ಬೆಂಗಳೂರು, (www.bengaluruwire.com) : ಉದ್ಯಾನ ನಗರಿಯ ಐತಿಹಾಸಿಕ ಕಡಲೆಕಾಯಿ ಕಾಯಿ ಪರಿಷೆಗೆ ಕಡೆಯ ಕಾರ್ತಿಕ ಸೋಮವಾರವಾದ ಇಂದು ಚಾಲನೆ ಸಿಕ್ಕಿದೆ.
ಬಿಬಿಎಂಪಿ ಆಡಳಿತ ಅಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತಾ ದೊಡ್ಡ ಗಣೇಶನಿಗೆ ಪೂಜೆ ಸಲ್ಲಿಸಿ, ನಂದಿ ವಿಗ್ರಹಕ್ಕೆ ಕಡೆಲೆಕಾಯಿ ಅಭಿಷೇಕ ನೆರವೇರಿಸಿ ಮೂರು ದಿನಗಳ ಸಾಂಸ್ಕೃತಿಕ ಪ್ರತೀಕವಾದ ಪರಿಷೆಗೆ ಚಾಲನೆ ನೀಡಿದರು.
ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ದೊಡ್ಡ ಗಣೇಶ ಹಾಗೂ ನಂದಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ಯುವಕ- ಯುವತಿಯರು ಸಂಭ್ರಮದಿಂದ ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಂಡಿದ್ದಾರೆ. ಹಲವು ಕಡೆ ಜನರು ಸಾಮಾಜಿಕ ಅಂತರವನ್ನು ಮರೆತು ಜಾತ್ರೆಯಲ್ಲಿ ಓಡಾಡುತ್ತಿದ್ದು, ಅವರನ್ನು ನಿಯಂತ್ರಿಸುವುದೇ ಪಾಲಿಕೆ ಹಾಗೂ ಆಯೋಜಕರಿಗೆ ತಲೆನೋವಾಗಿದೆ.
ಕಡಲೆಕಾಯಿ ಪರಿಷೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಮುಜರಾಯಿ ಇಲಾಖೆವತಿಯಿಂದ ನಡೆಸಲಾಗುತ್ತಿದೆ. ಕಾರ್ತಿಕ ಸೋಮವಾರವಾದ ಇಂದಿನಿಂದ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯಲಿದೆ. ಆದರೆ ಶನಿವಾರದಿಂದಲೇ ಬಸವನಗುಡಿ ರಸ್ತೆ ಹಾಗೂ ಸುತ್ತಮುತ್ತಲ ಬೀದಿಗಳಲ್ಲಿ ಕಡೆಲೆಕಾಯಿ ಮಾರಾಟ, ಆಟಿಕೆ, ತಿಂಡಿ ತಿನಿಸು, ಬಟ್ಟೆ, ಮನೆಯ ಅಡುಗೆ ಸಾಮಾನುಗಳು, ಕರಕುಶಲ ವಸ್ತುಗಳು ಸೇರಿದಂತೆ ನಾನಾ ರೀತಿಯ ವ್ಯಾಪಾರ ಮಳಿಗೆಗಳು ತಲೆ ಎತ್ತಿದ್ದವು.
ಕಳೆದ ಬಾರಿ ಕೋವಿಡ್ ತೀವ್ರ ಸ್ವರೂಪ ಪಡೆದುಕೊಂಡಿದ್ದ ಹಿನ್ನಲೆಯಲ್ಲಿ ಪರಿಷೆಗೆ ಸಾಕಷ್ಟು ನಿರ್ಬಂಧ ಹಾಗೂ ಷರತ್ತುಗಳನ್ನು ವಿಧಿಸಲಾಗಿತ್ತು. ಹೀಗಾಗಿ ಕಡಲೆಕಾಯಿ, ಆಟಿಕೆ, ಕರಕುಶಲ ವಸ್ತುಗಳು, ತಿಂಡಿ- ತಿನಿಸುಗಳ ವ್ಯಾಪಾರ ನಡೆದಿರಲಿಲ್ಲ.
ಆದರೆ ಈ ಬಾರಿ ಕೋವಿಡ್ ಸೋಂಕಿನ ರೂಪಾಂತರಿಯ ಭೀತಿಯಿದ್ದರೂ ಕೋವಿಡ್ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಕರೋನಾ ನಿಯಮಗಳಿಗೆ ಒಳಪಟ್ಟು ಬಿಬಿಎಂಪಿಯು ಕಡಲೆಕಾಯಿ ಪರಿಷೆಗೆ ಅನುಮತಿ ನೀಡಿದೆ.
ಪರಿಷೆಯಲ್ಲಿ ಬಿಬಿಎಂಪಿಯು ಖಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದೆ. ಒಂದೊಮ್ಮೆ ಪ್ಲಾಸ್ಟಿಕ್ ಕವರ್ ನಲ್ಲಿ ಕಡಲೇಕಾಯಿ ಅಥವಾ ಇನ್ನಿತರ ವಸ್ತುಗಳ ಮಾರಾಟ ಮಾಡಿದರೆ ವ್ಯಾಪಾರಿಗಳು ಹಾಗೂ ಅದನ್ನು ಪಡೆದ ಗ್ರಾಹಕರಿಗೂ ದಂಡ ವಿಧಿಸಲು ಪಾಲಿಕೆ ಕ್ರಮ ಕೈಗೊಳ್ಳಲಿದೆ.
ಬಸವನಗುಡಿ ಕಡಲೆಕಾಯಿ ಪರಿಷೆಗೆ ಬೆಂಗಳೂರು, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಹಾಗೆ ಬಂದವರು ತಮಗಿಷ್ಟವಾದ ವಿಧ ವಿಧವಾದ ಕಡಲೆಕಾಯಿಗಳನ್ನು ಕೊಂಡು ದೇವರ ದರ್ಶನ ಮಾಡಿ ತೆರಳುವುದು ಇಲ್ಲಿ ವಾಡಿಕೆ.
ಬಸವನಗುಡಿ ಕಡಲೆಕಾಯಿ ಪರಿಷೆಗೆ ಹೀಗಿದೆ ವ್ಯವಸ್ಥೆ:
ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಬಸವಣ್ಣ ದೇವಸ್ಥಾನದ ಸುತ್ತಮುತ್ತ ಬ್ಯಾರಿಕೇಡಿಂಗ್, ಶಾಮಿಯಾನ, ಲೈಟಿಂಗ್ಸ್, ಮೊಬೈಲ್ ಟಾಯ್ಲೆಟ್, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇನ್ನಿತರೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪರಿಷೆಗೆ ಬರುವವರ ಓಡಾಟಕ್ಕಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಡಿ.1 ರ ತನಕ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
ಜನಸಂದಣಿಯನ್ನು ನಿಯಂತ್ರಿಸಲು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡಲು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದಾರೆ.
ಯಾವುದೇ ರೀತಿಯ ಅಗ್ನಿ ಆಕಸ್ಮಿಕ ಅವಘಡಗಳು ನಡೆಯದಂತೆ ನಿಯಂತ್ರಿಸಲು ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ವೈದ್ಯಕೀಯ ಶಿಬಿರ ವ್ಯವಸ್ಥೆ ಮಾಡಲಾಗಿದೆ. ಸದರಿ ಕಡಲೆಕಾಯಿ ಪರಿಷೆಯಲ್ಲಿ ಬರುವ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಿ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವೀಡ್ -19 ತಡೆಗಟ್ಟಲು ಸಹಕರಿಸಲು ಪಾಲಿಕೆ ಕೋರಿದೆ. ಆದರೂ ಪ್ರಸಕ್ತ ಸಂದರ್ಭದಲ್ಲಿ ಕರೋನಾ ಹೊಸ ತಳಿ ಓಮಿಕ್ರಾನ್ ಸೋಂಕಿನ ಪ್ರಸರಣದ ಭೀತಿಯ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಡಲೆಕಾಯಿ ಪರಿಷೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಉದಯ್ ಗರುಡಾಚಾರ್, ರವಿಸುಬ್ರಮಣ್ಯ, ಪಾಲಿಕೆ ವಿಶೇಷ ಆಯುಕ್ತರಾದ ತುಳಸಿ, ದಕ್ಷಿಣ ವಲಯದ ಜಂಟಿ ಆಯುಕ್ತರಾದ ಜಗದೀಶ್ ನಾಯಕ್ ಪಾಲ್ಗೊಂಡಿದ್ದರು.