ಬೆಂಗಳೂರು, (www.bengaluruwire.com) : ದೇಶದಲ್ಲೇ ಮೊದಲ ಕರೋನಾ ರೂಪಾಂತರಿ ಓಮಿಕ್ರಾನ್ ಪ್ರಕರಣ ಬೆಂಗಳೂರಿನಲ್ಲಿ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕರೋನಾ ರೂಪಾಂತರಿ ತಳಿ ಓಮಿಕ್ರಾನ್ (Omicron)ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ದಕ್ಷಿಣ ಆಫ್ರಿಕಾದಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನ.1 ರಿಂದ 27 ರ ತನಕ ಒಟ್ಟು 94 ಪ್ರಯಾಣಿಕರು ಬಂದಿದ್ದಾರೆ. ನ.20 ರಂದು ಬೆಂಗಳೂರಿಗೆ ಬಂದ ಪ್ರಯಾಣಿಕರೊಬ್ಬರಲ್ಲಿ ಕರೋನಾ ಸೋಂಕು ಕಂಡು ಬಂದಿತ್ತು. ಅವರರನ್ನು ಕ್ವಾರಂಟೈನ್ ನಲ್ಲಿಟ್ಟು ತೀವ್ರ ನಿಗಾ ವಹಿಸಲಾಗಿತ್ತು. ಇನ್ನೊಬ್ಬ ವೈದ್ಯರಾಗಿದ್ದು ಸ್ವಯಂ ಕ್ವಾರಂಟೈನ್ ನಲ್ಲಿದ್ದರು.
ಅವರ ಮಾದರಿಯನ್ನು ಕೇಂದ್ರದ ಎನ್.ಸಿ.ಬಿ.ಎಸ್ (NCBS) ಗೆ ಕಳುಹಿಸಲಾಗಿತ್ತು. ಅದರ ವರದಿ ಈಗ ಬಂದಿದ್ದು ಬೆಂಗಳೂರು ಜನತೆಯಲ್ಲಿ ಕರೋನಾ ಸೋಂಕಿನ ಹೊಸ ರೂಪಾಂತರಿ ಓಮಿಕ್ರಾನ್ ಹರಡುವ ಭೀತಿ ಎದುರಾಗಿದೆ.
ಓರ್ವ ವ್ಯಕ್ತಿ 66 ವರ್ಷ ಹಿರಿಯ ನಾಗರೀಕರಾಗಿದ್ದರೆ, ಮತ್ತೊಬ್ಬರು 46 ವರ್ಷದವರಾಗಿದ್ದಾರೆ. ಸಾರ್ಸ್ ಕೋವಿಡ್ ಸೋಂಕಿನ ರೂಪಾಂತರಿ ಓಮಿಕ್ರಾನ್ ಅನ್ನು B.1.1.529 ಎಂದು ಗುರುತಿಸಲಾಗಿದ್ದು ಡೆಲ್ಟಾ ಪ್ಲಸ್ ತಳಿಗಿಂತ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಜ್ಞ ವೈದ್ಯರು ಹೇಳುತ್ತಿದ್ದಾರೆ.
ಯಾರಿಗೂ ತೀವ್ರತೆ ಇಲ್ಲ, ಆತಂಕ ಬೇಡ – ಸಚಿವ ಡಾ.ಕೆ.ಸುಧಾಕರ್
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ನವೆಂಬರ್ 20 ರಂದು ದಕ್ಷಿಣ ಆಫ್ರಿಕಾದಿಂದ ಬಂದ ಪ್ರಯಾಣಿಕರೊಬ್ಬರ ಮಾದರಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, ಇದರಲ್ಲಿ ವೈರಾಣು ಪತ್ತೆಯಾಗಿದೆ. ಅವರು ರಾಜ್ಯಕ್ಕೆ ಬಂದಾಗ ಹೋಟೆಲ್ ನಲ್ಲಿ ತಂಗಿದ್ದರು. ಅವರ ವರದಿ ಪಾಸಿಟಿವ್ ಬಂದಿದ್ದು, ಲಕ್ಷಣ ರಹಿತವಾಗಿತ್ತು.
ಮತ್ತೆ ನವೆಂಬರ್ 23 ರಂದು ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್ ವರದಿ ಬಂದಿದೆ ಎಂದು ತಿಳಿಸಿದ್ದರು. ಅವರ 24 ಪ್ರಾಥಮಿಕ ಹಾಗೂ 240 ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಮಾಡಿ ಪರೀಕ್ಷೆ ಮಾಡಲಾಗಿದೆ. ಆದರೆ ಯಾರೂ ಪಾಸಿಟಿವ್ ಆಗಿಲ್ಲ. ಸೋಂಕು ಯಾರಿಗೂ ತೀವ್ರ ಪರಿಣಾಮ ಬೀರಿಲ್ಲ ಎಂದು ವಿವರಿಸಿದರು.
46 ವರ್ಷದ ವೈದ್ಯರೊಬ್ಬರಿಗೆ ಓಮಿಕ್ರಾನ್ ಸೋಂಕು – ಪ್ರಯಾಣ ಇತಿಹಾಸ ಇಲ್ಲ :
46 ವರ್ಷದ ವೈದ್ಯರೊಬ್ಬರಲ್ಲಿ ಈ ವೈರಾಣು ಕಂಡುಬಂದಿದೆ. ಅವರಿಗೆ ಪಾಸಿಟಿವ್ ಆಗಿದ್ದು, ಅದೇ ದಿನ ಸ್ವಯಂ ಐಸೋಲೇಟ್ ಆಗಿದ್ದಾರೆ. ಅವರಲ್ಲಿ ವೈರಾಣು ಲೋಡ್ ಅಧಿಕವಾಗಿದೆ. ಆದರೆ ಇವರಿಗೆ ಯಾವುದೇ ಪ್ರಯಾಣದ ಇತಿಹಾಸ ಇಲ್ಲ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸಿದ್ದು, 5 ಮಂದಿಯ ವರದಿ ಪಾಸಿಟಿವ್ ಬಂದಿದೆ. ಒಟ್ಟು ಆರು ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮೇಲೆ ನಿರಂತರ ನಿಗಾ ಇರಿಸಿದ್ದು, ಯಾರಿಗೂ ಹೆಚ್ಚು ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ವೇಗದ ಸಮರ್ಥ ಪರೀಕ್ಷೆ ವ್ಯವಸ್ಥೆಯಿಂದಾಗಿ ಬೇಗನೆ ಕೋವಿಡ್ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ. ಜನರು ತಪ್ಪದೇ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಯಾರೂ ಆತಂಕಕ್ಕೆ ಒಳಗಾಗಬಾರದು. ಮುಖ್ಯಮಂತ್ರಿಗಳು ದೆಹಲಿಯಿಂದ ಬಂದ ಕೂಡಲೇ ಸಭೆ ನಡೆಸಿ ಚರ್ಚೆ ಮಾಡಲಿದ್ದಾರೆ. ವೈರಾಣು ನಿಯಂತ್ರಣಕ್ಕೆ ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದರೆ ಯಾರೂ ಊಹಾಪೋಹಗಳನ್ನು ಹರಡಬಾರದು ಎಂದು ಕೋರಿದರು.