ದೇವನಹಳ್ಳಿ, (www.bengaluruwire.com) : ಕರೋನಾ ರೂಪಾಂತರಿ ವೈರಸ್ ಒಮಿಕ್ರೋನ್ ದಕ್ಷಿಣ ಆಫ್ರೀಕಾದಲ್ಲಿ ಕಾಣಿಸಿಕೊಂಡ ಭೀತಿ ಬೆನ್ನ ಹಿಂದೆಯೇ, ಅಲ್ಲಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ.
ದಕ್ಷಿಣ ಆಫ್ರಿಕಾದಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನ.1 ರಿಂದ 27 ರ ತನಕ ಒಟ್ಟು 94 ಪ್ರಯಾಣಿಕರು ಬಂದಿದ್ದಾರೆ. ಆ ಪೈಕಿ ನ.9 ರಂದು ಹಾಗೂ ನ.20 ರಂದು ಬೆಂಗಳೂರಿಗೆ ಬಂದ ಪ್ರಯಾಣಿಕರಲ್ಲಿ ಕರೋನಾ ಸೋಂಕು ಕಂಡು ಬಂದಿದ್ದು ಇಬ್ಬರನ್ನು ಕ್ವಾರಂಟೈನ್ ನಲ್ಲಿಟ್ಟು ತೀವ್ರ ನಿಗಾ ವಹಿಸಲಾಗಿದೆ.
ಆ ಪೈಕಿ ಸೋಂಕು ಕಾಣಿಸಿಕೊಂಡ ಓರ್ವ ವ್ಯಕ್ತಿಯ ಜಿನೋಮ್ ಸ್ವೀಕ್ವೆನ್ಸ್ ವರದಿ ಬಂದಿದ್ದು ಅವರಲ್ಲಿ ಡೆಲ್ಟಾ ವೈರಸ್ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಪೂರ್ವ ವಲಯದಲ್ಲಿನ ಆ ಸೋಂಕಿತ ವ್ಯಕ್ತಿಯನ್ನು ನಗರದ ಕೇಂದ್ರ ಭಾಗದ ಖಾಸಗಿ ಹೋಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ಖಚಿತಪಡಿಸಿದೆ.
ಮತ್ತೋರ್ವ ವ್ಯಕ್ಯಿಯನ್ನು ಬೊಮ್ಮನಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇವರ ಸೋಂಕಿನ ಜಿನೋಮೆ ಸೀಕ್ವೆನ್ಸ್ ಪರೀಕ್ಷೆ ಮಾಡಿದಾಗ ಇವರಿಗೂ ಡೆಲ್ಟಾಪ್ಲಸ್ ರೂಪಾಂತರಿ ವೈರಸ್ ಕಂಡು ಬಂದಿದೆ. ಆದರೆ ಹೊಸ ತಳಿಯ ವೈರಸ್ ಕಂಡು ಬಂದಿರುವ ಬಗ್ಗೆ ಖಚಿತವಾಗಿಲ್ಲ ಎಂದು ಪಾಲಿಕೆ ಮೂಲಗಳು ತಿಳಿಸಿದೆ.
ದಕ್ಷಿಣ ಆಫ್ರಿಕಾ ಪ್ರದೇಶದಲ್ಲಿ ಪರಿಸ್ಥಿತಿ ಹೀಗಿದೆ :
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ದಕ್ಷಿಣ ಆಫ್ರಿಕಾ ಪ್ರದೇಶದ ಐದು ದೇಶಗಳಲ್ಲಿ ಹೊಸದಾಗಿ 3,856 ಪ್ರಕರಣಗಳು ಪತ್ತೆಯಾಗಿದ್ದು, 48 ಮಂದಿ ಮೃತಪಟ್ಟಿರುವುದಾಗಿ ತಿಳಿಸಿದೆ. ಪಶ್ಚಿಮ ಆಫ್ರಿಕಾ, ದಕ್ಷಿಣ ಆಫ್ರಿಕಾ, ಉತ್ತರ ಆಫ್ರಿಕಾ, ಪೂರ್ವ ಆಫ್ರಿಕಾ, ಕೇಂದ್ರ ಆಫ್ರಿಕಾ ಪ್ರದೇಶಗಳಲ್ಲಿ 2,09,864 ಕೋವಿಡ್ ಪ್ರಕರಣಗಳು ಸಕ್ರಿಯವಾಗಿದೆ. ಈ ಮಧ್ಯೆ ಹೊಸದಾಗಿ ಓಮಿಕ್ರಾನ್ ರೂಪಾಂತರಿ ವೈರಸ್ ಕಂಡು ಬಂದಿರೋದು ಜಾಗತಿಕ ಮಟ್ಟದಲ್ಲಿ ಭೀತಿ ಆವರಿಸಿದೆ.
ಹೊಸ ರೂಪಾಂತರಿ ವೈರಸ್ ಡೆಲ್ಟಾ ವೈರಸ್ ಗಿಂತ ವೇಗವಾಗಿ ಪಸರಿಸುವುದಲ್ಲದೆ, ಆ ವೈರಸ್ ಆರೋಗ್ಯದ ಮೇಲೆ ಬೀರುವ ತೀವ್ರತೆಯೂ ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸಂಶೋಧನೆ ಮತ್ತು ತೀವ್ರಗತಿಯ ಅಧ್ಯಯನ ಪರೀಕ್ಷೆಗಳು ನಡೆಯುತ್ತಿದೆ.