮೇಲೆ ಒಡೆದರೆ ತೆಂಗಿನಕಾಯಿ ಒಡೆಯಲಿಲ್ಲ. ಬದಲಿಗೆ ರಸ್ತೆಯೇ ಹೊಂಡಬಿದ್ದು ಬಾಯ್ಬಿಟ್ಟ ಅಪರೂಪದ ಘಟನೆ ನಡೆದಿದೆ.
ಇದರಿಂದ ಮುಜಗರ ಹಾಗೂ ಅಸಮಾಧಾನಗೊಂಡ ಬಿಜೆಪಿ ಶಾಸಕಿ ಸುಚಿ ಚೌಧರಿ ಖೆಡಾ ಗ್ರಾಮದ ಬಳಿಯ 7 ಕಿ.ಮೀ ರಸ್ತೆಯ ಭಾಗವನ್ನು ಸ್ಥಳೀಯರ ಮುಂದೆ ಹಾರೆ ಹಾಕಿ ಪರೀಕ್ಷಿಸಿದಾಗ ಕಳಪೆ ಕೆಲಸ ನಡೆದಿರುವುದು ಗಮನಕ್ಕೆ ಬಂದಿದೆ. ರಸ್ತೆಯ ಬಹುಭಾಗದ ಮೇಲ್ಭಾಗ ಕಿತ್ತುಬಂದಿತ್ತು. ಬಿಜ್ನೋರ್ ಸುತ್ತಮುತ್ತಲ ಗ್ರಾಮಗಳನ್ನು ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 1.16 ಕೋಟಿ ರೂ. ಖರ್ಚು ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಘಟನೆಯಿಂದ ಬೇಸತ್ತು ಶಾಸಕಿ ಸುಚಿ ಚೌಧರಿ ತಮ್ಮ ಪತಿ ಮೌಸಮ್ ಚೌಧರಿ ಜೊತೆ ಧರಣಿ ಕುಳಿತು ರಸ್ತೆಯ ಕಳಪೆ ಗುಣಮಟ್ಟದ ಬಗ್ಗೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತೆಗೆದುಕೊಂಡರು.
ಇದಾದ ಬಳಿಕ ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿಕಾಸ್ ಅಗರ್ವಾಲ್ ರಸ್ತೆ ಗುಣಮಟ್ಟದ ಪರೀಕ್ಷೆಗಾಗಿ ರಸ್ತೆಗೆ ಬಳಸಿದ ಡಾಂಬರ್ ಮತ್ತಿತರ ಮಾದರಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯು ದೇಶಾದ್ಯಂತ ಭರ್ಜರಿ ಸುದ್ದಿಯಾಗಿ, ಉತ್ತರಪ್ರದೇಶದ ಬಿಜೆಪಿ ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟುಮಾಡಿದೆ.