ಬೆಂಗಳೂರು, (www.bengaluruwire.com) : ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ (ACB) ಗಳು ಇಂದು ಬೆಳ್ಳಂಬೆಳಗ್ಗೆ ಭರ್ಜರಿ ಬೇಟೆಯಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ 68 ಕಡೆಗಳಲ್ಲಿ 15 ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಎಸಿಬಿಯ 8 ಎಸ್ಪಿ ನೇತೃತ್ವದಲ್ಲಿ, 100 ಪೊಲೀಸ್ ಅಧಿಕಾರಿಗಳು ಹಾಗೂ 300 ಸಿಬ್ಬಂದಿ ಸೇರಿದಂತೆ 503 ಮಂದಿಯಿಂದ ದಾಳಿ ನಡೆಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ನೌಕರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಯಣ್ಣ ಅವರ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಆದಾಯದ ಮೂಲದ ಬಗ್ಗೆ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಭಾರೀ ದಾಳಿಯ ವೇಳೆ ಅಕ್ರಮ ಹಾಗು ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ದಾಳಿ ನಡೆಸಿದವರ ಮನೆಗಳಲ್ಲಿ ಕೆಜಿ ಗಟ್ಟಲೆ ಚಿನ್ನಾಭರಣ ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಅಕ್ರಮ ಸಂಪಾದನೆಯಿಂದ ಗಳಿಸಿರುವ ಒಟ್ಟು ಆಸ್ತಿ ಹಾಗೂ ನಗದುಗಳು, ಯಾವ ಯಾವ ಬ್ಯಾಂಕಿನಲ್ಲಿ ವ್ಯವಹಾರ ಮಾಡಿದ್ದಾರೆ? ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪರಿಶೀಲನೆ ವೇಳೆ ಮನೆಯವರ ವಿಚಾರಣೆ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆದಿದ್ದು ಆ ಅಧಿಕಾತಿಗಳ ಹೆಸರು, ಹುದ್ದೆ ಹಾಗೂ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ವಿವರ ಈ ಕೆಳಕಂಡಂತಿದೆ :
1) ಕೆ.ಎಸ್.ಲಿಂಗೇಗೌಡ, – ಇಇ, ಸ್ಮಾರ್ಟ್ ಸಿಟಿ, ಮಂಗಳೂರು
2) ಶ್ರೀನಿವಾಸ್ ಕೆ.- ಇಇ, ಹೆಚ್ಎಲ್ಬಿಸಿ, ಮಂಡ್ಯ ಜಿಲ್ಲೆ
3) ಲಕ್ಷ್ಮೀನರಸಿಂಹಯ್ಯ- ರೆವಿನ್ಯೂ ಇನ್ಸ್‌ಪೆಕ್ಟರ್, ದೊಡ್ಡಬಳ್ಳಾಪುರ
4) ವಾಸುದೇವ – ಮಾಜಿ ಪ್ರಾಜೆಕ್ಟ್ ಮ್ಯಾನೇಜರ್,
ನಿರ್ಮಿತಿ ಕೇಂದ್ರ, ಬೆಂಗಳೂರು ನಗರ
5) ಬಿ.ಕೃಷ್ಣಾ ರೆಡ್ಡಿ – ಜನರಲ್ ಮ್ಯಾನೇಜರ್,
ನಂದಿನಿ ಡೈರಿ, ಬೆಂಗಳೂರು ನಗರ
6) ಟಿ.ಎಸ್.ರುದ್ರೇಶಪ್ಪ – ಜಂಟಿ ನಿರ್ದೇಶಕರು, ಕೃಷಿ ಇಲಾಖೆ,
ಗದಗ ಜಿಲ್ಲೆ
7) ಎ.ಕೆ.ಮಸ್ತಿ- ಕೋ ಆಪರೇಟಿವ್ ಆಫೀಸರ್,
ಸವದತ್ತಿ, ಬೈಲಹೊಂಗಲ, ಬೆಳಗಾವಿ ಜಿಲ್ಲೆ
8) ಸದಾಶಿವ ಮಾರಲಿಂಗಣ್ಣನವರ್, ಇನ್ಸ್‌ಪೆಕ್ಟರ್, ಗೋಕಾಕ್
9) ನೇತಾಜಿ ಹೀರಾಜಿ ಪಾಟೀಲ್- ಗ್ರೂಪ್ ಸಿ, ಬೆಳಗಾವಿ
10) ಕೆ.ಎಸ್.ಶಿವಾನಂದ – ನಿವೃತ್ತ ಸಬ್ ರಿಜಿಸ್ಟರ್, ಬಳ್ಳಾರಿ
11) ರಾಜಶೇಖರ್- ಪಿಜಿಯೋಥೆರಾಪಿಸ್ಟ್, ಯಲಹಂಕ ಅಸ್ಪತ್ರೆ, ಬೆಂಗಳೂರು
12) ಮಾಯಣ್ಣ- ಎಫ್ ಡಿಎ, ಬಿಬಿಎಂಪಿ ರಸ್ತೆ ಕಾಮಗಾರಿ, ಬೆಂಗಳೂರು
13) ಎಲ್.ಸಿ.ನಾಗರಾಜ್ – ಸಕಾಲ, ಬೆಂಗಳೂರು
14) ಜಿ.ವಿ.ಗಿರಿ – ಗ್ರೂಪ್ ಡಿ, ಬಿಬಿಎಂಪಿ, ಯಶವಂತಪುರ
15 ಬಿರಾದಾರ್- ಇಂಜಿನಿಯರ್ ಪಿಡಬ್ಲ್ಯುಬಿ, ಕಲಬುರಗಿ
ಗದಗದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಭ್ರಷ್ಟತೆಯಲ್ಲಿ ಸಖತ್ ಕೃಷಿ ಮಾಡಿದ್ದಾರೆ. ಈ ಆಸಾಮಿ ಮನೆಯಲ್ಲಿ 3.5 ಕೋಟಿ ರೂ. ಮೌಲ್ಯದ 7 ಕೆ.ಜಿ ಚಿನ್ನದ ಬಿಸ್ಕತ್, ಚಿನ್ನಾಭರಣ ಹಾಗೂ 15 ಲಕ್ಷ ರೂ. ನಗದು ಪತ್ತೆಯಾಗಿದೆ. 68 ಸ್ಥಳಗಳಲ್ಲೂ ಎಸಿಬಿ ಅಧಿಕಾರಿಗಳು ದಾಖಲೆಗಳ ತಪಾಸಣೆ ಮುಂದುವರೆಸಿ ವಿಚಾರಣೆ ಕೈಗೊಂಡಿದ್ದಾರೆ.