ಬೆಂಗಳೂರು, (www.bengaluruwire.com) : ಮುಂಬರುವ ಜನವರಿಯಲ್ಲಿ ಬೆಳಗಾವಿಯಲ್ಲಿ ಭಾರತ- ಜಪಾನ್ ಜಂಟಿ ಸಮರಾಭ್ಯಾಸ (India – Japan Joint Military Excise) ನಡೆಯಲಿದೆ. ಈ ಹಿನ್ನಲೆಯಲ್ಲಿ ಕೈಗೊಳ್ಳಬೇಕಿರುವ ಅಂತಿಮ ಯೋಜನೆ ಕುರಿತು ದೇಶದ ಹಿರಿಯ ಸೇನಾಧಿಕಾರಿಗಳು ಜಪಾನ್ ನಿಯೋಗದೊಂದಿಗೆ ಮೂರು ದಿನದ ಸಮ್ಮೇಳನ ಹಾಗೂ ಸ್ಥಳ ಪರಿಶೀಲನೆಯನ್ನು ಕೈಗೊಂಡರು.
“ಧರ್ಮ ಗಾರ್ಡಿಯನ್-2022” (DHARMA GUARDIAN-2022) ಎರಡು ರಾಷ್ಟ್ರಗಳ ಜಂಟಿ ಸಮರಾಭ್ಯಾಸ ಬೆಳಗಾವಿಯ ಮರಾಠ ಲೈಟ್ ರೆಜಿಮೆಂಟ್ ಕೇಂದ್ರದ ವಿದೇಶಿ ತರಬೇತಿ ವಿಭಾಗದಲ್ಲಿ ಫೆ.27 ರಿಂದ ಮಾ.12 ರ ತನಕ ನಡೆಯಲಿದೆ. 2018ರ ಇಸವಿಯಿಂದಲೂ ಭಾರತ- ಜಪಾನ್ ವಾರ್ಷಿಕವಾಗಿ ಜಂಟಿ ಸಮರಾಭ್ಯಾಸ ಹಮ್ಮಿಕೊಳ್ಳಲಾಗುತ್ತಿದೆ.
ಮಿಲಿಟರಿ ತರಬೇತಿ ಹಿನ್ನಲೆಯಲ್ಲಿ ಭಾರತ ಇತರ ರಾಷ್ಟ್ರಗಳೊಂದಿಗೆ ಆಗಾಗ ಜಂಟಿ ಸಮರಾಭ್ಯಾಸ ನಡೆಸುತ್ತಿರುತ್ತದೆ. ಆದರೆ ಜಾಗತಿಕ ಭಯೋತ್ಪಾದನೆ ಹಿನ್ನಲೆಯಲ್ಲಿ ಎರಡೂ ರಾಷ್ಟ್ರಗಳು ಭದ್ರತೆಯ ಸವಾಲುಗಳನ್ನು ಎದುರಿಸುತ್ತಿದ್ದು ಜಪಾನ್ ರಾಷ್ಟ್ರದೊಂದಿಗಿನ ಧರ್ಮ ಗಾರ್ಡಿಯನ್ ಮಿಲಿಟರಿ ಅಭ್ಯಾಸವು ಬಹಳ ಮಹತ್ವದ್ದಾಗಿದೆ.
ಈ ಜಂಟಿ ಸಮಭ್ಯಾಸವು ಅರಣ್ಯ ಹಾಗೂ ನಗರ ಪ್ರದೇಶದಲ್ಲಿ ಭಯೋತ್ಪಾದನೆ ವಿರುದ್ಧದ ಸಮರ ನಡೆಸುವ ಕುರಿತ ತರಬೇತಿಯನ್ನು ಒಳಗೊಂಡಿದೆ. ಜಂಟಿ ಸಮರಾಭ್ಯಾಸವು ಎರಡು ದೇಶಗಳ ನಡುವಿನ ರಕ್ಷಣಾ ಕ್ಷೇತ್ರದಲ್ಲಿನ ಸಹಕಾರ ಹೆಚ್ಚಳದಿಂದ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಲು ಸಹಾಯಕವಾಗಲಿದೆ ಎಂದು ಭಾರತೀಯ ಸೇನೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗಾವಿಗೆ ನ.30ರಂದೇ ದೆಹಲಿಯಲ್ಲಿನ ಜಪಾನ್ ರಾಯಭಾರಿ ಕಚೇರಿಯ ಅಧಿಕಾರಿಗಳು, ಲೆ.ಕ. ಯೂಜೊ ಮಸುಡಾ ಜಪಾನ್ ನಿಯೋಗದಲ್ಲಿದ್ದರು. ಭಾರತ – ಜಪಾನ್ ನ ಮಿಲಿಟರಿ ಅಧಿಕಾರಿಗಳು ಮುಂಬರುವ ಮಿಲಿಟರಿ ಜಂಟಿ ಸಮರಭ್ಯಾಸವನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಸ್ಥಳ ಪರಿಶೀಲನೆ ನಡೆಸಿ, ಸಮರಾಭ್ಯಾಸದ ಅಜೆಂಡಾವನ್ನು ಅಂತಿಮಗೊಳಿಸಿದ್ದಾರೆ. ಅನಂತರ ಎರಡೂ ಕಡೆಯ ಅಧಿಕಾರಿಗಳು ಒಟ್ಟಿಗೆ ಗ್ರೂಪ್ ಫೊಟೊ ತೆಗೆಸಿಕೊಂಡರು. ಬಳಿಕ ಜಪಾನ್ ಸೇನಾಧಿಕಾರಿಗಳು ಸ್ವದೇಶಕ್ಕೆ ಮರಳಿದ್ದಾರೆ.